Sunday, March 8, 2020

ರೋಶನಿ ಕಪೂರ್ ಲಂಡನ್ ಪಯಣಕ್ಕೆ ಮುಂಬೈಯಲ್ಲಿ ತಡೆ

ಯೆಸ್ ಬ್ಯಾಂಕ್ ಸ್ಥಾಪಕರ ಪುತ್ರಿ ರೋಶನಿ ಕಪೂರ್
ಲಂಡನ್ ಪಯಣಕ್ಕೆ ಮುಂಬೈಯಲ್ಲಿ ತಡೆ
ನವದೆಹಲಿ: ಭಾರತದ ಐದನೇ ದೊಡ್ಡ ಖಾಸಗಿ ಬ್ಯಾಂಕ್ ಎಂಬುದಾಗಿ ಹೆಸರು ಪಡೆದಿರುವ ಯೆಸ್ ಬ್ಯಾಂಕಿನ ಭಾರೀ ಬಿಕ್ಕಟ್ಟಿನ ತನಿಖೆಯ ಮಧ್ಯೆ, ಬ್ಯಾಂಕಿನ ಸ್ಥಾಪಕ ರಾಣಾ ಕಪೂರ್ ಅವರ ಪುತ್ರಿ ರೋಶನಿ ಕಪೂರ್ ಅವರನ್ನು 2020 ಮಾರ್ಚ್  08ರ ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಲಂಡನ್ಗೆ ಹೋಗುವ ವಿಮಾನ ಏರುವ ಮುನ್ನ ತಡೆಯಲಾಯಿತು.

ರಾಣಾ ಕಪೂರ್ ಅವರನ್ನು ಭಾನುವಾರ ಹಣ ವರ್ಗಾವಣೆ ಆರೋಪದಲ್ಲಿ ಬಂಧಿಸಿ, ಮುಂಬೈ ನ್ಯಾಯಾಲಯವು ಮಾರ್ಚ್ ೧೧ರವರೆಗೆ ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸಿದ ಬಳಿಕ ಹೊರಡಿಸಲಾದ ಲುಕ್ ಔಟ್ ನೋಟಿಸನ್ನು ಅನುಸರಿಸಿ ರೋಶನಿ  ಕಪೂರ್ ಅವರ ಲಂಡನ್ ಪಯಣವನ್ನು ತಡೆಯಲಾಯಿತು ಎಂದು ಮೂಲಗಳು ಹೇಳಿದವು.
ರಾಣಾ ಕಪೂರ್ ಆರ್ಥಿಕ ಅಪರಾಧಗಳ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಕಪೂರ್ ಮತ್ತು ಅವರ ಪುತ್ರಿಯ ದೆಹಲಿ ಮತ್ತು ಮುಂಬೈ ನಿವಾಸಗಳಲ್ಲಿ ಶೋಧ ನಡೆಸಿದ ಬಳಿಕ ಭಾನುವಾರ ನಸುಕಿನಲ್ಲೇ ಬ್ಯಾಂಕ್ ಸಂಸ್ಥಾಪಕರನ್ನು ಬಂಧಿಸಿತ್ತು.

ರೋಶನಿ ಕಪೂರ್, ರಾಖೀ ಕಪೂರ್ ಟಂಡನ್ ಮತ್ತು ರಾಧಾ ಕಪೂರ್ ಇವರೆಲ್ಲರೂ ಯೆಸ್ ಬ್ಯಾಂಕ್ ಪತನಕ್ಕೆ ಕಾರಣವಾದ ಹಗರಣದ ಫಲಾನುಭವಿಗಳಾಗಿದ್ದಾರೆ ಎಂದು ಜಾರಿ ನಿದೇಶನಾಲಯವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.
ರಾಣಾ ಕಪೂರ್ ಅವರನ್ನು ಅವರ ವಿರುದ್ಧ ದಾಖಲಿಸಲಾದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಸುನಿಲ್ ಗೋನ್ಸಾಲ್ವೆಸ್ ಅವರು ಒಂದು ಗಂಟೆ ಕಾಲದ ವಿಚಾರಣೆಯ ವೇಳೆಯಲ್ಲಿ ಆರೋಪಿತ ಅಪರಾಧದ ಒಟ್ಟು ಮೊತ್ತು ೪೩೦೦ ಕೋಟಿ ರೂಪಾಯಿಗಳಾಗಿದ್ದು ರಾಣಾ ಕಪೂರ್ ಅವರು ತನಿಖೆಯಲ್ಲಿ ಸಹಕರಿಸಲು ನಿರಾಕರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ರಾಣಾ ಕಪೂರ್ ಅವರು ಇದನ್ನು ನಿರಾಕರಿಸಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಯೆಸ್ ಬ್ಯಾಂಕನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಹಣ ಹಿಂಪಡೆಯುವುದರ ಮೇಲೆ ೫೦,೦೦೦ ರೂಪಾಯಿಗಳ ಮಿತಿ ವಿಧಿಸಿದ ಬಳಿಕ ಸಾರ್ವಜನಿಕರು ಸಿಟ್ಟಿಗೆದ್ದಿರುವ ಹಿನ್ನೆಲೆಯಲ್ಲಿ ತಮ್ಮ ಕಕ್ಷಿದಾರರನ್ನುಬಲಿಪಶುಮಾಡಲಾಗಿದೆ ಎಂದು ಕಪೂರ್ ಪರ ವಕೀಲ ಝೈನ್ ಶ್ರೋಫ್ ವಾದಿಸಿದ್ದರು.

ವಸೂಲಾಗದ ಸಾಲಗಳು ರಾಶಿ ಬೀಳುತ್ತಿದ್ದ ಪರಿಣಾಮವಾಗಿ ತತ್ತರಿಸಿದ್ದ ಯೆಸ್ ಬ್ಯಾಂಕ್ ಕಳೆದ ಹಲವಾರು ತಿಂಗಳುಗಳಿಂದ ಅಗತ್ಯಗಳನ್ನು ಪೂರೈಸುವ ಸಲುವಾಗಿ ಬಂಡವಾಳ ಕ್ರೋಡೀಕರಿಸಲು ವಿಫಲ ಯತ್ನ ನಡೆಸಿತ್ತು.

ಗುರುವಾರ ಆರ್ಬಿಐ ಯೆಸ್ ಬ್ಯಾಂಕನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಪುನಶ್ಚೇತನ ಯೋಜನೆ ರೂಪಿಸುತ್ತಿರುವುದಾಗಿ ಪ್ರಕಟಿಸಿತ್ತು.

ಶನಿವಾರ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಯೆಸ್ ಬ್ಯಾಂಕಿನ ರಕ್ಷಣಾ ಯೋಜನೆಯ ಅಂಗವಾಗಿ ತಾನು ಯೆಸ್ ಬ್ಯಾಂಕಿನ ಶೇಕಡಾ ೪೯ರಷ್ಟು ಷೇರು ಖರೀದಿಸಿ ಪುನಶ್ಚತನಕ್ಕೆ ಹಣ ಒದಗಿಸುವುದಾಗಿ ಪ್ರಕಟಿಸಿತ್ತು.

ದಿವಾಳಿ ಎದ್ದಿರುವ ದಿವಾನ್ ಹೌಸಿಂಗ್ ಅಂಡ್ ಫೈನಾನ್ಸ್ ಲಿಮಿಟೆಡ್ ಸೇರಿದಂತೆ ಹಲವಾರು ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ ಸಾಲ ನೀಡಿತ್ತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವಾರ ಹೇಳಿದ್ದರು.

ಯೆಸ್ ಬ್ಯಾಂಕ್ ಕಳೆದ ಆರು ತಿಂಗಳುಗಳಲ್ಲಿ ಹಣಕಾಸು ಬಿಕ್ಕಟ್ಟಿನಲ್ಲಿ ಸಿಲುಕಿ ಭಾರತೀಯ ರಿಸರ್ವ್ ಬಾಂಕ್ ತನ್ನ ವಶಕ್ಕೆ ಪಡೆದಿರುವ ಮೂರನೇ ಮಹತ್ವದ ಭಾರತೀಯ ಹಣಕಾಸು ಸಂಸ್ಥೆಯಾಗಿದೆ. ಇದಕ್ಕೆ ಮುನ್ನ ದಿವಾನ್ ಹೌಸಿಂಗ್ ಮತ್ತು ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕನ್ನು  ರಿಸರ್ವ್ ಬ್ಯಾಂಕ್ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು

No comments:

Advertisement