ಗ್ರಾಹಕರ ಸುಖ-ದುಃಖ

My Blog List

Tuesday, January 21, 2020

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು  ಪಕ್ಷಾಧ್ಯಕ್ಷ ಅಮಿತ್ ಅವರ ಆಯ್ಕೆ ಎಂಬುದಾಗಿ ಪರಿಗಣಿಸಲಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (ಜೆಪಿ ನಡ್ಡಾ) ಅವರು  2020 ಜನವರಿ 20ರ ಸೋಮವಾರ ಅಧಿಕೃತವಾಗಿ ಅಮಿತ್ ಶಾ ಅವರಿಂದ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು.

ನಡ್ಡಾ ಅವರಿಗೆ ಬೆಂಬಲವಾಗಿ ನಾಮಪತ್ರಗಳನ್ನು ಸಲ್ಲಿಸಲು ಕೇಂದ್ರ ಸಚಿವರು ಮತ್ತು ರಾಜ್ಯಗಳ ನಾಯಕರು ಸೇರಿದಂತೆ ಪಕ್ಷದ ಉನ್ನತ ನಾಯಕರು ಬಿಜೆಪಿಯ ರಾಷ್ಟ್ರೀಯ ಕೇಂದ್ರ ಕಚೇರಿಯಲ್ಲಿ ಸಾಲುಗಟ್ಟಿದ್ದರು.

ಪಕ್ಷದ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿದ್ದ ಹಿರಿಯ ಬಿಜೆಪಿ ನಾಯಕ ರಾಧಾ ಮೋಹನ್ ಸಿಂಗ್ ಅವರು ಬಿಜೆಪಿಯ ೩೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ೨೧ರಲ್ಲಿ ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದರು.

ಬಿಜೆಪಿ ಸದಸ್ಯತ್ವ ಅಭಿಯಾನ ಮತ್ತು ವಿಸ್ತರಣಾ ಪ್ರಕ್ರಿಯೆ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಶೇಕಡಾ ೭೫ರಷ್ಟು ಬೂತ್ ಮಟ್ಟದ ಸಮಿತಿಗಳು, ಶೇಕಡಾ ೫೦ರಷ್ಟು ಮಂಡಲ ಸಮಿತಿಗಳನ್ನು ರಚಿಸಲಾಗಿದ್ದು, ಬಿಜೆಪಿ ಸಂವಿಧಾನದ ಪ್ರಕಾರ ೨೧ ರಾಜ್ಯಗಳಲ್ಲಿ ಪಕ್ಷಾಧ್ಯಕ್ಷರ ಆಯ್ಕೆ ನಡೆಸುವ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕಟಿಸಲು ನಾನು ಹರ್ಷಗೊಂಡಿದ್ದೇನೆ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದರು.

ಒಟ್ಟು ರಾಜ್ಯ ಘಟಕಗಳ ಕನಿಷ್ಠ ಅರ್ಧದಷ್ಟು ಸಾಂಸ್ಥಿಕ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಬಿಜೆಪಿ ಸಂವಿಧಾನ ಹೇಳುತ್ತದೆ.

ನಡ್ಡಾ ಅವರ ಹೆಸರನ್ನು ಪಕ್ಷದ ಮಾಜಿ ಮುಖ್ಯಸ್ಥರು ಮತ್ತು ಸಂಸದೀಯ ಮಂಡಳಿ ಸದಸ್ಯರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರು ಸೂಚಿಸಿದರು. ಬೇರೆ ಯಾವುದೇ ನಾಮಪತ್ರಗಳ ಸಲ್ಲಿಕೆಯಾಗದ ಕಾರಣ ನಡ್ಡಾ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ರಾಧಾ ಮೋಹನ್ ಸಿಂಗ್ ಪ್ರಕಟಿಸಿದರು.

ಪಕ್ಷದ ಅತ್ಯಂತ ಹಳೆಯ ನಿಷ್ಠಾವಂತ ಕಾರ್ಯಕರ್ತರಾಗಿರುವ ಜೆಪಿ ನಡ್ಡಾ ಅವರನ್ನು ಕಳೆದ ವರ್ಷ ಜುಲೈ ತಿಂಗಳಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಹಿಮಾಚಲ ಪ್ರದೇಶದ ಪಕ್ಷದ ನಾಯಕ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಯ ಸುಳಿವನ್ನು ಇದು ನೀಡಿತ್ತು.

೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ರಾಜಕೀಯವಾಗಿ ನಿರ್ಣಾಯಕ ರಾಜ್ಯವಾಗಿದ್ದ ಉತ್ತರಪ್ರದೇಶದಲ್ಲಿ ಬಿಜೆಪಿಯ ಪ್ರಚಾರದ ಉಸ್ತುವಾರಿಯನ್ನು ನಡ್ಡಾ ಅವರು ನಿರ್ವಹಿಸಿದ್ದರು. ಸಮಾಜವಾದಿ ಪಕ್ಷ (ಎಸ್ಪಿ), ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮಹಾಮೈತ್ರಿಯ ಕಠಿಣ ಸವಾಲನ್ನು ರಾಜ್ಯದಲ್ಲಿ ಎದುರಿಸಿದ್ದ ಪಕ್ಷ ೮೦ ಲೋಕಸಭಾ ಸ್ಥಾನಗಳ ಪೈಕಿ ೬೨ನ್ನು ಗೆದುಕೊಂಡಿತ್ತು.

ಕೇಸರಿ ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಮೇಲಕ್ಕೇರುತ್ತಾ ಬಂದಿದ್ದ ನಡ್ಡಾ ಅವರು ದೀರ್ಘ ಕಾಲದಿಂದ ಬಿಜೆಪಿಯ ಉನ್ನತ ನಿರ್ಣಾಯಕ ಸಮಿತಿಯಾದ ಸಂಸದೀಯ ಮಂಡಳಿಯ ಸದಸ್ಯರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಐದು ವರ್ಷಗಳ ಸರ್ಕಾರದಲ್ಲಿ ಅವರು ಸಚಿವರಾಗಿ ಸೇವೆ ಸಲ್ಲಿಸಿದ್ದರು.

ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣಕ್ಕೆ ಇಳಿದ ನಡ್ಡಾ ಅವರ ದಶಕಗಳ ಸಾಂಸ್ಥಿಕ ಸಂಘಟನಾ ಅನುಭವ, ಆರ್ಎಸ್ಎಸ್ ಸಾಮೀಪ್ಯ ಮತ್ತು  ಸ್ವಚ್ಛ ವರ್ಚಸ್ಸು ಅವರ ಸಕಾರಾತ್ಮಕ ಬಲ ಎಂಬುದಾಗಿ ಪರಿಗಣಿಸಲಾಗಿದೆ.

ನೂತನ ಅಧ್ಯಕ್ಷರ ಆಯ್ಕೆಯೊಂದಿಗೆ ಅಮಿತ್ ಶಾ ಅರ ಐದುವರೆ ವರ್ಷಗಳ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಅಮಿತ್ ಶಾ ಅವರ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಬಿಜೆಪಿಯು ಹಿಂದೆಂದೂ ಕಾಣದಂತೆ ರಾಷ್ಟ್ರಾದ್ಯಂತ ತನ್ನ ಪಾದದ ಗುರುತುಗಳನ್ನು ಮೂಡಿಸಿದ್ದು, ಕೆಲವು ರಾಜ್ಯ ಚುನಾವಣೆಗಳಲ್ಲಿ ಹಿನ್ನಡೆಯಾಗಿದ್ದರೂ ಅತ್ಯುತ್ತಮ ಚುನಾವಣಾ ಸಾಧನೆಯನ್ನು ಮಾಡಿತ್ತು.

ಅಮಿತ್ ಶಾ ಅವರು ಪ್ರದಾನಿ ಮೋದಿ . ಸರ್ಕಾರಕ್ಕೆ ಗೃಹ ಸಚಿವರಾಗಿ ಸೇರ್ಪಡೆಯಾಗುವುದರೊಂದಿಗೆ, ಬಿಜೆಪಿಯು ತನ್ನಒಬ್ಬ ವ್ಯಕ್ತಿ ಒಂದು ಹುದ್ದೆ ಪರಂಪರೆಗೆ ಅನುಗುಣವಾಗಿ ಶಾ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿತ್ತು.

No comments:

Advertisement