Tuesday, April 14, 2020

ಮೇ ೩ರವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಸ್ತರಣೆ: ಪ್ರಧಾನಿ ಮೋದಿ ಘೋಷಣೆ

 ಮೇ ೩ರವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಸ್ತರಣೆ
ಒಂದು ವಾರ ಅತ್ಯಂತ ಬಿಗಿ: ಪ್ರಧಾನಿ ಮೋದಿ ಘೋಷಣೆ
ನವದೆಹಲಿ: ಕೊರೋನಾ ಇನ್ನಷ್ಟು ಹರಡಲು ಭಾರತ ಅವಕಾಶ ನೀಡುವುದಿಲ್ಲ, ಆದ್ದರಿಂದ ಮಾರ್ಚ್ ೨೫ರಿಂದ ಜಾರಿಯಲ್ಲಿರುವ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್‌ಡೌನ್) ಇನ್ನೂ ೧೯ ದಿನ, ಮೇ ೦೩ರವರೆಗೆ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 14ರ ಮಂಗಳವಾರ ಘೋಷಿಸಿದರು.

ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಬೆಳಗ್ಗೆ ಮಾಡಿದ ಬಾಷಣದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮೇ ೩ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಕಟಿಸಿದ ಪ್ರಧಾನಿ, ಮುಂದಿನ ಒಂದು ವಾರ ಕಾಲ ದಿಗ್ಬಂಧನ ಅವಧಿಯಲ್ಲಿ ಅತ್ಯಂತ ಬಿಗಿಯಾದ ಕಟ್ಟುನಿಟ್ಟು ಅನುರಿಸಲಾಗುವುದು ಎಂದು ಎಂದು ಹೇಳಿದರು.

ಏಪ್ರಿಲ್ ೨೦ರವರೆಗೆ ಅತ್ಯಂತ ಬಿಗಿಯಾದ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ. ಎಲ್ಲ ಪ್ರದೇಶಗಳಲ್ಲೂ ಲಾಕ್‌ಡೌನ್ ನಿಯಮಾವಳಿಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನಿಗಾ ವಹಿಸಲಾಗುವುದು ಮತ್ತು ನಿಯಮಗಳ ಪಾಲನೆಯಾಗುತ್ತಿದೆಯೇ ಎಂಬುದಾಗಿ ಗಮನಿಸಲಾಗುವುದು. ಸಮರ್ಪಕವಾಗಿ ಲಾಕ್ ಡೌನ್ ನಿಯಮಗಳನ್ನು ಅನುಸರಿಸಿದ ಮತ್ತು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಸ ಪ್ರಕರಣಗಳು ಕಂಡು ಬರದ ಜಾಗಗಳಲ್ಲಿ ವಾರದ ಬಳಿಕ ನಿಯಮಗಳನ್ನು ಸ್ವಲ್ಪ ಸಡಿಲಿಸಲಾಗುವುದು ಎಂದು ಪ್ರಧಾನಿ ನುಡಿದರು.

ಲಾಕ್‌ಡೌನ್ ನಿಯಮಾವಳಿಗೆ ಸಂಬಂಧಿಸಿದಂತೆ ವಿಸೃತ ಮಾರ್ಗದರ್ಶಿ ಸೂತ್ರವನ್ನು ಬುಧವಾರ (ಏಪ್ರಿಲ್ ೧೫) ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಅವರು ನುಡಿದರು. ಮಾರ್ಗದರ್ಶಿ ಸೂತ್ರಗಳನ್ನು ರಚಿಸುವಾಗ ರೈತರು ಮತ್ತು ದಿನಗೂಲಿ ಕಾರ್ಮಿಕರ ಸಂಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಪ್ರಧಾನಿ ನುಡಿದರು.

ಕಳೆದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನದ ಅವಧಿಯಲ್ಲಿ ಶಿಸ್ತಿನ ಸಿಪಾಯಿಗಳಂತೆ ಜನರು ತೋರಿದ ಸಂಯಮ ಮತ್ತು ಪ್ರಬುದ್ಧತೆಯನ್ನು ಶ್ಲಾಘಿಸಿದ ಪ್ರಧಾನಿ ಸಂಯಮ, ಶಿಸ್ತು ಮತ್ತು ಒಗ್ಗಟ್ಟನ್ನು ಕಂಡು ಇಡೀ ವಿಶ್ವವೇ ಬೆರಗಾಗಿದೆ ಎಂದು ಹೇಳಿದರು. ಎಲ್ಲಾ ಸಂಕಷ್ಟಗಳನ್ನೂ ಮೀರಿ ದೇಶದ ಜನತೆ ದಿಗ್ಬಂಧನವನ್ನು ಯಶಸ್ವಿಗೊಳಿಸಿರುವುದಕ್ಕೆ ನಾನು ದೇಶವಾಸಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನೂ ಒಂದು ವಾರ ಕಠಿಣವಾದ ಲಾಕ್‌ಡೌನ್ ಇರುತ್ತದೆ. ಕೊರೋನಾ ಕಂಡುಬಂದಿರುವ ಪ್ರದೇಶಗಳಲ್ಲಿ ಇದು ಹೆಚ್ಚು ಪ್ರಬಲವಾಗಿರುತ್ತದೆ. ಯಾರಿಗೂ ಯಾವುದೇ ರೀತಿಯ ವಿನಾಯಿತಿ ಇರುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ ಅವರನ್ನು ೧೩೦ನೇ ಜಯಂತಿಯ ಅಂಗವಾಗಿ ನಮಿಸುವ ಮೂಲಕ ಮೋದಿ ತಮ್ಮ ಭಾಷಣ ಆರಂಭಿಸಿದರು. ಲಾಕ್‌ಡೌನ್‌ನಿಂದಾಗಿ ನೀವೆಲ್ಲ ಅನುಭವಿಸಿದ ಸಂಕಷ್ಟಗಳ ಅರಿವು ನನಗಿದೆ. ಕೆಲವರಿಗೆ ಓಡಾಡಲು ತೊಂದರೆಯಾಯಿತು. ಕೆಲವರಿಗೆ ಊಟಕ್ಕೂ ತೊಂದರೆಯಾಯಿತು. ಎಲ್ಲರ ಸಹಕಾರದಿಂದ ನಾವು ಕೊರೋನಾ ವಿರುದ್ಧ ಹೋರಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಇನ್ನೂ ವಾರ ಲಾಕ್ ಡೌನ್ ವಿಸ್ತರಣೆ ಅನಿವಾರ್ಯ. ಇನ್ನು ಒಂದು ವಾರ ಇದು ಇನ್ನಷ್ಟು ಕಠಿಣವಾಗರುತ್ತದೆ. ನಿಮ್ಮ ಸ್ಪಂದನೆ ನೋಡಿ ಸಡಿಲಿಸುವ ಬಗ್ಗೆ ಯೋಚಿಸಲಾಗುವುದು. ನಿಮ್ಮೆಲ್ಲರ ತ್ಯಾಗ, ತಪಸ್ಸು ನನ್ನ ಗಮನದಲ್ಲಿದೆ. ಆದರೆ ಅದು ಅನಿವಾರ್ಯವಾಗಿದೆ. ಅದಕ್ಕೆ ರಾಷ್ಟ್ರ ಗೌರವ ಸಲ್ಲಿಸುತ್ತದೆ, ವಿಶ್ವಕಲ್ಯಾಣಕ್ಕಾಗಿ, ಭಾರತ ಕಲ್ಯಾಣಕ್ಕಾಗಿ ಎಲ್ಲರೂ ಕೈ ಜೋಡಿಸೋಣ. ಕೊರೋನಾ ವಿರುದ್ಧ ಹೋರಾಡುತ್ತಿರುವವರಿಗೆಲ್ಲ ನಮನ ಸಲ್ಲಿಸೋಣ ಎಂದು ಅವರು ಹೇಳಿದರು.

ದಿಗ್ಬಂಧನ ಸಮಯದಲ್ಲಿ ನಾವು ತೋರಿದ ಒಗ್ಗಟ್ಟು ಪ್ರದರ್ಶನವು ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ವಿಜಯದ ಕಡೆಗೆ ದೇಶ ಇರಿಸಿದ ಹೆಜ್ಜೆಯಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಧಾನಿ ಮೋದಿ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತವು ಕೊರೊನಾ ವೈರಸ್ ವಿರುದ್ಧ ಕೈಗೊಂಡಿರುವ ಸಕಾಲಿಕವಾದ ಸಮಗ್ರ ಕ್ರಮಗಳು ಪರಿಣಾಮಕಾರಿಯಾಗಿವೆ. ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ ಎಂದು ಪ್ರಧಾನಿ ವಿವರಿಸಿದರು. ಆರಂಭದಿಂದಲೇ ವಿದೇಶದಿಂದ ವಿಮಾನದ ಮೂಲಕ ಬಂದವರನ್ನೆಲ್ಲ ನಾವು ಕ್ವಾರಂಟೈನ್ ಮಾಡಿದ್ದೇವೆ. ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ. ಹಾಗಾಗಿಯೇ ಕೊರೋನಾವನ್ನು ಇಷ್ಟು ನಿಯಂತ್ರಿಸಲು ನಮಗೆ ಸಾಧ್ಯವಾಗಿದೆ ಎಂದು ಪ್ರಧಾನಿ ನುಡಿದರು.

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ನಾವು ಆಯ್ಕೆ ಮಾಡಿದ ಹಾದಿ ಸರಿಯಾಗಿದ್ದು, ಇನ್ನೂ ಮುಂದೆಯೂ ಇದೇ ಹಾದಿಯಲ್ಲಿ ಸಾಗಬೇಕಾಗಿದೆ ಎಂದು ಪ್ರಧಾನಿ ನುಡಿದರು.

ದಿಗ್ಬಂಧನ ಅವಧಿಯಲ್ಲಿ ಜನರು ಹಲವಾರು ರೀತಿಯ ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ. ದೇಶ ಬಲವಾದ ಆರ್ಥಿಕ ಪೆಟ್ಟನ್ನು ತಿಂದಿದೆ ಎಂಬುದೂ ನಿಜ. ಆದರೆ ಆರ್ಥಿಕ ಹೊಡೆತವನ್ನು ಸಹಿಸಿಕೊಂಡಾದರೂ ಸರಿ ದೇಶವಾಸಿಗಳ ಜೀವ ರಕ್ಷಣೆಗೆ ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಎಂದು ಪ್ರಧಾನಿ ಮೋದಿ ದೇಶಕ್ಕೆ ಭರವಸೆ ನೀಡಿದರು.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ತಜ್ಞರ ಜೊತೆಗೆ ನಾನು ಸಮಾಲೋಚನೆ ನಡೆಸಿದ್ದೇನೆ. ಎಲ್ಲ ಕಡೆಯಿಂದಲೂ ಲಾಕ್‌ಡೌನ್ ವಿಸ್ತರಿಸಬೇಕೆಂಬ ಮಾತುಗಳೇ ಕೇಳಿ ಬಂದಿವೆ. ಕಾರಣದಿಂದಲೇ ದಿಗ್ಬಂಧನವನ್ನು ಮೇ ೩ರವರೆಗೆ ವಿಸ್ತರಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು.

ಸೌರಮಾನ ಯುಗಾದಿಯ ಅಂಗವಾಗಿಯೂ ದೇಶದ ಜನತೆಗೆ ಪ್ರಧಾನಿ ಶುಭ ಹಾರೈಸಿದರು.

ಪ್ರಧಾನಿ ಸಪ್ತಸೂತ್ರಗಳು
ಇದೇ ಸಂದರ್ಭದಲ್ಲಿ ದಿಗ್ಬಂಧನವೇಳೆಯಲ್ಲಿ ಜನರಿಂದ ಏಳು ವಿಚಾರಗಳಲ್ಲಿ ಅತ್ಯಗತ್ಯ ಸಹಕಾರವನ್ನು ಪ್ರಧಾನಿ ಕೋರಿದರು. ಏಳು ಹೆಜ್ಜೆಗಳನ್ನು (ಸಪ್ತಪದಿ/ ಸಪ್ತಸೂತ್ರ) ತಪ್ಪದೆ ಪಾಲಿಸಬೇಕು ಎಂದು ಅವರು ಹೇಳಿದರು.
* ವೃದ್ಧರ ಮೇಲೆ ಹೆಚ್ಚು ನಿಗಾ ಇರಿಸಿ, ವಿಶೇಷವಾಗಿ ಅನಾರೋಗ್ಯ ಇರುವವರ ಮೇಲೆ ವಿಶೇಷ ಕಾಳಜಿ ಇರಲಿ.
* ಲಾಕ್‌ಡೌನ್, ಸಾಮಾಜಿಕ ಅಂತರದ ಲಕ್ಷ್ಮಣ ರೇಖೆ ಮೀರಬೇಡಿ.
* ರೋಗ ನಿರೋಧಕ ಶಕ್ತಿ (ಇಮ್ಯುನಿಟಿ) ಹೆಚ್ಚಿಸಿಕೊಳ್ಳಲು ಮನೆಯಲ್ಲಿ ಸಿದ್ಧಪಡಿಸಿದ ಮಾಸ್ಕ್ ಬಳಸಿ, ಆರೋಗ್ಯ ಇಲಾಖೆ, ಆಯುಷ್ ಸಚಿವಾಲಯ ನೀಡಿದ ಸೂಚನೆಗಳನ್ನು ಅನುಸರಿಸಿ.
* ಕೊರೊನಾ ಹರಡುವಿಕೆ ತಡೆಗೆ ಆರೋಗ್ಯ ಸೇತು ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ಇತರರಿಗೂ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪ್ರೇರೇಪಿಸಿ.
* ಬಡವ ಬಂಧುಗಳಿಗೆ ಊಟ ಸಹಿತ ಸಾಧ್ಯವಿರುವಷ್ಟು ನೆರವು ನೀಡಿ. ವ್ಯವಸಾಯ ಉದ್ಯೋಗದಲ್ಲಿ ಸಹೋದ್ಯೋಗಿಗಳ ಸ್ಥಿತಿ ಬಗ್ಗೆ ಕರುಣೆಯಿರಲಿ.
* ಉದ್ಯೋಗ ಕತ್ತರಿ ಕ್ರಮ ಬೇಡ. ನಿಮ್ಮ ಜೊತೆ ಕೆಲಸ ಮಾಡುವವರನ್ನು ಆತ್ಮೀಯತೆಯಿಂದ ನೋಡಿಕೊಳ್ಳಿ
* ಕೊರೊನಾ ಯೋಧರಾದ ವೈದ್ಯರು, ನರ್ಸ್, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸ್ವಚ್ವತಾ ಕಾರ್ಮಿಕರ ಬಗ್ಗೆ ಗೌರವ, ಆದರ ತೋರಿಸಿ.

ಮುನ್ಸೂಚನೆ:
ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಕೆಲವೊಂದು ಸಡಿಲಿಕೆಗಳೊಂದಿಗೆ ಏಪ್ರಿಲ್ ಅಂತ್ಯದವರೆಗೆ ರಾಷ್ಟ್ರವ್ಯಾಪಿ ದಿಗ್ಬಂಧನ ಮುಂದುವರೆಯಬಹುದು ಎಂಬ ಸೂಚನೆಗಳು ಪ್ರಧಾನಿಯವರ ಭಾಷಣಕ್ಕೆ ಮುನ್ನವೇ ಲಭಿಸಿದ್ದವು.

ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಸಂವಹನ ಕಾಲದಲ್ಲಿ ಪ್ರಧಾನಿ ಮೋದಿ ಅವರು ಸಾಮಾಜಿಕ ಅಂತರ ಪಾಲನೆಗಾಗಿ ಲಾಕ್ ಡೌನ್ ವಿಸ್ತರಿಬಹುದು ಮತ್ತು ಜೀವ ಮತ್ತು ಜೀವನದ ರಕ್ಷಣೆಗಾಗಿ ಕೆಲವು ಪ್ರಮುಖ ಕ್ರಮಗಳನ್ನು ಪ್ರಕಟಿಸಬಹುದು ಎಂಬ ಸುಳಿವು ನೀಡಿದ್ದರು. ಲಾಕ್‌ಡೌನ್ ಘೋಷಿಸುವಾಗ ನಾನು ಜಾನ್ ಹೈ ತೊ ಜಹಾನ್ ಹೈ (ಜೀವ ಇದ್ದರೆ ಜಗತ್ತು) ಎಂದು ಹೇಳಿದ್ದೆ. ಬಹುತೇಕ ಜನರು ಅದನ್ನು ಅರ್ಥ ಮಾಡಿಕೊಂಡು ಮನೆಗಳ ಒಳಗೇ ಉಳಿಯುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರು.ಈಗ ಭಾರತದ ಭವ್ಯ ಭವಿಷ್ಯ ಹಾಗೂ ಸಮೃದ್ಧ, ಆರೋಗ್ಯಶಾಲಿ ಸಮಾಜಕ್ಕಾಗಿ ಎರಡೂ - ಜಾನ್ ಭಿ ಜಹಾನ್ ಭಿ (ಜೀವ ಮತ್ತು ಜಗತ್ತು) ಅಂಶಗಳ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದು ಮೋದಿ ಹೇಳಿದ್ದರು.  
ಕನಿಷ್ಠ ಮಹಾರಾಷ್ಟ್ರ, ಒಡಿಶಾ, ಪಂಜಾಬ್, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ಏಳು ರಾಜ್ಯಗಳು ಈಗಾಗಲೇ ದಿಗ್ಬಂಧನವನ್ನು ಏಪ್ರಿಲ್ ೩೦ರವರೆಗೆ ವಿಸ್ತರಿಸಿವೆ.

No comments:

Advertisement