ಹೆರಾತ್, ಜಲಾಲಾಬಾದ್ ನಗರಗಳ ಭಾರತೀಯ
ರಾಜತಾಂತ್ರಿಕ ಕಚೇರಿ ಸಿಬ್ಬಂದಿ ಕಾಬೂಲ್‌ಗೆ ಸ್ಥಳಾಂತರ
ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಅಫ್ಘಾನಿಸ್ಥಾನದ ಹೆರಾತ್ ಮತ್ತು ಜಲಾಲಾಬಾದ್ಗಲ್ಲಿನ ತನ್ನ ಎಲ್ಲ ರಾಜತಾಂತ್ರಿಕ ಕಚೇರಿ ಸಿಬ್ಬಂದಿಯನ್ನು ಭಾರತವು ದೇಶದ ರಾಜಧಾನಿ ಕಾಬೂಲ್ಗೆ ಸ್ಥಳಾಂತರಿಸಿದೆ ಎಂದು ನಂಬಲರ್ಹ ಮೂಲಗಳು 2020 ಮಾರ್ಚ್ 29ರ ಭಾನುವಾರ ತಿಳಿಸಿದವು.
ಹೆರಾತ್ ಮತ್ತು ಜಲಾಲಾಬಾದಿನಲ್ಲಿನ ಭಾರತದ ರಾಜತಾಂತ್ರಿಕ ಕಚೇರಿಗಳು ಇರಾನಿನ ಗಡಿಗೆ ಸಮೀಪದಲ್ಲಿದ್ದು, ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸುತ್ತಿರುವ ನೆರೆಯ ರಾಷ್ಟ್ರದಿಂದ ಭಾರೀ ಸಂಖ್ಯೆಯಲ್ಲಿ ಅಪ್ಘನ್ ನಿರಾಶ್ರತರು ಈ ನಗರಗಳಿಗೆ ಬರುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು.
ಹೆರಾತ್ ಮತ್ತು ಜಲಾಲಾಬಾದ್ ನಗರಗಲ್ಲಿ ಇರುವ ವೈದ್ಯಕೀಯ ಸವಲತ್ತುಗಳು ಕೂಡಾ ಕಾಬೂಲ್ನಲ್ಲಿ ಇರುವಷ್ಟು ಚೆನ್ನಾಗಿಲ್ಲ ಎಂದೂ ಹೇಳಲಾಗಿದೆ.
ಕೋವಿಡ್-೧೯ ಕಳವಳದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ ಮೊದಲ ಕ್ರಮ ಇದಾಗಿದೆ. ಅಫ್ಘನ್ ರಾಜಧಾನಿ ಕಾಬೂಲ್ ನಲ್ಲಿ ಸಿಖ್ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಅಫ್ಘನ್ ರಾಜಧಾನಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಭದ್ರತೆಗಳನ್ನು ಇನ್ನಷ್ಟು ಬಿಗಿಗೊಳಿಸಿರುವ ಬೆನ್ನಲ್ಲೇ ಸಿಬ್ಬಂದಿ ಸ್ಥಳಾಂತರದ ವರದಿ ಬಂದಿದೆ.
ಸದರಿ ಬೆಳವಣಿಗೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಸ್ಥಳಾಂತರ ಪ್ರಕ್ರಿಯೆಯಲ್ಲಿ ಸ್ಥಳಾಂತರಗೊಳ್ಳುವ ರಾಜತಾಂತ್ರಿಕ ಸಿಬ್ಬಂದಿಯ ನಿರ್ದಿಷ್ಟ ಸಂಖ್ಯೆ ಎಷ್ಟು ಎಂಬುದೂ ತತ್ ಕ್ಷಣಕ್ಕೆ ಗೊತಾಗಿಲ್ಲ.
ಭಾರತವು ಅಫ್ಘಾನಿಸ್ಥಾನದ ಹೆರಾತ್, ಜಲಾಲಾಬಾದ್, ಕಂದಹಾರ ಮತ್ತು ಮಝರ್ -ಇ-ಶರೀಫ್ ಈ ನಾಲ್ಕು ನಗರಗಳಲ್ಲಿ ನಾಲ್ಕು ರಾಜತಾಂತ್ರಿಕ ಕಚೇರಿಗಳನ್ನು ಹೊಂದಿದೆ. ಅಫ್ಘಾನಿಸ್ಥಾನದ ಮೂರನೇ ದೊಡ್ಡ ನಗರವಾಗಿರುವ ಹೆರಾತ್ ಇರಾನ್ ಗಡಿಯನ್ನು ಸಂಧಿಸುವ ಇಸ್ಲಾಮ್ ಖಲಾದಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂ ಎಚ್ ಒ) ಪ್ರಕಾರ ಇರಾನಿನಲ್ಲಿ ಈವರೆಗೆ ಕೊರೋನಾವೈರಸ್ ಸೋಂಕು ತಗುಲಿದ ೩೨,೩೩೨ ಪ್ರಕರಣಗಳು ದಾಖಲಾಗಿದ್ದು, ೨,೩೭೮ ಸಾವುಗಳು ಸಂಭವಿಸಿವೆ. ಅಘ್ಪಾನಿಸ್ಥಾನದಲ್ಲಿ ೧೦೬ ಸೋಂಕು ತಗುಲಿದ ಪ್ರಕಣಗಳು ವರದಿಯಾಗಿದ್ದು ಎರಡು ಸಾವು ಸಂಭವಿಸಿವೆ. ಹೆರಾತ್ ನಗರವು ಅಫ್ಘಾನಿಸ್ಥಾನದಲ್ಲಿ ಕೊರೋನಾವೈರಸ್ ಹರಡುವ ಕೇಂದ್ರ ಬಿಂದುವಾಗಿದೆ ಎಂದು ಬಣ್ಣಿಸಲಾಗಿದೆ.
ಹೆರಾತ್ ನಗರವು ಇನ್ನೊಂದು ವುಹಾನ್ ಆಗಿ ಪರಿವರ್ತನೆಗೊಳ್ಳಬಹುದು ಎಂಬ ಭಯ ನಮಗಿದೆ ಎಂಬುದಾಗಿ ಅಫ್ಘನ್ ಸಾರ್ವಜನಿಕ ಆರೋಗ್ಯ ಸಚಿವ ಫೆರೋಜುದ್ದೀನ್ ಫೆರೋಜ್ ಹೇಳಿದ್ದನ್ನು ನ್ಯೂಯಾಕ್ ಟೈಮ್ಸ್ ಉಲ್ಲೇಖಿಸಿದೆ. ಪ್ರಾಂತೀಯ ಅಧಿಕಾರಿಗಳು ಬುಧವಾರದಿಂದ ಹೆರಾತ್ನಲ್ಲಿ ದಿಗ್ಬಂಧನ (ಲಾಕ್ ಡೌನ್) ವಿಧಿಸಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಕೊರೋನಾ ವ್ಯಾಪಿಸಿದರೆ ದೇಶದ ಅರ್ಧದಷ್ಟು ಮಂದಿ ಅಂದರೆ ಸುಮಾರು ೩೪ ಮಿಲಿಯನ್ (೩೪೦ ಲಕ್ಷ) ಜನರಿಗೆ ಸೋಂಕು ಬಾಧಿಸಬಹುದು ಮತ್ತು ೧,೧೦,೦೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಬಹುದು ಎಂದು ಅಫ್ಘನ್ ಆರೋಗ್ಯ ಸಚಿವಾಲಯ ಅಂದಾಜು ಮಾಡಿದೆ. ಇರಾನ್ ಗಡಿಗೆ ಸುಮಾರು ೯೨೧ ಕಿಮೀ ಗಡಿ ಇರುವ ಪ್ರದೇಶಗಳು ಮತ್ತು ಹೆರಾತ್ನಂತಹ ನಗರಗಳು ಕೊರೋನಾಬಾಧೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಬಹುದು ಎಂದೂ ಅಂದಾಜು ಮಾಡಲಾಗಿದೆ.
No comments:
Post a Comment