Sunday, March 8, 2020

ಜಾಮಿಯಾ ನಗರದಲ್ಲಿ ಐಎಸ್ ಸಂಪರ್ಕದ ದಂಪತಿ ಸೆರೆ

ಭಯೋತ್ಪಾದಕ ದಾಳಿಗೆ ಸಿಎಎ ಪ್ರತಿಭಟನೆ ಬಳಕೆ ಸಂಚು
ಜಾಮಿಯಾ ನಗರದಲ್ಲಿ ಐಎಸ್ ಸಂಪರ್ಕದ ದಂಪತಿ ಸೆರೆ
ನವದೆಹಲಿ: ಭಯೋತ್ಪಾದಕ ದಾಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ಬಳಸಿಕೊಳ್ಳುತ್ತಿದ್ದ, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ (ಐಎಸ್ಕೆಪಿ) ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ಕಾಶ್ಮೀರದ ದಂಪತಿಯನ್ನು ದಕ್ಷಿಣ ದೆಹಲಿ ಜಾಮಿಯಾ ನಗರದ ಪೊಲೀಸರು 2020 ಮಾರ್ಚ್  08ರ ಭಾನುವಾರ ಬೆಳಗ್ಗೆ ಬಂಧಿಸಿದರು.

ದಂಪತಿ ಅಫ್ಘಾನಿಸ್ಥಾನದ ಉನ್ನತ ಐಎಸ್ಕೆಪಿ ಸದಸ್ಯರ ಜೊತೆಗೆ ಸಂಪರ್ಕ ಇಟ್ಟುಕೊಂಡು ಪೌರತ್ವ  ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಬಳಸಿಕೊಂಡು ಭಯೋತ್ಪಾದಕ ದಾಳಿಗಳನ್ನು ನಡೆಸುವಂತೆ ಮುಸ್ಲಿಂ ಯುವಕರನ್ನು ಪ್ರಚೋದಿಸುತ್ತಿದ್ದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಕಾಶ್ಮೀರದ ಶ್ರೀನಗರದ ದಂಪತಿ ಜಹಾನ್ಜೈಬ್ ಸಮಿ ಮತ್ತು ಆತನ ಪತ್ನಿ ಹೀನಾ ಬಶೀರ್ ಬೇಗ್ ಇವರನ್ನು ಬಂಧಿಸಲಾಗಿದೆ. ಅವರನ್ನು ಬಂಧನಕ್ಕೆ ಒಳಪಡಿಸುವ ವಿಧಿವಿಧಾನದ ಪ್ರಕ್ರಿಯೆಯನ್ನು ನಾವು ಪೂರ್ಣಗೊಳಿಸುತ್ತಿದ್ದೇವೆಎಂದು ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದರು.

ಅಫ್ಘಾನಿಸ್ಥಾನದ ಐಎಸ್ಕೆಪಿ ಉಗ್ರ ಸಂಘಟನೆಯ ಜೊತೆಗೆ ಸಂಪರ್ಕ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಹಾನ್ಜೈಬ್ ಸಮಿ ಮೇಲೆ ಭಾರತೀಯ ಗುಪ್ತದಳ ಕೆಲ ದಿನಗಳಿಂದ ಕಣ್ಣಿಟ್ಟಿತ್ತು.

ಐಎಸ್
ಕೆಪಿಯು ಅಫ್ಘಾನಿಸ್ಥಾನ ಮೂಲದ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಯ ಆಧೀನ ಸಂಘಟನೆಯಾಗಿದೆ. ಆತ್ಮಹತ್ಯಾ ದಾಳಿ ಸೇರಿದಂತೆ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶ ಸಂಘಟನೆ ಇದ್ದಂತೆ ಕಂಡು ಬರುತ್ತದೆ. ಉದ್ದೇಶಕ್ಕಾಗಿ ಶಸ್ತ್ರಾಸ್ತ್ರ ಸಂಗ್ರಹಿಸುವ ಯತ್ನವನ್ನು ಅದು ನಡೆಸುತ್ತಿತ್ತು ಎಂದು ಅಧಿಕಾರಿ ನುಡಿದರು.

ಜಹಾನ್ಜೈಬ್ ಸಮಿಯ ಚಟುವಟಿಕೆಗಳು ಸಧ್ಯಕ್ಕೆ ಭಯೋತ್ಪಾದಕ ಗುಂಪಿನ ಪರವಾಗಿ ಸೈಬರ್ ಸ್ಪೇಸ್ನಲ್ಲಿ ಪ್ರಚಾರ ನಡೆಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ಗುಂಪು ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರವೇ ಸೀಮಿತವಾಗುವ ಬದಲು ಭಾರತದ ಒಳನಾಡಿನತ್ತ  ತನ್ನ ಗಮನ ಹರಿಸಬೇಕು ಎಂದು ಜಹಾನ್ಜೈಬ್ ಸಲಹೆ ಮಾಡಿದ್ದ.

ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಘಟಕದ ಪಾಕಿಸ್ತಾನಿ ಕಮಾಂಡರ್ ಹುಜೈಫಾ ಅಲ್-ಬಾಕಿಸ್ತಾನಿ ಜೊತೆಗೆ ಜಹಾನ್ಜೈಬ್ ಸಂಪರ್ಕ ಹೊಂದಿದ್ದ ಎಂದು ಗುಪ್ತಚರ ಅಧಿಕಾರಿಗಳು ಹೇಳಿದರು. ಹುಜೈಫಾ ಅಲ್ ಬಾಕಿಸ್ತಾನಿ ಕಾಶ್ಮೀರಿ ಯುವಕರನ್ನು ಭಯೋತ್ಪಾದಕ ಗುಂಪಿಗೆ ಸೇರಿಸುವ ಸಲುವಾಗಿ ಅವರನ್ನು ತೀವ್ರವಾದಿಗಳನ್ನಾಗಿಸುವ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸಿದ್ದ. ಪಾಕ್ ಪ್ರಜೆಯಾಗಿರುವ ಹುಜೈಫಾ ಮೊತ್ತ ಮೊದಲಿಗೆ ಲಷ್ಕರ್--ತೊಯ್ಬಾ ಸಂಘಟನೆಯನ್ನು ಸೇರಿದ್ದ, ಬಳಿಕ ಐಎಸ್ ಗೆ ಬಡ್ತಿ ಪಡೆದಿದ್ದ. ಐಎಸ್ಗೆ ಅಂತರ್ಜಾಲದ (ಆನ್ ಲೈನ್) ಮೂಲಕ ನೇಮಕಾತಿಗಳನ್ನು ಮಾಡಿಕೊಳ್ಳುವಲ್ಲಿ ಅವನು ಸಿದ್ಧ ಹಸ್ತನಾಗಿದ್ದ.

ಅಫ್ಘಾನಿಸ್ಥಾನದಲ್ಲಿ ನಡೆದ ಡ್ರೋಣ್ ದಾಳಿಯೊಂದರಲ್ಲಿ ಹುಜೈಫಾ ಅಲ್ -ಬಾಕಿಸ್ತಾನಿ ಹತನಾಗಿದ್ದ. ಆತನ ಸಾವನ್ನು ಕಳೆದ ವರ್ಷ ಜುಲೈ ತಿಂಗಳಲ್ಲಿ ಐಎಸ್ ಮಾಧ್ಯಮ ಒಂದು ದೃಢಪಟ್ಟಿತ್ತು. ಹುಜೈಫಾ ಭಾರತೀಯ ಸಂಸ್ಥೆಗಳಿಗೆ ರಾತ್ರಿ ನಿದ್ದೆ ಬರದಂತೆ ಮಾಡಿದ್ದ ಎಂದು ಐಎಸ್ ಮಾಧ್ಯಮ ಪ್ರತಿಪಾದಿಸಿತ್ತು.

ಜಹಾನ್ಜೈಬ್ ಪತ್ನಿ ಹೀನಾ ಬಶೀರ್ ಬೇಗ್ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಐಸ್ ಪರವಾಗಿ ಸಕ್ರಿಯಳಾಗಿದ್ದಳು ಮತ್ತು ಐಎಸ್ ಭಯೋತ್ಪಾದಕ ಚಟುವಟಿಕೆಗಳಿಗಾಗಿಪ್ರತಿಭಾವಂತರನ್ನುಪತ್ತೆ ಹಚ್ಚಲು ವಾಟ್ಸಪ್ ಸವಲತ್ತನ್ನು ಒದಗಿಸಿದ್ದಳು ಎಂದು ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು ನುಡಿದರು.

ಸೌತ್ ಅಲ್ ಹಿಂದ್ (ವಾಯ್ಸ್ ಆಫ್ ಇಂಡಿಯಾ) ಹೆಸರಿನ ಐಎಸ್ ನಿಯತಕಾಲಿಕದ (ಮ್ಯಾಗಜೈನ್) ಫೆಬ್ರುವರಿ ಆವೃತ್ತಿಯನ್ನು ಪ್ರಕಟಿಸುವಲ್ಲಿ ತನ್ನ ಪಾತ್ರ ಇದ್ದುದನ್ನು  ಜಹಾನಜೈಬ್ ಸಮಿ ತನಿಖಾ ತಂಡ ಒಂದಕ್ಕೆ ಪ್ರಾಥಮಿಕ ತನಿಖೆಯ ವೇಳೆಯಲ್ಲಿ ತಿಳಿಸಿದ್ದಾನೆ.

ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಸಿಟ್ಟಿಗೆದ್ದಿರುವ ಭಾರತೀಯ ಮುಸ್ಲಿಮರಿಗೆ  ರಾಜಕೀಯ ಪ್ರತಿಭಟನೆ ತ್ಯಜಿಸಿ ಜಿಹಾದೀ ಹಿಂಸಾಚಾರಕ್ಕೆ ಇಳಿಯುವಂತೆ  ಡಿಜಿಟಲ್ ನಿಯತಕಾಲಿಕದಲ್ಲಿ, ಇಸ್ಲಾಮಿಕ್ ಸ್ಟೇಟ್ ಉಪಖಂಡ ಶಾಕೆಯು ಕರೆ ಕೊಟ್ಟಿದೆ.

ಪ್ರಜಾಪ್ರಭುತ್ವವು ನಿಮ್ಮನ್ನು ರಕ್ಷಿಸುವುದಿಲ್ಲಎಂದು ಫೆಬ್ರುವರಿ ೨೪ರಂದು ಬಿಡುಗಡೆ ಮಾಡಲಾಗಿರುವ   ಭಯೋತ್ಪಾದಕ ಗುಂಪಿನ ನಿಯತಕಾಲಿಕ ಹೇಳಿದೆ.

ಸಮುದಾಯದ ಹಿತಾಸಕ್ತಿಗಳಿಗೆ ಮುಖ್ಯ ಪ್ರವಾಹದ ಮುಸ್ಲಿಮ್ ನಾಯಕರು ವಂಚನೆ ಎಸಗುತ್ತಿದ್ದಾರೆ ಎಂದು ದೂಷಿಸಿರುವ ನಿಯತಕಾಲಿಕವು ಸಮಾಜದ ಒಂದು ವರ್ಗ, ನಿರ್ದಿಷ್ಟವಾಗಿ ಮುಸ್ಲಿಮ್ ಯುವಕರ ಮೇಲೆ ಪ್ರಭಾವ ಬೀರಿರಬಹುದು ಎಂದು ಜಹಾನ್ಜೈಬ್ ಸಮಿಯ ವಿರುದ್ಧ ತನಿಖೆ ನಡೆಸುತ್ತಿರುವ ಗುಪ್ತಚರ ಅಧಿಕಾರಿ ಹೇಳಿದರು.

ಜಿಹಾದಿ ಹಿಂಸಾಚಾರಕ್ಕೆಸೇರ್ಪಡೆಯಾಗುವಂತೆ ಯುವಕರನ್ನು ಪ್ರಚೋದಿಸಲು ಯತ್ನಿಸಿರುವ ನಿಯತಕಾಲಿಕದ ಜೊತೆಗೆ ಸಂಪರ್ಕ ಹೊಂದಿರುವ ಇತರ ಕೆಲವು ವ್ಯಕ್ತಿಗಳ ಬಗ್ಗೆ ಜಹಾನ್ಜೈಬ್ ಸಮಿ ತಿಳಿಸಿದ್ದಾನೆ.  ಅಲ್ ಹಿಂದ್ಎಂಬುದಾಗಿ ಒಬ್ಬನನ್ನು ಸಮಿ ಗುರುತಿಸಿದ್ದು ಆತನೂ ಸೇರಿದಂತೆ ಆರೋಪಿತ ಸಹಚರರನ್ನು ಪತ್ತೆ ಹಚ್ಚಲು ಯತ್ನಗಳು ನಡೆದಿವೆ ಎಂದು ಅಧಿಕಾರಿ ನುಡಿದರು.

No comments:

Advertisement