My Blog List

Sunday, March 22, 2020

ಜನತಾ ಕರ್ಫ್ಯೂಗೆ ಭಾರತ ಸರ್ವ ಸಜ್ಜು, ರಾಷ್ಟ್ರಪತಿ ಭವನಕ್ಕೂ ಹಬ್ಬಿದ ಆತಂಕ

ಜನತಾ ಕರ್ಫ್ಯೂಗೆ ಭಾರತ ಸರ್ವ ಸಜ್ಜು, ರಾಷ್ಟ್ರಪತಿ ಭವನಕ್ಕೂ ಹಬ್ಬಿದ ಆತಂಕ
ಕೊರೋನಾ ಸೋಂಕಿತರ ಸಂಖ್ಯೆ ೩೦೦ರ ಸಮೀಪ, ದೆಹಲಿ ಲಾಕ್ ಡೌನ್, ಕೇಜ್ರಿವಾಲ್ ಇಂಗಿತ
ನವದೆಹಲಿ: ಮಾರಕ ಕೊರೋನಾವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದಜನತಾ ಕರ್ಫ್ಯೂಯಶಸ್ಸಿಗಾಗಿ ಭಾರತ ಸರ್ವ ಸಿದ್ಧತೆ ನಡೆಸುತ್ತಿರುವುದ ಮಧ್ಯೆಯೇ ದೇಶದಲ್ಲಿ ಕೋವಿಡ್-೧೯ ಸೋಂಕಿತ ಸಂಖ್ಯೆ 2020 ಮಾರ್ಚ್ 21ರ ಶನಿವಾರ  ೩೦೦ರ ಸಮೀಪಕ್ಕೆ ಬಂದಿತು. ಕೊರೋನಾಭೀತಿ ರಾಷ್ಟ್ರಪತಿ ಭವನಕ್ಕೂ ವ್ಯಾಪಿಸಿತು.

ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯೮ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಈವರೆಗೆ ಒಟ್ಟು ೨೯೮ ಕೊರೋನಾವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ತಿಳಿಸಿತು. ೨೯೮ ಪ್ರಕರಣಗಳ ಪೈಕಿ, ನಾಲ್ಕು ಜನರು ಸಾವನ್ನಪ್ಪಿದ್ದು, ೨೨ ಮಂದಿ ಚೇತರಿಸಿಕೊಂಡಿದ್ದಾರೆ. ಶುಕ್ರವಾರ ೫೦ ಹೊಸ ಪ್ರಕರಣಗಳು ವರದಿಯಾಗಿದ್ದು, ೨೪ ಗಂಟೆಗಳ ಅವಧಿಯಲ್ಲಿ ಕೊರೋನಾಸೋಂಕಿನ ಬೆಳವಣಿಗೆ ದುಪ್ಪಟ್ಟಾಯಿತು.

ಜಾನ್ಸ್ ಹಾಪ್ಕಿನ್ಸ್ ಕೊರೊನಾವೈರಸ್ ಟ್ರ್ಯಾಕರ್ ಪ್ರಕಾರ, ವಿಶ್ವಾದ್ಯಂತ ಕೊರೋನಾವೈರಸ್ ವೈರಸ್ ಸಾವಿನ ಸಂಖ್ಯೆ ೧೧,೩೯೭ ಕ್ಕೆ ಏರಿದೆ, ೧೬೦ ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೨,೭೫,೪೨೭ ಕ್ಕೂ ಹೆಚ್ಚು ಪ್ರಕರಣಗಳು ವರದಿಯಾದವು.

ಕೊರೋನಾವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯುವ ಮಾರ್ಗಗಳ ಬಗ್ಗೆ ಶುಕ್ರವಾರ ರಾಜ್ಯ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸುತ್ತಿದ್ದ ವೇಳೆಯಲ್ಲೇ ಭಾರತದಲ್ಲಿ ಒಂದು ದಿನದಲ್ಲಿ ಅತೀ ಹೆಚ್ಚು ಅಂದರೆ ೫೦ ಪ್ರಕರಣಗಳು ವರದಿಯಾಗಿ ಸೋಂಕಿತರ ಸಂಖ್ಯೆ ೨೨೩ಕ್ಕೆ ಏರಿತ್ತು.

ರಾಷ್ಟ್ರಪತಿ ಭವನಕ್ಕೂ ಬಿಸಿ
ಮಧ್ಯೆ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಉಪಹಾರ ಕೂಟದಲ್ಲಿ ಪಾಲ್ಗೊಂಡಿದ್ದ ಬಾಕ್ಸಿಂಗ್ ಚಾಂಪಿಯನ್ ಮೇರಿಕೋಮ್ ಮೇರಿ ಕೋಮ್ ಅವರು ವಿದೇಶದಿಂದ ವಾಪಸಾದ ಬಳಿಕ ಏಕಾಂಗಿವಾಸದ ನಿಯಮ ಉಲ್ಲಂಘಿಸಿದ್ದು ಬೆಳಕಿಗೆ ಬಂದಿದ್ದು, ಪರಿಣಾಮವಾಗಿ ಕೊರೋನಾಸೋಂಕಿನ ಬಿಸಿ ರಾಷ್ಟ್ರಪತಿ ಭವನದವರೆಗೂ ತಟ್ಟಿದೆ. ಘಟನೆಯ ಪರಿಣಾಮವಾಗಿ ಸ್ವತಃ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವೈದ್ಯಕೀಯ ತಪಾಸಣೆಗೆ ಒಳಗಾಗುವ ಸಾಧ್ಯತೆಯಿದೆ ಎಂಬುದು ಮೂಲಗಳು ತಿಳಿಸಿದವು.

ಬಾಕ್ಸಿಂಗ್ ಚಾಂಪಿಯನ್ ಹಾಗೂ ರಾಜ್ಯಸಭಾ ಸದಸ್ಯೆಯೂ ಆಗಿರುವ ಮೇರಿಕೋಮ್ ಅವರು ಜೋರ್ಡಾನಿನ ಅಮ್ಮಾನ್ನಲ್ಲಿ ನಡೆದ ಏಷಿಯಾ-ಓಷಿಯಾನಿಯಾ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲ್ಲಿ ಪಾಲ್ಗೊಂಡ ಬಳಿಕ ಮಾರ್ಚ್ ೧೩ರಂದು ಭಾರತಕ್ಕೆ ವಾಪಸಾಗಿದ್ದರು. ಆದರೆ, ಜಾಗತಿಕ ಆರೋಗ್ಯ ಸಂಸ್ಥೆ ಮತ್ತು ವಿಶ್ವಾದ್ಯಂತ ಸರ್ಕಾರಗಳು ವಿಧಿಸಿರುವ ವಿದೇಶಯಾನ ಬಳಿಕದ ೧೪ ದಿನಗಳ ಕಡ್ಡಾಯವಾಗಿ ಸ್ವಯಂಪ್ರೇರಿತ ಏಕಾಂಗಿವಾಸವನ್ನು ಕೊರೋನಾವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಅವರು ಪಾಲಿಸಬೇಕಾಗಿತ್ತು.

ಆದರೆ ಮೇರಿಕೋಮ್ ಅವರು ಮಾರ್ಚ್ ೧೮ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಆತಿಥ್ಯ ನೀಡಿದ್ದ ಬೆಳಗಿನ ಉಪಾಹಾರ ಕೂಟದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ಭವನವು ಟ್ವೀಟ್ ಮಾಡಿದ ನಾಲ್ಕು ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ ಮೇರಿಕೋಮ್ ಅವರು ಇತರ ಸಂಸತ್ ಸದಸ್ಯರ ಜೊತೆಗೆ ಇದ್ದುದು ದಾಖಲಾಗಿದೆ. ’ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉತ್ತರಪ್ರದೇಶ ಮತ್ತು ರಾಜಸ್ಥಾನದ ಸಂಸತ್ ಸದಸ್ಯರಿಗೆ ರಾಷ್ಟ್ರಪತಿ ಭವನದಲ್ಲಿ ಈದಿನ ಬೆಳಗ್ಗೆ ಉಪಾಹಾರ ಕೂಟ ಏರ್ಪಡಿಸಿದ್ದರುಎಂದು ಫೊಟೋಗಳಿಗೆ ನೀಡಲಾಗಿರುವ ಅಡಿಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ಆದರೆ ಆದೇಶವನ್ನು ಮೇರಿಕೋಮ್ ಅವರು ಗಾಳಿಗೆ ತೂರಿ ಉಪಾಹಾರ ಕೂಟದಲ್ಲಿ ಪಾಲ್ಗೊಂಡದ್ದು ಇದೀಗ ತೀವ್ರ ಆತಂಕ ಹುಟ್ಟು ಹಾಕಿದ್ದು ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿದ್ದ ಉಪಾಹಾರ ಕೂಟದಲ್ಲಿ ಕೇಂದ್ರ ಸಚಿವರು, ಸಂಸದರು, ವಿಪಕ್ಷ ನಾಯಕರು ಹಾಗೂ ಹೆಸರಾಂತ ಕ್ರೀಡಾಪಟುಗಳಿಗೆ ಆಹ್ವಾನ ನೀಡಲಾಗಿತ್ತು.

ಬಿಜೆಪಿ
ಮುಖಂಡ ಹಾಗೂ ಹಿರಿಯ ರಾಜಕಾರಣಿ, ವಸುಂಧರಾ ರಾಜೇ ಪುತ್ರ ದುಶ್ಯಂತ್ ಸಿಂಗ್ ಸಹ ಕೂಟದಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮುನ್ನ  ದುಶ್ಯಂತ್ ಸಿಂಗ್ ಲಕ್ನೋದಲ್ಲಿ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಸೇರಿದಂತೆ ಇನ್ನಿತರರೊಂದಿಗೆ ಹೋಳಿ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೀಗ ಗಾಯಕಿ ಕನಿಕಾ ಕಪೂರ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಕೋವಿಡ್ ೧೯ ಭೀತಿ ರಾಷ್ಟ್ರಪತಿ ಭವನದವರೆಗೂ ಹಬ್ಬಲು ಕಾರಣವಾಗಿದೆ. ಎಂದು ವರದಿಗಳು ಹೇಳಿವೆ.

ಮಧ್ಯೆ ದುಶ್ಮಂತ್ ಸಿಂಗ್ ಹಾಗೂ ಅವರ ತಾಯಿ ವಸುಂಧರಾರಾಜೆ ಅವರು ಸ್ವಯಂ ನಿರ್ಬಂಧ ಘೋಷಿಸಿಕೊಂಡಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಉಪಹಾರ ಕೂಟಕ್ಕೆ ತೆರಳಿರುವುದನ್ನು ಮೇರಿ ಕೋಮ್ ಒಪ್ಪಿಕೊಂಡಿದ್ದಾರೆ. "ಹೌದು, ಜೋರ್ಡಾನಿನಿಂದ ಮರಳಿದ ನಾನು ಮನೆಯಲ್ಲೇ ತಂಗಿದ್ದೆ. ಆದರೆ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿದ್ದ ಉಪಹಾರ ಕೂಟದಲ್ಲಿ ಭಾಗಿಯಾಗಿದ್ದೆ. ಆದರೆ ಅಲ್ಲಿ ದುಶ್ಯಂತ್ ಸಿಂಗ್ ಅವರನ್ನು ಭೇಟಿಯಾಗುವುದಾಗಲೀ ಅಥವಾ ಹಸ್ತಲಾಘವವನ್ನಾಗಲೀ ಮಾಡಿಲ್ಲ" ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

ಜನತಾ  ಕರ್ಫ್ಯೂ ಸಿದ್ಧತೆ
 ಕೊರೋನಾ ವೈರಸ್ ಹರಡುವುದನ್ನು ತಡೆಯಲು ಕೈಗೊಳ್ಳಲು ಭಾನುವಾರ ಬೆಳಗ್ಗೆ ೭ರಿಂದ ರಾತ್ರಿ ಗಂಟೆಯವರೆಗೆ ಜನತಾ ಕರ್ಫ್ಯೂ ಪಾಲಿಸಲು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿ, ಸಿದ್ಧತೆಗಳ ಬಗ್ಗೆ ಚರ್ಚಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಅಭ್ಯಾಸ ಮಾಡಲು ರಾಜ್ಯ ಸರ್ಕಾರಗಳು ಶಾಲೆಗಳು, ಕಾಲೇಜುಗಳು, ಶಾಪಿಂಗ್ ಮಾಲ್ಗಳು, ಚಿತ್ರಮಂದಿರಗಳು, ಜಿಮ್ಗಳು ಮತ್ತು ಈಜುಕೊಳಗಳನ್ನು ತಾತ್ಕಾಲಿಕವಾಗಿ ಮುಚ್ಚಿವೆ.

ದೇಶಾದ್ಯಂತ ೧೧೧ ಲ್ಯಾಬೋರೇಟರಿಗಳು ಶನಿವಾರದಿಂದಲೇ ಕಾರ್ಯಾಚರಣೆ ಆರಂಭಿಸಲಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲುವ್ ಅಗರ್ ವಾಲ್ ಪ್ರಕಟಿಸಿದರು.
ಶನಿವಾರ ಬೆಳಿಗ್ಗೆ ಮೇಘಾಲಯದ ಶಿಲ್ಲಾಂಗ್ನಲ್ಲಿ ೨೪ ಗಂಟೆಗಳ ಕರ್ಫ್ಯೂ ಘೋಷಿಸಲಾಯಿತು. ಮಾರ್ಚ್ ೨೨ ರಂದು ಪ್ರಧಾನಿ ಕರೆಯ ಮೇರೆಗೆ "ಜನತಾ ಕರ್ಫ್ಯೂ" ಪಾಲಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನರಿಗೆ ಮನವಿ ಮಾಡಿದರು.

ಕೋವಿಡ್-೧೯ ಸೋಂಕಿಗೆ ಪ್ರಪಂಚದಾದ್ಯಂತ ,೦೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು . ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಚೀನಾದ ವುಹಾನ್ ನಗರದಲ್ಲಿ ಸೋಂಕು ಮೊತ್ತ ಮೊದಲಿಗೆ ಕಾಣಿಸಿಕೊಂಡಿತ್ತು.

ಸಾಂಕ್ರಾಮಿಕದ ಮಧ್ಯೆ, ಮಾರ್ಚ್ ೨೨ ರಿಂದ ಮಾರ್ಚ್ ೨೯ ರವರೆಗೆ ಯಾವುದೇ ಅಂತರರಾಷ್ಟ್ರೀಯ ವಾಣಿಜ್ಯ,  ಪ್ರಯಾಣಿಕ ವಿಮಾನಗಳನ್ನು ಇಳಿಯಲು ಅನುಮತಿ ನೀಡುವುದಿಲ್ಲ ಎಂದು ಭಾರತ ಗುರುವಾರ ಪ್ರಕಟಿಸಿದೆ.

ದೆಹಲಿ ಲಾಕ್ ಡೌನ್: ಕೇಜ್ರಿವಾಲ್ ಇಂಗಿತ
ಕೊರೋನಾವೈರಸ್ ಹರಡುವಿಕೆಯನ್ನು ತಡೆಯಲು ಅಗತ್ಯವಿದ್ದರೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ಸಂಪೂರ್ಣವಾಗಿ ಮುಚ್ಚುವ (ಲಾಕ್ ಡೌನ್) ಬಗ್ಗೆ ಸರ್ಕಾರ ಪರಿಗಣಿಸುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದರು. ಆದರೆ, ಅಂತಹ ಪರಿಸ್ಥಿತಿ ಇನ್ನೂ ಉದ್ಭವಿಸಿಲ್ಲ ಎಂದು ಅವರು ನುಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ತಮಿಳುನಾಡಿನಲ್ಲಿ ಫೇಸ್ ಮಾಸ್ಕ್ ವಿತರಣೆ
ತಮಿಳುನಾಡಿನ ಚೆನ್ನೈಯಲ್ಲಿ ವಿಧಾನಸಭೆಯ ಸಂದರ್ಭದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಎಂಕೆ ಸ್ಟಾಲಿನ್ ಅವರು ಶನಿವಾರ ಹ್ಯಾಂಡ್ ಸ್ಯಾನಿಟೈಜರ್ಸ್ ಮತ್ತು ಮುಖಗವಸುಗಳನ್ನು (ಫೇಸ್ ಮಾಸ್ಕ್) ಮಾಧ್ಯಮ ಸಿಬ್ಬಂದಿ ಮತ್ತು ಸಿಬ್ಬಂದಿಗೆ ಸಾಬೂನು, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಫೇಸ್ ಮಾಸ್ಕ್ ಕಿಟ್ ವಿತರಿಸಿದರು. ಇದಕ್ಕೆ ಮುನ್ನ ಕೊರೊನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಸ್ಟಾಲಿನ್ ಮಂಗಳವಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾಕಾರರನ್ನು ಒತ್ತಾಯಿಸಿದ್ದರು.

ತಮಿಳುನಾಡು ರಾಜ್ಯದಲ್ಲಿ ಈವರೆಗೆ ಕನಿಷ್ಠ ಮೂರು ಸೋಂಕು ಪ್ರಕರಣಗಳು ವರದಿಯಾಗಿವೆ. ವೈರಸ್ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಕೊಯಮತ್ತೂರಿನ  ತಮಿಳುನಾಡು-ಕೇರಳ ಗಡಿಯನ್ನು ಮುಚ್ಚುವುದಾಗಿ ಕೊಯಮತ್ತೂರು ಜಿಲ್ಲಾಧಿಕಾರಿ ಮಾರ್ಚ್ ೨೦ ರಂದು ಘೋಷಿಸಿದ್ದರು.

ಇರಾನಿನಲ್ಲಿ ಮತ್ತೆ ೧೨೩ ಸಾವುಕೊರೋನಾವೈರಸ್ಸಿಗೆ ಇರಾನಿನಲ್ಲಿ ಹೊಸದಾಗಿ ೧೨೩ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಇರಾನಿನಲ್ಲಿ ಬಲಿಯಾದವರ ಒಟ್ಟು ಸಂಖ್ಯೆ ೧೫೫೬ಕ್ಕೆ ತಲುಪಿದೆ. ದೇಶದಲ್ಲಿ ಒಟ್ಟು ೨೦,೬೧೦ ಮಂದಿಗೆ ಸೋಂಕು ತಗುಲಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಕೊರೋನಾವೈರಸ್ ಸೋಂಕಿನ ಕೇಂದ್ರ ಬಿಂದುವಾಗಿದೆ. ಆದರೂ ಸೋಂಕು ಹರಡದಂತೆ ತಡೆಯಲು ನಿಧಾನಗತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಟೀಕೆಗೆ ಇರಾನ್ ಗುರಿಯಾಗಿದೆ.
ವಿದೇಶಗಳಲ್ಲಿನ ಭಾರತೀಯರಿಗೆ ನೆರವು
ಈಮಧ್ಯೆ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ವಿಶ್ವಾದ್ಯಂತ ಭಾರತದ ರಾಜತಾಂತ್ರಿಕ ಕಚೇರಿಗಳು ತಿಳಿಸಿವೆ.

ಫ್ರಾನ್ಸ್, ಕೆನಡಾ, ಗ್ರೀಸ್, ಫಿನ್ಲೆಂಡ್, ಎಸ್ಟೋನಿಯಾ, ಇಸ್ರೇಲ್, ಜಪಾನ್, ವಿಯೆಟ್ನಾಂ, ಬಲ್ಗೇರಿಯಾ, ಉತ್ತರ ಮ್ಯಾಸಿಡೋನಿಯಾ, ರಷ್ಯಾ, ಕ್ಯೂಬಾ, ಬ್ರೆಜಿಲ್ ಮತ್ತು ಸ್ವಿಟ್ಜರ್ಲೆಂಡ್ನಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಸಂಕಷ್ಟದಲಿರುವ ಭಾರತೀಯರಿಗೆ  ಅಗತ್ಯ ನೆರವು ಒದಗಿಸಲು ಮುಂದಾಗಿವೆ. ಹಲವಾರು ದೇಶಗಳಲ್ಲಿನ ಭಾರತೀಯ
ರಾಯಭಾರ ಕಚೇರಿಗಳು ತೊಂದರೆಗೀಡಾದ ಭಾರತೀಯರಿಗೆ ತುರ್ತು ಸಹಾಯವಾಣಿಗಳನ್ನು ಪ್ರಾರಂಭಿಸಿವೆ.

No comments:

Advertisement