My Blog List

Friday, May 1, 2020

ಉದ್ಧವ್ ಗೆ ನಿರಾಳತೆ: ಪರಿಷತ್ ಸ್ಥಾನಗಳಿಗೆ ಚುನಾವಣೆ, ರಾಜ್ಯಪಾಲರ ಸೂಚನೆ

ಉದ್ಧವ್ ಗೆ ನಿರಾಳತೆ: ಪರಿಷತ್ ಸ್ಥಾನಗಳಿಗೆ  ಚುನಾವಣೆ, ರಾಜ್ಯಪಾಲರ ಸೂಚನೆ
ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಖಾಲಿ ಸ್ಥಾನಗಳಿಗೆ ಆದಷ್ಟೂ ಬೇಗನೆ ಚುನಾವಣೆ ಘೋಷಿಸುವಂತೆ ಚುನಾವಣಾ ಆಯೋಗಕ್ಕೆ 2020 ಏಪ್ರಿಲ್ 30ರ ಗುರುವಾರ  ಸೂಚಿಸಿದರು.. ಇದರೊಂದಿಗೆ ವಿಧಾನ ಪರಿಷತ್ ಪ್ರವೇಶಿಸಬಯಸಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಭಾರೀ ನಿರಾಳತೆ ಲಭಿಸಿತು.

ಮೇ ೨೮ರ ಒಳಗೆ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ ಮೂಲಕ ಸದನದ ಸದಸ್ಯತ್ವ ಪಡೆಯಲು ಉದ್ಧವ್ ಠಾಕ್ರೆ ಬಯಸಿದ್ದಾರೆ. ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯತ್ವ ಪಡೆಯದೇ ಇದ್ದಲ್ಲಿ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನವನ್ನು ತೆರವುಗೊಳಿಸಬೇಕಾಗುತ್ತದೆ. ಮುಖ್ಯಮಂತ್ರಿಯಾದ ಆರು ತಿಂಗಳ ಒಳಗಾಗಿ ವಿಧಾನಸಭೆ ಇಲ್ಲವೇ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕಾದ್ದು ಕಡ್ಡಾಯವಾಗಿದೆ.

ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಚಾರದಲ್ಲಿ ಕೇಂದ್ರವು ಹಲವಾರು ಸಡಿಲಿಕೆಗಳನ್ನು ಪ್ರಕಟಿಸಿದ್ದನ್ನು ಅನುಸರಿಸಿ ಮಾರ್ಗಸೂಚಿಗೆ ಅನುಗುಣವಾಗಿ ಆದಷ್ಟೂ ಬೇಗ ವಿಧಾನಪರಿಷತ್ತಿನ ಖಾಲಿ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಇದಕ್ಕೆ ಮುನ್ನ ಚುನಾವಣೆ ನಡೆಸುವಂತೆ ರಾಜ್ಯಪಾಲರು ಸೂಚನೆ ನೀಡುವ ಲಕ್ಷಣಗಳಿಲ್ಲ ಎಂಬ ಆತಂಕದಿಂದ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಕೊರೋನಾವೈರಸ್ ಬಿಕ್ಕಟ್ಟಿನ ಹಿನ್ನೆಎಯಲ್ಲಿ ಸ್ಥಾನಗಳ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ತಡೆ ಹಿಡಿದಿತ್ತು.

No comments:

Advertisement