Wednesday, February 5, 2020

ಆಂಧ್ರಕ್ಕೆ ಮೂರು ರಾಜಧಾನಿ: ಕೇಂದ್ರದ ಹಸ್ತಕ್ಷೇಪ ಇಲ್ಲ

ಆಂಧ್ರಕ್ಕೆ ಮೂರು ರಾಜಧಾನಿ: ಕೇಂದ್ರದ ಹಸ್ತಕ್ಷೇಪ ಇಲ್ಲ
ಜಗನ್ ಸರ್ಕಾರದ ಕ್ರಮ ಬಗ್ಗೆ ಲೋಕಸಭೆಯಲ್ಲಿ ಸ್ಪಷ್ಟನೆ
ನವದೆಹಲಿ/ ಅಮರಾವತಿ: ತಮ್ಮ ರಾಜಧಾನಿ ನಗರಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ರಾಜ್ಯ ಸರ್ಕಾರಗಳ ವಿಶೇಷಾಧಿಕಾರವಾಗಿದ್ದು, ಕೇಂದ್ರವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವು 2020 ಫೆಬ್ರುವರಿ 04ರ ಮಂಗಳವಾರ  ಸ್ಪಷ್ಟ ಪಡಿಸಿತು.

ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರದ ಗೃಹ ವ್ಯವಹಾರಗಳ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರುತನ್ನ ರಾಜಧಾನಿ ಬಗ್ಗೆ ನಿರ್ಧರಿಸುವುದು ರಾಜ್ಯದ ವಾಪ್ತಿಗೆ ಬರುತ್ತದೆ. ವಿಚಾರದಲ್ಲಿ ಕೇಂದ್ರವು ಮಧ್ಯಪ್ರವೇಶ ಮಾಡುವುದಿಲ್ಲಎಂದು ಹೇಳಿದರು.

ತೆಲುಗುದೇಶಂ ಪಕ್ಷದ (ಟಿಡಿಪಿ) ಸಂಸತ್ ಸದಸ್ಯ ಜಯದೇವ ಗಲ್ಲ ಅವರು ಎತ್ತಿದ ಪ್ರಶ್ನೆಗೆ ಸಚಿವ ರಾಯ್ ಉತ್ತರ ನೀಡುತ್ತಿದ್ದರು.

ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) ನೇತೃತ್ವದ ಸರ್ಕಾರವು ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾಪಿಸಿರುವ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಏನು ಎಂದು ಜಯದೇವ ಗಲ್ಲ ಪ್ರಶ್ನಿಸಿದ್ದರು. ಇಂತಹ ನಿರ್ಧಾರಗಳನ್ನು ಕೈಗೊಳ್ಳದಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದೇ ಎಂಬುದಾಗಿಯೂ ತಿಳಿಯಲು ಗಲ್ಲಾ ಬಯಸಿದ್ದರು.

ಇತ್ತೀಚೆಗೆ, ರಾಜ್ಯ ಸರ್ಕಾರವು ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಸೃಷ್ಟಿಸುವ ನಿರ್ಣಯ ಕೈಗೊಂಡಿರುವುದನ್ನು ಸೂಚಿಸಿ ಮಾಧ್ಯಮ ವರದಿಗಳು ಬಂದಿದ್ದವುಎಂದ ನುಡಿದ ರಾಯ್, ’ತನ್ನ ಪ್ರದೇಶದ ವ್ಯಾಪ್ತಿಯಲ್ಲಿ ತನ್ನ ರಾಜಧಾನಿಯ ಬಗ್ಗೆ ನಿರ್ಧರಿಸುವುದು ಆಯಾ ರಾಜ್ಯಕ್ಕೆ ಬಿಟ್ಟದ್ದುಎಂದು ಹೇಳಿದರು.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ವಿಶಾಖಪಟ್ಟಣ, ಕರ್ನೂಲ್ ನಗರಗಳನ್ನು ಕಾರ್ಯಕಾರಿ (ಎಕ್ಸಿಕ್ಯೂಟಿವ್) ಮತ್ತು ನ್ಯಾಯಾಂಗ (ಜುಡಿಷಿಯಲ್) ರಾಜಧಾನಿಗಳನ್ನಾಗಿ ಮಾಡುವ ತಮ್ಮ ಸರ್ಕಾರದ ನಿರ್ಣಯವನ್ನು ಪ್ರಕಟಿಸಿದ ಬಳಿಕ ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಅಮರಾವತಿಯು ಶಾಸಕಾಂಗ ಕೇಂದ್ರ ಸ್ಥಳವಾಗಿಯೂ ಮುಂದುವರೆಯುವುದು ಎಂದು ಜಗನ್ ಸಂದರ್ಭದಲ್ಲಿ ಹೇಳಿದ್ದರು.

ಅಮರಾವತಿ ಪ್ರದೇಶದಲ್ಲಿ ಹೊಸ ವಿಶ್ವ ದರ್ಜೆಯ ರಾಜಧಾನಿ ನಿರ್ಮಿಸುವ ಹಿಂದಿನ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಸರ್ಕಾರದ ವಚನದ ಮೇರೆಗೆ ತಮ್ಮ ಭೂಮಿಯನ್ನು ನೂತನ ರಾಜಧಾನಿಗಾಗಿ ನೀಡಿದ್ದ ರೈತರು ಜಗನ್ ಸರ್ಕಾರದ ನಿರ್ಧಾರದ ವಿರುದ್ಧ ಬೀದಿಗೆ ಇಳಿದು ಪ್ರತಿಭಟಿಸಿದ್ದರು.

ರೈತರ ಪ್ರತಿಭಟನೆಗೆ ತೆಲುಗುದೇಶಂ ಪಕ್ಷ ಕೂಡಾ ಬೆಂಬಲ ನೀಡಿತ್ತು. ಜಗನ್ ತನ್ನ ಯೋಜನೆಯನ್ನು ಜಾರಿಗೊಳಿಸಲು ಮುಂದಾಗದಂತೆ ತಡೆಯಲು ಕೇಂದ್ರ ಸರ್ಕಾರವು ಮಧ್ಯಪ್ರವೇಶ ಮಾಡಬೇಕು ಎಂದು ಚಂದ್ರಬಾಬು ನಾಯ್ಡು, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಕೆಲವು ಬಿಜೆಪಿ ನಾಯಕರು ಹಿಂದೆಯೇ ಆಗ್ರಹಿಸಿದ್ದರು.

No comments:

Advertisement