Tuesday, March 3, 2020

ಶಾಂತಿ ಒಪ್ಪಂದ ಭಾಗಶಃ ರದ್ದು ಪಡಿಸಿದ ತಾಲಿಬಾನ್

ಶಾಂತಿ ಒಪ್ಪಂದ ಭಾಗಶಃ ರದ್ದು ಪಡಿಸಿದ ತಾಲಿಬಾನ್
ಕಾಬೂಲ್: ಅಮೆರಿಕದ ಜೊತೆಗಿನ ತನ್ನ ಚಾರಿತ್ರಿಕ ಶಾಂತಿ ಒಪ್ಪಂದವನ್ನು ತಾನು ಭಾಗಶಃ ರದ್ದು ಪಡಿಸಿರುವುದಾಗಿ 2020 ಮಾರ್ಚ್ 02ರ ಸೋಮವಾರ ಘೋಷಿಸಿದ ತಾಲಿಬಾನ್, ಅಫ್ಘನ್ ಭದ್ರತಾ ಪಡೆಗಳ ವಿರುದ್ಧ ತಮ್ಮ ದಾಳಿ ಕಾರ್ಯಾಚರಣೆಗಳು ಪುನಾರಂಭಗೊಳ್ಳಲಿವೆ ಎಂದು ಪ್ರಕಟಿಸಿತು.
ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ತಾಲಿಬಾನ್ ಜೊತೆಗೆ ಮಾರ್ಚ್ ೧೦ರಂದು ಅಫ್ಘನ್ ಅಧಿಕಾರಿಗಳ ಮಾತುಕತೆ ನಡೆಯುವವರೆಗೆ ತಾವು ಭಾಗಶಃ ಒಪ್ಪಂದವನ್ನು ಮುಂದುವರೆಸುವುದಾಗಿ ಪ್ರಕಟಿಸಿದ ಒಂದು ದಿನದ ಬಳಿಕ ತಾಲಿಬಾನ್ ಘೋಷಣೆ ಮಾಡಿದೆ. ಅಪ್ಘನ್ ಸೆರೆಮನೆಯಲ್ಲಿರುವ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದೂ ಘನಿ ಪ್ರಕಟಿಸಿದ್ದರು.

ಹಿಂಸಾಚಾರವನ್ನು ಕಡಿಮೆಗೊಳಿಸುವ ವಿಚಾರಕ್ಕೆ ಈಗ ತೆರೆ ಬಿದ್ದಿದೆ. ನಮ್ಮ ಕಾರ್‍ಯಾಚರಣೆಗಳು ಎಂದಿನಂತೆಯೇ ಮುಂದುವರೆಯುತ್ತವೆ ಎಂದು ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿದರು. ಅಮೆರಿಕ -ತಾಲಿಬಾನ್ ಒಪ್ಪಂದದ ಪ್ರಕಾರ, ನಮ್ಮ ಮುಜಾಹಿದೀನ್ ಪಡೆಗಳು ವಿದೇಶೀ ಪಡೆಗಳ ಮೇಲೆ ದಾಳಿ ಮಾಡುವುದಿಲ್ಲ, ಆದರೆ ನಮ್ಮ ದಾಳಿ ಕಾರ್ಯಾಚರಣೆಗಳು ಕಾಬೂಲ್ ಆಡಳಿತದ ಪಡೆಗಳ ವಿರುದ್ದ ಮುಂದುವರೆಯುತ್ತವೆ ಎಂದು ಅವರು ನುಡಿದರು.

ಒಪ್ಪಂದ ಮುರಿದು ಬಿದ್ದಿದೆಯೇ ಎಂಬ ಬಗ್ಗೆ ಸರ್ಕಾರವು ಪರಿಶೀಲಿಸುವುದು ಎಂದು ರಕ್ಷಣಾ ಸಚಿವಾಲಯದ ಉಪ ವಕ್ತಾರ ಫವಾದ್ ಅಮಾನ್ ಹೇಳಿದರು.

ರಾಷ್ಟ್ರದಲ್ಲಿ ದೊಡ್ಡ ದಾಳಿಗಳು ನಡೆದ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ ಎಂದು ಅವರು ನುಡಿದರು.

ಶನಿವಾರ ಅಮೆರಿಕದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದಂದಿನಿಂದ ತಾಲಿಬಾನ್ ಬಹಿರಂಗವಾಗಿ ತನ್ನ ವಿಜಯದ ಸಂಭ್ರಮಾಚರಣೆ ಮಾಡುತ್ತಿದೆ. ಒಪ್ಪಂದದ ಶರತ್ತಿನ ಪ್ರಕಾರ ವಿದೇಶೀ ಪಡೆಗಳು ೧೪ ತಿಂಗಳುಗಳ ಒಳಗಾಗಿ ಅಫ್ಘಾನಿಸ್ಥಾನದಿಂದ ವಾಪಸಾಗಬೇಕಾಗಿದೆ. ಇದಕ್ಕೆ ಪ್ರತಿಯಾಗಿ ತಾಲಿಬಾನ್ ಬಂಡುಕೋರರು ಕಾಬೂಲ್ ಸರ್ಕಾರದ ಜೊತೆಗೆ ಮಾತುಕತೆಗಳನ್ನು ನಡೆಸುವ ವಚನ ನೀಡಿದ್ದರು.

No comments:

Advertisement