Friday, May 22, 2020

ಪಾಕ್ ವಿಮಾನ ಪತನ: 100ಕ್ಕೂ ಹೆಚ್ಚು ಸಾವು?

ಪಾಕ್ ವಿಮಾನ ಪತನ:  100ಕ್ಕೂ ಹೆಚ್ಚು ಸಾವು?
ನವದೆಹಲಿ: ಕನಿಷ್ಠ ೯೯ ಮಂದಿ ಪ್ರಯಾಣಿಕರು ಇದ್ದ ಪಾಕಿಸ್ತಾ ಇಂಟರ್ ನ್ಯಾಷನಲ್ ಏರ್ ಲೈನ್ಸ್ (ಪಿಐಎ) ವಿಮಾನವೊಂದು ಕರಾಚಿಯ ಸಮೀಪ 2020 ಮೇ 22ರ ಶುಕ್ರವಾರ ಭೀಕರವಾಗಿ ಪತನಗೊಂಡಿದ್ದು, ಕನಿಷ್ಠ ಇಬ್ಬರು ಪಾರಾಗಿದ್ದಾರೆ ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. 100ಕ್ಕೂ ಹೆಚ್ಚು ಮಂದಿ ಅಸು ನೀಗಿರುವರೆಂದು ಶಂಕಿಸಲಾಯಿತು.
ವಿಮಾನ ದುರಂತದಲ್ಲಿ ಅದರಲ್ಲಿ ಇದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಕರಾಚಿಯ ಮೇಯರ್ ಇದಕ್ಕೆ ಮುನ್ನ ತಿಳಿಸಿದ್ದರು. ಆದಾಗ್ಯೂ, ಭೀಕರ ದುರಂತದಲ್ಲಿ ಕನಿಷ್ಠ ಇಬ್ಬರು ಪಾರಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಇಬ್ಬರು ಅಧಿಕಾರಿಗಳು ನುಡಿದರು.

ವಿಮಾನ ಅಪಘಾತದಲ್ಲಿ ಬದುಕಿ ಉಳಿದವನೆಂದು ಹೇಳಲಾದ ವ್ಯಕ್ತಿಯೊಬ್ಬನನ್ನು ಸ್ಟ್ರೆಚರ್ ನಲ್ಲಿ ಒಯ್ಯುತ್ತಿದ್ದ ವಿಡಿಯೋ ದೃಶ್ಯಾವಳಿಗಳನ್ನು ಪಾಕಿಸ್ತಾನ ಸ್ಥಳೀಯ ಟೆಲಿವಿಷನ್ ಜಾಲಗಳು ಪ್ರಸಾರ ಮಾಡಿವೆ.

ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಂಚಿನಲ್ಲಿ ಇರುವ ಕಿಕ್ಕಿರಿದ ಜನವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ವರದಿಗಳು ಹೇಳಿವೆ.

೨೪ ನ್ಯೂಸ್ ಪ್ರೋಗ್ರಾಮಿಂಗ್ ಡೈರೆಕ್ಟರ್ ಅನ್ಸರ್ ನಖ್ವಿ ಮತ್ತು ಬ್ಯಾಂಕ್ ಆಫ್ ಪಂಜಾಬ್ ಅಧ್ಯಕ್ಷ ಜಾಫರ್ ಮಸೂದ್ ಅವರು ವಿಮಾನದ ಪ್ರಯಾಣಿಕರಲ್ಲಿ ಸೇರಿದ್ದರು. ಮಸೂದ್ ಅವರು ವಿಮಾನ ಅಪಘಾತದಲ್ಲಿ ಪಾರಾಗಿದ್ದಾರೆ ಎಂದು ಅವರ ಕುಟುಂಬ ದೃಢ ಪಡಿಸಿದೆ.

ಪಾಕಿಸ್ತಾನದ ಜಿಯೋ ನ್ಯೂಸ್ ಪ್ರಕಾರ ಬ್ಯಾಂಕ್ ಆಫ್ ಪಂಜಾಬ್ (ಬಿಒಪಿ) ಮುಖ್ಯ ಕಾರ್ ನಿರ್ವಹಣಾ ಅಧಿಕಾರಿ (ಸಿಇಒ) ಜಾಫರ್ ಮಸೂದ್ ಬದುಕಿ ಉಳಿದವರಲ್ಲಿ ಸೇರಿದ್ದಾರೆ. ಮಸೂದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸಹೋದರ ಜೊತೆಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

ಏರ್ ಬಸ್ ೩೨೦ ಕರಾಚಿ ವಿಮಾನ ನಿಲ್ದಾಣದ ಸಮೀಪ ವಸತಿ ಪ್ರದೇಶದಲ್ಲಿ ನೆಲಕ್ಕೆ ಅಪ್ಪಳಿಸುವ ಮುನ್ನ ಕನಿಷ್ಠ - ಬಾರಿ ಕೆಳಕ್ಕೆ ಇಳಿಯಲು ಯತ್ನಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಲವಾರು ಗಾಯಾಳುಗಳನ್ನು ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಒಬ್ಬರನ್ನು ಸುಟ್ಟ ಗಾಯಗಳ ವಿಭಾಗಕ್ಕೆ ದಾಖಲಿಸಲಾಯಿತು ಎಂದು ಮೂಲಗಳು ಹೇಳಿವೆ.

ಪ್ರಧಾನಿ ಮೋದಿ ಸಂತಾಪ:
ಪಾಕ್ ವಿಮಾನ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಘಾತ ಹಾಗೂ ಸಂತಾಪ ವ್ಯಕ್ತ ಪಡಿಸಿದ್ದಾರೆ.

No comments:

Advertisement