My Blog List

Sunday, March 29, 2020

ಕಾರ್ಮಿಕರ ಸಾಮೂಹಿಕ ವಲಸೆ ವಿರುದ್ಧ ರಾಜ್ಯಗಳಿಗೆ ಕೇಂದ್ರ ಆದೇಶ


ಕಾರ್ಮಿಕರ ಸಾಮೂಹಿಕ ವಲಸೆ: ರಾಜ್ಯಗಳಿಗೆ ಕೇಂದ್ರ ಆದೇಶ
ಗಡಿ ಬಂದ್, ೧೪ ದಿನಗಳ ಕಡ್ಡಾಯ ಏಕಾಂಗಿ ವಾಸಕ್ಕೆ ಆಜ್ಞೆ
ವಸತಿ, ಆಹಾರ, ವೇತನ ವ್ಯವಸ್ಥೆಗೆ ಸೂಚನೆ

ನವದೆಹಲಿ: ಸಾಮೂಹಿಕವಾಗಿ ಗಡಿಗಳನ್ನು ದಾಟಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ನಿಯಮಾವಳಿಗಳನ್ನು ಉಲ್ಲಂಘಿಸಲು ವಲಸೆ ಕಾರ್ಮಿಕರಿಗೆ ಅವಕಾಶ ನೀಡಬಾರದು ಎಂಬುದಾಗಿ 2020 ಮಾರ್ಚ್ 29ರ ಭಾನುವಾರ ರಾಜ್ಯಗಳಿಗೆ ಕಠಿಣ ಎಚ್ಚರಿಕೆ ರವಾನಿಸಿದ ಕೇಂದ್ರ ಸರ್ಕಾರ ಕಟ್ಟು ನಿಟ್ಟಾಗಿ ಗಡಿಗಳನ್ನು ಮುಚ್ಚುವ ಹೊಣೆಗಾರಿಕೆ ರಾಜ್ಯ ಸರ್ಕಾರಗಳ ಮೇಲೆಯೇ ಇದೆ ಎಂಬುದಾಗಿ ನೆನಪಿಸಿತು.
ಮಂಗಳವಾರ ಮಧ್ಯರಾತ್ರಿಯ ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ವಲಸೆ ಹೊರಟಿರುವ ಜನರನ್ನು ಪ್ರತ್ಯೇಕಿಸಿ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಏಕಾಂತವಾಸದ ವ್ಯವಸ್ಥೆಗಳಲ್ಲಿ ಮುಂದಿನ ೧೪ ದಿನಗಳ ಕಾಲ ಇರಿಸಬೇಕು ಎಂದೂ ನಿರ್ಧರಿಸಿರುವ ಕೇಂದ್ರ ಸರ್ಕಾರ ವಿಚಾರವನ್ನು ರಾಜ್ಯ ಸರ್ಕಾರಗಳಿಗೆ ತಿಳಿಸಿತು.

ವಲಸೆ ಕಾರ್ಮಿಕರು ಹಳ್ಳಿಗಳಲ್ಲಿನ ತಮ್ಮ ಮನೆಗಳನ್ನು ತಲುಪಲು ಪಾದಯಾತ್ರೆ ಮೂಲಕ ಸಾಮೂಹಿPವಾಗಿ ಗುಂಪು ಗುಂಪಾಗಿ ನಗರಗಳಿಂದ ಹಳ್ಳಿಗಳತ್ತ ಗುಳೇ ಹೊರಟದ್ದರಿಂದ ಕೊರೋನಾವೈರಸ್ ವ್ಯಾಪಕವಾಗಿ ಹರಡದಂತೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರವು ಕೈಗೊಂಡಿರುವ ಕ್ರಮಗಳ ಮೇಲೆ ತಣ್ಣಿರು ಎರಚಿದಂತಾಗಿದೆ.

ಹೀಗಾಗಿ ವಲಸೆ ಕಾರ್ಮಿಕರು ಯಾ ಸ್ಥಳದಲ್ಲಿ ಇದ್ದಾರೆಯೋ ಅದೇ ಸ್ಥಳದಲ್ಲಿ ಅವರಿಗೆ ವೇತನ ಮತ್ತು ಆಹಾರ ಲಭಿಸುವ ಖಾತರಿ ಒದಗಿಸುವಂತೆ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಕಟ್ಟಾಜ್ಞೆ ಮಾಡಿದೆ.

ಕೊರೋನಾವೈರಸ್ ಪ್ರಸರಣ ಸರಪಣಿಯನ್ನು ತುಂಡರಿಸುವ ಸಲುವಾಗಿ ಬೀದಿಗಳಿಗೆ ಇಳಿಯದೆ ಮನೆಗಳ ಒಳಗೇ ಇರುವಂತೆ ಸರ್ಕಾರ ಆದೇಶ ನೀಡಿದ್ದರೂ ಹಲವಾರು ರಾಜ್ಯಗಳಲ್ಲಿ ಸಹಸ್ರಾರು ಮಂದಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಪಾದಯಾತ್ರೆ ಮೂಲಕ ಹಳ್ಳಿಗಳಲ್ಲಿನ ತಮ್ಮ ಮನೆಗಳನ್ನು ಸೇರಿಕೊಳ್ಳುವ ತವಕದಿಂದ ಗುಂಪುಗುಂಪಾಗಿ ಸಾಮೂಹಿಕ ವಲಸೆ ಹೊರಟಿದ್ದಾರೆ.

ಮಧ್ಯಪ್ರದೇಶದಲ್ಲಿ ಪಾದಯಾತ್ರೆ ಮೂಲಕ ಹುಟ್ಟೂರಿನತ್ತ ಹೊರಟಿದ್ದ ಕಾರ್ಮಿಕನೊಬ್ಬ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕೋಲಾಹಲ ವ್ಯಕ್ತವಾದ  ಬೆನ್ನಲ್ಲೇ ಕೇಂದ್ರ ಸರ್ಕಾರವು ಜನರ ಚಲನವಲನಗಳನ್ನು ತಡೆಯಲು ಕ್ಷಿಪ್ರ ಕ್ರಮ ಕೈಗೊಂಡಿದೆ.

ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರ ಜೊತೆಗೆ ಶನಿವಾರ ಸಂಜೆ ಮತ್ತು ಭಾನುವಾರ ಬೆಳಗ್ಗೆ ಸಭೆಗಳನ್ನು ನಡೆಸಿದ ಬಳಿಕ ನಗರಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಜನರ ಚಲನವಲನಕ್ಕೆ ಅವಕಾಶ ನೀಡುವುದರ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧದ ಸೂಚನೆಗಳಿವೆ ಎಂಬುದನ್ನು ರಾಜ್ಯ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ನೆನಪಿಸಿತು. ಸರಕು ಸಾಗಣೆಗೆ ಮಾತ್ರ ಅವಕಾಶವಿದೆ ಎಂದೂ ಕೇಂದ್ರ ಸರ್ಕಾರ ಹೇಳಿತು.

ರಾಜ್ಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಇನ್ನು ಮುಂದೆ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ನೀಡಲಾದ ನಿರ್ದೇಶನಗಳ ಅನುಷ್ಠಾನಕ್ಕೆ ಹೊಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರವು ಸಭೆಗಳ ಬಳಿಕ ನೀಡಿದ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿತು. ಉಲ್ಲಂಘನೆಗೆ ಅಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆ ಮಾಡಲಾಗುವುದು ಎಂದೂ ಹೇಳಿಕೆ ತಿಳಿಸಿತು.

ಬೃಹತ್ ಸಂಖ್ಯೆಯ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಮತ್ತು ಆಹಾರ ಭದ್ರತೆಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ವಲಸೆ ಕಾರ್ಮಿಕರು ಸೇರಿದಂತೆ ಬಡವರು ಮತ್ತು ಅಗತ್ಯ ಉಳ್ಳ ಜನರಿಗೆ ಅವರ ಕೆಲಸದ ಸ್ಥಳದಲ್ಲಿಯೇ ಆಹಾರ ಮತ್ತು ವಸತಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ರಾಜ್ಯಗಳಿಗೆ ಕೇಂದವು ಸೂಚಿಸಿತು.

ದಿಗ್ಬಂಧನ ಅವಧಿಯಲ್ಲಿ ವೇತನ ಬಿಡುಗಡೆ ಮಾಡುವಂತೆಯೂ ರಾಜ್ಯಗಳಿಗೆ ಕೇಂದ್ರ ಆದೇಶ ನೀಡಿತು.

ದೆಹಲಿ ಮತ್ತು ಅಸುಪಾಸಿನ ಪ್ರದೇಶಗಳಲ್ಲಿ ತಮ್ಮ ವಾಸ್ತವ್ಯಕ್ಕಾಗಿ ಬಾಡಿಗೆ ಪಾವತಿ ಮಾಡಲು ಅನೇಕ ವಲಸೆ ಕಾರ್ಮಿಕರು ಅಸಮರ್ಥರಾಗಿರುವುದನ್ನು ಉಲ್ಲೇಖಿಸಿದ ವರದಿಗಳ ಹಿನ್ನೆಲೆಯಲ್ಲಿ ಕಾರ್ಮಿಕರು ಅಥವಾ ವಿದ್ಯಾರ್ಥಿಗಳನ್ನು ತೆರವುಗೊಳಿಸುವಂತೆ ಒತ್ತಡ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದ ಕೇಂದ್ರ ಸರ್ಕಾರ, ದಿಗ್ಬಂಧನ ಅವಧಿಯಲ್ಲಿ ಕಾರ್ಮಿಕರಿಂದ ಬಾಡಿಗೆಗೆ ಆಗ್ರಹಿಸದಂತೆಯೂ ಸೂಚನೆ ನೀಡಿತು.

ಭೂಮಾಲೀಕರಿಗೆ ಹಣ ಪಾವತಿ ಮಾಡದೇ ಇರುದಕ್ಕಾಗಿ ಬಡ ಬಾಡಿಗೆದಾರರ ಮೇಲೆ ಬಲಪ್ರಯೋಗ ಮಾಡುವುದನ್ನು ಅಥವಾ ಅವರನ್ನು ತೆರವುಗೊಳಿಸುವ ಕ್ರಮವನ್ನು ನಿಷೇಧಿಸಲು ನೋಯ್ಡಾ ಆಡಳಿತವು ಶನಿವಾರ ಇದೇ ಮಾದರಿಯ ಆದೇಶವನ್ನು ಹೊರಡಿಸಿತ್ತು.

ರಾಜ್ಯ ಸರ್ಕಾರಗಳಿಗೆ ಕೇಂದ್ರದ ನೂತನ ದಿಗ್ಬಂಧನ (ಲಾಕ್ ಡೌನ್)  ಆದೇಶಗಳು:
·         * ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಿಗ್ಬಂಧನ (ಲಾಕ್ ಡೌನ್) ಅದೇಶ ಅನುಷ್ಠಾನಕ್ಕೆ ಸಂಪೂರ್ಣ ಹೊಣೆಗಾರರು.
·        *  ದಿಗ್ಬಂಧನ ಅವಧಿಯಲ್ಲಿ ಸಿಕ್ಕಿಹಾಕಿಕೊಂಡ ಜನರಿಗೆ ರಾಜ್ಯ ಸರ್ಕಾರಗಳು ಆಶ್ರಯ ಮತ್ತು ಆಹಾರದ ವ್ಯವಸ್ಥೆಯನ್ನು ರಅಜ್ಯ ಸರ್ಕಾರಗಳು ಮಾಡಬೇಕು.
·      *   ಮನೆಗಳತ್ತ ಹೊರಟ ವಲಸೆ ಕಾರ್ಮಿಕರನ್ನು ಸಮೀಪದ ಆಶ್ರಯದಲ್ಲಿ ರಾಜ್ಯಗಳು ತಪಾಸಣೆ ಹಾಗೂ ೧೪ ದಿನಗಳ ಏಕಾಂಗಿವಾಸಕ್ಕೆ ಒಳಪಡಿಸಬೇಕು.
·         *ಉದ್ಯೋಗದಾತರು ತಮ್ಮ ಕಾರ್ಮಿಕರಿಗೆ ದಿಗ್ಬಂಧನ ಅವಧಿಗಾಗಿ ಯಾವುದೇ ಕಡಿತವನ್ನೂ ಮಾಡದೆ ವೇತನ ಪಾವತಿ ಮಾಡಬೇಕು.
·        * ಭೂಮಾಲೀಕರು ಒಂದು ತಿಂಗಳ ಬಾಡಿಗೆ ವಾಸ್ತವ್ಯದ ಸ್ಥಳಗಳಿಗೆ ಬಾಡಿಗೆ ಪಾವತಿಗಾಗಿ ಒತ್ತಾಯಿಸದಂತೆ ನಿಷೇಧ ವಿಧಿಸಲಾಗಿದೆ.
·         *ಬಾಡಿಗೆ ಸ್ಥಳ ತೆರವುಗೊಳಿಸುವಂತೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಬಲವಂತ ಮಾಡುವ ಭೂಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು. 

No comments:

Advertisement