ಗ್ರಾಹಕರ ಸುಖ-ದುಃಖ

My Blog List

Friday, April 10, 2020

ಒಡಿಶಾ ಬಳಿಕ ಪಂಜಾಬಿನಲ್ಲೂ ಮಾಸಾಂತ್ಯದವರೆಗೆ ಲಾಕ್ ಡೌನ್ ವಿಸ್ತರಣೆ

ಒಡಿಶಾ ಬಳಿಕ ಪಂಜಾಬಿನಲ್ಲೂ ಮಾಸಾಂತ್ಯದವರೆಗೆ ಲಾಕ್ ಡೌನ್ ವಿಸ್ತರಣೆ
ನವದೆಹಲಿ: ರಾಜ್ಯದಲ್ಲಿ ವಿಧಿಸಲಾಗಿರುವ ಕೋವಿಡ್-೧೯  ದಿಗ್ಬಂಧನವನ್ನು (ಲಾಕ್ ಡೌನ್) ಏಪ್ರಿಲ್ ೩೦ರವರೆಗೆ ವಿಸ್ತರಿಸುವುದಾಗಿ ಪಂಜಾಬ್  2020  ಏಪ್ರಿಲ್ 10ರ ಶುಕ್ರವಾರ ಪ್ರಕಟಿಸಿತು. ನಿಟ್ಟಿನ ನಿರ್ಣಯವನ್ನು ಪಂಜಾಬ್ ಸಚಿವ ಸಂಪುಟವು ಈದಿನ  ಅನುಮೋದಿಸಿತು.

ಇದರೊಂದಿಗೆ ಪಂಜಾಬ್ ರಾಜ್ಯವು ಒಡಿಶಾದ ಬಳಿಕ ಲಾಕ್ ಡೌನ್ ವಿಸ್ತರಿಸಿದ ಎರಡನೇ ರಾಜ್ಯ ಎನಿಸಿತು.. ಪ್ರಧಾನಿ ನರೇಂದ್ರ ಮೋದಿಯವರು ಮಾರಕ ಕೊರೋನಾವೈರಸ್ ಹರಡವುದನ್ನು ತಡೆಯುವ ಸಲುವಾಗಿ ಮಾರ್ಚ್ ೨೩ರಂದು ಮಾಡಿದ ರಾಷ್ಟ್ರವ್ಯಾಪಿ ಭಾಷಣದಲ್ಲಿ ಏಪ್ರಿಲ್ ೧೪ರವರೆಗೆ ರಾಷ್ಟ್ರವ್ಯಾಪಿ ಗಿಗ್ಬಂಧನ (ಲಾಕ್ ಡೌನ್) ಘೋಷಿಸಿದ್ದರು.

ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸಚಿವ ಸಂಪುಟವು  ದಿಗ್ಬಂಧನವನ್ನು ಏಪ್ರಿಲ್ ೩೦ರವರೆಗೆ ವಿಸ್ತರಿಸಲು ಸರ್ವಾನುಮತದ ಒಪ್ಪಿಗೆ ನೀಡಿದೆ ಎಂದು ವಿಶೇಷ ಮುಖ್ಯ ಕಾರ್‍ಯದರ್ಶಿ ಕೆಬಿಎಸ್ ಸಿಧು ಟ್ವೀಟ್ ಮಾಡಿದರು.

ಇಂದಿನಿಂದ ೨೧ ದಿನಗಳ ಕಾಲ ವಿಸ್ತರಣೆ, ಕಟ್ಟು ನಿಟ್ಟಿನ ಜಾರಿ ಎಂದೂ ಸಿಧು ತಮ್ಮ ಟ್ವೀಟಿನಲ್ಲಿ ತಿಳಿಸಿದರು.

ಶುಕ್ರವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಕೋವಿಡ್-೧೯ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ದಿಗ್ಬಂಧನ ಮತ್ತು ಕರ್ಫ್ಯೂ ನಿರ್ಬಂಧಗಳನ್ನು ಮುಂದುವರೆಸುವ ಅಗತ್ಯವಿದೆ ಎಂದು ತಮಗೆ ಅನ್ನಿಸಿದೆ ಎಂದು ಹೇಳಿದರು.

ಪಾಸಿಟಿವ್ ಕೋವಿಡ್-೧೯ ಪ್ರಕರಣಗಳು ವಿಶ್ವಾದ್ಯಂತ ಹೆಚ್ಚುತ್ತಿರುವ ರೀತಿಯಲ್ಲೇ ಭಾರತದಲ್ಲೂ ಹೆಚ್ಚುತ್ತಿವೆ. ಪಂಜಾಬನ್ನು ಅದರಿಂದ ಪ್ರತ್ಯೇಕಗೊಳಿಸಲು ಹೇಗೆ ಸಾಧ್ಯ? ಇತರ ರಾಜ್ಯಗಳಿಗೆ ಹೋಲಿಸಿದರೆ ನಾವು ಸಾಂಕ್ರಾಮಿಕ ರೋಗವನ್ನು ಒಂದು ಹಂತದಲ್ಲಿ ತಡೆದಿದ್ದೇವೆ. ಆದರೆ ಇದು ಹರಡುತ್ತದೆ. ನಾವು ಆಕಸ್ಮಿಕ ಯೋಜನೆಯನ್ನು ಸಿದ್ಧವಾಗಿ ಇಟ್ಟುಕೊಂಡಿದ್ದೇವೆ ಮತ್ತು ಸಾಮಾಜಿಕ ಸಂಪರ್ಕಗಳನ್ನು ಕಡಿಯಲು ದಿಗ್ಬಂಧನವು ಒಂದು ವಿಧಾನವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯವ್ಯಾಪಿ ದಿಗ್ಬಂಧನವನ್ನು ಮೊದಲು ಜಾರಿಗೊಳಿಸಿದ ರಾಜ್ಯಗಳ ಪೈಕಿ ಒಂದಾಗಿರುವ ಪಂಜಾಬ್ ಸಾರ್ವಜನಿಕ ಸಾರಿಗೆಯನ್ನು ಮೊತ್ತಮೊದಲ ಬಾರಿಗೆ ಸ್ಥಗಿತಗೊಳಿಸಿತ್ತು. ರಾಜ್ಯದಲ್ಲಿ ಈವರೆಗೆ ೧೩೨ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ.೧೧ ಸಾವುಗಳು ಸಂಭವಿಸಿವೆ.

ಉತ್ತರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಏಪ್ರಿಲ್ ೧೪ರಿಂದ ಆಚೆಗೆ ದಿಗ್ಬಂಧನವನ್ನು ವಿಸ್ತರಿಸಬೇಕು ಎಂಬುದಾಗಿ ಒತ್ತಾಯಿಸಿವೆ. ವೈರಸ್ಸನ್ನು ಒಂದೇ ಜಾಗದಲ್ಲಿ ದೀರ್ಘ ಕಾಲದವರೆಗೆ ಕೂಡಿಹಾಕಿದರೆ ಅದನ್ನು ನಿಭಾಯಿಸುವುದು ಸುಲಭ ಎಂದು ರಾಜ್ಯಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೮ರಂದು ವಿರೋಧ ಪಕ್ಷಗಳ ಜೊತೆಗಿನ ತಮ್ಮ ಸಂವಹನದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ಬಳಿಕ ಬದುಕು ಹಾಗೆಯೇ ಇರುವುದಿಲ್ಲ ಎಂದು ಹೇಳಿದ್ದರು. ಕೊರೋನಾಪೂರ್ವ ಮತ್ತು ಕೊರೋನೋತ್ತ ಕಾಲಗಳು ಬರಲಿವೆ ಎಂದು ಪ್ರಧಾನಿ ಹೇಳಿದ್ದರು.

ಮುಖ್ಯಮಂತ್ರಿಗಳು, ಜಿಲ್ಲಾ ಅಧಿಕಾರಿಗಳು, ತಜ್ಞರ ಜೊತೆಗೆ ನಾನು ನಿಯಮಿತವಾಗಿ ಮಾತನಾಡುತ್ತಿದ್ದೇನೆ. ಯಾರು ಕೂಡಾ ದಿಗ್ಬಂಧನ ತೆರವುಗೊಳಿಸುವಂತೆ ನನಗೆ ಹೇಳುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಾವು ಕಠಿನ ನಿಯಮಗಳ ಅಗತ್ಯವಿದೆ. ನಾವು ಹಲವಾರು ಅನಿರೀಕ್ಷಿತ ಕ್ರಮಗಳನ್ನೂ ಕೈಗೊಳ್ಳಬೇಕಾಗಿ ಬರಬಹುದು ಎಂದು ಮೋದಿ ರಾಜಕೀಯ ಪಕ್ಷಗಳ ನಾಯಕರಿಗೆ ಹೇಳಿದ್ದರು.

ಇದೇ ವೇಳೆಯಲ್ಲಿ ಈಗಾಗಲೇ ಮಂದಗತಿಗೆ ಇಳಿದಿರುವ ಆರ್ಥಿಕತೆಗೆ ರಾಷ್ಟ್ರವ್ಯಾಪಿ ದಿಗ್ಬಂಧನವು ಇನ್ನಷ್ಟು ಘಾಸಿ ಮಾಡಬಹುದು ಎಂದು ತಜ್ಞರು ಆತಂಕ ವ್ಯಕ್ತ ಪಡಿಸಿದ್ದಾರೆ.

No comments:

Advertisement