ಗ್ರಾಹಕರ ಸುಖ-ದುಃಖ

My Blog List

Monday, February 24, 2020

ಅಲಿಘಡದಲ್ಲೂ ಹಿಂಸೆ, ಕಲ್ಲೆಸೆತ, ಅಗ್ನಿಸ್ಪರ್ಶ, ಘರ್ಷಣೆ

ಅಲಿಘಡದಲ್ಲೂ ಹಿಂಸೆ, ಕಲ್ಲೆಸೆತ, ಅಗ್ನಿಸ್ಪರ್ಶ, ಘರ್ಷಣೆ
ಭಾನುವಾರ ಮಧ್ಯರಾತ್ರಿವರೆಗೆ ಇಂಟರ್ನೆಟ್ ಬಂದ್
ಅಲಿಘಡ: (ಉತ್ತರಪ್ರದೇಶ): ಅಲಿಘಡದ ಹಳೆ ನಗರ ಪ್ರದೇಶದಲ್ಲಿ ಮಧ್ಯಾಹ್ನ ಕಲ್ಲೆಸೆತ ಮತ್ತು ಅಗ್ನಿಸ್ಪರ್ಶದ ಘಟನೆಗಳ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಸಂಭವಿಸಿದ ವರದಿ 2020 ಫೆಬ್ರುವರಿ 23ರ ಭಾನುವಾರ ತಡವಾಗಿ ಬಂದಿತು.

ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟ್ ಮೇಲ್ಭಾಗ ಪ್ರದೇಶದಲ್ಲಿ ಕಲ್ಲೆಸೆತ, ಅಗ್ನಿಸ್ಪರ್ಶದ ಮೂಲಕ ಆಸ್ತಿನಾಶದಲ್ಲಿ ತೊಡಗಿ ಹಿಂಸಾಚಾರಕ್ಕೆ ಇಳಿದ ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಆಶ್ರುವಾಯು ಪ್ರಯೋಗಿಸಿದರು ಎಂದು ಪೊಲೀಸ್ ಮೂಲಗಳು ಹೇಳಿದವು.

ಹಿಂಸಾಚಾರದ ಘಟನೆಗಳಲ್ಲಿ ಕೆಲವರು ಗಾಯಗೊಂಡಿರುವ ವರದಿಗಳಿವೆ. ಆದರೆ ಘರ್ಷಣೆಗಳಲ್ಲಿ ಗಾಯಗೊಂಡವರ ನಿಖರ ಅಂಕಿಸಂಖ್ಯೆ ಲಭ್ಯವಾಗಿಲ್ಲ ಎಂದು ಮೂಲಗಳು ಹೇಳಿದವು.
ಹಿಂಸಾತ್ಮಕ ಪ್ರತಿಭಟನೆಗಳನ್ನು ಅನುಸರಿಸಿ ನಗರದಲ್ಲಿ ಭಾನುವಾರ ಮಧ್ಯರಾತ್ರಿಯವರೆಗೆ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಲಿಘಡ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದರು.

ಕೊತ್ವಾಲಿಯನ್ನು ಸಂಪರ್ಕಿಸುವ ಮೊಹಮ್ಮದ್ ಅಲಿ ರಸ್ತೆಯಲ್ಲಿ ಕೆಲವು ಮಹಿಳೆಯರು ಶನಿವಾರದಿಂದ ಧರಣಿ ನಡೆಸುತ್ತಿರುವ ಸ್ಥಳದಲ್ಲಿ ಕಲ್ಲೆಸೆತ ಮತ್ತು ಅಗ್ನಿಸ್ಪರ್ಶದ ಘಟನೆಗಳ ವರದಿಗಳು ಇನ್ನೂ ಬರುತ್ತಿವೆ ಮತ್ತು ಪೊಲೀಸರು ಪ್ರತಿಭಟನಕಾರರನ್ನು ಸ್ಥಳದಿಂದ ತೆರವುಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿದವು.

ಭೀಮ್ ಆರ್ಮಿ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿ ಕಡೆಗೆ ಹೊರಟ ಮೆರವಣಿಗೆಯನ್ನು ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ತಡೆದ ಬಳಿಕ ಘರ್ಷಣೆಗಳು ಸಂಭವಿಸಿದವು ಎಂದು ವರದಿಗಳು ಹೇಳಿದವು.
ಪೊಲೀಸರು ತಡೆದ ಬೆನ್ನಲ್ಲೇ ಪ್ರತಿಭಟನಾಕಾರರು ನಗರದ ಈದ್ಗಾ ಪ್ರದೇಶದ ಕಡೆಗೆ ತೆರಳಿದರು. ಪ್ರದೇಶದಲ್ಲಿ ಮಹಿಳೆಯರ ಗುಂಪೊಂದು ಮೂರು ವಾರಗಳಿಂದ ಪೌರತ್ವ ವಿರೋಧಿ ಪ್ರತಿಭಟನೆ ನಡೆಸುತ್ತಿತ್ತು.

ಮಹಿಳೆಯರೂ ಇದ್ದ ಭೀಮ್ ಆರ್ಮಿ ನೇತೃತ್ವದ ಪ್ರತಿಭಟನಕಾರರನ್ನು ಹಳೆ ನಗರದ ಕಟ್ಪುಲಾ ಸೇತುವೆ ದಾಟಿದಾಗ  ಪೊಲೀಸರು ತಡೆದರು. ಕೂಡಲೇ ಅವರು ಈದ್ಗಾ ಪ್ರದೇಶದಲ್ಲಿ ಧರಣಿ ನಡೆಸುತ್ತಿದ್ದ ಪ್ರತಿಭಟನಕಾರರ ಜೊತೆ ಸೇರಿಕೊಳ್ಳಲು ನಿರ್ಧರಿಸಿ ಅತ್ತ ಧಾವಿಸಿದರು ಎಂದು ವರದಿಗಳು ಹೇಳಿದವು.
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಕರೆಯ ಮೇರೆಗೆ ಪ್ರತಿಭಟನಕಾರರು ಮೆರವಣಿಗೆ ನಡೆಸಿದ್ದರು. ಹಿಂಸಾಚಾರ ಭುಗಿಲೇಳುತ್ತಿದ್ದಂತೆಯೇ ಕೊತ್ವಾಲಿ ಸಮೀಪದ ಹಲವು ಅಂಗಡಿಗಳು ಬಾಗಿಲೆಳೆದುಕೊಂಡವು ಎಂದು ವರದಿಗಳು ತಿಳಿಸಿದವು.

No comments:

Advertisement