My Blog List

Wednesday, April 15, 2020

ಮೊರಾದಾಬಾದ್: ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಕಲ್ಲು

ಮೊರಾದಾಬಾದ್: ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಕಲ್ಲು
ಲಕ್ನೋ: ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಶಂಕಿತ ಕೊರೋನಾವೈರಸ್ ಸೋಂಕಿತ ರೋಗಿಯೊಬ್ಬರನ್ನು ಆಸ್ಪತ್ರೆಗೆ ಒಯ್ಯಲು ಹೋದ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ಮೇಲೆ ಕುಟುಂಬ ಸದಸ್ಯರು ಮತ್ತು ಆಸುಪಾಸಿನ ನಿವಾಸಿಗಳು ಕಲ್ಲೆಸೆದ ಘಟನೆ 2020 ಏಪ್ರಿಲ್ 15ರ ಬುಧವಾರ ಬಿಡುಗಡೆ ಘಟಿಸಿತು.

ಮೊರಾದಾಬಾದ್ ಜಿಲ್ಲೆಯ ನವಾಬ್ ಪುರದ ನಾಗಫಾನಿಯಲ್ಲಿ ಈ ಘಟನೆ ಘಟಿಸಿತು. ಸ್ಥಳೀಯರ ಕಲ್ಲು ತೂರಾಟದಿಂದ ಹಲವಾರು ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ಆಂಬುಲೆನ್ಸ್ ಮತ್ತು ಎರಡು ಪೊಲೀಸ್ ವಾಹನಗಳೂ ಹಾನಿಗೊಂಡವು.

ಘಟನೆಯನ್ನು ಅನುಸರಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ಅಡಿಯಲ್ಲಿ ದಾಳಿಕೋರರ ವಿರುದ್ಧ ಕಠಿಣ ಆರೋಪಗಳನ್ನು ಹೊರಿಸಿ ಕ್ರಮ ಕೈಗೊಳ್ಳಲು ಆಡಳಿತವು ನಿರ್ಧರಿಸಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.

ವರದಿಗಳ ಪ್ರಕಾರ ವ್ಯಕ್ತಿಯೊಬ್ಬ ಅಸ್ವಸ್ಥನಾಗಿದ್ದು ಆತನ್ನು ತೀರ್ಥಂಕರ ಮಹಾವೀರ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆತನ ಗಂಟಲ ದ್ರವದ ಮಾದರಿಗಳನ್ನು ಏಪ್ರಿಲ್ ೯ರಂದು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಏಪ್ರಿಲ್ ೧೨ರಂದು ವರದಿ ಬಂದಾಗ ಆತನಿಗೆ ಕೊರೋನಾವೈರಸ್ ಸೋಂಕು ತಗುಲಿದ್ದ ದೃಢಪಟ್ಟಿತ್ತು. ಅಸ್ವಸ್ಥ ವ್ಯಕ್ತಿ ಅದೇ ದಿನ ರಾತ್ರಿ ಮೃತನಾಗಿದ್ದ. ಆತನ ಕುಟುಂಬದ ಕೆಲವು ಸದಸ್ಯರನ್ನು ಐಎಫ್ ಟಿಎಂ ವಿಶ್ವವಿದ್ಯಾಲಯದ ಘಟಕದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ತಂಡ ಬುಧವಾರ ಮೃತ ರೋಗಿಯ ತಮ್ಮ ಜ್ವರದಿಂದ ನರಳುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಒಯ್ಯಲು ಆತನ ಮನೆಗೆ ಆಗಮಿಸಿತ್ತು.

ಆರೋಗ್ಯ ಕಾರ್ಯಕರ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ತಪ್ಪಿತಸ್ಥರನ್ನು ಗುರುತಿಸಿ ಅವರ ವಿರುದ್ಧ ಎನ್‌ಎಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಎಂದು ಮುಖ್ಯಮಂತ್ರಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

‘ಶಂಕಿತ ರೋಗಿ ಮತ್ತು ಆತನ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ನಾವು ಹೋಗಿದ್ದಾಗ, ದಿಢೀರನೆ ಜನರ ದೊಡ್ಡ ಗುಂಪೊಂದು ಅಲ್ಲಿಗೆ ಬಂದು ಕ್ವಾರಂಟೈನ್ ಘಟಕದಲ್ಲಿ ಇರುವವರಿಗೆ ಆಹಾರ ಕೊಡುತ್ತಿಲ್ಲ, ಆದ್ದರಿಂದ ರೋಗಿಯನ್ನು ಒಯ್ಯಲು ತಾವು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು ಎಂದು ಹಾನಿಗೀಡಾದ ಅಂಬುಲೆನ್ಸ್ ಚಾಲಕ ತಿಳಿಸಿದರು.

ಕೆಲವು ಪೊಲೀಸರು ಮಧ್ಯಪ್ರವೇಶ ಮಾಡಿದಾಗ ಪರಿಸ್ಥಿತಿ ವಿಷಮಿಸಿತು ಮತ್ತು ಗುಂಪು ಕಲ್ಲೆಸೆಯಲು ಆರಂಭಿಸಿತು ಎಂದು ಅವರು ನುಡಿದರು.

ಮುಜಾಫ್ಫರನಗರದ ಮೊರ್‍ನಾ ಗ್ರಾಮದಲ್ಲೂ ನಿವಾಸಿಗಳು ಬಡಿಗೆ ಮತ್ತು ಕಬ್ಬಿಣದ ಸರಳುಗಳೊಂದಿಗೆ ಪೊಲಿಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ ಘಟನೆ ಘಟಿಸಿತ್ತು. ಲಾಕ್ ಡೌನ್ ಸಮಯದಲ್ಲಿ ಗುಂಪುಸೇರುವುದನ್ನು ಆಕ್ಷೇಪಿಸಿದಾಗ ಪೊಲೀಸರ ಮೇಲೆ ಈ ದಾಳಿ ನಡೆದಿತ್ತು.

ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತೆಗೆ ಒಯ್ಯಬೇಕಾಗಿ ಬಂದಿತ್ತು. ಅವರ ಪೈಕಿ ಇಬ್ಬರನ್ನು ಬಳಿಕ ಮೀರತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೊರಾದಾಬಾದ್ ಜಿಲ್ಲೆಯಲ್ಲಿ ಈವರೆಗೆ ೧೯ ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು. ಒಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾನೆ. ರಾಜ್ಯದಲ್ಲಿ ಕೊರೋನಾವೈರಸ್ ಸೋಂಕು ತಗುಲಿದವರ ಸಂಖ್ಯೆ ೬೬೦ಕ್ಕೆ ಏರಿದೆ. ೧೦೨ ಹೊಸ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ಮಂಗಳವಾರ ವರದಿಯಾಗಿದ್ದವು.

ರಾಜ್ಯಾದ್ಯಂತ ಎಂಟು ಸಾವುಗಳು ದಾಖಲಾಗಿದ್ದು, ಬಸ್ತಿ, ಮೀರತ್, ವಾರಾಣಸಿ, ಬುಲಂದಶಹರ, ಮೊರಾದಾಬಾದಿನಲ್ಲಿ ತಲಾ ಒಬ್ಬರು ಮತ್ತು ಆಗ್ರಾದಲ್ಲಿ ಮೂವರು ಅಸು ನೀಗಿದ್ದರು.

ಗುಂಪು ಪರೀಕ್ಷೆ: ಈ ಮಧ್ಯೆ, ಸಮುದಾಯ ವರ್ಗಾವಣೆ ಸಾಧ್ಯತೆಯ ಹಿನ್ನೆಲೆಯಲ್ಲಿ ಮಾದರಿಗಳ ಗುಂಪು ಪರೀಕ್ಷೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಅನುಮತಿ ಪಡೆದ ಮೊದಲ ರಾಜ್ಯ ಎಂಬ ಹೆಸರಿಗೆ ಉತ್ತರ ಪ್ರದೇಶ ಭಾಜನವಾಗಿದೆ.

‘ಹಲವಾರು ಮಾದರಿಗಳನ್ನು ಒಂದೇ ಸಲಕ್ಕೆ ಪರೀಕ್ಷೆ ಮಾಡಲು ಐಸಿಎಂಆರ್ ಅನುಮತಿ ನೀಡಿದೆ. ಇದು ರಾಜ್ಯದ ಆರೋಗ್ಯ ಇಲಾಖೆಯ ಪರೀಕ್ಷಾ ಸಾಮರ್ಥ್ಯಕ್ಕೆ ಒತ್ತು ಕೊಡಲಿದೆ. ಇದಕ್ಕೆ ಸಂಬಂಧಿಸಿದ ಶಿಷ್ಟಾಚಾರವನ್ನು ಶೀಘ್ರವೇ ನಿರ್ಧರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮುಖ್ಯ ಕಾರ್‍ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಮಂಗಳವಾರ ಹೇಳಿದ್ದರು.

No comments:

Advertisement