Friday, March 13, 2020

ಏಳು ತಿಂಗಳ ಸೆರೆವಾಸದಿಂದ ಫರೂಖ್ ಅಬ್ದುಲ್ಲ ಬಿಡುಗಡೆ

ಏಳು ತಿಂಗಳ ಸೆರೆವಾಸದಿಂದ ಫರೂಖ್ ಅಬ್ದುಲ್ಲ ಬಿಡುಗಡೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫರೂಖ್ ಅಬ್ದುಲ್ಲ ಅವರನ್ನು 2020 ಮಾರ್ಚ್  13ರ ಶುಕ್ರವಾರ ಏಳು ವಾರಗಳ ಬಂಧನದಿಂದ ಬಿಡುಗಡೆ ಮಾಡಲಾಗಿದ್ದು, ಅವರು ತಮ್ಮ ಗುಪ್ಕಾರ ನಿವಾಸದಿಂದ ಹೊರಕ್ಕೆ ಬಂದರು.
ಕೇಂದ್ರ ಸರ್ಕಾರವು ಜಮ್ಮ ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಬಳಿಕ ತಮ್ಮ ಮನೆಯಲ್ಲೇ ಬಂಧಿತರಾಗಿದ್ದ ಫರೂಖ್ ಅಬ್ದುಲ್ಲ ಮನೆಯಿಂದ ಹೊರಬರುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಪತ್ರಕರ್ತರ ಜೊತೆ ’ನಾನು (ಬಂಧ)ಮುಕ್ತನಾಗಿದ್ದೇನೆ, ಮುಕ್ತನಾಗಿದ್ದೇನೆ ಎಂದು ಹೇಳುತ್ತಾ ಹರ್ಷ ವ್ಯಕ್ತ ಪಡಿಸಿದರು.
ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಬ್ದುಲ್ಲ ಅವರನ್ನು ಬಂಧಿಸಲಾಗಿತ್ತು.
‘ನನ್ನ ಸ್ವಾತಂತ್ರ್ಯಕ್ಕಾಗಿ ಮಾತನಾಡಿದ ರಾಜ್ಯ ಮತ್ತು ದೇಶದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಸ್ವಾತಂತ್ರ್ಯಕ್ಕಾಗಿ ಪ್ರಾರ್ಥಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ೮೨ರ ಹರೆಯದ ಅಬ್ದುಲ್ಲ ಹೇಳಿದರು.
‘ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ ಸೇರಿದಂತೆ ವಿವಿಧ ಕಡೆಗಳಲ್ಲಿ ಬಂಧನದಲ್ಲಿ ಇರುವ ಎಲ್ಲರ ಬಿಡುಗಡೆಯೊಂದಿಗೆ ಮಾತ್ರವೇ ಈ ಸ್ವಾತಂತ್ರ್ಯವು ಪರಿಪೂರ್ಣಗೊಳ್ಳುವುದು ಎಂದು ಫರೂಖ್ ಅಬ್ದುಲ್ಲ ಹೇಳಿದರು. ’ಪ್ರತಿಯೊಬ್ಬರನ್ನೂ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಕ್ರಮ ಕೈಗೊಳ್ಳುವುದು ಎಂದು ನಾನು ನಿರೀಕ್ಷಿಸುವೆ ಎಂದು ಅವರು ನುಡಿದರು.
ಎಲ್ಲ ನಾಯಕರ ಬಿಡುಗಡೆ ಆಗುವವರೆಗೂ ತಾವು ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ ಎಂದೂ ಅಬ್ದುಲ್ಲ ಸ್ಪಷ್ಟ ಪಡಿಸಿದರು.
ಫರೂಖ್ ಅಬ್ದುಲ್ಲ ವಿರುದ್ಧ ವಿಧಿಸಲಾಗಿದ್ದ ಕಠಿಣ ಸಾರ್ವಜನಿಕ ಸುರಕ್ಷಾ ಕಾಯ್ದೆಯನ್ನು (ಪಿಎಸ್‌ಎ) ಜಮ್ಮು ಮತ್ತು ಕಾಶ್ಮೀರ ಆಡಳಿತವು ಶುಕ್ರವಾರ ತತ್ ಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡ ಬಳಿಕ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥರನ್ನು ಬಿಡುಗಡೆ ಮಾಡಲಾಯಿತು.
ಅಬ್ದುಲ್ಲ ಅವರನ್ನು ಕಳೆದ ವರ್ಷ ಆಗಸ್ಟ್ ೧೫ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ದಿನದಿಂದಲೇ ಮುಂಜಾಗರೂಕತಾ ಬಂಧನದಲ್ಲಿ ಇರಿಸಿತ್ತು. ಸಾರ್ವಜನಿಕ ಸುರಕ್ಷಾ ಕಾಯ್ದೆಯ ಅಡಿಯಲ್ಲಿ ಬಂಧಿತರಾದ ಮೊತ್ತ ಮೊದಲ ಮುಖ್ಯಮಂತ್ರಿ ಅವರಾಗಿದ್ದರು. ಸೆಪ್ಟೆಂಬರ್ ೧೫ರಂದು ಅವರನ್ನು ಕಠಿಣ ಕಾಯ್ದೆಯ ಅಡಿಯಲ್ಲಿ ಬಂಧನಕ್ಕೆ ಒಳಪಡಿಸಲಾಗಿತ್ತು. ಎಂಡಿಎಂಕೆ ನಾಯಕ ವೈಕೋ ಅವರು ಅಬ್ದುಲ್ಲ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂಬುದಾಗಿ ಆಪಾದಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳುವುದಕ್ಕೆ ಕೆಲವೇ ಗಂಟೆಗಳ ಮುನ್ನ ಅವರ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾಯ್ದೆಯನ್ನು ಪ್ರಯೋಗಿಸಲಾಗಿತ್ತು.
ಫರೂಖ್ ಅಬ್ದುಲ್ಲ ಅವರನ್ನು ಬಿಡುಗಡೆ ಮಾಡಿದ ಬಳಿಕ ನಿರ್ಧಾರವನ್ನು ಸ್ವಾಗತಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ನ್ಯಾಷನಲ್ ಕಾನ್ಫರೆನ್ಸ್, ಪಕ್ಷದ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಸೇರಿದಂತೆ ಎಲ್ಲ ರಾಜಕೀಯ ನಾಯಕರನ್ನೂ ಬಿಡುಗಡೆ ಮಾಡುವಂತೆ ಕೇಂದ್ರಾಡಳಿತ ಪ್ರದೇಶದ ಆಡಳಿತವನ್ನು ಒತ್ತಾಯಿಸಿತು.
ಫರೂಖ್ ಅಬ್ದುಲ್ಲ ಅವರ ಬಿಡುಗಡೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ನೈಜ ರಾಜಕೀಯ ಪ್ರಕ್ರಿಯೆ ಪುನಃಸ್ಥಾಪನೆ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಎಂದು ಎನ್‌ಸಿ ಹೇಳಿಕೆ ತಿಳಿಸಿತು.
ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲ ಮತ್ತು ಇತರ ರಾಜಕೀಯ ನಾಯಕರನ್ನು ಕೂಡಾ ಬಿಡುಗಡೆ ಮಾಡಿದಾಗ ಪ್ರಕ್ರಿಯೆಗೆ ಇನ್ನಷ್ಟು  ಒತ್ತು ಲಭಿಸುವುದು. ಆದಷ್ಟೂ ಬೇಗ ಇದನ್ನು ಮಾಡುವಂತೆ ನಾವು ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಹೇಳಿಕೆ ತಿಳಿಸಿತು.
ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಆಜಕೀಯ ಪಕ್ಷವಾಗಿ ನ್ಯಾಷನಲ್ ಕಾನ್ಫರೆನ್ಸ್ ಪ್ರಜಾಪ್ರಭುತ್ವದ ಮೂಲಕ ಜನರ ದನಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪಕ್ಷವು ಮುಂದಕ್ಕೂ ಅದನ್ನು ಮಾಡುವುದು ಎಂದು ಹೇಳಿಕೆ ತಿಳಿಸಿತು.
ಜಿಲ್ಲಾಧಿಕಾರಿ ಶಾಹಿದ್ ಇಕ್ಬಾಲ್ ಚೌಧರಿ ಅವರು ಅಬ್ದುಲ್ಲ ಅವರ ನಿವಾಸದ ಒಳಕ್ಕೆ ಪ್ರವೇಶಿಸಿ ಈ ವಾರಾರಂಭದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಬ್ದುಲ್ಲ ಅವರಿಗೆ ಅವರ ಬಿಡುಗಡೆ ಆದೇಶವನ್ನು ಹಸ್ತಾಂತರಿಸಿದರು ಎಂದು ಅಧಿಕಾರಿಗಳು ನುಡಿದರು.

No comments:

Advertisement