My Blog List

Saturday, March 21, 2020

ನಿರ್ಭಯಾ ಪ್ರಕರಣ: ಕಡೆಗೂ ೪ ಹಂತಕರಿಗೆ ಗಲ್ಲು

ನಿರ್ಭಯಾ ಪ್ರಕರಣ: ಕಡೆಗೂ ೪ ಹಂತಕರಿಗೆ ಗಲ್ಲು
ತಿಹಾರ್ ಸೆರೆಮನೆಯಲ್ಲಿ ನೇಣಿಗೆ ಕೊರಳೊಡ್ಡಿದ ಅಪರಾಧಿಗಳು
ನವದೆಹಲಿ: ೨೦೧೨ರ ಡಿಸೆಂಬರ್ ೧೬ ರಂದು ದೆಹಲಿ ಚಲಿಸುವ ಬಸ್ಸಿನಲ್ಲೆ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ವರು ಅಪರಾಧಿಗಳನ್ನು 2020 ಮಾರ್ಚ್  20ರ ಶುಕ್ರವಾರ  ಬೆಳಕು ಹರಿಯುವ ಮುನ್ನವೇ ಏಕಕಾಲಕ್ಕೆ ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಯಿತು, ಇದರೊಂದಿಗೆ ಭಾರತದ ಅಂತಃಕರಣವನ್ನೇ ಕಲಕಿದ್ದ, ಸುದೀರ್ಘ ಲೈಂಗಿಕ ದೌರ್ಜನ್ಯ ಇತಿಹಾಸದ ಭಯಾನಕ ಅಧ್ಯಾಯ ಕೊನೆಗೊಂಡಿತು.
ಚಲಿಸುತ್ತಿದ್ದ ಬಸ್ಸಿನಲ್ಲಿ ಮಾಧ್ಯಮಗಳು ’ನಿರ್ಭಯಾ’ ಎಂಬುದಾಗಿ ಗುರುತಿಸಿದ ಯುವತಿಯ ಮೇಲೆ ನಡೆದ ಘೋರ ಕೃತ್ಯಕ್ಕಾಗಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಅಪರಾಧಿಗಳಾದ ಮುಕೇಶ್ ಸಿಂಗ್ (೩೨), ಪವನ್ ಗುಪ್ತಾ (೨೫), ವಿನಯ್ ಶರ್ಮಾ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರನ್ನು ಬೆಳಗ್ಗೆ ೫.೩೦ ಗಂಟೆಗೆ ನೇಣಿಗೆ ಏರಿಸಲಾಯಿತು.
"ವೈದ್ಯರು ಶವಗಳನ್ನು ಪರೀಕ್ಷಿಸಿದ್ದಾರೆ ಮತ್ತು ಎಲ್ಲಾ ೪ ಮಂದಿಯೂ ಮೃತರಾಗಿರುವುದಾಗಿ ಘೋಷಿಸಿದ್ದಾರೆ" ಎಂದು ತಿಹಾರ್ ಸೆರೆಮನೆಯ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಹೇಳಿದರು.
ಸೆರೆಮನೆ ಕೈಪಿಡಿಯ ಪ್ರಕಾರ ಮರಣದಂಡನೆಯ ನಂತರ ಕಡ್ಡಾಯವಾಗಿ ಅರ್ಧ ಘಂಟೆಯವರೆಗೆ ನೇಣು ಬಿಗಿಯಲಾಗಿತ್ತು ಎಂದು ಸೆರೆಮನೆ ಅಧಿಕಾರಿಗಳು ತಿಳಿಸಿದರು.
೧೬,೦೦೦ ಕ್ಕೂ ಹೆಚ್ಚು ಕೈದಿಗಳನ್ನು ಹೊಂದಿರುವ, ದಕ್ಷಿಣ ಏಷ್ಯಾದ ಅತಿದೊಡ್ಡ ಸೆರೆಮನೆ ಸಂಕೀರ್ಣವಾದ ತಿಹಾರ್ ಜೈಲಿನಲ್ಲಿ ನಾಲ್ಕು ಜನರನ್ನು ಒಟ್ಟಿಗೆ ಗಲ್ಲಿಗೇರಿಸಿದ್ದು ಇದೇ ಮೊದಲು. ಗಲ್ಲು ಶಿಕ್ಷೆಯಿಂದ ಪಾರಾಗಲು ಸಾಧ್ಯವಿರುವ ಎಲ್ಲ ಕಾನೂನು ಮಾರ್ಗಗಳನ್ನು ಬಳಕೆ ಮಾಡಿಕೊಂಡ ಬಳಿಕ ಅಪರಾಧಿಗಳನ್ನು ಮರಣದಂಡನೆಗೆ ಗುರಿಪಡಿಸಲಾಯಿತು.
ಗಲ್ಲು ಜಾರಿಗೆ ಮೊದಲ ದಿನಾಂಕವನ್ನು ಜನವರಿ ೨೨ ಕ್ಕೆ ನಿಗದಿಪಡಿಸಿದ ನಂತರ ಗಲ್ಲಿನಿಂದ ಪಾರಾಗಲು ಹತಾಶ ಪ್ರಯತ್ನಗಳನ್ನು ಅಪರಾಧಿಗಳು ನಡೆಸಿದ ಪರಿಣಾಮವಾಗಿ ಗಲ್ಲು ಜಾರಿ ಸುಮಾರು ಎರಡು ತಿಂಗಳ ಕಾಲ ಮುಂದಕ್ಕೆ ಹೋಗಿತ್ತು.
ಜೀವ ಉಳಿಸಿಕೊಳ್ಳುವ ಕಟ್ಟ ಕಡೆಯ ಯತ್ನವಾಗಿ ಅಪರಾಧಿಗಳಲ್ಲಿ ಒಬ್ಬಾತ ಗಲ್ಲಿಗೇರಿಸುವುದಕ್ಕೆ ಕೆಲವೇ ಗಂಟೆಗಳ ಮೊದಲು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಬಾಗಿಲನ್ನು ಕೂಡಾ ಬಡಿದಿದ್ದ.
ಗಲ್ಲು ಜಾರಿಗೆ ಕೆಲವು ಗಂಟೆಗಳ ಮುನ್ನ ಪವನ್ ಕುಮಾರ್ ಗುಪ್ತ  ರಾಷ್ಟ್ರಪತಿಗಳ ಮುಂದೆ ಸಲ್ಲಿಸಲಾಗಿದ್ದ ಎರಡನೇ ಕ್ಷಮಾದಾನ ಕೋರಿಕ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. ಬೆಳಿಗ್ಗೆ ೨.೩೦ ಕ್ಕೆ ಪ್ರಾರಂಭವಾಗಿ ಸುಮಾರು ಒಂದು ಗಂಟೆ ನಡೆದ ಅಭೂತಪೂರ್ವ ತಡರಾತ್ರಿಯ ವಿಚಾರಣೆಯ ಬಳಿಕ ಸುಪ್ರೀಂ ಕೋರ್ಟ್ ಪೀಠವು ಅಪರಾಧಿ ಗುಪ್ತನ ಕೊನೆಯ ಅರ್ಜಿಯನ್ನು ವಜಾಗೊಳಿಸಿ, ಮರಣದಂಡನೆ ಜಾರಿಗೆ ದಾರಿ ಸುಗಮಗೊಳಿಸಿತು.
ಗುಪ್ತ ಮತ್ತು ಅಕ್ಷಯ್ ಸಿಂಗ್ ಅವರನ್ನು ಗಲ್ಲು ಶಿಕ್ಷೆಗೆ ಕಳುಹಿಸುವ ಮುನ್ನ ಅವರ ಕುಟುಂಬ ಸದಸ್ಯರಿಗೆ ಅಂತಿಮ ಭೇಟಿಯ ಅವಕಾಶ ಒದಗಿಸುವ ಯಾವುದೇ ನಿರ್ದೇಶನ ನೀಡಲೂ ಕೋರ್ಟ್ ನಿರಾಕರಿಸಿತು.
ನಿರ್ಭಯಾ ಪೋಷಕರ ತೃಪ್ತಿ: ಏಳು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ತಮ್ಮ ಪುತ್ರಿಗೆ ಅಂತಿಮವಾಗಿ ನ್ಯಾಯ ದೊರಕಿತು ಎಂದು ಸಮಾಧಾನ ವ್ಯಕ್ತ ಪಡಿಸಿದ ’ನಿರ್ಭಯಾ’ ಅವರ ಪೋಷಕರು ತಮ್ಮ "ಭಾರತದ ಹೆಣ್ಣುಮಕ್ಕಳ ಹೋರಾಟ" ವನ್ನು ಮುಂದುವರಿಸುವುದಾಗಿ ಹೇಳಿದರು.
"ನಮಗೆ ಅಂತಿಮವಾಗಿ ನ್ಯಾಯ ದೊರಕಿತು. ಭಾರತದ ಹೆಣ್ಣುಮಕ್ಕಳ ನ್ಯಾಯಕ್ಕಾಗಿ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ನ್ಯಾಯ ವಿಳಂಬವಾಯಿತು, ಆದರೆ ನಿರಾಕರಿಸಲಾಗಿಲ್ಲ" ಎಂದು ಸಂತ್ರಸ್ಥ ಯುವತಿಯ ತಾಯಿ ಆಶಾದೇವಿ ಅವರು ಅಪರಾಧಿಗಳನ್ನು ಗಲ್ಲಿಗೇರಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
’ಅಪರಾಧಿಗಳ ಮರಣದಂಡನೆಯ ನಂತರ ಮಹಿಳೆಯರು ಖಂಡಿತವಾಗಿಯೂ ಸುರಕ್ಷಿತರಾಗುತ್ತಾರೆ’ ಎಂದು ಅವರು ಹಾರೈಸಿದರು.
’ಇಡೀ ದೇಶ ಎಚ್ಚರವಾಗಿತ್ತು ಮತ್ತು ನ್ಯಾಯಕ್ಕಾಗಿ ಕಾಯುತ್ತಿತ್ತು’ ಎಂದು ಆಶಾದೇವಿ ಹೇಳಿದರು.
ಶುಕ್ರವಾರ ನಸುಕಿನಲ್ಲೇ ತಿಹಾರ್ ಸೆರೆಮನೆಯ ಹೊರಗೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರ ಭಾರೀ ಗುಂಪು, ಗಲ್ಲು ಜಾರಿಯಾದ ಬಳಿಕ ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ’ಲಾಂಗ್ ಲೈವ್ ನಿರ್ಭಯಾ’ ಮತ್ತು ’ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಮೊಳಗಿಸಿತು.
ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಿದ ನಂತರ ಅವರಲ್ಲಿ ಕೆಲವರು ಸಿಹಿತಿಂಡಿಗಳನ್ನು ವಿತರಿಸಿದರು. ಜೈಲಿನ ಹೊರಗೆ ಜಮಾಯಿಸಿದ ಜನರಲ್ಲಿ ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯನಾ ಕೂಡ ಇದ್ದರು. ’ನಿರ್ಭಯಾ ಅವರಿಗೆ ನ್ಯಾಯ ಸಿಕ್ಕಿದೆ’ ಎಂದು ಬರೆದ ಭೀತ್ತಿಚಿತ್ರವನ್ನು ಅವರು ಹಿಡಿದಿದ್ದರು.
’ಇತರ ಹೆಣ್ಣುಮಕ್ಕಳು ಇನ್ನೂ ಕಾಯುತ್ತಿದ್ದಾರೆ.  ಕಡೆಗೂ ನ್ಯಾಯ ಸಿಕ್ಕಿದೆ’ ಎಂದು ಯೋಗಿತಾ ಹೇಳಿದರು.
’ಇದು ಕಾನೂನು ವ್ಯವಸ್ಥೆಯ ವಿಜಯ. ನಮ್ಮ ಸಮಾಜದಲ್ಲಿ ಈ ಗಲ್ಲು ಜಾರಿಯ ನಂತರ ಏನೂ ಬದಲಾಗುವುದಿಲ್ಲ, ಆದರೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ ಮತ್ತು ನ್ಯಾಯವನ್ನು ನಿರ್ಭಯಾಗೆ ಒದಗಿಸಲಾಗಿದೆ ಎಂದು ನಮಗೆ ಸಂತೋಷವಾಗಿದೆ" ಎಂದು ಪಶ್ಚಿಮ ದೆಹಲಿಯ ನಿವಾಸಿ ಸನಾ ಹೇಳಿದರು.
ಬಾಲಾಪರಾಧಿಯೂ ಸೇರಿದಂತೆ ೬ ಮಂದಿ ಮೈ ನಡುಗಿಸುವ ಡಿಸೆಂಬರ್ ತಿಂಗಳ ಚಳಿಗಾಲದ ರಾತ್ರಿಯಲ್ಲಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ ಪೈಶಾಚಿಕ ಹಲ್ಲೆ ನಡೆಸಿ ಬಳಿಕ ರಸ್ತೆಗೆ ಎಸೆದಿದ್ದರು. ಆಕೆಯ ಜೊತೆಗಿದ್ದ  ಅವಳ ಸ್ನೇಹಿತನನ್ನು ಸಹ ತೀವ್ರವಾಗಿ ಥಳಿಸಲಾಗಿತ್ತು ಮತ್ತು ಆಕೆಯ ಜೊತೆಗೆ ಬಸ್ಸಿನಿಂದ ಹೊರಕ್ಕೆ ಎಸೆಯಲಾಗಿತ್ತು.
ಮಾರಣಾಂತಿಕ ಗಾಯಗಳಿಗೆ ಒಳಗಾಗಿದ್ದ ನಿರ್ಭಯಾ, ೧೫ ದಿನಗಳ ಜೀವನ್ಮರಣ ಹೋರಾಟದ ಬಳಿದ ಸಿಂಗಾಪುರದ ರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳು ಮತ್ತು ಬಾಲಾಪರಾಧಿ ಸೇರಿದಂತೆ ಒಟ್ಟು ಆರು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು.
ಪ್ರಕರಣದ ವಿಚಾರಣೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಆರೋಪಿಗಳಲ್ಲಿ ಒಬ್ಬನಾದ ರಾಮ್ ಸಿಂಗ್ ತಿಹಾರ್ ಸೆರೆಮನೆಯಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಲಾಗಿತ್ತು. ಮೂರು ವರ್ಷಗಳ ಸುಧಾರಣಾಗೃಹ ವಾಸದ ಬಳಿಕ  ಬಾಲಾಪರಾಧಿಯನ್ನು ೨೦೧೫ ರಲ್ಲಿ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು.
ತಮಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯ ವಿರುದ್ಧ ಜಿಲ್ಲಾ ನ್ಯಾಯಾಲಯದಿಂದ ಸುಪ್ರೀಂಕೋರ್ಟಿನವರೆಗೂ ವಿವಿಧ ನ್ಯಾಯಾಲಯಗಳಲ್ಲಿ ಪುನರ್ ಪರಿಶೀಲನಾ ಅರ್ಜಿ, ಕ್ಯುರೇಟಿವ್ ಅರ್ಜಿಗಳನ್ನು ಸಲ್ಲಿಸುವ ಮೂಲಕ ಅಪರಾಧಿಗಳು ಗಲ್ಲು ಜಾರಿಯ ಹಾದಿಯನ್ನು ಸುದೀರ್ಘ ಹಾಗೂ ಕಠಿಣ ಹಾದಿಯನ್ನಾಗಿ ಮಾರ್ಪಡಿಸಿದ್ದರು.
ಅಪರಾಧಿಗಳು ತಮ್ಮ ಎಲ್ಲಾ ಕಾನೂನು ಪರಿಹಾರದ ಎಲ್ಲ ಅವಕಾಶಗಳನ್ನು ಬಳಸಿಕೊಂಡಿಲ್ಲ ಮತ್ತು ಒಬ್ಬರು ಇಲ್ಲವೇ ಮತ್ತೊಬ್ಬರ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿಗಳ ಮುಂದೆ ಸಲ್ಲಿಸಲಾಗಿದೆ ಎಂಬ ಕಾರಣಕ್ಕಾಗಿ ಮೂರು ಬಾರಿ ಬ್ಲ್ಯಾಕ್ ವಾರಂಟ್‌ಗಳನ್ನು (ಡೆತ್ ವಾರಂಟ್)
ನ್ಯಾಯಾಲಯವು ಮುಂದೂಡಿತ್ತು.
ವಿಚಾರಣಾ ನ್ಯಾಯಾಲಯವು ಗಲ್ಲು ಶಿಕ್ಷೆ ಜಾರಿಗೆ ಅಂತಿಮ ದಿನಾಂಕವಾಗಿ ಮಾರ್ಚ್ ೨೦ರ ದಿನಾಂಕದ ಬೆಳಗಿನ ೫.೩೦ ಗಂಟೆಯನ್ನು ನಿಗದಿ ಪಡಿಸಿ ಹೊಸದಾಗಿ ಡೆತ್ ವಾರಂಟ್‌ನ್ನು  ಮಾರ್ಚ್ ೫ ರಂದು ಹೊರಡಿಸಿತ್ತು.

ಭಾರತದಲ್ಲಿ ಗಲ್ಲು ಶಿಕ್ಷೆಯ ಹಾದಿ
ಭಾರತದಲ್ಲಿ ಸ್ವಾತಂತ್ರ್ಯಾ ನಂತರ ಈವರೆಗೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳ ಸಂಖ್ಯೆ ಕೇವಲ ೫೨ ಮಾತ್ರ. ಸ್ವತಂತ್ರ  ಭಾರತದಲ್ಲಿ ಗಲ್ಲಿಗೆ ಕೊರಳುಕೊಟ್ಟ ಮೊದಲ ಅಪರಾಧಿ ಮಹಾತ್ಮಾ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಮ್  ಗೋಡ್ಸೆ. ಈತನನ್ನು ೧೯೪೯ ನವೆಂಬರ್ ೧೫ ರಂದು ಗಲ್ಲಿಗೆ ಏರಿಸಲಾಗಿತ್ತು.
ಪೀಪಲ್ಸ್ ಫಾರ್ ಸಿವಿಲ್ ಲಿಬರೇಶನ್ ನಡೆಸಿರುವ ಸಂಶೋಧನೆಯ ಪ್ರಕಾರ ದೇಶದಲ್ಲಿ ೧೯೫೩ ರಿಂದ ೧೯೬೩ರ ಅವಧಿಯಲ್ಲಿ ೧೪೨೨ ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ೨೦೧೮ರ ಡಿಸೆಂಬರ್‌ವರೆಗೆ ಸುಮಾರು ೩೭೧ ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ಆದರೆ, ೧೯೯೧ರಿಂದ ಈವರೆಗೆ ಕಳೆದ ೨೭ ವರ್ಷದಲ್ಲಿ ಗಲ್ಲು ಶಿಕ್ಷೆಗೆ ಒಳಗಾದವರ ಸಂಖ್ಯೆ ಮಾತ್ರ ಕೇವಲ ೪.
೨೦೦೪ರಲ್ಲಿ ಅತ್ಯಾಚಾರ ಆಪರಾಧಿ ಧನಂಜಯ ಚಟರ್ಜಿಯನ್ನು ಗಲ್ಲಿಗೇರಿಸಿದ ಬಳಿಕ, ೨೦೧೨ರಲ್ಲಿ ಉಗ್ರ ಮಹಮ್ಮದ್ ಅಜ್ಮಲ್ ಅಮಿರ್ ಖಾನ್, ೨೦೧೩ರಲ್ಲಿ ಉಗ್ರ ಅಫ್ಜಲ್ ಗುರು, ೨೦೧೫ರಲ್ಲಿ ಉಗ್ರ ಹಾಗೂ ೧೯೯೩ ರ ಮುಂಬೈ ಸರಣಿ ಸ್ಪೋಟದ ’ಮೆದುಳು’ ಯಾಕೂಬ್ ಮೆನನ್‌ನನ್ನು ಗಲ್ಲಿಗೆ ಏರಿಸಲಾಗಿತ್ತು.
ಇದೀಗ ನಿರ್ಭಯಾ ಪ್ರಕರಣದ ಆಪರಾಧಿಗಳನ್ನು ಗಲ್ಲಿಗೆ ಏರಿಸುವ ಮೂಲಕ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಜನರನ್ನು ಒಟ್ಟಿಗೆ ಗಲ್ಲಿಗೇರಿಸಿದ ಅಪರೂಪದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. ೨೦೦೪ರ ನಂತರ ಅತ್ಯಾಚಾರ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಒಳಗಾದವರ ಪಟ್ಟಿಯಲ್ಲೂ ಇವರ ಹೆಸರು ದಾಖಲಾಗಲಿದೆ.

No comments:

Advertisement