ಗ್ರಾಹಕರ ಸುಖ-ದುಃಖ

My Blog List

Saturday, February 15, 2020

ಸುಪ್ರೀಂ ಛೀಮಾರಿ ಬೆನ್ನಲ್ಲೇ ೧.೪೭ ಲಕ್ಷ ಕೋಟಿ ರೂ ಬಾಕಿ ಪಾವತಿ: ಟೆಲ್ಕೋಗಳಿಗೆ ಕೇಂದ್ರ ಆದೇಶ

ಸುಪ್ರೀಂ ಛೀಮಾರಿ ಬೆನ್ನಲ್ಲೇ  .೪೭ ಲಕ್ಷ ಕೋಟಿ ರೂ ಬಾಕಿ ಪಾವತಿ: ಟೆಲ್ಕೋಗಳಿಗೆ  ಕೇಂದ್ರ ಆದೇಶ
ನವದೆಹಲಿ: ಹೊಂದಾಣಿಕೆ ಮಾಡಲಾದ ಒಟ್ಟು ಕಂದಾಯ (ಅಜೆಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪಾವತಿ ಸಂಬಂಧ ತನ್ನ ಆದೇಶವನ್ನು ಪಾಲಿಸದೇ ಇದ್ದುದಕ್ಕಾಗಿ ಸುಪ್ರೀಂಕೋರ್ಟ್ ಟೆಲಿಕಾಂ ಕಂಪನಿಗಳಿಗೆ 2020 ಫೆಬ್ರುವರಿ 14ರ ಶುಕ್ರವಾರ ಛೀಮಾರಿ ಹಾಕಿದ ಕೆಲವೇ ಗಂಟೆಗಳಲ್ಲಿ ಇದೇ ದಿನ ರಾತ್ರಿ ೧೧.೫೯ ಗಂಟೆಯ ಒಳಗಾಗಿ ಬಾಕಿಗಳನ್ನು ಪಾವತಿ ಮಾಡುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕಂಪೆನಿಗಳಿಗೆ ಆದೇಶ ನೀಡಿತು.
ಎಜಿಆರ್ ಬಾಕಿ ಪಾವತಿ ಸಂಬಂಧ ತನ್ನ ಆದೇಶದ ಪಾಲನೆ ಮಾಡದೇ ಇದ್ದುದಕ್ಕಾಗಿ ಟೆಲಿಕಾಂ ಕಂಪೆನಿಗಳ ಆಡಳಿತ ಮಂಡಳಿಗಳನ್ನು 2020 ಫೆಬ್ರುವರಿ 14ರ ಶುಕ್ರವಾರ  ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಸ್.ಅಬ್ದುಲ್ ನಜೀರ್ ಮತ್ತು ಎಂ.ಆರ್. ಶಾ ಅವರ ಪೀಠವು, ನ್ಯಾಯಾಲಯ ನಿಂದನೆ ಕ್ರಮಗಳನ್ನು ಏಕೆ ಕೈಗೊಳ್ಳಬಾರದು ಎಂದು ಝಾಡಿಸಿತ್ತು.

ಸುಪ್ರೀಂಕೋರ್ಟ್ ಕೆಂಡಾಮಂಡಲ ಸಿಟ್ಟು ವ್ಯಕ್ತ ಪಡಿಸಿದ ಕೆಲವೇ ಗಂಟೆಗಳಲ್ಲಿ ಸರ್ಕಾರವು ಭಾರ್ತಿ ಏರ್ ಟೆಲ್, ವೊಡಾಫೋನ್ ಐಡಿಯಾದಂತಹ ಟೆಲಿಕಾಂ ಕಂಪೆನಿಗಳಿಗೆ ಎಜಿಆರ್ ಬಾಕಿಗಳನ್ನು 2020 ಫೆಬ್ರುವರಿ 14ರ ಶುಕ್ರವಾರ ರಾತ್ರಿ ೧೧.೫೯ ಗಂಟೆಗಳ ಒಳಗಾಗಿ ಪಾವತಿ ಮಾಡುವಂತೆ ಆದೇಶ ನೀಡಿತು.

ಒಟ್ಟು ೧೫ ಟೆಲಿಕಾಂ ಕಂಪೆನಿಗಳು ಸರ್ಕಾರಕ್ಕೆ ಸುಮಾರು .೪೭ ಲಕ್ಷ ಕೋಟಿ ರೂಪಾಯಿ ಹಣ ಪಾವತಿ ಮಾಡಬೇಕಾಗಿದೆ. ಇದರಲ್ಲಿ ೯೨,೬೪೨ ರೂಪಾಯಿಗಳು ಪಾವತಿ ಮಾಡದ ಪರವಾನಗಿ ಶುಲ್ಕವಾಗಿದ್ದರೆ, ೫೫,೦೫೪ ಕೋಟಿ ರೂಪಾಯಿಗಳು ತರಂಗಾಂತರ ಬಳಕೆ ಶುಲ್ಕವಾಗಿದೆ. ಕಂಪೆನಿಗಳು ಸರ್ಕಾರದ ಆದೇಶದಂತೆ ಶುಕ್ರವಾರ ಮಧ್ಯರಾತ್ರಿಯ ಒಳಗೆ ಹೇಗೆ ಹಣ ಪಾವತಿ ಮಾಡುತ್ತವೆ ಎಂಬುದು ಸ್ಪಷ್ಟವಾಗಿಲ್ಲ.

ಅಂಕಿ ಅಂಶಗಳ ಪ್ರಕಾರ ವೊಡಾಫೋನ್ ಐಡಿಯಾ ೫೩,೦೦೦ ಕೋಟಿ ರೂಪಾಯಿ, ಭಾರ್ತಿ ಏರ್ ಟೆಲ್ ೩೫,೫೦೦ ಕೋಟಿ ರೂಪಾಯಿ, ಈಗ ಸುಸ್ತಿಯಾಗಿರುವ ಟಾಟಾ ಟೆಲಿಸರ್ವೀಸಸ್ ೧೪,೦೦೦ ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದೆ.

ದೂರ ಸಂಪರ್ಕ ಇಲಾಖೆಯು ಬಾಕಿ ಪಾವತಿಗೆ ಆದೇಶ ಹೊರಡಿಸಿದ ತತ್ ಕ್ಷಣವೇ ೧೦,೦೦೦ ಕೋಟಿ ರೂಪಾಯಿಗಳನ್ನು ಫೆಬ್ರುವರಿ ೨೦ರ ಒಳಗೆ ಮತ್ತು ಉಳಿದ ಬಾಕಿಯನ್ನು ಮಾರ್ಚ್ ೧೭ರ ಒಳಗಾಗಿ ಪಾವತಿ ಮಾಡುವುದಾಗಿ ದೂರಸಂಪರ್ಕ ಇಲಾಖೆಗೆ ಎರ್ ಟೆಲ್ ತಿಳಿಸಿದೆ.

ಸುಪ್ರೀಂಕೋರ್ಟಿನಲ್ಲಿ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ ೧೭ರಂದು ನಡೆಯಲಿದೆ.

No comments:

Advertisement