Monday, February 24, 2020

ದೆಹಲಿಯ ಜಾಫ್ರಾಬಾದ್‌ನಲ್ಲಿ 'ಪೌರತ್ವ’ ಘರ್ಷಣೆ, ಪೊಲೀಸರಿಂದ ಅಶ್ರುವಾಯು, ಮೆಟ್ರೋ ಸಂಚಾರ ಬಂದ್

ದೆಹಲಿಯ ಜಾಫ್ರಾಬಾದ್ನಲ್ಲಿ 'ಪೌರತ್ವಘರ್ಷಣೆ, ಪೊಲೀಸರಿಂದ ಅಶ್ರುವಾಯು, ಮೆಟ್ರೋ ಸಂಚಾರ ಬಂದ್
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ಸಲುವಾಗಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ ಈಶಾನ್ಯ ದೆಹಲಿಯ ಜಾಫ್ರಾಬಾದ್ ಸಮೀಪ 2020 ಫೆಬ್ರುವರಿ 23ರ ಭಾನುವಾರ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು, ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಬೆತ್ತ ಪ್ರಹಾರ ಮತ್ತು ಆಶ್ರುವಾಯು ಪ್ರಯೋಗಿಸಿದರು.

ಜಾಫ್ರಾಬಾದ್ ಸಮೀಪದ ಮೌಜ್ಪುರದಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲುತೂರಾಟ ನಡೆಸಿದಾಗ ಪ್ರತಿಭಟನಕಾರರನ್ನು ಚದುರಿಸಲು ದೆಹಲಿ ಪೊಲೀಸರು ಆಶ್ರುವಾಯು ಮತ್ತು ಬೆತ್ತ ಪ್ರಹಾರ ಮಾಡಬೇಕಾಯಿತು ಎಂದು ವರದಿಗಳು ತಿಳಿಸಿದವು.
ಬಹುತೇಕ ಮಹಿಳೆಯರಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ ಜಾಫ್ರಾಬಾದ್ ಮೆಟ್ರೋ ಸ್ಟೇಷನ್ ಬಳಿ ರಸ್ತೆ ತಡೆ ನಡೆಸಿದಾಗ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಯಿತು. ರಸ್ತೆಯು ಸೀಲಂಪುರ ಮತ್ತು ಮೌಜ್ಪುರ ಹಾಗೂ ಯಮುನಾ ವಿಹಾರವನ್ನು ಸಂಪರ್ಕಿಸುವ ಮಾರ್ಗವಾಗಿದೆ.

ಹಿಂಸಾತ್ಮಕ ಘಟನೆಗಳನ್ನು ಅನುಸರಿಸಿ ಪ್ರದೇಶದಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿದವು.

ಭಾನುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಮುಂದುವರೆದ ಪರಿಣಾಮವಾಗಿ ದೆಹಲಿ ಮೆಟ್ರೋ ಅಧಿಕಾರಿಗಳು ಮೆಟ್ರೋ ನಿಲ್ದಾಣದ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಿದರು. ಬಳಿಕ ಮೌಜ್ ಪುರ-ಬಾಬರ್ ಪುರ ನಿಲ್ದಾಣಗಳಲ್ಲೂ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ) ಅಧಿಕಾರಿಗಳು ಪ್ರಕಟಿಸಿದರು.

ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ಭಾನುವಾರ ಬೆಳಗ್ಗೆ ಇದಕ್ಕೆ ಮುನ್ನವೇ ಮುಚ್ಚಲಾಗಿತ್ತು.

ತ್ರಿವರ್ಣ ಧ್ವಜಗಳನು ಹಿಡಿದುಕೊಂಡಿದ್ದ, ಬಹುತೇಕ ಮಹಿಳೆಯರೇ ಇದ್ದ ಪ್ರತಿಭಟನಕಾರರು ಶನಿವಾರ ರಾತ್ರಿಯೇ ಸೀಲಂಪುರವನ್ನು ಮೌಜ್ಪುರ ಮತ್ತು ಯಮುನಾ ವಿಹಾರ ಜೊತೆಗೆ ಸಂಪರ್ಕಿಸುವ ಜಾಫ್ರಾಬಾದ್ ಸಮೀಪ ಜಮಾಯಿಸಿದ್ದರು.

ಪ್ರತಿಭಟನೆ ಭಾನುವಾರ ಬೆಳಗ್ಗೆಯೂ ಮುಂದುವರೆದಾಗ ಮೆಟ್ರೋ ನಿಲ್ದಾಣದ ಸುತ್ತಮುತ್ತ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ಮೆಟ್ರೋರೈಲುಗಳು ಜಾಫ್ರಾಬಾದ್ ಮೆಟ್ರೋ ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ದೆಹಲಿ ಮೆಟ್ರೋ ರೈಲು ನಿಗಮ ಅಧಿಕಾರಿಗಳು ಪ್ರಕಟಿಸಿದರು.

ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಪ್ರವೇಶದ್ವಾರ ಮತ್ತು ನಿರ್ಗಮದ್ವಾರಗಳನ್ನು ಮುಚ್ಚಲಾಗಿದೆ ಎಂದು ಡಿಎಂಆರ್ಸಿ ಟ್ವೀಟ್ ಮಾಡಿತು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನಕಾರರು ಸ್ಥಳಬಿಟ್ಟು ತೆರಳವುದಿಲ್ಲ ಎಂದು ತನ್ನನ್ನು ಬುಶ್ರಾ ಎಂಬುದಾಗಿ ಗುರುತಿಸಿಕೊಂಡ ಮಹಿಳೆ ತಿಳಿಸಿದರು.

ಸರ್ಕಾರವು ವಿಷಯವನ್ನು ನಿಭಾಯಿಸುತ್ತಿರುವ ರೀತಿ ಬಗ್ಗೆ ಜನರಲ್ಲಿ ಅಸಮಾಧಾನ ಇದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಫಾಹೀಮ್ ಬೇಗ್ ನುಡಿದರು.

ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಯು ದಲಿತರಿಗೆ ಮೀಸಲಾತಿಯನ್ನೂ ಒತ್ತಾಯಿಸುತ್ತಿದೆ. ಚಳವಳಿಯ ನೇತೃತ್ವವನ್ನು ಮುಖ್ಯವಾಗಿ ಮಹಿಳೆಯರು ವಹಿಸಿದ್ದಾರೆ., ಪುರುಷರು ಅವರಿಗೆ ಬೆಂಬಲ ಮಾತ್ರ ನೀಡಿದ್ದಾರೆಎಂದು ಶಾದಾಬ್ ಎಂಬ ಪ್ರತಿಭಟನಾಕಾರ ನುಡಿದರು.

ಪ್ತತಿಭಟಿಸುವ ಸಲುವಾಗಿ ನಾವು ರಸ್ತೆಯನ್ನು ಅಡ್ಡಗಟ್ಟಿದ್ದೇವೆ. ಕೇಂದ್ರ ಸರ್ಕಾರವು ಕರಾಳ ಶಾಸನವನ್ನು ಹಿಂತೆಗೆದುಕೊಳ್ಳುವವರೆಗೂ ನಾವು ಸ್ಥಳಬಿಟ್ಟು ಕದಲುವುದಿಲ್ಲಅವರು ಹೇಳಿದರು.

ದೆಹಲಿ-ನೋಯ್ಡಾ ಮಾರ್ಗದಲ್ಲಿ ಸಂಚಾರ ಅಡಚಣೆ ಉಂಟುಮಾಡಿರುವ ಶಾಹೀನಾಬಾಗ್ ಪ್ರತಿಭಟನಕಾರರ ಜೊತೆಗೆ ಮಾತುಕತೆಯ ಯತ್ನ ನಡೆಯುತ್ತಿರುವ ಸಮಯದಲ್ಲೇ ಹೊಸದಾಗಿ ರಸ್ತೆ ತಡೆ ಧರಣಿ ಜಾಫ್ರಾಬಾದ್ ಸಮೀಪ ಆರಂಭಗೊಂಡಿದೆ. ಶಾಹೀನಾಬಾಗ್ನಲ್ಲಿ ಕಳೆದ ಎರಡು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ರಸ್ತೆಯ ಸಣ್ಣ ಭಾಗವನ್ನು ಪ್ರತಿಭಟನಕಾರರ ಗುಂಪೊಂದು ಹಿಂದಿನ ದಿನ  ತೆರವುಗೊಳಿಸಿದೆ. ಆದರೂ ರಸ್ತೆಯ ಇನ್ನೊಂದು ಮಗ್ಗುಲಲ್ಲಿ ಪೊಲಿಸ್ ಅಡ್ಡಗಟ್ಟೆಗಳು ಮುಂದುವರೆದಿವೆ.

ತಾವು ಶನಿವಾರ ಸಂಜೆ ಗಂಟೆಯ ವೇಳೆಗೆ ದಕ್ಷಿಣ ದೆಹಲಿ-ನೋಯ್ಡಾ ನಡುವಣ ಸಣ್ಣ ಮಾರ್ಗವನ್ನು ಪ್ರತಿಭಟನಾ ತಾಣದ ಬಳಿ ತೆರವುಗೊಳಿಸಿರುವುದಾಗಿ ಪ್ರತಿಭಟನಕಾರರು ಪ್ರತಿಪಾದಿಸಿದ್ದಾರೆ. ಆದರೆ ದೆಹಲಿ ಪೊಲೀಸರು ಮತ್ತು ನೋಯ್ಡಾ ಪೊಲೀಸರು ಇನ್ನೊಂದು ಬದಿಯಲ್ಲಿ ಅಡ್ಡಗಟ್ಟೆಗಳನ್ನು ಇರಿಸಿ ಮಾರ್ಗದಲ್ಲಿ ಸಂಚರಿಸುವವರನ್ನು ತಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಆದರೆ ಸಮೀಪದ ರಸ್ತೆಗಳಲ್ಲಿ ಭದ್ರತೆಯ ಕಾರಣಕ್ಕಾಗಿ ಅಡ್ಡಗಟ್ಟೆಗಳನ್ನು ಹಾಕಲಾಗಿದೆ ಎಂದು ದೆಹಲಿ ಪೊಲೀಸರು ಪ್ರತಿಪಾದಿಸಿದರು..

ಅಲಿಘಡದಲ್ಲಿ ಹಿಂಸಾಚಾರ: ಮಧ್ಯೆ ಉತ್ತರ ಪ್ರದೇಶದ ಅಲಿಘಡದಲ್ಲಿ ಪೊಲೀಸರು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧೀ ಪ್ರತಿಭಟನಕಾರರ ಮಧ್ಯೆ ಭಾನುವಾರ ಸಂಜೆ ಘರ್ಷಣೆಗಳು ಸಂಭವಿಸಿದವು ಎಂದು ಉತ್ತರ ಪ್ರದೇಶದಿಂದ ಬಂದ ವರದಿ ತಿಳಿಸಿತು.

ಪೊಲೀಸರು ಟೆಂಟ್ ಹಾಕಿಕೊಳ್ಳಲು ಅನುಮತಿ ನಿರಾಕರಿಸಿದ ಬಳಿಕ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಸಂಭವಿಸಿತು ಎಂದು ವರದಿ ಹೇಳಿತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿರುವ  ಅಲಿಘಡ ನಗರದ ದೆಹಲಿಗೇಟ್ ಪ್ರದೇಶದಲ್ಲಿ ಚಳಿಯಿಂದ ರಕ್ಷಣೆಗಾಗಿ ಟೆಂಟ್ ಹಾಕಿಕೊಳ್ಳಲು ಅನುಮತಿ ನೀಡುವಂತೆ ಮಾಡಿದ ಮನವಿಯನ್ನು ಪೊಲೀಸರು ನಿರಾಕರಿಸಿದರು ಎನ್ನಲಾಗಿದ್ದು ಬಳಿಕ ಘರ್ಷಣೆ ಸ್ಫೋಟಗೊಂಡಿತು ಎಂದು ವರದಿ ತಿಳಿಸಿತು.

No comments:

Advertisement