My Blog List

Thursday, March 19, 2020

ಕೊರೋನಾವೈರಸ್: ಕೇಂದ್ರ ಸಿಬ್ಬಂದಿಗೆ ಮನೆಯಿಂದಲೇ ಕೆಲಸಕ್ಕೆ ಆದೇಶ

ಕೊರೋನಾವೈರಸ್: ಕೇಂದ್ರ  ಸಿಬ್ಬಂದಿಗೆ ಮನೆಯಿಂದಲೇ ಕೆಲಸಕ್ಕೆ ಆದೇಶಎಲ್ಲ ವಿದೇಶೀ ವಿಮಾನಗಳೂ ಬಂದ್, ಪಂಜಾಬಿನಲ್ಲಿ ನಾಲ್ಕನೇ ಸಾವು, ತಿರುಪತಿ ದೇಗುಲಕ್ಕೆ ಬೀಗ
ನವದೆಹಲಿ: ನೂತನ ಕೊರೋನಾವೈರಸ್ ಸೋಂಕಿಗೆ ಭಾರತದಲ್ಲಿ ನಾಲ್ಕನೇ ವ್ಯಕ್ತಿ ಬಲಿಯಾಗಿದ್ದು, ಪಂಜಾಬಿನಿಂದ ನಾಲ್ಕನೇ ಸಾವಿನ ವರದಿ ಬಂದಿರುವುದರ ಮಧ್ಯೆಯೇ ಕೇಂದ್ರ ಸರ್ಕಾರವು ಏಪ್ರಿಲ್ ೪ರವರೆಗೆ ತನ್ನ ಶೇಕಡಾ ೫೦ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ 2020 ಮಾರ್ಚ್  19ರ ಗುರುವಾರ ಆಜ್ಞಾಪಿಸಿದ್ದಲ್ಲದೆ,, ಮಾರ್ಚ್ ೨೨ರಿಂದ  ಒಂದುವಾರ  ಎಲ್ಲ ವಿದೇಶೀ ವಿಮಾನಗಳನ್ನು ಭಾರತಕ್ಕೆ ಬರದಂತೆ ನಿಷೇಧಿಸಿತು.

ಏಪ್ರಿಲ್ ೪ರವರೆಗೆ ತನ್ನ ಎಲ್ಲ ಇಲಾಖೆಗಳಲ್ಲೂ ಮಧ್ಯಮ ಮತ್ತು ಕಿರಿಯ ಶ್ರೇಣಿಯ ಅಧಿಕಾರಿಗಳಲ್ಲಿ ಶೇಕಡಾ ೫೦ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಮತ್ತು ಉಳಿದವರಿಗೆ ಪ್ರತ್ಯೇಕ ಪಾಳಿಗಳಲ್ಲಿ ಕೆಲಸ ಮಾಡುವಂತೆಯೂ ಕೇಂದ್ರ ಸರ್ಕಾರವು ಗುರುವಾರ ಆದೇಶ ನೀಡಿತು.

ಸಾರ್ವಜನಿಕ ಸಾರಿಗೆ ಮೇಲಿನ ಒತ್ತಡ ತಗ್ಗಿಸಲು ಮತ್ತು ಆಡಳಿತ ಯಂತ್ರದಲ್ಲಿ ಕೊರೋನಾವೈರಸ್ ಸೋಂಕು ಹರಡುವ ಸಾಧ್ಯತೆಗಳನ್ನು ಕನಿಷ್ಠಗೊಳಿಸುವ ಸಲುವಾಗಿ ನೀಡಲಾಗಿರುವ ಸೂಚನೆಯು ಕೇಂದ್ರ ಸರ್ಕಾರದ ನೌಕರರು, ಸರ್ಕಾರೀ ಸ್ವಾಮ್ಯದ ನೌಕರರು ಮತ್ತು ಕೇಂದ್ರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೂ ಅನ್ವಯವಾಗುತ್ತದೆ.

ಸರ್ಕಾರಿ ನೌಕರರ ಪೈಕಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗ್ರೂಪ್ ಬಿ ಮತ್ತು ಸಿ ನೌಕರರಿಗೆ ಮನೆಯಿಂದಲೇ ಕೆಲಸದ ಆದೇಶ ಅನ್ವಯಿಸುತ್ತದೆ.

ನೌಕರರನ್ನು ೫೦-೫೦ ಪ್ರಮಾಣದಲ್ಲಿ ವಿಭಜಿಸಿ ಒಂದು ವರ್ಗಕ್ಕೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲು ಕೇಂದ್ರವು ಅಧಿಸೂಚನೆ ಮೂಲಕ ಎಲ್ಲ ಇಲಾಖಾ ಪ್ರಮುಖರಿಗೂ ನಿರ್ದೇಶನ ನೀಡಿತು. ಹೆಚ್ಚುವರಿ ಕಾರ್ಯದರ್ಶಿ ಸುಜಾತಾ ಚತುರ್ವೇದಿ ಅವರು ಸಹಿ ಮಾಡಿರುವ ಅಧಿಸೂಚನೆಯಲ್ಲಿ ಎಲ್ಲ ಸಚಿವಾಲಯಗಳು ಮತ್ತು ಸರ್ಕಾರದ ಇಲಾಖೆಗಳು, ಪ್ರಧಾನ ಮಂತ್ರಿಯ ಕಚೇರಿ ಮತ್ತು ಸಂಪುಟ ಸೆಕ್ರೆಟೇರಿಯೆಟ್, ಪಿಎಸ್ ಮತ್ತು ಸಿಬ್ಬಂದಿ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ತಾಂತ್ರಿಕ ನಿರ್ದೇಶಕರಿಗೆ ಅನ್ವಯಿಸುತ್ತದೆ ಎಂದು ಸೂಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಈವರೆಗೆ ೧೭೩ ಜನರನ್ನು ಬಾಧಿಸಿರುವ ಕೊರೋನಾವೈರಸ್ ಸೋಂಕಿನ ಬಗ್ಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಕ್ಕೆ ಕೆಲವೇ ಗಂಟೆಗಳ ಮುನ್ನ ಸರ್ಕಾರ ಕ್ರಮ ಕೈಗೊಂಡಿತು.

ಪರಿಸ್ಥಿತಿ ಚಿಂತಾಜನಕವಾಗಿದೆಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖಾ (ಡಿಒಪಿಟಿ) ಅಧಿಕಾರಿ ಹೇಳಿದರು. ’ನಿರ್ದಿಷ್ಟವಾಗಿ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಪ್ರಧಾನಿ ಕೂಡಾ ಕೊರೋನಾವೈರಸ್ ಬಗ್ಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವರು. ಆರೋಗ್ಯ ಸಚಿವಾಲಯದ ಸೂಚನೆಯಂತೆ ಸಾಮಾಜಿಕ ಅಂತರ ಖಾತ್ರಿಗಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನಿರ್ಧಾರ ಕೈಗೊಂಡಿದೆ ಎಂದು ಅವರು ನುಡಿದರು.

ಗ್ರೂಪ್ ನೌಕರರು ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಅವರನ್ನು ಮನೆಯಿಂದ ಕೆಲಸ ಮಾಡುವ ನೌಕರರ ವರ್ಗಕ್ಕೆ ಇನ್ನೂ ಸೇರ್ಪಡೆ ಮಾಡಲಾಗಿಲ್ಲ ಎಂದು ಅಧಿಕಾರಿ ಹೇಳಿದರು. ಅಲ್ಲದೆ ಅವರಲ್ಲಿ ಬಹುತೇಕ ಮಂದಿ ತಮ್ಮದೇ ಕ್ಯಾಬಿನ್ಗಳನ್ನು (ಕೊಠಡಿಗಳನ್ನು) ಹೊಂದಿದ್ದಾರೆ. ಆದರೆ ಗ್ರೂಪ್ ಬಿ ಮತ್ತು ಸಿ ನೌಕರರು ಒಂದೇ ಕೊಠಡಿಗಳನ್ನು ಹಂಚಿಕೊಳ್ಳುತ್ತಾರೆ. ಆದ್ದರಿಂದ ಎರಡನೇ ವರ್ಗಕ್ಕೆ ಸಾಮಾಜಿಕ ಅಂತರದ ಲಭ್ಯತೆ ಅತ್ಯಗತ್ಯವಾಗಿದೆ ಎಂದು ಅವರು ನುಡಿದರು.

ಕೆಲಸದ ಶೆಡ್ಯೂಲಿನ ಬದಲಾವಣೆಯ ಖಾತರಿಗಾಗಿ ಸಾಪ್ತಾಹಿಕ ರೋಸ್ಟರ್ ಜಾರಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.

ರೋಸ್ಟರ್ ನಿರ್ಧರಿಸುವಾಗ ಕಚೇರಿಗಳಿಗೆ ಇರುವ ಸಾಮೀಪ್ಯ ಮತ್ತು ಸಾರಿಗೆ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಳ್ಳಲು ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದವರಿಗಿಂತ ಹೆಚ್ಚಾಗಿ ತಮ್ಮ ಸ್ವಂತ ವಾಹನಗಳಲ್ಲಿ ಸಂಚರಿಸಬಹುದಾದವರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ನುಡಿದರು.

ಇದಕ್ಕೂ ಹೆಚ್ಚಾಗಿ, ನೌಕರರು ಬೆಳಗ್ಗೆ ೯ರಿಂದ ಸಂಜೆ .೩೦, ಬೆಳಗ್ಗೆ .೩೦ರಿಂದ ಸಂಜೆ ಮತ್ತು ಬೆಳಗ್ಗೆ ೧೦ರಿಂದ ಸಂಜೆ .೩೦ರ ಪಾಳಿಗಳಲ್ಲಿ ಕೆಲಸ ಮಾಡಲಿದ್ದಾರೆ.

ವಿದೇಶೀ ವಿಮಾನಗಳು ಬಂದ್
ಇದೇ ವೇಳೆಗೆ ಮಾರ್ಚ್ ೨೨ರಿಂದ  ಒಂದು ವಾರ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳಿಗೂ ಭಾರತದಲ್ಲಿ ಇಳಿಯಲು ಅವಕಾಶ ನೀಡಲಾಗುವುದಿಲ್ಲ ಎಂದೂ ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿತು.

ಜೊತೆಗೇ ೬೫ ವರ್ಷ ಮೀರಿದ ಎಲ್ಲ ನಾಗರಿಕರಿಗೂ ಸಾರ್ವಜನಿಕ ಪ್ರತಿನಿಧಿಗಳು, ವೈದ್ಯರು ಅಥವಾ ಸರ್ಕಾರಿ ನೌಕರರು ಅಲ್ಲದೇ ಇದ್ದಲ್ಲಿ ಮನೆಗಳಲ್ಲೇ ಉಳಿಯುವಂತೆ ಕೂಡಾ ಸರ್ಕಾರ ಸಲಹೆ ಮಾಡಿತು. ಅದೇ ರೀತಿ ೧೦ ವರ್ಷಗಳಿಗಿಂತ ಕೆಳಗಿನ ಮಕ್ಕಳನ್ನು ಕೂಡಾ ಮನೆಗಳ ಒಳಗೇ ಇರಿಸಿಕೊಳ್ಳುವಂತೆ ಸರ್ಕಾರ ಸೂಚಿಸಿತು.

ವಿದ್ಯಾರ್ಥಿಗಳು, ರೋಗಿಗಳು ಮತ್ತು ಅಂಗವಿಕಲ ವ್ಯಕ್ತಿಗಳನ್ನು ಹೊರತು ಪಡಿಸಿ ಉಳಿದ ಎಲ್ಲರ ರಿಯಾಯ್ತಿ ಪ್ರಯಾಣಗಳನ್ನು ರದ್ದು ಪಡಿಸುವಂತೆಯೂ ರೈಲ್ವೇ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸೂಚಿಸಿತು.

ಖಾಸಗಿ ರಂಗದಲ್ಲೂ ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ನೌಕರರಿಗೆ ಮನೆಯಿಂದಲೇ ಕೆಲಸಗಳನ್ನು ಮಾಡುವಂತೆ ರಾಜ್ಯಗಳಿಗೆ ಕೇಂದ್ರವು ಸೂಚಿಸಿತು.

ದೇಶದಲ್ಲಿ ಕೊರೋನಾ ಬಾಧಿತರ ಸಂಖ್ಯೆ ೧೭೩ಕ್ಕೆ
ದೇಶದ ವಿವಿಧ ಭಾಗಗಳಲ್ಲಿ ಸೋಂಕು ತಗುಲಿದ ೨೨ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಭಾರತದಲ್ಲಿ ಒಟ್ಟು ಕೊರೋನಾವೈರಸ್ ಸೋಂಕಿನ ಸಂಖ್ಯೆ ೧೭೩ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು.

ಕೊರೋನಾವೈರಸ್ ಸೋಂಕಿಗೆ ಜರ್ಮನಿಯಿಂದ ಪ್ರಯಾಣಿಸಿದ್ದ ೭೦ರ ಹರೆಯದ ವ್ಯಕ್ತಿ ಬಲಿಯಾಗಿದ್ದು ಇದು ದೇಶದಲ್ಲಿ ನಾಲ್ಕನೇ ಕೊರೋನಾವೈರಸ್ ಸಾವು ಎಂದು ಪಂಜಾಬಿನಿಂದ ಬಂದ ವರದಿ ತಿಳಿಸಿತು.

ಜಾಗತಿಕವಾಗಿ ಈಗಾಗಲೇ ೮೦೦೦ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿರುವ ಮತ್ತು ,೦೦,೦೦೦ಕ್ಕೂ ಹೆಚ್ಚು ಮಂದಿಯನ್ನು ಬಾಧಿಸಿರುವ ಕೊರೋನಾವೈರಸ್ ಸೋಂಕನ್ನು ಹರಡದಂತೆ ತಡೆಯಲು ನಡೆದಿರುವ ವಿಶ್ವವ್ಯಾಪಿ ಯತ್ನಗಳ ಮಧ್ಯೆ ಭಾರತವೂ ತನ್ನ ತುರ್ತು ಕ್ರಮಗಳನ್ನು ಘೋಷಿಸಿದೆ.

ಪಂಜಾಬಿನಲ್ಲಿ ನಾಲ್ಕನೇ ಸಾವು
ಚಂಡೀಗಢದಿಂದ ಬಂದಿರುವ ವರದಿಯ ಪ್ರಕಾರ ಪಂಜಾಬಿನಲ್ಲಿ ಭಾರತದ ನಾಲ್ಕನೇ ಕೊರೋನಾವೈರಸ್ ಸಾವು ಸಂಭವಿಸಿದೆ.

೭೦ರ ಹರೆಯದ ಜರ್ಮನಿಯಿಂದ ಇಟಲಿ ಮೂಲಕವಾಗಿ ಎರಡು ವಾರಗಳ ಹಿಂದೆ ಆಗಮಿಸಿದ ವ್ಯಕ್ತಿ ತೀವ್ರ ಎದೆ ನೋವಿನ ಬಳಿಕ ಸಾವನ್ನಪ್ಪಿದ್ದು, ಆತನಿಗೆ ಕೊರೋನಾವೈರಸ್ ಬಾಧಿಸಿದ್ದು ಖಚಿತಪಟ್ಟಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

ಸದರಿ ವ್ಯಕ್ತಿ ಪಂಜಾಬಿನ ಹೋಶಿಯಾರ್ಪುರದ ಬಂಗಾದಲ್ಲಿನ ಆಸ್ಪತ್ರೆಯಲ್ಲಿ ಬುಧವಾರ ಸಾವನ್ನಪ್ಪಿದ್ದಾರೆ. ಆತನ ಗ್ರಾಮದಲ್ಲಿ ಕಿಮೀ ವ್ಯಾಪ್ತಿಯವರೆಗೆ ದಿಗ್ಬಂಧನ ವಿಧಿಸಲಾಗಿದೆ. ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಸರ್ಕಾರಿ ವೈದ್ಯರನ್ನು ಏಕಾಂಗಿ ವಾಸದಲ್ಲಿ ಇರಿಸಲಾಗಿದೆ.

ಮೃತ ವ್ಯಕ್ತಿಯ ಬಂಧುಗಳು, ಗೆಳೆಯರಿಗೂ ಏಕಾಂಗಿ ವಾಸಕ್ಕೆ ಸೂಚಿಸಲಾಗಿದೆ. ಬುಧವಾರದಿಂದಲೇ ವ್ಯಕ್ತಿಯ ಮನೆಗೆ ಬೀಗಮುದ್ರೆ ಹಾಕಲಾಗಿದೆ.

ತಿರುಮಲ ತಿರುಪತಿ ದೇಗುಲ ಬಂದ್
ಕೊರೋನಾ ವೈರಸ್ ಹರಡದಂತೆ ತಡೆಯಲು ಮುಂಜಾಗರೂಕತಾ ಕ್ರಮವಾಗಿ ತಿರುಮಲ ತಿರುಪತಿ ದೇವಸ್ವಂ ಮಂಡಳಿಯು (ಟಿಟಿಡಿ) ವೆಂಕಟೇಶ್ವರ ಸ್ವಾಮಿ ಅಥವಾ ಬಾಲಾಜಿ ದೇವಾಲಯವನ್ನು ಭಕ್ತರು ಪ್ರವೇಶಿದಂತೆ ಮುಚ್ಚಲು ತೀರ್ಮಾನಿಸಿದೆ ಎಂದು ಹೈದರಾಬಾದ್ ವರದಿ ತಿಳಿಸಿದೆ.

ಮಂಡಳಿಯ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಗುರುವಾರ ನಿರ್ಧಾರ ಕೈಗೊಳ್ಳಲಾಗಿದೆ. ದೇವಾಲಯದ ಒಳಗೆ ಮಹಾರಾಷ್ಟ್ರದ ಭಕ್ತರೊಬ್ಬರು ಜ್ವರ, ಕೆಮ್ಮು ಮತ್ತು ಶೀತದೊಂದಿಗೆ ಅಸ್ವಸ್ಥರಾದ ಘಟನೆಯ ಬಳಿಕ ನಿರ್ಧಾರ ಕೈಗೊಳ್ಳಲಾಯಿತು ಎಂದು ಸುಬ್ಬಾರೆಡ್ಡಿ ಹೇಳಿದರು. ಸದರಿ ಭಕ್ತನನ್ನು ಅಸ್ಪತ್ರೆಗೆ ಸೇರಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಭಕ್ತರಿಗೆ ದೇವಾಲಯಕ್ಕೆ ಬರುವುದನ್ನು ತಪ್ಪಿಸುವಂತೆ ಕೋರುತ್ತಾ ಬರಲಾಗಿತ್ತು. ಆದರೆ ಇಂತಹ ಪರಿಸ್ಥಿತಿ ಈಗ ದೇವಾಲಯದ ಸನಿಹದಲ್ಲೇ ಸಂಭವಿಸಿದ್ದರಿಂದ, ಭಕ್ತರಿಗೆ ಬಾಗಿಲನ್ನು ಮುಚ್ಚಿ ದೇವಾಲಯ ಒಳಗೆ ಅರ್ಚಕರು ಮಾತ್ರವೇ ದೈನಂದಿನ ಪೂಜಾವಿಧಿಗಳನ್ನು ನೆರವೇರಿಸಲು ನಿರ್ಧರಿಸಲಾಗಿದೆ ಎಂದು ರೆಡ್ಡಿ ಹೇಳಿದರು.

ದೇವಾಲಯದಲ್ಲಿ ಅಸ್ವಸ್ಥನಾದ ವ್ಯಕ್ತಿ ಈಗ ಶ್ರೀ ವೆಂಕಟೇಸ್ವರ ರೂಯಿಯಾ ಆಸ್ಪತ್ರೆಯಲ್ಲಿ ಇದ್ದಾರೆ. ದೇಶಾದ್ಯಂತ ಇತರ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಇಲ್ಲಿಗೆ ಬಂದ ೧೦೦ ಮಂದಿಯ ಗುಂಪಿನ ಸದಸ್ಯ ಅವರಾಗಿದ್ದರು. ಅವರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ತಿರುಮಲ ದೇವಾಲಯದಲ್ಲಿ ಅಸ್ವಸ್ಥತೆ ಪತ್ತೆಯಾಗುವುದಕ್ಕೆ ಮುನ್ನ ವ್ಯಕ್ತಿ ಹಲವಾರು ಮಂದಿಯ ಸಂಪರ್ಕದಲ್ಲಿ ಇದ್ದರು. ಹೀಗಾಗಿ ಈಗ ಅವರೆಲ್ಲರನ್ನೂ ಗುರುತಿಸಿ ನಿಗಾಕ್ಕೆ ಒಳಪಡಿಸಬೇಕಾಗಿದೆ ಎಂದು ದೇವಾಲಯ ಮೂಲಗಳು ಹೇಳಿವೆ.

ತಿರುಮಲ ದೇವಸ್ಥಾನಕ್ಕೆ ಪ್ರತಿದಿನ ೭೫,೦೦೦ದಿಂದ ೯೦,೦೦೦ ಭಕ್ತರು ಬರುತ್ತಾರೆ. ತೀವ್ರ ಮನವಿಯ ಬಳಿಕ ವಾರ ಭಕ್ತರ ಸಂಖ್ಯೆ ಸುಮಾರು ೩೦,೦೦೦ಕ್ಕೆ ಇಳಿದಿದೆ.. ಇದು ಕೂಡಾ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯೇ. ಆದ್ದರಿಂದ ನಾವು ದೇವಾಲಯವನ್ನು ಮುಚ್ಚಲು ನಾವು ನಿರ್ಧರಿಸಿದೆವು. ಅಲಿಪಿರಿಯಿಂದ ಈದಿನದಿಂದಲೇ ಭಕ್ತರನ್ನು ಬರದಂತೆ ತಡೆಯಲಾಗವುದು. ಜನರು ಭ್ರಮನಿರಸನಗೊಳ್ಳಬಹುದು. ಆದರೆ ಇದು ಅನಿವಾರ್ ಎಂದು ಸುಬ್ಬಾರೆಡ್ಡಿ ನುಡಿದರು.

No comments:

Advertisement