Saturday, January 18, 2020

ಪೌರತ್ವ ಕಾಯ್ದೆ ವಿರುದ್ಧ ಪಂಜಾಬ್ ಅಸೆಂಬ್ಲಿ ನಿರ್ಣಯ

ಪೌರತ್ವ ಕಾಯ್ದೆ ವಿರುದ್ಧ ಪಂಜಾಬ್ ಅಸೆಂಬ್ಲಿ ನಿರ್ಣಯ
ಕೇರಳದ ಹಾದಿ ಹಿಡಿದ ಎರಡನೇ  ರಾಜ್ಯ, ಸುಪ್ರೀಂ ಮೆಟ್ಟಿಲೇರಲೂ ನಿರ್ಧಾರ 
ಚಂಡೀಘಡ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪಂಜಾಬ್ ವಿಧಾನಸಭೆಯು 2020 ಜನವರಿ  17ರ ಶುಕ್ರವಾರ  ಧ್ವನಿಮತದ ಮೂಲಕ ನಿರ್ಣಯವನ್ನು ಅಂಗೀಕರಿಸಿತು. ಇದರೊಂದಿಗೆ ಪಂಜಾಬ್ ಕೇಂದ್ರ ಶಾಸನವನ್ನು ವಿರೋಧಿಸಿ ನಿರ್ಣಯ ಕೈಗೊಂಡ ಎರಡನೆ ರಾಜ್ಯ ಎನಿಸಿತು.


ಸದನವು ನಿರ್ಣಯ ಅಂಗೀಕರಿಸಿದ ಸ್ವಲ್ಪ ಹೊತ್ತಿನಲೇ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ತಮ್ಮ ಸರ್ಕಾರವು ಕೇರಳದಂತೆ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದು ಎಂದು ಪ್ರಕಟಿಸಿದರು.

ಕೇರಳ ವಿಧಾನಸಭೆಯು ಇದಕ್ಕೆ ಮುನ್ನ ವಿವಾದಾತ್ಮಕ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನಿರ್ಣಯ ಅಂಗೀಕರಿಸಿತ್ತು. ಮೂಲಕ ಕೇಂದ್ರ ಶಾಸನವನ್ನು ವಿರೋಧಿಸಿದ ಮೊದಲ ರಾಜ್ಯ ಎನಿಸಿತ್ತು. ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕಾರಣವಾದ ಶಾಸನವನ್ನು ರದ್ದು ಪಡಿಸುವಂತೆ ನಿರ್ಣಯ ಕೇಂದ್ರವನ್ನು ಆಗ್ರಹಿಸಿತ್ತು. ಬಿಜೆಪಿಯ ರಾಜಗೋಪಾಲ್ ಅವರನ್ನು ಹೊರತುಪಡಿಸಿ ಸದನದ ಎಲ್ಲ ಶಾಸಕರೂ ನಿರ್ಣಯವನ್ನು ಬೆಂಬಲಿಸಿದ್ದರು.

ಶಾಸನವನ್ನು ವಿರೋಧಿಸುತ್ತಿರುವ ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಶಾಸನವನ್ನು ಜಾರಿಗೊಳಿಸಲು ಕೇಂದ್ರವು ಅದಕ್ಕೆ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಶುಕ್ರವಾರ ಹೇಳಿದರು.

ಕೇರಳದಂತೆ ನಮ್ಮ ಸರ್ಕಾರ ಕೂಡಾ ವಿಷಯದಲ್ಲಿ ಸುಪ್ರೀಂಕೋರ್ಟನ್ನು ಸಂಪರ್ಕಿಸಲಿದೆಎಂದು ಅಮರೀಂದರ್ ಸಿಂಗ್ ಅವರು ರಾಜ್ಯ ವಿಧಾನಸಭೆಯ ಹೊರಗೆ ಮಾತನಾಡುತ್ತಾ ತಿಳಿಸಿದರು.

ರಾಜ್ಯದಲಿ ೨೦೨೧ರ ಜನಗಣತಿಯನ್ನು ಹಳೆಯ ಮಾನದಂಡಗಳ ಪ್ರಕಾರವೇ ನಡೆಸಲಾಗುವುದು. ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್ಪಿಆರ್) ಉದ್ದೇಶಕ್ಕಾಗಿ ಕೇಂದ್ರವು ಸೇರ್ಪಡೆ ಮಾಡಿದ ಹೊಸ ಅಂಶಗಳನ್ನು ಸೇರಿಸಲಾಗುವುದಿಲ್ಲಎಂದು ಅವರು ನುಡಿದರು.

No comments:

Advertisement