My Blog List

Saturday, February 1, 2020

ದೂರದೃಷ್ಟಿಯ ಬಜೆಟ್: ಪ್ರಧಾನಿ ಮೋದಿ ಶ್ಲಾಘನೆ

ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತಕ್ಕೆ ಬಜೆಟ್ ಒತ್ತು
ದೂರದೃಷ್ಟಿಯ ಬಜೆಟ್: ಪ್ರಧಾನಿ ಮೋದಿ ಶ್ಲಾಘನೆ
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಸಂಸತ್ತಿನಲ್ಲಿ ಮಂಡಿಸಿದ ೨೦೨೦-೨೧ರ ಸಾಲಿನ ಮುಂಗಡಪತ್ರವನ್ನು ’ದೂರದೃಷ್ಟಿಯ ಬಜೆಟ್’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2020 ಫೆಬ್ರುವರಿ 01ರ ಶನಿವಾರ  ಶ್ಲಾಘಿಸಿದರು.

’ದೂರದೃಷ್ಟಿ ಮತ್ತು ಕ್ರಮಗಳನ್ನು ಒಳಗೊಂಡಿರುವ ದಶಕದ ಮೊದಲ ಮುಂಗಡಪತ್ರವನ್ನು ಮಂಡಿಸಿದ್ದಕ್ಕಾಗಿ ನಾನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ’ ಎಂದು ಪ್ರಧಾನಿ ಹೇಳಿದರು.

’ಮುಂಗಡಪತ್ರದಲ್ಲಿ ಪ್ರಕಟಿಸಲಾಗಿರುವ ಸುಧಾರಣೆಗಳು ಆರ್ಥಿಕತೆಗೆ ವೇಗ ನೀಡಲಿದ್ದು, ರಾಷ್ಟ್ರದ ನಾಗರಿಕರನ್ನು ಆರ್ಥಿಕವಾಗಿ ಸಬಲಗೊಳಿಸಲಿದೆ ಮತ್ತು ಈ ದಶಕದಲ್ಲಿ ಆರ್ಥಿಕತೆಗೆ ಭದ್ರ ಬುನಾದಿಯನ್ನು ಹಾಕಲಿದೆ. ಈ ವರ್ಷದ ಮುಂಗಡಪತ್ರವು ಕೃಷಿ, ಮೂಲಸವಲತ್ತು, ಜವುಳಿ ಮತ್ತು ತಂತ್ರಜ್ಞಾನ ಈ ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ಪ್ರಧಾನಿ ನುಡಿದರು.

ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಮತ್ತು ನೂತನ ವಿಧಾನಗಳ ಬಗ್ಗೆ ಗಮನ ಹರಿಸುವ ಮೂಲಕ ಸಮಗ್ರ ದೃಷ್ಟಿಕೋನವನ್ನು ಸೀತಾರಾಮನ್ ಅವರು ಅಂಗೀಕರಿಸಿದ್ದನ್ನು ಪ್ರಸ್ತಾಪಿಸಿದ ಮೋದಿ, ’ಇದು ಈ ರಂಗದಲ್ಲಿ ಉದ್ಯೋಗವನ್ನು ಸೃಷ್ಟಿಸಲಿದೆ ಮತ್ತು  ಮೀನು ಸಂಸ್ಕರಣೆ ಮತ್ತು ಮಾರುಕಟ್ಟೆಯಂತಹ ಕ್ಷೇತ್ರಗಳಲ್ಲಿ ಯುವಕರಿಗೆ ಅವಕಾಶಗಳನ್ನು ತೆರೆಯಲಿದೆ’ ಎಂದು ಹೇಳಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಭಾರತಕ್ಕೆ ಜಾಗತಿಕ ಮೌಲ್ಯ ಸರಣಿಯ ಪಾಲುದಾರನಾಗಲು ನೆರವಾಗಲಿದೆ ಎಂದು ಪ್ರಧಾನಿ ಹೇಳಿದರು.

ಡಿವಿಡೆಂಡ್ ವಿತರಣಾ ತೆರಿಗೆ ಕಡಿತ, ನವೋದ್ಯಮಗಳಿಗೆ ಮತ್ತು ರಿಯಲ್ ಎಸ್ಟೇಟ್ ರಂಗಕ್ಕೆ ತೆರಿಗೆ ಸವಲತ್ತುಗಳ ಪ್ರಕಟಣೆಯನ್ನು ಕೂಡಾ ಪ್ರಧಾನಿ ಸ್ವಾಗತಿಸಿದರು. ’ಈ ಮುಂಗಡಪತ್ರವು ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತದ ಬದ್ಧತೆಯನ್ನು ಬಲಪಡಿಸಿದೆ’ ಎಂದು ಪ್ರಧಾನಿ ಮೋದಿ ನುಡಿದರು.

No comments:

Advertisement