Sunday, February 16, 2020

ಬಾಕಿ ಪಾವತಿಗೆ ವೊಡಾಫೋನ್ ಐಡಿಯಾ ಸಿದ್ಧ

ಬಾಕಿ ಪಾವತಿಗೆ ವೊಡಾಫೋನ್ ಐಡಿಯಾ ಸಿದ್ಧ
ವ್ಯವಹಾರ ಮುಂದುವರಿಕೆ ಅನುಮಾನ
ನವದೆಹಲಿ: ಸಾಲಗ್ರಸ್ತ ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಯು ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಬಾಕಿ ಪಾವತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ, ಆದರೆ, ಭಾರತದಲ್ಲಿ ವ್ಯವಹಾರ ಮುಂದುವರಿಕೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿದೆ. ಭಾರತದಲ್ಲಿ ವ್ಯವಹಾರ ಮುಂದುವರಿಕೆಯು ಸುಪ್ರೀಂಕೋರ್ಟ್ ನೀಡುವ ಅನುಕೂಲಕರ ತೀರ್ಪನ್ನು ಅವಲಂಬಿಸಿದೆ ಎಂದು ಸಂಸ್ಥೆಯು  2020 ಫೆಬ್ರುವರಿ 15ರ ಶನಿವಾರ ತಿಳಿಸಿತು.

ಎಜಿಆರ್ ಬಾಕಿಗೆ ಪಾವತಿ ಮಾಡಬಹುದಾದ ಮೊತ್ತವನ್ನು ಸಂಸ್ಥೆಯು ಅಂದಾಜು ಮಾಡುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹೊಂದಾಣಿಕೆಯ ಒಟ್ಟು ಆದಾಯ ಬಾಕಿ ಪಾವತಿಸುವ ಪ್ರಕ್ರಿಯೆಯಲ್ಲಿದೆ ಎಂದು ಕಂಪೆನಿಯು ಹೇಳಿತು.

ಆದಾಗ್ಯೂ, ಭಾರತದಲ್ಲಿ ವ್ಯವಹಾರವನ್ನು ಮುಂದುವರೆಸುವುದು ತಾನು ಸಲ್ಲಿಸಿರುವ ಮಾರ್ಪಾಡು ಮನವಿಯ ಮೇಲೆ ಸುಪ್ರೀಂ ಕೋರ್ಟ್ ನೀಡಬಹುದಾದ ಅನುಕೂಲಕರ ಆದೇಶವನ್ನು ಅವಲಂಬಿಸಿರುತ್ತದೆ ಎಂದು ಕಂಪೆನಿ ಹೇಳಿತು.

ಕಂಪನಿಯು ಪ್ರಸ್ತುತ ೨೪ ಅಕ್ಟೋಬರ್ ೨೦೧೯ ಆದೇಶದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದಂತೆ ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಆಧಾರಿತ ಲೆಕ್ಕಾಚಾರದ ಬಾಕಿ ಮೊತ್ತವನ್ನು ಟೆಲಿಕಾಂ ಇಲಾಖೆಗೆ (ಡಿಒಟಿ) ಪಾವತಿಸಲು ಬೇಕಾದ ಅಂದಾಜು ಮೊತ್ತದ ಲೆಕ್ಕ ಹಾಕುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಅಂದಾಜು ಮಾಡಿದ ಮೊತ್ತವನ್ನು ಪಾವತಿಸಲು, ಕ್ರಮ ವಹಿಸುವುದಾಗಿ ವೊಡಾಫೋನ್ ಐಡಿಯಾ ಬಿಎಸ್ ಫೈಲಿಂಗ್ಸ್ ನಲ್ಲಿ ತಿಳಿಸಿದೆ.

ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್), ೨೪,೭೨೯ ಕೋಟಿ ರೂಪಾಯಿ ತರಂಗಾಂತರ  ಬಾಕಿ ಮತ್ತು, ೨೮,೩೦೯ ಕೋಟಿ ರೂಪಾಯಿ ಪರವಾನಗಿ ಶುಲ್ಕ ಸೇರಿದಂತೆ ಸುಮಾರು, ೫೩,೦೩೮ ಕೋಟಿ ರೂಪಾಯಿ ಬಾಕಿಯನ್ನು ಪಾವತಿ ಮಾಡಬೇಕಾಗಿದೆ ಎಂದು ಅಂದಾಜಿಸಲಾಗಿದೆ, ಯಾವುದೇ ಪರಿಹಾರ ನೀಡದಿದ್ದರೆ ವ್ಯವಹಾರ ಸ್ಥಗಿತಗೊಳಿಸುವ ಬಗ್ಗೆ ಕಂಪೆನಿ ಈಗಾಗಲೇ ಎಚ್ಚರಿಕೆ ನೀಡಿದೆ.
"ಡಿಸೆಂಬರ್ ೩೧, ೨೦೧೯ ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದ ಕಂಪನಿಯ ಹಣಕಾಸು ಹೇಳಿಕೆಗಳಲ್ಲಿ ಬಹಿರಂಗಪಡಿಸಿದಂತೆ, ಕಂಪೆನಿಯ ಮುಂದುವರಿಕೆ ಸಾಮರ್ಥ್ಯವು ಮಾರ್ಪಾಡು ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ನೀಡಬಹುದಾದ ಸಕಾರಾತ್ಮಕ ಫಲಿತಾಂಶವನ್ನು ಅವಲಂಬಿಸಿದೆಎಂದು ಕಂಪನಿಯು ಹೇಳಿದೆ.

ಪ್ರಕರಣದ ವಿಚಾರಣೆ ೨೦೨೦ ಮಾರ್ಚ್ ೧೭ರಂದು ನಡೆಯಲಿದೆ.

No comments:

Advertisement