My Blog List

Wednesday, March 4, 2020

ಯುನಿಸೆಫ್‌ನಿಂದ ‘ಕೈ ತೊಳೆಯುವ ನೃತ್ಯ’ ವಿಡಿಯೋ

ಯುನಿಸೆಫ್ನಿಂದ ಕೈ ತೊಳೆಯುವ ನೃತ್ಯವಿಡಿಯೋ
ಸೌದಿ ಅರೇಬಿಯಾದಿಂದ ಉಮ್ರಾಹ್ ಯಾತ್ರೆ ರದ್ದು
ನವದೆಹಲಿ: ಕೊರೋನಾವೈರಸ್ ಸೋಂಕು ಇಡೀ ಜಗತ್ತನ್ನು ಅಮುಕುತ್ತಿರುವಂತೆಯೇ ಮಕ್ಕಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಘಟಕವಾಗಿರುವ ಯುನಿಸೆಫ್ ಕೊರೋನಾವೈರಸ್ ಸೋಂಕನ್ನು ದೂರವಿಡುವಲ್ಲಿ ಕೈ ತೊಳೆದುಕೊಳ್ಳುವುದರ ಮಹತ್ವವನ್ನು ತೋರಿಸುವ ಕೈತೊಳೆಯುವ ನೃತ್ಯವನ್ನು 2020 ಮಾರ್ಚ್  04ರ ಬುಧವಾರ ಅಂತರ್ಜಾಲದಲ್ಲಿ ಪ್ರಕಟಿಸಿತು.

ಇದೇ ವೇಳೆಗೆ ಕೊರೋನಾವೈರಸ್ ಏರುಗತಿಯನ್ನು ಗಮನಿಸಿದ ಸೌದಿ ಅರೇಬಿಯಾ ಸರ್ಕಾರವು ಮೆಕ್ಕಾ ಮತ್ತು ಮದೀನಾದ ವಾರ್ಷಿಕ ಉಮ್ರಾಹ್ ಯಾತ್ರೆಯನ್ನು ರದ್ದು ಪಡಿಸಿರುವುದಾಗಿ ಪ್ರಕಟಿಸಿತು.

ವಿಯೆಟ್ನಾಮಿನ ಕುವಾಂಗ್ ಡಾಂಗ್ ಎಂಬ ಹೆಸರಿನ ವಿಯೆಟ್ನಾಮೀ ಕಲಾವಿದ ರೂಪಿಸಿದ ಕೈತೊಳೆಯುವ ನೃತ್ಯ (ಹ್ಯಾಂಡ್ ವಾಶಿಂಗ್ ಡ್ಯಾನ್ಸ್) ವಿಡಿಯೋವನ್ನು ಯುನಿಸೆಫ್ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿತು.

ವಿಯಟ್ನಾಮೀ ನೃತ್ಯ ಕಲಾವಿದ ಕುವಾಂಗ್ ಡಾಂಗ್ ಅವರ ಹ್ಯಾಂಡ್ ವಾಶಿಂಗ್ ಡ್ಯಾನ್ಸ್ ವಿಡಿಯೋವನ್ನು ನಾವು ಮೆಚ್ಚಿದ್ದೇವೆ ಎಂದು ಟ್ವೀಟ್ ಮಾಡಿದ ಯುನಿಸೆಫ್, ಸಾಬೂನು ಮತ್ತು ನೀರಿನಲ್ಲಿ ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು ನಿಮ್ಮನ್ನು ನೀವು ಕೊರೋನಾವೈರಸ್ ನಿಂದ ರಕ್ಷಿಸಿಕೊಳ್ಳಲು ಇರುವ ಮೊತ್ತ ಮೊದಲ ಹೆಜ್ಜೆ ಎಂದು ತಿಳಿಸಿದೆ.

ಡಾಂಗ್ ಮತ್ತು ಇನ್ನೊಬ್ಬ ನೃತ್ಯ ಕಲಾವಿದ ಕೈತೊಳೆದುಕೊಳ್ಳುವುದನ್ನು ತೋರಿಸುತ್ತಾ ನರ್ತಿಸುವ ದೃಶ್ಯ ವಿಡಿಯೋದಲ್ಲಿ ಇದೆ.

ಕೊರೋನಾವೈರಸ್ ಸೋಂಕನ್ನು ಹತ್ತಿರ ಸುಳಿಯದಂತೆ ಸ್ವತಃ ರಕ್ಷಿಸಿಕೊಳ್ಳಲು ನಿಯಮಿತವಾಗಿ ಕೈಗಳನ್ನು ತೊಳೆದುಕೊಳ್ಳುವಂತೆ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿವೆ.
ಆಗಾಗ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು. ವಿಶೇಷವಾಗಿ ಏನ್ನಾದರೂ ತಿನ್ನುವ ಮುನ್ನ; ಮೂಗು ಒರೆಸಿಕೊಂಡ ಬಳಿಕ; ಕೆಮ್ಮು, ಶೀನು ಬಂದ ಬಳಿಕ ಹಾಗೂ ಬಚ್ಚಲಿಗೆ ಹೋಗಿ ಬಂದಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಸಾಬೂನು ಮತ್ತು ನೀರು ತತ್ ಕ್ಷಣ ಸಿಗದೇ ಇದ್ದಲ್ಲಿ,  ಆಲ್ಕೋಹಾಲ್ ಮೂಲದ ಹ್ಯಾಂಡ್ ಸ್ಯಾನಿಟೈಸರನ್ನು ಕನಿಷ್ಠ ಶೇಕಡಾ ೬೦ರಷ್ಟು ಆಲ್ಕೋಹಾಲ್ ಜೊತೆಗೆ ಬಳಸಬಹುದು ಎಂದು ಯುನೆಸೆಫ್ ಕೊರೋನಾವೈರಸ್ಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಉಮ್ರಾಹ್ ಯಾತ್ರೆ ರದ್ದು: ಮಧ್ಯೆ, ಕೊರೋನಾವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೆಕ್ಕಾ ಮತ್ತು ಮದೀನಾ ಪವಿತ್ರ ನಗರಳಲ್ಲಿ ನಡೆಯುವ ಉಮ್ರಾಹ್ ಯಾತ್ರೆಯನ್ನು ತಾನು ಅಮಾನತುಗೊಳಿಸಿರುವುದಾಗಿ ಸೌದಿ ಅರೇಬಿಯಾ 2020 ಮಾರ್ಚ್  04ರ ಬುಧವಾರ ಪ್ರಕಟಿಸಿತು.

ಕೊರೋನಾವೈರಸ್ ವ್ಯಾಪಿಸಿರುವ ರಾಷ್ಟ್ರಗಳಿಂದ ಯಾತ್ರೆ ಮತ್ತು ಪ್ರವಾಸಕ್ಕಾಗಿ ಬರುವ ವಿದೇಶೀಯರ ಪ್ರವೇಶವನ್ನೂ ಸೌದಿ ಅರೇಬಿಯಾ ವಾರದ ಹಿಂದೆ ಅಮಾನತುಗೊಳಿಸಿತ್ತು.

ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾದ ಮೆಕ್ಕಾ ಮತ್ತು ಮದೀನಾ ನಗರಗಳಿಗೆ ಮುಸ್ಲಿಂ ಪ್ರವಾಸಿಗರನ್ನು ಸ್ವಾಗತಿಸುವ ಸೌದಿ ಅರೇಬಿಯಾಕ್ಕೆ ಹಜ್ ಯಾತ್ರೆಯ ಸಂದರ್ಭದಲ್ಲಿ ಪ್ರವಾಸಿಗಳ ಹೊಳೆಯೇ ಹರಿಯುತ್ತದೆ. ಇತ್ತೀಚೆಗಷ್ಟೇ ಅದು ೪೯ ರಾಷ್ಟ್ರಗಳಿಗಾಗಿ ನೂತನ ಪ್ರವಾಸೀ ವೀಸಾವನ್ನೂ ಅಳವಡಿಸಿತ್ತು.

ಉಮ್ರಾಹ್ ಯಾತ್ರೆ ರದ್ದು ಕ್ರಮ ತಾತ್ಕಾಲಿಕ ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ, ಆದರೆ ಇದು ಅಮಾನತು ಕ್ರಮ ಯಾವಾಗ ಕೊನೆಗೊಳ್ಳುತ್ತದೆ ಎಂದು ಸ್ಪಷ್ಟ ಪಡಿಸಿಲ್ಲ. ಜುಲೈ ಅಂತ್ಯದಲ್ಲಿ ಆರಂಭವಾಗುವ ಹಜ್ ಯಾತ್ರೆಯ ಮೇಲೆ ಇದು ಪರಿಣಾಮ ಬೀರಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ವಿಡಿಯೋ ನೋಡಲು ಕೆಳಗೆ ಕ್ಲಿಕ್  ಮಾಡಿರಿ:



No comments:

Advertisement