My Blog List

Monday, March 30, 2020

ಕಾರ್ಮಿಕ ಮಹಾ ವಲಸೆ ನಿಲ್ಲಿಸಲೇಬೇಕು: ಸುಪ್ರೀಂಕೋರ್ಟಿಗೆ ಕೇಂದ್ರ

ಕೋವಿಡ್ ೧೯ ಸಾಂಕ್ರಾಮಿಕ  ಭೀತಿ, ಕಾರ್ಮಿಕ ಮಹಾ ವಲಸೆ ನಿಲ್ಲಿಸಲೇಬೇಕು: ಸುಪ್ರೀಂಕೋರ್ಟಿಗೆ ಕೇಂದ್ರ
ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಸಾಂಕ್ರಾಮಿಕ ಪಿಡುಗು ಒಡ್ಡಿರುವ ಅಪಾಯ ಇನ್ನಷ್ಟು ಹೆಚ್ಚದಂತೆ ಖಾತರಿ ಪಡಿಸುವ ನಿಟ್ಟಿನಲ್ಲಿ ನಗರಗಳಿಂದ ತಮ್ಮ ಹುಟ್ಟೂರುಗಳತ್ತ ವಲಸೆ ಕಾರ್ಮಿಕರು ಆರಂಭಿಸಿರುವಮಹಾವಲಸೆಯನ್ನು ನಿಲ್ಲಿಸಲೇ ಬೇಕಾಗಿದೆ ಎಂದು ಕೇಂದ್ರ ಸರ್ಕಾರವು 2020 ಮಾರ್ಚ್ 30ರ ಸೋಮವಾರ ಸುಪ್ರೀಂಕೋರ್ಟಿಗೆ ತಿಳಿಸಿತು.

ಮಾರ್ಚ್ ೨೫ರಿಂದ ಜಾರಿಯಾಗಿರುವ ಮೂರು ವಾರಗಳ ರಾಷ್ಟ್ರೀಯ ದಿಗ್ಬಂಧನ (ಲಾಕ್ ಡೌನ್) ಹಿನ್ನೆಲೆಯಲ್ಲಿ ಆರಂಭವಾಗಿರುವ ಕಾರ್ಮಿಕರ ಮಹಾವಲಸೆಯಿಂದ ಉದ್ಭವಿಸಬಹುದಾದ ಅಪಾಯಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ಕೋರಿ ಇಬ್ಬರು ವಕೀಲರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಕೇಂದ್ರದ ನಿಲುವನ್ನು ಸುಪ್ರಿಂಕೋರ್ಟಿಗೆ ವಿವರಿಸಿದರು.

ಸರ್ಕಾರವು ವಲಸೆಗೆ ಅನುಕೂಲ ಮಾಡಿಕೊಡುತ್ತಿದೆ ಎಂಬ ಸಂದೇಶ ಹೋಗಬಾರದು. ವಲಸೆಯನ್ನು ನಿಲ್ಲಿಸಲೇಬೇಕು ಎಂದು ಮೆಹ್ತ ನುಡಿದರು.

ರಾಷ್ಟ್ರವ್ಯಾಪಿ ದಿಗ್ಬಂಧನದ ಪರಿಣಾಮವಾಗಿ ರಾಜಧಾನಿ ದೆಹಲಿಯೂ ಸೇರಿದಂತೆ ನಗರಗಳಿಂದ ಸಹಸ್ರಾರು ವಲಸೆ ಕಾರ್ಮಿಕರು, ಮುಖ್ಯವಾಗಿ ಬದುಕಿನ ಆಧಾರವನ್ನೇ ಕಳೆದುಕೊಂಡ ದಿನಗೂಲಿ ಕಾರ್ಮಿಕರು ತಮ್ಮ ಹುಟ್ಟೂರುಗಳತ್ತ ಮಹಾವಲಸೆ ಹೊರಟಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಹಲವರು ಕಾಲ್ನಡಿಗೆಯಲ್ಲೇ ನೂರಾರು ಕಿಲೋ ಮೀಟರ್ ದೂರವನ್ನು ಕ್ರಮಿಸಿ ರಾಜ್ಯಗಳ ಗಡಿ ಸೇರಲು ಹವಣಿಸಿದ್ದಾರೆ. ಇದು ಕೋವಿಡ್ -೧೯ನ್ನು ಗಾಮೀಣ ಭಾರತದಲ್ಲೂ ಹರಡಲು ಕಾರಣವಾಗಬಹುದು ಎಂಬ ಭೀತಿಯನ್ನು ಹುಟ್ಟು ಹಾಕಿದೆ. 

ಇಬ್ಬರು ವಕೀಲರಾದ ರಶ್ಮಿ ಬನ್ಸಲ್ ಮತ್ತು ಅನುಜ್ ಗುಪ್ತ ಅವರು ತಮ್ಮ ಅರ್ಜಿಯಲ್ಲಿ ಹಲವಾರು ವಲಸೆ ಕಾರ್ಮಿಕರು ವೈರಸ್ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇರುವುದನ್ನು ಉಲ್ಲೇಖಿಸಿ ಅವರು ರೋಗ ವಾಹಕರಾಗಬಹುದು ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ. ಮನೆಗಳಿಗೆ ವಾಪಸಾಗುವ ಹತಾಶ ಯತ್ನದಲ್ಲಿ ಕಾರ್ಮಿಕರು ಸಾಮಾಜಿಕ ಅಂತರವನ್ನು ಕೂಡಾ ಕಾಯ್ದುಕೊಳ್ಳುತ್ತಿಲ್ಲ, ಇದು ರೋಗ ಹರಡುವ ಅಪಾಯವನ್ನು ತಂದೊಡ್ಡಿದೆ ಎಂದು ವಕೀಲರಿಬ್ಬರೂ ವಾದಿಸಿದ್ದಾರೆ. ಸೋಂಕು ಮುಕ್ತg ಬಗೆಗಿನ ಖಾತರಿಯ ವಿನಃ ಪಯಣಿಸಲು ಕಾರ್ಮಿಕರಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಅರ್ಜಿದಾರರ ಅಹವಾಲುಗಳನ್ನು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಆಲಿಸಿದ ಬಳಿಕ, ವಿಷಯ ಕಾರ್‍ಯಾಂಗದ (ಆಡಳಿತಾತ್ಮಕ ವ್ಯವಸೆಯ) ವ್ಯಾಪ್ತಿಗೆ ಬರುವುದರಿಂದ ತಾನು ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿಲ್ಲ ಎಂಬ ಇಂಗಿತವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿತು.
ಸರ್ಕಾರವು
ಈಗಾಗಲೇ ವಿಷಯದ ಜೊತೆ ವ್ಯವಹರಿಸುತ್ತಿರುವಾಗ ಅದನ್ನು ಇನ್ನಷ್ಟು ಕ್ಲಿಷ್ಟಗೊಳಿಸಲು ತಾನು ಬಯಸುವುದಿಲ್ಲ ಎಂದು ಭಾರತದ ಮುಖ್ಯನ್ಯಾಯಮೂರ್ತಿ (ಸಿಜೆಐ) ಎಸ್ ಬೋಬ್ಡೆ ನೇತೃತ್ವದ ಪೀಠ ಹೇಳಿತು.

ಸರ್ಕಾರ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ನಾವು ಭಾವಿಸಿದ್ದೇವೆ. ಸರ್ಕಾರ ಈಗಾಗಲೇ ಕಾರ್‍ಯ ನಿರ್ವಹಿಸುತ್ತಿರುವಾಗ ಆದೇಶ ನೀಡುವ ಮೂಲಕ ವಿಷಯವನ್ನು ಇನ್ನಷ್ಟು ಸಂಕೀರ್ಣಗೊಳಿಸಲು ನಾವು ಬಯಸುವುದಿಲ್ಲ ಎಂದು ಸಿಜೆಐ ನುಡಿದರು.

ನ್ಯಾಯಾಲಯ ಯಾವುದೇ ಆದೇಶವನ್ನೂ ನೀಡಲಿಲ್ಲ, ಬದಲಿಗೆ ವಿಷಯದ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ನಗರಗಳಿಂದ ಹಳ್ಳಿಗಳಿಗೆ ವಲಸೆ ಹೋಗುತ್ತಿರುವ ಜನರ ಜೊತೆಗೆ ಸಮಾಲೋಚನೆ ನಡೆಸಬೇಕು ಮತ್ತು ಅವರು ಭಯಭೀತರಾಗಿ ಓಡಿ ಹೋಗುವಂತಾಗಬಾರದು ಎಂದು ಅರ್ಜಿದಾರರೂ ನ್ಯಾಯಾಲಯಕ್ಕೆ ಹೇಳಿದರು.

ಭಯ ಮತ್ತು ಗಲಿಬಿಲಿಗೊಳ್ಳುವಿಕೆಯು ವೈರಸಿಗಿಂತಲೂ ದೊಡ್ಡ ಸಮಸ್ಯೆ ಎಂದು ಸಿಜೆಐ ಬೋಬ್ಡೆ ಹೇಳಿದರು.

ತಮ್ಮ ಹುಟ್ಟೂರುಗಳನ್ನು ಸೇರಿಕೊಳ್ಳಲು ನೂರಾರು ಕಿಮೀ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸುತ್ತಿರುವ ವಲಸೆ ಕಾರ್ಮಿಕರ ಸ್ಥಿತಿಗತಿಯನ್ನು ಗಮನಿಸುವಂತೆ ಕೋರಿ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ಸಲ್ಲಿಸಿದ ಇನ್ನೊಂದು ಅರ್ಜಿ ಬಗೆಗೂ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಪೀಠವು ಕೇಂದ್ರಕ್ಕೆ ಸೂಚಿಸಿತು. ಇಂತಹ ವಲಸೆ ಕಾರ್ಮಿಕರನ್ನು ಗುರುತಿಸಬೇಕು ಮತ್ತು ಸರ್ಕಾರಿ ಆಶ್ರಯತಾಣಗಳಿಗೆ ಸ್ಥಳಾಂತರಿಸಿ ಆಹಾರ, ನೀರು ಮತ್ತು ಔಷಧ ಒದಗಿಸಬೇಕು ಎಂದು ಶ್ರೀವಾಸ್ತವ ನ್ಯಾಯಾಲಯಕ್ಕೆ ಮನವಿ ಮಾಡಿದರು.

No comments:

Advertisement