My Blog List

Monday, April 13, 2020

ಖಾಸಗಿ ಕೊರೋನಾ ಪರೀಕ್ಷೆ ಬಡವರಿಗೆ ಮಾತ್ರ ಉಚಿತ: ಸುಪ್ರೀಂಕೋರ್ಟ್ ತಿದ್ದುಪಡಿ

ಖಾಸಗಿ ಕೊರೋನಾ ಪರೀಕ್ಷೆ ಬಡವರಿಗೆ ಮಾತ್ರ ಉಚಿತ
ಸುಪ್ರೀಂಕೋರ್ಟಿನಿಂದ ತೀರ್ಪಿಗೆ ತಿದ್ದುಪಡಿ
ನವದೆಹಲಿ: ಖಾಸಗಿ ಪ್ರಯೋಗಾಲಯಗಳು (ಲ್ಯಾಬೋರೇಟರಿಗಳು) ಪ್ರತಿಯೊಬ್ಬರಿಗೂ ಕೊರೋನಾ (ಕೋವಿಡ್-೧೯) ಪರೀಕ್ಷೆಯನ್ನು ಉಚಿತವಾಗಿ ನಡೆಸಬೇಕು ಎಂಬುದಾಗಿ ಕಳೆದವಾರ ನೀಡಿದ್ದ ತನ್ನ ತೀರ್ಪನ್ನು ಸುಪ್ರೀಂಕೋರ್ಟ್  2020 ಏಪ್ರಿಲ್ 13ರ ಸೋಮವಾರ ತಿದ್ದುಪಡಿ ಮಾಡಿದ್ದು, ಬಡವರಿಗೆ ಮಾತ್ರ ಖಾಸಗಿ ಕೋವಿಡ್ ಪರೀಕ್ಷೆ ಉಚಿತ ಎಂದು ಹೇಳಿತು.

ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಸ್. ರವೀಂದ್ರ ಭಟ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವುಪರೀಕ್ಷೆಗಾಗಿ ೪೫೦೦ ರೂಪಾಯಿ ಪಾವತಿ ಮಾಡಲು ಸಾಧ್ಯವಿಲ್ಲದೇ ಇರುವ ಜನರಿಗೆ ಮಾತ್ರ ಖಾಸಗಿ ಪ್ರಯೋಗಾಲಯಗಳು ಉಚಿತವಾಗಿ ಪರೀಕ್ಷೆಯನ್ನು ನಡೆಸಬೇಕು ಎಂದು ಆಜ್ಞಾಪಿಸಿತು.

ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಅರ್ಹರಾದ ವ್ಯಕ್ತಿಗಳು ಪರೀಕ್ಷೆಗಾಗಿ ಪಾವತಿ ಮಾಡಬೇಕಾಗಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳು ಶುಲ್ಕರಹಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದಾದ ಆರ್ಥಿಕ ದುರ್ಬಲ ವರ್ಗಗಳ ಬಗ್ಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದರು.

ಯಾವುದೇ ಸಂದರ್ಭದಲ್ಲೂ ಖಾಸಗಿ ಪ್ರಯೋಗಾಲಯಗಳು ಉಚಿತ ಪರೀಕ್ಷೆಯ ಆರ್ಥಿಕ ಹೊರೆಯನ್ನು ಹೊರಬೇಕಾಗಿಲ್ಲ. ಖಾಸಗಿ ಪ್ರಯೋಗಾಲಯಗಳು ನಡೆಸುವ ಉಚಿತ ಪರೀಕ್ಷೆಗಳ ವೆಚ್ಚವನ್ನು ಮರುಪಾವತಿ ಮಾಡುವ ಬಗ್ಗೆ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕು ಎಂದೂ ಪೀಠ ಸೂಚಿಸಿತು.

No comments:

Advertisement