Thursday, April 9, 2020

ಕಾಸರಗೋಡು ಜಿಲ್ಲೆ: ಪೊಲೀಸರಿಂದ ಮನೆ ಮನೆಗೆ ಅಗತ್ಯವಸ್ತು ಸರಬರಾಜು

ಕಾಸರಗೋಡು ಜಿಲ್ಲೆ: ಪೊಲೀಸರಿಂದ ಮನೆ ಮನೆಗೆ ಅಗತ್ಯವಸ್ತು ಸರಬರಾಜು
ಕಾಸರಗೋಡು: ಕೊರೋನಾವೈರಸ್ ಹಾವಳಿಗೆ ತುತ್ತಾಗಿರುವ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹೇರಲಾಗಿರುವ ದಿಗ್ಬಂಧನದಿಂದ ತೊಂದರೆಗೆ ಒಳಗಾಗಿರುವ ಜನರಿಗೆ ಈಗ ಪೊಲೀಸರೇ ಅಗತ್ಯವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುವ ಕಾರ್ಯ ಆರಂಭಿಸಿದ್ದಾರೆ.

-ಕಾಮರ್ಸ್ ದೈತ್ಯ ಅಮೆಜಾನ್ಗಿಂತಲೂ ವೇಗವಾಗಿ ಜನರಿಗೆ ಪೊಲೀಸರು ಅಗತ್ಯ ವಸ್ತುಗಳನ್ನು ತಲುಪಿಸಲಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು 2020 ಏಪ್ರಿಲ್ 09ರ ಗುರುವಾರ  ಭರವಸೆ ನೀಡಿದರು.
ದಿನಸಿ ಸಾಮಗ್ರಿ, ಔಷಧಗಳಂತಹ ತಮ್ಮ ತಮ್ಮ ದೈನಂದಿನ ಅಗತ್ಯಗಳ ಪಟ್ಟಿಯನ್ನು ನಿವಾಸಿಗಳು ನೂತನ ಉಪಕ್ರಮದ ಭಾಗವಾಗಿ ಜಿಲ್ಲಾ ಪೊಲೀಸರು ಒದಗಿಸಿರುವ ವಾಟ್ಸಪ್ ನಂಬರುಗಳಿಗೆ ಕಳುಹಿಸಿದರಾಯಿತು. ಪಟ್ಟಿಯಲ್ಲಿರುವ ವಸ್ತುಗಳು ಅವರ ಮನೆಗಳಿಗೆ ಪೊಲೀಸರ ಮೂಲಕವೇ ಸರಬರಾಜು ಆಗುತ್ತವೆ. ಸಾರ್ವಜನಿಕ ಓಡಾಟವನ್ನು ಇನ್ನಷ್ಟು ನಿಯಂತ್ರಿಸುವ ಸಲುವಾಗಿ ಕೇರಳ ಪೊಲೀಸರು ಉಪಕ್ರಮ ಕೈಗೊಂಡರು..

ನೀವು ಅಗತ್ಯವಸ್ತುಗಳು ನಿಮ್ಮ ಮನೆಬಾಗಿಲಿಗೆ ಬರಬೇಕು ಎಂಬುದಾಗಿ ಬಯಸಿದರೆ, ಸರಳವಾಗಿ ಪೊಲೀಸರ ವಾಟ್ಸಪ್ ನಂಬರುಗಳಿಗೆ ಸಂದೇಶ ಕಳುಹಿಸಿ ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ ಸಖಾರೆ ಅವರು ಲಾಕ್ ಡೌನ್  ನಿರ್ಬಂಧಗಳಿಗೆ ಒಳಗಾಗಿರುವ ಜಿಲ್ಲೆಯ ಜನರಿಗೆ ಸೂಚಿಸಿದರು. ಕಾಸರಗೋಡು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-೧೯ ಸೋಂಕು ಪ್ರಕರಣಗಳು ದಾಖಲಾಗಿವೆ.

 ಅಗತ್ಯ ವಸ್ತುಗಳನ್ನು ಖರೀದಿಸಲು ದಿಗ್ಬಂಧನಕ್ಕೆ ಒಳಗಾಗಿರುವ ಜನರು  ತಮ್ಮ ಮನೆಗಳಿಂದ ಹೊರಗೆ ಬರಬೇಕಾಗಿಲ್ಲ ಎಂದು ಮನೆ ಮನೆಗೆ ಅಗತ್ಯವಸ್ತು ವಿತರಣೆ ಸೇವೆಯನ್ನು ಪ್ರಕಟಿಸುತ್ತಾ ಸಖಾರೆ ಹೇಳಿದರು. ಸಖಾರೆ ಅವರು ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸ್ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದಾರೆ.

ಪೊಲೀಸರೇ ಜನರ ಅಗತ್ಯ ವಸ್ತುಗಳನ್ನು ಅವರವರ ಮನೆ ಬಾಗಿಲಿಗೆ ತಲುಪಿಸುತ್ತಾರೆ ಎಂದು ಸಖಾರೆ ನುಡಿದರು.

ಅಮೆಜಾನ್ ಸೇವೆಗಳ ಜೊತೆ ಜಿಲ್ಲಾ ಪೊಲೀಸರ ಸೇವೆಯನ್ನು ಹೋಲಿಸಿದ ಅಧಿಕಾರಿ, ’ವಿಶ್ರಾಂತಿಯ ಖಾತರಿ ನೀಡಲಾಗಿದೆ, ಕಾಸರಗೋಡು ಪೊಲೀಸರ ಮನೆ ಮನೆ ವಿತರಣಾ ಸೇವೆ ಅಮೆಜಾನ್ಗಿಂತಲೂ ವೇಗವಾಗಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ನುಡಿದರು.

ನೀವು ಸರಳವಾಗಿ ಆಡಿಯೋ, ವಿಡಿಯೋ ಅಥವಾ ಬರಹದ ಸಂದೇಶವನ್ನು ನಮ್ಮ ವಾಟ್ಸಪ್ ನಂಬರುಗಳಿಗೆ ಕಳುಹಿಸಿ, ಸಾಕು ಎಂದು ತಮ್ಮ ಫೇಸ್ಬುಕ್ ಪುಟದಲ್ಲಿ ಸಖಾರೆ ಬರೆದರು.
ಪ್ರಾರಂಭದಲ್ಲಿ ಕೋವಿಡ್-೧೯ ಹತೋಟಿ ವಲಯಗಳಿಗಾಗಿ ಆರಂಭಿಸಲಾದ ಸೇವಾ ಉಪಕ್ರಮವನ್ನು ಈಗ ಇಡೀ ಜಿಲ್ಲೆಗೆ ವಿಸ್ತರಿಸಲಾಗಿದೆ.

ರಾಜ್ಯ ಸರ್ಕಾರದ ಪ್ರಕಾರ ಉತ್ತರ ಕೇರಳದ ಜಿಲ್ಲೆಯಲ್ಲಿ ೧೩೨ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇತರ ಹಲವರನ್ನು ನಿಗಾದಲ್ಲಿ ಇರಿಸಲಾಗಿದೆ.

ಮಾರಕ ವೈರಸ್ಸನ್ನು ಹರಡದಂತೆ ತಡೆಯುವ ಯತ್ನಗಳ ಭಾಗವಾಗಿ ಅತಿಬಾಧಿತ ಪ್ರದೇಶಗಳಿಂದ ಪ್ರತ್ಯೇಕಿಸುವ ಸಲುವಾಗಿ ಪೊಲೀಸರು ಏಳು ಕೋವಿಡ್ ಹತೋಟಿ ವಲಯಗಳನ್ನು (ಕೋವಿಡ್ ಕಂಟೈನ್ ಮೆಂಟ್ ಝೋನ್ಸ್ -ಸಿಸಿಝಡ್) ರಚಿಸಿದ್ದಾರೆ.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇದು ಆಟ ಬದಲಾಯಿಸುವ ದಾಳವಾಗಬಲ್ಲುದು ಎಂಬುದು ಸಾಬೀತಾಗುತ್ತಿದೆ ಎಂದು ಸಖಾರೆ ಬೊಟ್ಟು ಮಾಡಿದರು.

ಕೋಚಿ ನಗರದ ಪೊಲೀಸ್ ಕಮೀಷನರ್ ಆಗಿರುವ ಸಖಾರೆ ಅವರು ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದೃಢ ಪಡುತ್ತಿದ್ದಂತೆಯೇ ಇಲ್ಲಿನ ಕಾರ್ಯಾಚರಣೆಗಳ ಮೇಲ್ವಿಚಾರಣೆ ಸಲುವಾಗಿ ಸರ್ಕಾರದಿಂದ ನಿಯೋಜಿಸಲ್ಪಟ್ಟಿದ್ದರು.

No comments:

Advertisement