ಗ್ರಾಹಕರ ಸುಖ-ದುಃಖ

My Blog List

Saturday, March 21, 2020

ಮಧ್ಯಪ್ರದೇಶ: ಕಾಂಗ್ರೆಸ್ ಸರ್ಕಾರದ ಪತನ, ಹಕ್ಕು ಮಂಡನೆಗೆ ಬಿಜೆಪಿ ಸಜ್ಜು

 ಕಾಂಗ್ರೆಸ್ ಸರ್ಕಾರ ಪತನ, ಹಕ್ಕು ಮಂಡನೆಗೆ ಬಿಜೆಪಿ ಸಜ್ಜು
ವಿಶ್ವಾಸಮತ ಯಾಚನೆಯ ಸುಪ್ರೀಂ ಗಡುವಿಗೆ ಮುನ್ನವೇ ಕಮನಾಥ್ ರಾಜೀನಾಮೆ
ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ಎದುರಿಸುವ ಮೂಲಕ ವಿಶ್ವಾಸಮತ ಸಾಬೀತು ಪಡಿಸಲು ಸುಪ್ರೀಂಕೋರ್ಟ್ ನೀಡಿದ್ದ ಗಡುವಿಗೆ ಕೆಲವೇ ಗಂಟೆಗಳ ಮುನ್ನ ಮುಖ್ಯಮಂತ್ರಿ ಕಮಲನಾಥ್ ಅವರು 2020 ಮಾರ್ಚ್  20ರ ಶುಕ್ರವಾರ ರಾಜೀನಾಮೆ ನೀಡಿದ್ದು, ಕಾಂಗೆಸ್ ಸರ್ಕಾರ ಪತನಗೊಂಡಿತು. ಬೆನ್ನಲೇ ಬಿಜೆಪಿಯು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಜ್ಜಾಯಿತು.
ಹಿರಿಯ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರಿಗೆ ನಿಷ್ಠರಾದ ೨೨ ಶಾಸಕರು ರಾಜೀನಾಮೆ ನೀಡುವುದರೊಂದಿಗೆ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದ ರಾಜ್ಯದಲ್ಲಿ 2020 ಮಾರ್ಚ್  20ರ ಶುಕ್ರವಾರ ವಿಧಾನಸಭಾ ಅಧಿವೇಶನಕ್ಕೆ ಆರಂಭಕ್ಕೆ ಮುನ್ನವೇ ಕಮಲನಾಥ್ ಅವರು ರಾಜೀನಾಮೆ ನೀಡುವ ಮೂಲಕ,ಅಧಿಕಾರದ ಹಕ್ಕು ಮಂಡಿಸಲು ಭಾರತೀಯ ಜನತಾ ಪಕ್ಷಕ್ಕೆ ಹಾದಿ ಸುಗಮಗೊಳಿಸಿದರು.
ರಾಜ್ಯಪಾಲ ಲಾಲಜಿ ಟಂಡನ್ ಅವರು ಕಮಲನಾಥ್ ಅವರು ರಾಜಭವನಕ್ಕೆ ಆಗಮಿಸಿ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ’ರಾಜ್ಯಪಾಲರು ಕಮಲನಾಥ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಮತ್ತು ನೂತನ ಮುಖ್ಯಮಂತ್ರಿ ಅಧಿಕಾರ ವಹಿಸುವವರೆಗೆ ಉಸ್ತುವಾರಿ ಸಚಿವರಾಗಿ ಮುಂದುವರೆಯುವಂತೆ ಅವರಿಗೆ ಸೂಚಿಸಿದ್ದಾರೆ’ ಎಂದು ರಾಜಭವನದ ಪ್ರಕಟಣೆ ತಿಳಿಸಿತು.
ಇದಕ್ಕೂ ಮುನ್ನ ಗುರುವಾರ ರಾತ್ರಿ ತಡವಾಗಿ ವಿಧಾನಸಭಾಧ್ಯಕ್ಷ ಎನ್‌ಪಿ ಪ್ರಜಾಪತಿ ಅವರು ೧೬ ಮಂದಿ ಬಂಡಾಯ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ದರು.
ಪ್ರಜಾಪತಿ ಅವರು ಬಂಡಾಯ ಶಾಸಕರ ರಾಜೀನಾಮೆ ಅಂಗೀಕರಿಸಿದ ಬೆಳವಣಿಗೆಯ ಬಳಿಕ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಮಲನಾಥ್, ’ಬಿಜೆಪಿಯು ಎಂದಿಗೂ ನನ್ನ ಇಚ್ಛಾಶಕ್ತಿಯನ್ನು ಪರಾಭವಗೊಳಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ’ನಾನು ನನ್ನ ಬದುಕಿನುದ್ದಕ್ಕೂ ಮೌಲ್ಯಯುತ ರಾಜಕಾರಣ ನಡೆಸುತ್ತಾ ಬಂದಿದ್ದೇನೆ. ಬಿಜೆಪಿಯು ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ. ಶಾಸಕರಿಗೆ ರಾಜೀನಾಮೆ ನೀಡಲು ಇದ್ದ ಒತ್ತಡ ಏನು ಎಂಬುದನ್ನು ಕಾಲವೇ ಹೇಳಲಿದೆ’ ಎಂದು ನುಡಿದ ಕಮಲನಾಥ್ ’ನಾನು ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಪ್ರಕಟಿಸಿದರು.
ಬಳಿಕ ಕಮಲನಾಥ್ ಅವರು ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ’ನನ್ನ ೪೦ ವರ್ಷಗಳ ಸಾರ್ವಜನಿಕ ಬದುಕಿನಲ್ಲಿ, ನಾನು ಯಾವಾಗಲೂ ಪರಿಶುದ್ಧ ರಾಜಕಾರಣ ನಡೆಸಿದ್ದೇನೆ ಮತ್ತು ಪ್ರಜಾತಂತ್ರದ ಮೌಲ್ಯಯುತ ಮಿತಿಗಳನ್ನು ಅನುಸರಿಸಿದ್ದೇನೆ ಹಾಗೂ ಅವುಗಳಿಗೆ ಆದ್ಯತೆ ನೀಡಿದ್ದೇನೆ. ಆದರೆ ಕಳೆದ ಎರಡು ವಾರಗಳಲ್ಲಿ ಏನು ನಡೆದಿದೆಯೋ ಅದು ಪ್ರಜಾತಾಂತ್ರಿಕ ಮೌಲ್ಯಗಳ ಅಪಮೌಲ್ಯೀಕರಣದ ಹೊಸ ಅಧ್ಯಾಯವಾಗಿದೆ’ ಎಂದು ಕಮಲನಾಥ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದರು.
ಅದೇ ಪತ್ರದಲ್ಲಿ ಕಮಲನಾಥ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯನ್ನು ಅಭಿನಂದಿಸಿದರು ಮತ್ತು ರಾಜ್ಯದ ಅಭಿವೃದ್ಧಿಗೆ ಸಹಾಯ ಹಸ್ತ  ನೀಡುವುದಾಗಿ ಹೇಳಿದರು.
ಕಮಲನಾಥ್ ಅವರ ರಾಜೀನಾಮೆಯ ಬಳಿಕ ವಿಧಾನಸಭಾ ಅಧಿವೇಶನ ಸಮಾವೇಶಗೊಂಡಿತು. ಸದನವನ್ನು ಉದ್ದೇಶಿಸಿ ಮಾತನಾಡಿದ ಸಭಾಧ್ಯಕ್ಷ ಪ್ರಜಾಪತಿ ಸುಪ್ರೀಂಕೋರ್ಟಿನಲ್ಲಿ ದಾಖಲಾದ ಅರ್ಜಿಯನ್ನು ಪ್ರಸ್ತಾಪಿಸಿ, ಮುಖ್ಯಮಂತ್ರಿ ಕಮಲನಾಥ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿರುವುದರಿಂದ ಸದನದಲ್ಲಿ ಬಲಾಬಲ ಪರೀಕ್ಷೆಯ ಅಗತ್ಯವಿಲ್ಲ ಎಂದು ಪ್ರಕಟಿಸಿದರು.
ಸದನ ಸಮಾವೇಶಗೊಳ್ಳುವ ವೇಳೆಗೆ ಎಲ್ಲ ಬಿಜೆಪಿ ಶಾಸಕರೂ ಸದನಕ್ಕೆ ಆಗಮಿಸಿದ್ದರು. ಆದರೆ ಕಾಂಗೆಸ್ ಪಕ್ಷದ ಯಾವ ಶಾಸಕನೂ ಹಾಜರಿರಲಿಲ್ಲ. ಮಾರ್ಚ್ ೨೦ರ ಶುಕ್ರವಾರ ಸಂಜೆಯ ಒಳಗಾಗಿ ಸದನದಲ್ಲಿ ಬಲಾಬಲ ಪರೀಕ್ಷೆ ಎದುರಿಸಿ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಅನುಸರಿಸಿ ಸಭಾಧ್ಯಕ್ಷರು ಮಧ್ಯಾಹ್ನ ೨ ಗಂಟೆಗೆ ವಿಧಾನಸಭೆಯ ಅಧಿವೇಶನ ಕರೆದಿದ್ದರು.
ಕರ್ನಾಟಕದ ಹಾದಿಯಲ್ಲಿ
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ನೇತೃತ್ವದ ಮೈತ್ರಿ ಸರ್ಕಾರ ಪತನದ ಬಳಿಕ, ಮಧ್ಯಪ್ರದೇಶದಲ್ಲಿ ೧೫ ತಿಂಗಳುಗಳ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ನಿರ್ಗಮಿಸಿದೆ. ಕರ್ನಾಟಕದಲ್ಲಿ ತನಗೆ ಬಹುಮತ ಇಲ್ಲದೇ ಇದ್ದರೂ ಜಾತ್ಯತೀತ ಜನತಾದಳದ ಜೊತೆ ಸೇರಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿತ್ತು.
ಕಾಂಗ್ರೆಸ್ ಹೆಜ್ಜೆ ಗುರುತು ಕಣರೆ
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆಯೊಂದಿಗೆ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಹೆಜ್ಜೆ ಗುರುತು ಇನ್ನಷ್ಟು ನಶಿಸಿದೆ. ಮತ್ತು ಪಕ್ಷವು ಇನ್ನೊಂದು ರಾಜ್ಯವನ್ನು ಬಿಜೆಪಿಗೆ ಒಪ್ಪಿಸಿದಂತಾಗಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷವು ಪಂಜಾಬ್, ರಾಜಸ್ಥಾನ, ಛತ್ತೀಸ್ ಗಢ, ಜಾರ್ಖಂಡ್ ಮತ್ತು ಮಹಾರಾಷ್ಟ್ರ ಈ ೫ ರಾಜ್ಯಗಳಲ್ಲಿ ಮಾತ್ರ ಆಡಳಿತ ನಡೆಸುತ್ತಿದೆ. ಛತ್ತೀಸ್ ಗಢ, ಮಹಾರಾಷ್ಟ್ರ ಮತ್ತು ಕೇಂದ್ರಾಡಳಿತ ಪುದುಚೆರಿಯಲ್ಲಿ ಇತರ ಪಕ್ಷಗಳ ಜೊತೆಗೆ ಮೈತ್ರಿಕೂಟ ರಚಿಸಿಕೊಂಡು ಅದು ಅಧಿಕಾರದಲ್ಲಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಪ್ರತಿಕ್ರಿಯೆ
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರು ರಾಜೀನಾಮೆ ಪ್ರಕಟಿಸುತ್ತಿದ್ದಂತೆಯೇ ಪ್ರತಿಕ್ರಿಯೆಸಿದ ಜ್ಯೋತಿರಾದಿತ್ಯ ಸಿಂಧಿಯಾ ’ಸತ್ಯ ಜಯಿಸಿತು’ ಎಂದು ಪ್ರತಿಕ್ರಿಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಸರಿ ಪಕ್ಷವು ರಾಜ್ಯದಲ್ಲಿ ಪ್ರಬಲ ಸರ್ಕಾರವನ್ನು ರಚಿಸಲಿದೆ ಎಂದು ಅವರು ನುಡಿದರು.
’ನಾವು ಮತ್ತೆ ಬರುತ್ತೇವೆ ಮತ್ತು ಜನರು ನಮಗೆ ಅವರ ಸೇವೆ ಮಾಡಲು ಅವಕಾಶ ಕೊಡುತ್ತಾರೆ ಎಂದು ನಾನು ನಂಬುವೆ. ’ಜನಸೇವೆ’ಯೇ ನನ್ನ ಗುರಿ. ನಾನು ಯಾವುದೇ ಹುದ್ದೆಯ ಹಿಂದೆ ಹೋಗುವುದಿಲ್ಲ. ನಾನು ಕಳೆದ ೨೦ ವರ್ಷಗಳಿಂದ ಮಾಡುತ್ತಾ ಬಂದಿರುವುದೂ ಇದನ್ನೇ. ಮುಖ್ಯಮಂತ್ರಿಯನ್ನು ಪಕ್ಷವು ನಿರ್ಧರಿಸುತ್ತದೆ’ ಎಂದು ಸಿಂಧಿಯಾ ಹೇಳಿದರು.
ಸಂಜಯ್ ಝಾ ಟ್ವೀಟ್ ಚಾಟಿ
ಕಮಲನಾಥ್ ಅವರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಅವರು ಟ್ವೀಟ್ ಮಾಡಿ ’ಮೊದಲು ಕರ್ನಾಟಕ. ಈಗ ಮಧ್ಯಪ್ರದೇಶ. ಭಾರತೀಯ ಭೂಪಟದಲ್ಲಿ ಕಾಂಗ್ರೆಸ್ ಬಣ್ಣ ದೊಡ್ಡದಾಗಿ ಮೂಡಿದ ಬಳಿಕ ಎರಡು ದೊಡ್ಡ ರಾಜ್ಯಗಳು ನಮ್ಮ ಮೂಗಿನ ಬುಡದಲ್ಲೇ ಜಾರಿವೆ. ಹೌದು, ಬಿಜೆಪಿಯು ರಾಜಕೀಯವಾಗಿ ಅನೈತಿಕವಾಗಿದ್ದು ಕೊಳಕು ರಾಜಕೀಯ ಮಾಡುತ್ತಿದೆ. ಆದರೆ ಅದು ನಮ್ಮ ಬಗ್ಗೆ ಏನು ಹೇಳಬಲ್ಲುದು? ಯಾರು ಉತ್ತರದಾಯಿಗಳು? ಯಾರೂ ಇಲ್ಲವೇ?’ ಎಂದು ಪ್ರಶ್ನಿಸಿದರು.
ನಾಟಕೀಯ ರಾಜೀನಾಮೆ
ಇದಕ್ಕೂ ಮುನ್ನ, ವಿಧಾನಸಭೆಯಲ್ಲಿ ಬಲಪ್ರದರ್ಶನಕ್ಕೆ ಮೊದಲೇ ಬಿಜೆಪಿ ಶಾಸಕ ಶರದ್ ಕುಮಾರ್ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವು ಘಟನಾವಳಿಗಳಿಗೆ ಹೊಸ ತಿರುವು ನೀಡಬಹುದು ಎಂಬ ನಿರೀಕ್ಷೆ ಮೂಡಿಸಿದ್ದರು.
ಸುಪ್ರೀಂಕೋರ್ಟ್ ಆದೇಶ
ಸುಪ್ರೀಂಕೋರ್ಟ್ ಗುರುವಾರ ನೀಡಿದ್ದ ಆದೇಶದ ಪ್ರಕಾರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕೈಗಳನ್ನು ಎತ್ತುವ ಮೂಲಕ ಬಹುಮತವನ್ನು ನಿರ್ಧರಿಸಿ ಮಧ್ಯಪ್ರದೇಶ ಸರ್ಕಾರದ ಹಣೆಬರಹವನ್ನು ಮಧ್ಯಾಹ್ನ ೨ ಗಂಟೆಗೆ ಬರೆಯಬೇಕಾಗಿತ್ತು. ಬಲಾಬಲ ಪ್ರದರ್ಶನದ ಕಲಾಪದ ವಿಡಿಯೋ ಚಿತ್ರೀಕರಣವನ್ನೂ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಮಾರ್ಚ್ ೨೦ಕ್ಕೆ ಮುಂದೂಡಲಾಗಿದ್ದ ಮಧ್ಯಪ್ರದೇಶ ವಿಧಾನಸಭೆಯ ಅಧಿವೇಶನವನ್ನು ಸದನದಲ್ಲಿ ಬಲಾಬಲ ಪರೀಕ್ಷೆಗಾಗಿ ಮಾರ್ಚ್ ೨೦ರಂದು ಮರು ಸಮವೇಶಗೊಳಿಸಲಾಗಿದೆ, ಕೈಗಳನ್ನು ಎತ್ತುವ ಮೂಲಕ ಬಲಾಬಲ ಪರೀಕ್ಷೆ ನಡೆಸಲಾಗುವುದು’ ಎಂದು ಸುಪ್ರೀಂಕೋರ್ಟಿನ ಆದೇಶ ತಿಳಿಸಿತ್ತು.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠವು ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಅವರು ಮಾರ್ಚ್ ೧೬ರಂದು ಕೊರೋನಾವೈರಸ್ ಸೋಂಕು ಹರಡುತ್ತಿರುವುದನ್ನು ಉಲ್ಲೇಖಿಸಿ ಮುಂದೂಡಿದ್ದ ಮಧ್ಯಪ್ರದೇಶ ವಿಧಾನಸಭಾ ಅಧಿವೇಶನವನ್ನು ವಿಶ್ವಾಸ ಮತಯಾಚನೆಗಾಗಿ ಮರುಸಮಾವೇಶಗೊಳಿಸಬೇಕು ಎಂದು ಆಜ್ಞಾಪಿಸಿತ್ತು.
ಬಂಡಾಯ ಶಾಸಕರು ಬಯಸುವುದಿದ್ದರೆ ರಾಜ್ಯ ವಿಧಾನಸಭೆಗೆ ಬರಬಹುದು, ಕರ್ನಾಟಕ ಮತ್ತು ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರು ಅವರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದೂ ಸುಪ್ರೀಂಕೋರ್ಟ್ ಆದೇಶ ತಿಳಿಸಿತ್ತು.
ಮಪ್ರ ವಿಧಾನಸಭೆಯಲ್ಲಿ ಬಲಾಬಲ
೨೩೦ ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಎರಡು ಸ್ಥಾನಗಳು ಖಾಲಿ ಇದ್ದು ಹಾಲಿ ಸದಸ್ಯ ಬಲ ೨೨೮ ಆಗಿತ್ತು. ಇನ್ನೂ ೧೬ ಮಂದಿ ಶಾಸಕರ ರಾಜೀನಾಮೆಯೊಂದಿಗೆ  ಕಾಂಗ್ರೆಸ್ ಬಲ ೧೧೪ರಿಂದ ೯೨ಕ್ಕೆ ಇಳಿದಿದೆ. ರಾಜೀನಾಮೆ ನೀಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾದ ೬ ಸಚಿವರ ರಾಜೀನಾಮೆ ಅಂಗೀಕರಿಸಿದ್ದರಿಂದ ಕಾಂಗ್ರೆಸ್ ಬಲ ಈ ಮುನ್ನ ೧೦೮ಕ್ಕೆ ಕುಸಿದಿತ್ತು. ಬಿಜೆಪಿಯು ಸದನದಲ್ಲಿ ೧೦೭ ಸದಸ್ಯರನ್ನು ಹೊಂದಿದೆ. ಬಿಎಸ್ ಪಿ ಇಬ್ಬರು ಸದಸ್ಯರನ್ನು, ಎಸ್ ಪಿ ಒಬ್ಬ ಸದಸ್ಯನನ್ನು ಹೊಂದಿದ್ದರೆ ೪ ಮಂದಿ ಪಕ್ಷೇತರರು ಇದ್ದರು. ಇವರೆಲ್ಲರೂ ಬೆಂಬಲ ನೀಡುವ ಮೂಲಕ ೨೦೧೮ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚನೆಗೆ ನೆರವಾಗಿದ್ದವು.
ಈಗ ೨೨ ಶಾಸಕರ ರಾಜೀನಾಮೆ ಅಂಗೀಕಾರದ ಕಾರಣ ವಿಧಾನಸಭೆಯ ಸದಸ್ಯ ಬಲ ೨೦೬ಕ್ಕೆ ಇಳಿದಿದ್ದು, ಬಹುಮತಕ್ಕೆ ಬೇಕಾದ ಸಂಖ್ಯೆ ೧೦೪.

No comments:

Advertisement