Monday, March 30, 2020

ವಲಸೆ ಕಾರ್ಮಿಕರಿಗೆ ’ಕೆಮಿಕಲ್ ಬಾತ್’: ತನಿಖೆಗೆ ಆದೇಶ

ವಲಸೆ ಕಾರ್ಮಿಕರಿಗೆ  ಕೆಮಿಕಲ್ ಬಾತ್:  ತನಿಖೆಗೆ ಆದೇಶ
ಉತ್ತರಪ್ರದೇಶ ಘಟನೆ ಬಗ್ಗೆ ವಿಪಕ್ಷ, ನೆಟ್ಟಿಗರ ಆಕ್ರೋಶ
ಬರೇಲಿ: ಮಾರಕ ಕೊರೋನಾವೈರಸ್ ಸೋಂಕು ಹರಡದಂತೆ ತಡೆಯಲು ಘೋಷಿಸಲಾದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಹಿನ್ನೆಲೆಯಲ್ಲಿ ನಗರಗಳನ್ನು ತ್ಯಜಿಸಿ ಉತ್ತರಪ್ರದೇಶಕ್ಕೆ ಬಂದ ವಲಸೆ ಕಾರ್ಮಿಕರ ಗುಂಪೊಂದನ್ನು ರಸ್ತೆಯಲ್ಲಿ ಕುಳ್ಳಿರಿಸಿ ಕ್ಲೋರಿನ್ ಮಿಶ್ರಿತ ನೀರು ಸಿಂಪಡಿಸಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಬರೇಲಿ ಜಿಲ್ಲಾ ಆಡಳಿತವು 2020 ಮಾರ್ಚ್ 30ರ ಸೋಮವಾರ ಆಜ್ಞಾಪಿಸಿತು.

ವಿರೋಧ ಪಕ್ಷಗಳ ನಾಯಕರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಘಟನೆಯ ವಿಡಿಯೋ ವೈರಲ್ ಆದ ಬಳಿಕ ಕಾರ್ಮಿಕರನ್ನು ನಡೆಸಿಕೊಂಡ ರೀತಿಯ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಬಸ್ ನಿಲ್ದಾಣದ ಸಮೀಪ ಘಟಿಸಿದ ಘಟನೆಯ ವಿಡಿಯೋ ಟ್ವಟ್ಟರಿನಲ್ಲಿ ಪ್ರಕಟವಾಗಿದ್ದು ಗುಂಪಿನಲ್ಲಿ ಮಕ್ಕಳು ಕೂಡಾ ಇದ್ದುದು ಬೆಳಕಿಗೆ ಬಂದಿತ್ತು ಕೆಲವು ಟ್ವಿಟ್ಟರ್ ಬಳಕೆದಾರರು ಕಾರ್ಮಿಕರಿಗೆ ಕೆಮಿಕಲ್ ಬಾತ್ (ರಾಸಾಯನಿಕ ಸ್ನಾನ) ಮಾಡಿಸಲಾಗಿದೆ ಎಂದೂ ದೂರಿದ್ದರು.

ವಲಸೆ ಕಾರ್ಮಿಕರ ತಂಡವೊಂದರ ಮೇಲೆ ಕ್ಲೋರಿನ್ ಮಿಶ್ರಿತ ನೀರನ್ನು ಸಿಂಪಡಿಸಿದ್ದನ್ನು ದೃಢ ಪಡಿಸಿದ ಕೋವಿಡ್-೧೯ ಉಪಶಮನ ತಂಡದ ಉಸ್ತುವಾರಿ ವಹಿಸಿದ ನೋಡಲ್ ಅಧಿಕಾರಿ ಅಶೋಕ ಗೌತಮ್ ಅವರು ಸಾರ್ಸ್-ಕೋವ್- ವೈರಸ್ ಹರಡದಂತೆ ತಡೆಯಲು ಇಂತಹ ಕ್ರಮ ಅನಿವಾರ್ಯವಾಗಿತ್ತು ಎಂದು ಹೇಳಿದ್ದರು.

ನಾವು ಅವರನ್ನು ಸುರಕ್ಷಿತರಾಗಿ ಇಡಲು ಯತ್ನಿಸಿದೆವು ಮತ್ತು ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳುವಂತೆ ಅವರಿಗೆ ಸೂಚಿಸಿದ್ದೆವು. ಅವರು ಒದ್ದೆಯಾಗುವುದು ಸಹಜವಾಗಿತ್ತು ಎಂದು ಅಧಿಕಾರಿ ಹೇಳಿದ್ದರು.

ಸರ್ಕಾರದ ವಿಶೇಷ ಬಸ್ಸುಗಳಲ್ಲಿ ಆಗಮಿಸಿದ ಕಾರ್ಮಿಕರನ್ನು ಒಳಗೊಂಡಂತೆ ಸ್ವಚ್ಛತಾ ಕಾರ್‍ಯ ಮಾಡುವಾಗ ಕೆಲವು ಅಧಿಕಾರಿಗಳು ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೀಶ್ ಕುಮಾರ್ ನುಡಿದರು.

ನಾವು ವಿಡಿಯೋ ನೋಡಿದ್ದೇವೆ. ಬರೇಲಿ ನಗರ ನಿಗಮ ಮತ್ತು ಅಗ್ನಿಶಾಮಕ ಇಲಾಖೆಯ ತಂಡಗಳಿಗೆ ಬಸ್ಸುಗಳನ್ನು ಶುಚಿಗೊಳಿಸಲು ಸೂಚಿಸಲಾಗಿತ್ತು. ಆದರೆ ಅವರು ಅತಿಕ್ರಮಿಸಿದರು. ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಆಜ್ಞಾಪಿಸಿದ್ದೇವೆ. ತೊಂದರೆಗೆ ಒಳಗಾದ ಜನರಿಗೆ ಮುಖ್ಯ ವೈದ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಿತೀಶ್ ಕುಮಾರ್ ಟ್ವೀಟ್ ಮಾಡಿದರು.

ಪ್ರಾಥಮಿಕ ತನಿಖಾ ವರದಿಯನ್ನು ಆಧರಿಸಿ ಘಟನೆಯಲ್ಲಿ ಶಾಮೀಲಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಮುನ್ನ ನಗರ ಪ್ರವೇಶಿಸಿದವರ ವೈದ್ಯಕೀಯ ತಪಾಸಣೆ ನಡೆಸಲು ಆದೇಶವಿದೆ, ಆಧಿಕಾರಿಗಳು ಶುಚೀಕರಣಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಕೆಲಸ ಮಾಡಿದ್ದಾರೆ ಎಂದು ಭಾವಿಸುವೆ ಎಂದು ಇದಕ್ಕೆ ಮುನ್ನ ಬೆಳಗ್ಗೆ ನಿತೀಶ್ ಕುಮಾರ್ ಹೇಳಿದ್ದರು. ತಾನು ವಿಡಿಯೋ ನೋಡಿಲ್ಲ, ವಿಷಯದ ಬಗ್ಗೆ ಪರಿಶೀಲಿಸುವೆ ಎಂದು ಅವರು ತಿಳಿಸಿದ್ದರು.

ನವದೆಹಲಿ: ದೆಹಲಿ ಮತ್ತು ಇತರ ನಗರಗಳಿಂದ  ಉತ್ತರ ಪ್ರದೇಶಕ್ಕೆ ವಾಪಸಾಗಿರುವ ಲಸೆ ಕಾರ್ಮಿಕರಿಗೆ ಬರೇಲಿಯಲ್ಲಿರಾಸಾಯನಿಕ ಸ್ನಾನ (ಕೆಮಿಕಲ್ ಬಾತ್) ಮಾಡಿಸಲಾಗಿದೆ ಎಂಬ ವರದಿಗಳು ಹರಡಿದ್ದು ಇದಕ್ಕಾಗಿ ವಿಪಕ್ಷಗಳು ಸರ್ಕಾರದ ಮೇಲೆ ಹರಿಹಾಯ್ದಿವೆ. ಬರೇಲಿ ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಅವರು ವಿಷಯ ಪರಿಶೀಲಿಸುವುದಾಗಿ ಹೇಳಿದ್ದಾರೆ.

ರಸ್ತೆಯ ಒಂದು ಬದಿಯಲ್ಲಿ ಕುಳಿತ ಜನರ ಮೇಲೆ ನೀರು ಸಿಂಪಡಿಸುವ ದೃಶ್ಯದ ವಿಡಿಯೋ ಟ್ವಿಟ್ಟರಿನಲ್ಲಿ ವೈರಲ್ ಆದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾg ಒಂದು ವರ್ಗವು ಕಾರ್ಮಿಕರ ಬಗೆಗಿನ ವರ್ತನೆಯನ್ನು ಕಟುವಾಗಿ ಟೀಕಿಸಿತ್ತು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಹಿಂದಿ ಭಾಷೆಯಲ್ಲಿ ಮಾಡಿದ ಟ್ವೀಟಿನಲ್ಲಿ ಸರ್ಕಾರವನ್ನು ತರಾಟೆಗೆಗೆ ತೆಗೆದುಕೊಂಡಿದ್ದರು.

ಹೆಸರು ಹೇಳಲು ಇಚ್ಛಿಸದ ಅಗ್ನಿಶಾಮಕ ಇಲಾಖಾ ಅಧಿಕಾರಿಯೊಬ್ಬರ ಪ್ರಕಾರ ನೀರಿಗೆ ಸೋಡಿಯಂ ಹೈಪೋಕ್ಲೋರೈಟ್ (ಲಿಕ್ವಿಡ್ ಬ್ಲೀಚ್) ಬೆರೆಸಲಾಗಿತ್ತು ಎನ್ನಲಾಗಿದೆ. ಅಧಿಕಾರಿಗಳ ಸೂಚನೆಯ ಮೇರೆಗೆ ಕ್ರಮ ಕೈಗೊಳ್ಳಲಾಯಿತು ಎಂದು ಅಧಿಕಾರಿ ಹೇಳಿದ್ದರು.

ಇಂತಹ ಯಾವುದೇ ಸೂಚನೆ ನೀಡಿರುವ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಬರೇಲಿ ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಮತ್ತು ಆರೋಗ್ಯ ಅಧಿಕಾರಿಗಳು ಬೆಳಗ್ಗೆ ತಿಳಿಸಿದ್ದರು.

ನಾನು ವಿಡಿಯೋ ನೋಡಿಲ್ಲ. ಕೊರೋನಾ ವೈರಸ್ ಹರಡದಂತೆ ನೋಡಿಕೊಳ್ಳುವ ಸಲುವಾಗಿ ಸರ್ಕಾರ ನೀಡಿದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನಗರ ಪ್ರವೇಶಿಸುವ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕು ಎಂಬ ಆದೇಶ ನಮಗಿದೆ ಎಂದು ನಿತೀಶ್ ಕುಮಾರ್ ಹೇಳಿದ್ದರು.

ನೀರಿನಲ್ಲಿ ಲಿಕ್ವಿಡ್ ಬ್ಲೀಚ್‌ನ್ನು ಬೆರೆಸಿದಾಗ ಇರುವ ಕ್ಲೋರಿನ್ ಮಟ್ಟಕ್ಕೆ ಅನುಗುಣವಾಗಿ ಅದು ಚರ್ಮದಲ್ಲಿ ಉರಿ ಅಥವಾ ತುರಿಕೆಯನ್ನು ಉಂಟು ಮಾಡುತ್ತದೆ ಎಂದು ಬರೇಲಿಯ ಒಬ್ಬ ವೈದ್ಯ ಗಿರೀಶ್ ಮಕ್ಕೆರ್ ಹೇಳಿದ್ದರು.  ರಾಸಾಯನಿಕವನ್ನು ಮೇಲ್ಮೈಗಳನ್ನು ಶುದ್ದೀಕರಿಸುವ ಸಲುವಾಗಿ ಬಳಸಲಾಗುತ್ತದೆ ಎಂದು ಅವರು ವಿವರಿಸಿದ್ದರು.

೨೫,೦೦೦ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಇತರ ನಗರಗಳಿಂದ ಈವರೆಗೆ ಬರೇಲಿಗೆ ಆಗಮಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸಲ ಆಡಳಿತ ಅಧಿಕಾರಿಯೊಬ್ಬರು ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ೨೫ರಿಂದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ ಬಳಿಕ ರಾಷ್ಟ್ರದ ರಾಜಧಾನಿ ಮತ್ತು ಇತರ ಮೆಟ್ರೋ ನಗರಗಳಿಂದ ವಲಸೆ ಕಾರ್ಮಿಕರು ಗುಂಪು ಗುಂಪಾಗಿ ಬಸ್ಸುಗಳಲ್ಲಿ ಇಲ್ಲವೇ ನಡಿಗೆಯ ಮೂಲಕ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಹುಟ್ಟೂರುಗಳಿಗೆ ವಾಪಸಾಗುತ್ತಿದ್ದಾರೆ. ಕೆಲವರು ಅಧಿಕಾರಿಗಳ ನೆರವಿನೊಂದಿಗೆ ತಮ್ಮ ತಮ್ಮ ಹುಟ್ಟೂರು ತಲುಪಿದ್ದಾರೆ.

ದೆಹಲಿ ಸೇರಿದಂತೆ ಮೆಟ್ರೋಪಾಲಿಟನ್ ನಗರಗಳಲ್ಲಿ ಸಿಕ್ಕಿಹಾಕಿಕೊಂಡು ಕೆಲಸವಿಲ್ಲದೆ ಹಣದ ಅಭಾವಕ್ಕೆ ಗುರಿಯಾಧ ವಲಸೆ ಕಾರ್ಮಿಕರು ಇದೇ ಕಾರಣಕ್ಕಾಗಿ ಬೃಹತ್ ನಗರಗಳನ್ನು ತ್ಯಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಮಹಾವಲಸೆಯು ಸೋಂಕು ಸರಪಣಿ ಮುರಿಯುವ ದಿಗ್ಬಂಧನದ ಉದ್ದೇಶವನ್ನೇ ಮೂಲೆಪಾಲು ಮಾಡಿ ಹೆಚ್ಚಿನ ಅಪಾಯಗಳನ್ನು ತಂದೊಡ್ಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ಸ್ಯಾನಿಟೈಸರ್ ಮತ್ತು ಇತರ ರಾಸಾಯನಿಕಗಳನ್ನು ಬರೇಲಿ ಪ್ರವೇಶಿಸಿದ ಕಾರ್ಮಿಕರ ಮೇಲೆ ಸಿಂಪಡಿಸಲಾಯಿತು ಎಂದು ಹೇಳಲಾಗುತ್ತಿದ್ದು, ವಿಮಾನಗಳ ಮೂಲಕ ಹೊರದೇಶಗಳಿಂದ ಬಂದವರನ್ನು ನೋಡಿಕೊಳ್ಳುವ ರೀತಿಯಲ್ಲೇ ಬಡಜನರನ್ನೂ ನೋಡಿಕೊಳ್ಳಲಾಗುತ್ತಿದೆ ಎಂದು ನೆಟ್ಟಿಗರೊಬ್ಬರು ಟೀಕಿಸಿದರು.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿನಾವೆಲ್ಲರೂ ಒಟ್ಟಾಗಿ ಮಾರಕ ಸೋಂಕಿನ ವಿರುದ್ಧ ಹೋರಾಡಬೇಕಾಗಿರುವ ಹೊತ್ತಿನಲ್ಲಿ ಗುಜರಾತ್ ಸರ್ಕಾರ ಇಂತಹ ಅಮಾನವೀಯ ವರ್ತನೆ ತೋರುವುದು ಬೇಡ.ಕಾರ್ಮಿಕರು ಮೊದಲೇ ದುಃಖದಲ್ಲಿದ್ದಾರೆ. ಅವರ ಮೇಲೆ ಕೆಮಿಕಲ್ ಸಿಂಪಡಿಸಿ ರೀತಿಯಾಗಿ ನೋಡಿಕೊಳ್ಳಬೇಡಿ.ಇದರಿಂದ ಅವರನ್ನು ರಕ್ಷಿಸಲು ಸಾಧ್ಯವಿಲ್ಲ, ಬದಲಿಗೆ ಇನ್ನಷ್ಟು ಸಮಸ್ಯೆಗಳು ಹುಟ್ಟಿಕೊಳ್ಳಲಿವೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದರು.

No comments:

Advertisement