Wednesday, February 5, 2020

ಗಾಂಧೀಜಿ ಹೆಸರು ಉಲ್ಲೇಖಿಸಿಲ್ಲ: ಅನಂತಕುಮಾರ ಹೆಗಡೆ ಸ್ಪಷ್ಟನೆ

ಗಾಂಧೀಜಿ ಹೆಸರು ಉಲ್ಲೇಖಿಸಿಲ್ಲ:  ಅನಂತಕುಮಾರ ಹೆಗಡೆ ಸ್ಪಷ್ಟನೆ
ಬೆಂಗಳೂರು: ಬೆಂಗಳೂರಿನಲ್ಲಿ ಮಾಡಿದ್ದ ಭಾಷಣದಲ್ಲಿ ತಾವು ಸ್ವಾತಂತ್ರ್ಯ ಹೋರಾಟವನ್ನು ವರ್ಗೀಕರಿಸಿದ್ದುದಾಗಿ  2020 ಫೆಬ್ರುವರಿ 04ರ ಮಂಗಳವಾರ  ಸ್ಪಷ್ಟ ಪಡಿಸಿರುವ ಕೇಂದ್ರ ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಅನಂತಕುಮಾರ ಹೆಗಡೆ ಅವರುಭಾಷಣದಲ್ಲಿ ತಾವು ಮಹಾತ್ಮ ಗಾಂಧಿ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲಎಂದು ಹೇಳಿದರು.
ಕೆಲವರು ನಡೆಸಿದ್ದುದು ಬ್ರಿಟಿಷರ ಜೊತೆಗಿನ ಹೊಂದಾಣಿಕೆಯ ಹೋರಾಟ, ಉಪವಾಸಕ್ಕೆ ಹೆದರಿ ಬ್ರಿಟಿಷರು ಸ್ವಾತಂತ್ರ ಕೊಟ್ಟದ್ದಲ್ಲಎಂಬ ತಮ್ಮ ಹೇಳಿಕೆಯನ್ನು ಗಾಂಧೀಜಿ ಕುರಿತಾದದ್ದು ಎಂಬುದಾಗಿ ವಾದಿಸಿ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ  ಸುದ್ದಿ ಸಂಸ್ಥೆ ಒಂದರ ಜೊತೆ ಮಾತನಾಡುತ್ತಾ ಸಂಸತ್ ಸದಸ್ಯ ಹೆಗಡೆ ಸ್ಪಷ್ಟನೆ ನೀಡಿದರು.
ನನ್ನ ಭಾಷಣದಲ್ಲಿ ನಾನು ಯಾವುದೇ ರಾಜಕೀಯ ಪಕ್ಷವನ್ನಾಗಲಿ, ಮಹಾತ್ಮ ಗಾಂಧೀಜಿ ಅವರನ್ನಾಗಲಿ ಅಥವಾ ಯಾವುದೇ ವ್ಯಕ್ತಿಯನ್ನಾಗಲಿ ಉಲ್ಲೇಖಿಸಿಲ್ಲ. ಸ್ವಾತಂತ್ರ್ಯ ಹೋರಾಟದ ಬಗೆಗಳನ್ನು ನಾನು ವರ್ಗೀಕರಣ ಮಾಡಿದ್ದೆಎಂದು ಹೆಗಡೆ ಹೇಳಿದರು.

ನಾನು ಅಂದು ಏನು ಮಾತನಾಡಿದ್ದೆ ಎಂಬುದು ಎಲ್ಲೆಡೆ ಲಭ್ಯವಿದೆ. ನನ್ನ ವೆಬ್ ಸೈಟಿನಲ್ಲಿಯೂ ಇದೆ. ಅಂದಿನ ಭಾಷಣದಲ್ಲಿ ನಾನು ಗಾಂಧೀಜಿ ಅವರನ್ನಾಗಲಿ, ನೆಹರೂ ಅವರನ್ನಾಗಲಿ ಟೀಕಿಸಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಚರ್ಚೆ ಮಾಡಿದ್ದೆಎಂದು ಅನಂತಕುಮಾರ ಹೇಳಿದರು.
ನನ್ನ ಹೇಳಿಕೆ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು, ವಿಶ್ಲೇಷಣೆಗಳೆಲ್ಲವೂ ಸುಳ್ಳು. ಈಗ ಚರ್ಚೆಯಾಗುತ್ತಿರುವಂತೆ ನಾನು ಏನನ್ನೂ ಹೇಳಿಲ್ಲ. ಇದು ಅನಗತ್ಯ ವಿವಾದಎಂದು ಅವರು ನುಡಿದರು.

ಸಮೃದ್ಧ ಸಾಹಿತ್ಯ ಹಾಗೂ ಸಾವರ್ಕರ್ ಸಾಹಿತ್ಯ ಸಂಘವು ಫೆಬ್ರುವರಿ ೧ರ ಶನಿವಾರ ಬೆಂಗಳೂರಿನಲ್ಲಿ ಸಂಘಟಿಸಿದ್ದಮತ್ತೆ ಮತ್ತೆ ಸಾವರ್ಕರ್ಕಾರ್ಯಕ್ರಮದಲ್ಲಿ ಅನಂತ ಕುಮಾರ ಹೆಗಡೆ ಮಾತನಾಡಿದ್ದರು.

ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮೂರು ವಿಧವಿದೆ. ಚಂದ್ರಶೇಖರ ಆಜಾದ್, ಭಗತ್ ಸಿಂಗ್ ಅವರಂತಹ ಕ್ರಾಂತಿಕಾರಿಗಳು ಶಸ್ತ್ರಸಜ್ಜಿತರಾಗಿ ಹೋರಾಟ ಮಾಡಿದರು. ಇನ್ನೊಂದು ವರ್ಗ ಅತ್ಯಂತ ಪ್ರಖರ ರಾಷ್ಟ್ರೀಯ ವಿಚಾರಗಳೊಂದಿಗೆ ಶಿವಾಜಿ, ಹುಕ್ಕ-ಬುಕ್ಕರಂತಹ ನೂರಾರು ಮಂದಿಯನ್ನು ಮುಂದೆ ತಂದರು. ಮತ್ತೊಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರು ಹೇಗೆ ಹೋರಾಟ ಮಾಡಬೇಕು ಎಂದು ಬ್ರಿಟಿಷರ ಬಳಿಯೇ ಕೇಳಿ, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು.
ಒಳಗಡೆ
(ಜೈಲಿನಲ್ಲಿ) ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು. ಪರಿಣಾಮ ಲಾಠಿ ನೋಡದ, ಏಟು ತಿನ್ನದವರನ್ನು ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಲಾಯಿತು. ಇತಿಹಾಸದ ಪ್ರಕಾರ ಬ್ರಿಟಿಷರು ಉಪವಾಸಕ್ಕೆ ಹೆದರಿ, ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು ಎಂಬುದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟುತ್ತದೆಎಂದು ಅನಂತಕುಮಾರ ಹೇಳಿದ್ದರು.

ಅನಂತಕುಮಾರ ಅವರ ಹೇಳಿಕೆಯು ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದ್ದ ಗಾಂಧೀಜಿ ಅವರ ಹೋರಾಟವನ್ನು ಪ್ರಶ್ನಿಸುವಂತಿದೆ ಎಂಬ ಟೀಕೆ ರಾಜಕೀಯ, ಸಾಮಾಜಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬಂದಿತ್ತು.

ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಬಿಜೆಪಿಯ ಕೇಂದ್ರ ಶಿಸ್ತುಪಾಲನಾ ಸಮಿತಿಯು ಅನಂತಕುಮಾರ ಹೆಗಡೆ ಅವರಿಗೆ ಬಗ್ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ವಿವರಣೆ ಕೇಳಿದೆ ಎಂದು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದರು.

ಅನಂತ ಕುಮಾರ ಹೆಗಡೆ ಅವರಿಗೆ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳದಂತೆಯೂ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿದ್ದವು.

No comments:

Advertisement