ಗ್ರಾಹಕರ ಸುಖ-ದುಃಖ

My Blog List

Sunday, January 19, 2020

ಜಮ್ಮು -ಕಾಶ್ಮೀರದಾದ್ಯಂತ ಮತ್ತೆ ಎಸ್‌ಎಂಎಸ್, ವಾಯ್ಸ್ ಕಾಲ್

ಜಮ್ಮು -ಕಾಶ್ಮೀರದಾದ್ಯಂತ ಮತ್ತೆ ಎಸ್ಎಂಎಸ್, ವಾಯ್ಸ್ ಕಾಲ್
ಎಲ್ಲ ಪೂರ್ವ ಪಾವತಿ ಮೊಬೈಲ್ ಬಳಕೆದಾರರಿಗೆ ಸವಲತ್ತು ಕಲ್ಪಿಸಿದ ಸರ್ಕಾರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಾದ್ಯಂತ ಎಲ್ಲ ಸ್ಥಳೀಯ ಪೂರ್ವ ಪಾವತಿ (ಪ್ರಿಪೆಯ್ಡ್) ಮೊಬೈಲ್ಗಳಲ್ಲಿ ಕ್ಷಿಪ್ರ ಮಾಹಿತಿ ಸೇವೆ (ಎಸ್ ಎಂಎಸ್) ಮತ್ತು ಧ್ವನಿ ಕರೆ (ವಾಯ್ಸ್ ಕಾಲ್) ಸವಲತ್ತುಗಳನ್ನು 2020 ಜನವರಿ 18ರ ಶನಿವಾರ  ಪುನಃಸ್ಥಾಪನೆ ಮಾಡಲಾಯಿತು  ಎಂದು ಸರ್ಕಾರಿ ವಕ್ತಾರ ರೋಹಿತ್ ಕಂಸಲ್ ಅವರು ಜಮ್ಮುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಕಾಶ್ಮೀರದ ಕೆಲವು ಪ್ರದೇಶಗಳಿಗೆ ಪೋಸ್ಟ್ ಪೆಯ್ಡ್ ಮೊಬೈಲ್ ಬಳಕೆದಾರರಿಗೆ ೨ಜಿ ಮೊಬೈಲ್ ಡಾಟಾ ವಿಸ್ತರಿಸಲಾಗಿದೆ ಎಂದೂ ಅವರು ನುಡಿದರು.

ಎಚ್ಚರಿಕೆಯ ಪುನರ್ ಪರಿಶೀಲನೆ ಬಳಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪ್ರಿನ್ಸಿಪಲ್ ಕಾರ್ಯದರ್ಶಿಯೂ ಆಗಿರುವ ಕಂಸಲ್ ಹೇಳಿದರು.

ಜಮ್ಮು, ಕುಪ್ವಾರ, ಕಾಶ್ಮೀರ ವಿಭಾಗದ ಬಂಡಿಪೋರಾದ ಒಟ್ಟು ೧೦ ಜಿಲ್ಲೆಗಳ ಶ್ವೇತ ಪಟ್ಟಿಯ (ವೈಟ್ ಲಿಸ್ಟೆಡ್) 153  ವೆಬ್ಸೈಟ್ ಸಂಪರ್ಕ ಪಡೆಯಲು ಪೋಸ್ಟ್ ಪೆಯ್ಡ್ ಮೊಬೈಲ್ಗಳಲ್ಲಿ ಜಿ ಮೊಬೈಲ್ ಡಾಟಾಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಡಗಮ್, ಗಂದೇರ್ ಬಲ್, ಬಾರಾಮುಲ್ಲಾ, ಶ್ರೀನಗರ, ಕುಲಗಮ್, ಅನಂತನಾಗ್, ಶೋಪಿಯಾನ್ ಮತ್ತು ಪುಲ್ವಾಮದಲ್ಲಿ ಮೊಬೈಲ್ ಇಂಟರ್ ನೆಟ್ ಅಮಾನತಿನಲ್ಲಿ ಇರುತ್ತದೆ ಎಂದು ಕಂಸಲ್ ವಿವರಿಸಿದರು.

ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಪುನರ್ ಪರಿಶೀಲನೆ ಮಾಡುವಂತೆ ಸುಪ್ರೀಂಕೋರ್ಟ್  ಆದೇಶ ನೀಡಿದ ಕೆಲ ದಿನಗಳ ಬಳಿಕ ಆಡಳಿತವು ಜಮ್ಮು ಪ್ರದೇಶದ ಭಾಗಗಳಲ್ಲಿ ಅಗತ್ಯ ಸೇವೆ ಒದಗಿಸುತ್ತಿರುವ ಸಂಸ್ಥೆಗಳಲ್ಲಿ ಮೊಬೈಲ್ ಇಂಟರ್ ನೆಟ್ ಮತ್ತು ಬ್ರಾಡ್ ಬ್ಯಾಂಡ್ ಸವಲತ್ತು ಕಲ್ಪಿಸಿತ್ತು.

ಆಸ್ಪತ್ರೆಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳಂತಹ ಅಗತ್ಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಬ್ರಾಡ್ ಬ್ಯಾಂಡ್ ಸವಲತ್ತು ಒದಗಿಸುವಂತೆ ಇಂಟರ್ ನೆಟ್  ಸೇವಾ ಸಂಸ್ಥೆಗಳಿಗೆ ಆಡಳಿತವು ತನ್ನ ಮೂರು ಪುಟಗಳ ಆದೇಶದಲ್ಲಿ ಸೂಚಿಸಿತ್ತು.

ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಹೋಟೆಲ್ಗಳು ಮತ್ತು ಪ್ರವಾಸೋದ್ಯಮ ಸಂಸ್ಥೆಗಳಿಗೆ ಬ್ರಾಡ್ ಬ್ಯಾಂಕ್ ಸೇವೆ ಒದಗಿಸಲು ಆದೇಶ ತಿಳಿಸಿತ್ತು.

ಆಗಸ್ಟ್ ೫ರಂದು ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಎರಡು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸುವ ತೀರ್ಮಾನ ಕೈಗೊಳ್ಳುವುದಕ್ಕೆ  ಒಂದು ದಿನ ಮುಂಚಿತವಾಗಿಯೇ ಜಮ್ಮು ಮತ್ತು ಕಾಶ್ಮೀರದಾದ್ಯಂತ ಅಂತರ್ಜಾಲವನ್ನು (ಇಂಟರ್ ನೆಟ್) ಅಮಾನತುಗೊಳಿಸಲಾಗಿತ್ತು. ಆದಾಗ್ಯೂ, ಜಮ್ಮು ಪ್ರದೇಶದಲ್ಲಿ ನಂತರ  ಬ್ರಾಡ್ ಬ್ಯಾಂಡ್ ಸೇವೆಗಳನ್ನು ಒದಗಿಸಲಾಗಿತ್ತು.

ಲಡಾಖ್ ಪ್ರದೇಶದಲ್ಲಿ ಬೇಗನೇ ಮೊಬೈಲ್ ಮತ್ತು ಬ್ರಾಡ್ ಬ್ಯಾಂಡ್ ಸೇವೆ ಪುನಾರಂಭ ಮಾಡಲಾಗಿದ್ದರೂ, ಕಾಶ್ಮಿರದಾದ್ಯಂತ ಎಲ್ಲ ರೂಪದ ಇಂಟರ್ ನೆಟ್ ಸೇವೆಯನ್ನೂ ಅಮಾನತಿನಲ್ಲಿ ಇಡಲಾಗಿತ್ತು.

ಸರ್ಕಾರವು ಕ್ರಮೇಣ ದೂರವಾಣಿ ಲೈನುಗಳ ಪುನಃಸ್ಥಾಪನೆ ಮಾಡಿದರೂ, ಇಂಟರ್ ನೆಟ್ ಸೇವೆಗಳು ಮತ್ತು ಪೂರ್ವ ಪಾವತಿ ಮೊಬೈಲ್ ಸೇವೆಗಳ ಅಮಾನತು ಮುಂದುವರೆದಿತ್ತು. ಆಗಸ್ಯ್ ಮಧ್ಯಭಾಗ ಮತ್ತು ಸೆಪ್ಟೆಂಬರಿನಲ್ಲಿ ಸ್ಥಿರ ದೂರವಾಣಿ ಸೇವೆಯನ್ನು ಕಲ್ಪಿಸಿದರೆ, ಪೋಸ್ಟ್ ಪೆಯ್ಡ್ ಮೊಬೈಲ್ ಸೇವೆಗಳು ಅಕ್ಟೋಬರ್ ೧೪ರಂದು ಪುನಾರಂಭಗೊಂಡಿದ್ದವು.

ಲಡಾಖ್ ಕೇಂದ್ರಾಡಳಿತ ಪ್ರದೇಶದ ಕಾರ್ಗಿಲ್ನಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆ ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗಿತು ಮತ್ತು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಎಸ್ಎಂಎಸ್ ಮತ್ತು ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಜನವರಿ ೧ರಿಂದ ಆರಂಭವಾಗಿತ್ತು.

ಎಚ್ಚರಿಕೆಯ ಪುನರ್ ಪರಿಶೀಲನೆಯ ಬಳಿಕ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಾದ್ಯಂತ ಎಲ್ಲ ಸ್ಥಳೀಯ ಪೂರ್ವ ಪಾವತಿ ಸಿಮ್ ಕಾರ್ಡ್ಗಳಲ್ಲಿ ಧ್ವನಿ ಕರೆ (ವಾಯ್ಸ್ ಕಾಲ್) ಮತ್ತು ಎಸ್ಎಂಎಸ್ ಸವಲತ್ತು ಪುನಃಸ್ಥಾಪನೆಗೆ ಆಡಳಿತವು ಆದೇಶ ನೀಡಿದೆ ಎಂದು ಕಂಸಲ್ ಹೇಳಿದರು.

No comments:

Advertisement