My Blog List

Tuesday, May 12, 2020

ರೈಲುಪಯಣಕ್ಕೆ ಆರೋಗ್ಯ ಸೇತು ಆಪ್ ಕಡ್ಡಾಯ

ರೈಲುಪಯಣಕ್ಕೆ ಆರೋಗ್ಯ ಸೇತು ಆಪ್ ಕಡ್ಡಾಯ
ನವದೆಹಲಿ: ಕೋವಿಡ್ ದಿಗ್ಬಂಧನದ (ಲಾಕ್ ಡೌನ್) ಬಳಿಕ ರೈಲು ಪ್ರಯಾಣಿಕರಿಗೆ ತಮ್ಮ ಫೋನುಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ (ಆಪ್) ಅಳವಡಿಕೆಯನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ವಿಮಾನ ಪ್ರಯಾಣಿಕರಿಗೂ ತಮ್ಮ ಮೊಬೈಲ್‌ಗಳಲ್ಲಿ ಈ ಆಪ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆರೋಗ್ಯ ಸೇತು ಆಪ್ ಅಳವಡಿಕೆಯನ್ನು ವಿಮಾನ ಪ್ರಯಾಣಿಕರಿಗೆ ಕಡ್ಡಾಯಗೊಳಿಸುವ ಬಗ್ಗೆ ವಿಮಾನಯಾನ ಸಂಸ್ಥೆಗಳ ಜೊತೆ ಪ್ರಾಥಮಿಕ ಮಾತುಕತೆ ನಡೆಸಲಾಗಿದೆ, ಆದರೆ ನಾಗರಿಕ ವಿಮಾನಯಾನ ಸಚಿವಾಲಯವು ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸರ್ಕಾರಿ ಅಧಿಕಾರಿಗಳು  2020 ಮೇ 12ರ ಮಂಗಳವಾರ ಹೇಳಿದರು.

ಏನಿದ್ದರೂ ಪ್ರತಿ ಪ್ರಕರಣವನ್ನು ಆಧರಿಸಿ ಯಾವುದೇ ಅಪವಾದಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ ಅಧಿಕಾರಿಗಳು ತಮ್ಮ ಮೊಬೈಲ್ ಫೋನುಗಳಲ್ಲಿ ಆರೋಗ್ಯ ಸೇತು ಆಪ್ ಅಳವಡಿಸಕೊಳ್ಳದ ಪ್ರಯಾಣಿರಿಗೆ ಪಯಣದ ಅವಕಾಶ ನಿರಾಕರಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಿಲ್ಲ.

ದೆಹಲಿ ಮತ್ತು ರಾಷ್ಟ್ರದ ಪ್ರಮುಖ ನಗರಗಳಿಗೆ ೧೫ ಜೊತೆ ವಿಶೇಷ ರೈಲುಗಳನ್ನು ಓಡಿಸಲು ಅನುಮತಿ ನೀಡಿರುವ ರೈಲ್ವೇಯು ಮೊಬೈಲ್ ಆಪ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಮಾರ್ಗಸೂಚಿಯಲ್ಲಿ ಏನನ್ನೂ ಹೇಳಿಲ್ಲ. ಆದರೆ  ತಡರಾತ್ರಿ (ನಸುಕಿನ ೧೨.೨೪ ಗಂಟೆಯ) ಟ್ವೀಟಿನಲ್ಲಿ ರೈಲ್ವೇ ಸಚಿವಾಲಯವು ಅದನ್ನು ಕಡ್ಡಾಯಗೊಳಿಸಿದೆ ಎಂದು ಹೇಳಿದೆ.

‘ರೈಲ್ವೇ ಪಯಣಕ್ಕೆ ಈಗ ಫೋನುಗಳಲ್ಲಿ ಆರೋಗ್ಯ ಸೇತು ಆಪ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ರೈಲ್ವೇ ವಕ್ತಾರರಾದ ಆರ್ ಡಿ ಬಾಜಪೇಯಿ ಅವರು ದೃಢಪಡಿಸಿದ್ದಾರೆ. ರೈಲು ಟಿಕೆಟ್‌ಗಳನ್ನು ಆನ್ ಲೈನ್ ಮೂಲಕ ಬುಕ್ ಮಾಡಲು ಮೊಬೈಲ್ ನಂಬರ್ ಕಡ್ಡಾಯವಾಗಿರುವುದರಿಂದ ಎಲ್ಲ ಪ್ರಯಾಣಿಕರೂ ತಮ್ಮ ಬಳಿ ಮೊಬೈಲ್ ಫೋನುಗಳನ್ನು ಇಟ್ಟುಕೊಂಡಿರಬೇಕು ಎಂದು ಅವರು ಹೇಳಿದರು.

‘ಪ್ರಯಾಣಿಕರು ಆರೋಗ್ಯ ಸೇತು ಆಪ್‌ನ್ನು ಅಳವಡಿಸಿಕೊಂಡ ಬಳಿಕವೇ ನಿಲ್ದಾಣಕ್ಕೆ ಬರಬೇಕು ಮತ್ತು ಪಯಣಕ್ಕೆ ಅದು ಕಡ್ಡಾಯವಾಗಿದೆ. ಪ್ರಯಾಣಿಕರು ತಮ್ಮದೇ ಸುರಕ್ಷತೆಗಾಗಿ ಆರೋಗ್ಯ ಸೇತುವನ್ನು ಅಳವಡಿಸಬೇಕು. ಎಲ್ಲ ಪ್ರಯಾಣಿಕರೂ ಮೊಬೈಲ್ ಫೋನುಗಳನ್ನು ಒಯ್ಯುವುದರಿಂದ ಇದು ಒಂದು ದೊಡ್ಡ ವಿಷಯವಾಗುವುದಿಲ್ಲ. ಅಲ್ಲದೆ ಪ್ರಯಾಣಿಕರಿಗೆ ಆಪ್ ಬಳಕೆ ಬಗ್ಗೆ ನಾವು ಪ್ರಯಾಣಿಕರಿಗೆ ಅಗತ್ಯ ನೆರವು ಒದಗಿಸುತ್ತೇವೆ ಎಂದು ಅವರು ನುಡಿದರು.

ಆದಾಗ್ಯೂ ಯಾರಾದರೂ ಒಬ್ಬ ಪ್ರಯಾಣಿಕ ಮೊಬೈಲ್ ಫೋನ್ ಹೊಂದಿಲ್ಲವಾದರೆ, ಆಯಾ ಪ್ರಕರಣವನ್ನು  ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು. ರಾಜಧಾನಿ ರೈಲುಗಾಡಿಯಲ್ಲಿ ಪ್ರಯಾಣ ಮಾಡುವವರು ತಮ್ಮ ಬಳಿ ಫೋನ್ ಹೊಂದದೇ ಇರುವ ಸಾದ್ಯತೆಗಳು ಇಲ್ಲ ಎಂದು ಅಧಿಕಾರಿಗಳು ನುಡಿದರು.

‘ನಾವು ಈ ಆಪ್  ಅಳವಡಿಕೆಯನ್ನು ವಲಸೆ ಕಾರ್ಮಿಕರಿಗಾಗಿ ಬಿಟ್ಟಿರುವ ವಿಶೇಷ ರೈಲುಗಳ ಪ್ರಯಾಣಿಕರಿಗೆ ಕಡ್ಡಾಯಗೊಳಿಸಿಲ್ಲ ಎಂದು ಬಾಜಪೇಯಿ ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ಸೋಮವಾರ ವಿಡಿಯೋ ಸಂವಾದ ನಡೆಸಿದ ಬಳಿಕ ಕೇಂದ್ರ ಗೃಹ ಸಚಿವಾಲಯವು  ಆರೋಗ್ಯ ಸೇತು ಆಪ್ ಕಡ್ಡಾಯದ ನಿರ್ಧಾರ ಕೈಗೊಂಡಿದೆ  ಎಂದು ಮೂಲಗಳು ತಿಳಿಸಿವೆ.

ಕೋವಿಡ್-೧೯ ಅಪಾಯವಿದೆಯೇ ಎಂದು ಗುರುತಿಸಲು ಮೊಬೈಲ್ ಅಪ್ಲಿಕೇಷನ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದು ಕೊರೋನವೈರಸ್ ಮತ್ತು ಅದರ ರೋಗಲಕ್ಷಣಗಳನ್ನು ನಿವಾರಿಸುವ ಮಾರ್ಗಗಳನ್ನು ಒಳಗೊಂಡಂತೆ ಕೋವಿಡ್ ಸಂಬಂಧಿತ ಮಾಹಿತಿಯನ್ನು  ಸಾರ್ವಜನಿಕರಿಗೆ  ಒದಗಿಸುತ್ತದೆ.

ಅಪ್ಲಿಕೇಷನ್ ಬಳಕೆದಾರರಿಗೆ ಅವರ ಆರೋಗ್ಯ ಸ್ಥಿತಿ ಮತ್ತು ಪ್ರಯಾಣದ ಇತಿಹಾಸವನ್ನು ಅನುಸರಿಸಿ ಬಣ್ಣ ಕೋಡೆಡ್ ಹೆಸರನ್ನು ನೀಡುತ್ತದೆ.ತಾನು ಯಾರಾದರೂ ಕೋವಿಡ್ ಸೋಂಕಿತ ಅಥವಾ ಸೋಂಕಿತೆಯ ಬಳಿ ಇದ್ದೇನೆಯೇ ಎಂಬ ಮಾಹಿತಿಯನ್ನು ತಿಳಿಯಲು ಆಪ್ ಅದರ ಬಳಕೆದಾರನಿಗೆ  ನೆರವಾಗುತ್ತದೆ.

"ವಿಮಾನಯಾನ ಸಚಿವಾಲಯವು ಈ ಪ್ರಸ್ತಾಪವನ್ನು ಅನುಮೋದಿಸಿದರೆ, ತಮ್ಮ ಫೋನಿನಲ್ಲಿ ಆರೋಗ್ಯ ಸೇತು ಆಪ್ ಅಳವಡಿಸದ ಪ್ರಯಾಣಿಕರಿಗೆ ವಿಮಾನ ಏರಲು ಅವಕಾಶವಿರುವುದಿಲ್ಲ" ಎಂದು ಅಧಿಕಾರಿಗಳು ನುಡಿದರು.

ಸಚಿವಾಲಯವು ವಿತರಿಸಿರುವ ಕರಡು ಟಿಪ್ಪಣಿಯ ಪ್ರಕಾರ, ಟರ್ಮಿನಲ್ ಕಟ್ಟಡದ ಒಳಗೆ ‘ಹಸಿರು ಅಲ್ಲದವರ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ವರದಿಯೊಂದು ತಿಳಿಸಿದೆ.

೮೦ ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿUಳನ್ನು ಸಂಚಾರ ಪುನರಾರಂಭದ ಮೊದಲ ಹಂತದಲ್ಲಿ ಪ್ರಯಾಣಿಸದಂತೆ ನಿರ್ಬಂಧಿಸಲಾಗುವುದು ಎಂದು ವರದಿ ಹೇಳಿದೆ.

ಕೊರೋನವೈರಸ್ ನಿಯಂತ್ರಣ ಸಲುವಾಗಿ ಜಾರಿಗೊಳಿಸಲಾಗಿರುವ ದಿಗ್ಬಂಧನದ (ಲಾಕ್‌ಡೌನ್) ಮೂರನೇ ಹಂತವು ಮೇ ೧೭ ರಂದು ಕೊನೆಗೊಳ್ಳಲಿದೆ. ವಾಣಿಜ್ಯ ಪ್ರಯಾಣಿಕರ ವಿಮಾನ ಸೇವೆಗಳ ಪುನರಾರಂಭದ ಕುರಿತು ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

ಎಲ್ಲಾ ವಾಣಿಜ್ಯ ಪ್ರಯಾಣಿಕರ ಹಾರಾಟವನ್ನು ಲಾಕ್‌ಡೌನ್ ಅವದಿಯಲ್ಲಿ ಸ್ಥಗಿತಗೊಳಿಸಲಾಗಿದೆ. ಆದಾಗ್ಯೂ, ಸರಕು ವಿಮಾನಗಳು, ವೈದ್ಯಕೀಯ ನೆರವು ಸಾಗಣೆ ವಿಮಾನಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಅನುಮೋದಿಸಿದ ವಿಶೇಷ ವಿಮಾನಗಳ ಕಾರ್‍ಯ ನಿರ್ವಹಣೆಗೆ ಅನುಮತಿ ನೀಡಲಾಗಿದೆ.

ಈ ಮಧ್ಯೆ, ಅನೇಕ ವಿಮಾನಯಾನ ಅಧಿಕಾರಿಗಳು ಆರೋಗ್ಯ ಸೇತು ಆಪ್ ಅಳವಡಿಕೆ ಪ್ರಕ್ರಿಯೆಯ ಅನುಷ್ಠಾನ ಮತ್ತು ಅದರ ದಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಸರ್ಕಾರ ಆಪ್ ಕಡ್ಡಾಯಗೊಳಿಸಿದ ನಂತರ ರೈಲು ಪ್ರಯಾಣಿಕರಿಗೆ ಆಪ್ ಕಡ್ಡಾಯದ ಈ ಕ್ರಮ ಜಾರಿಯಾಗಿದೆ.

ಏನಿದ್ದರೂ ಗೌಪ್ಯತೆಪಾಲನೆ  ಹಿನ್ನೆಲೆಯಲ್ಲಿ ಅಪ್ಲಿಕೇಶನ್ ಟೀಕೆಗೆ ಗುರಿಯಾಗಿದೆ. ದೇಶದಲ್ಲಿ ಇನ್ನೂ ಯಾವುದೇ ವೈಯಕ್ತಿಕ ಡೇಟಾ ಸಂರಕ್ಷಣಾ ಕಾನೂನು ಇಲ್ಲದಿರುವುದರಿಂದ, ಅಪ್ಲಿಕೇಶನ್‌ನ ಗೌಪ್ಯತೆ ಪಾಲನೆ ಕುರಿತ ಅಸ್ಪಷ್ಟತೆ ಬಗ್ಗೆ ಗೌಪ್ಯತೆ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಪಾರದರ್ಶಕವಾಗಿ ಲೆಕ್ಕಪರಿಶೋಧನೆಗೆ ಯಾವುದೇ ಮಾರ್ಗವಿಲ್ಲ ಎಂದು ಇಂಟರ್ನೆಟ್ ಫ್ರೀಡಮ್ ಫೌಂಡೇಶನ್ ಹೇಳಿದೆ, ಅಪ್ಲಿಕೇಶನ್ ಶಾಶ್ವತ ಕಣ್ಗಾವಲು ವ್ಯವಸ್ಥೆಯಾಗುವುದರ ವಿರುದ್ಧ ಎಚ್ಚರಿಕೆ ಅಗತ್ಯ ಎಂದು ಫೌಂಡೇಶನ್ ಹೇಳಿದೆ.

ಅಪ್ಲಿಕೇಶನ್‌ನಲ್ಲಿ ಕಂಡುಬರುವ ಸುರಕ್ಷತಾ ಸಮಸ್ಯೆಯು  ಅಪ್ಲಿಕೇಶನ್‌ನ ೯೦ ಮಿಲಿಯನ್ (೯ ಕೋಟಿ)  ಬಳಕೆದಾರರ ಖಾಸಗಿತನಕ್ಕೆ  ಅಪಾಯವನ್ನುಂಟುಮಾಡುತ್ತದೆ ಎಂದು ಕಳೆದ ವಾರ ಫ್ರೆಂಚ್ ಹ್ಯಾಕರ್ ಮತ್ತು ಸೈಬರ್ ಸೆಕ್ಯುರಿಟಿ ತಜ್ಞ ಎಲಿಯಟ್ ಆಂಡರ್‍ಸನ್ ಅವರು ಟ್ವೀಟ್ ಮಾಡಿದ್ದರು.

ಆದಾಗ್ಯೂ, ’ಯಾವುದೇ ಡೇಟಾ ಅಥವಾ ಭದ್ರತಾ ಉಲ್ಲಂಘನೆ ಸಂಭವಿಸಿಲ್ಲ ಮತ್ತು ಯಾವುದೇ ನೈತಿಕ ಹ್ಯಾಕರ್‌ನಿಂದ ಯಾವುದೇ ಬಳಕೆದಾರರ ವೈಯಕ್ತಿಕ ಮಾಹಿತಿಯು ಅಪಾಯದಲ್ಲಿದೆ ಎಂದು ಸಾಬೀತಾಗಿಲ್ಲ ಎಂದು ಸರ್ಕಾರ ಹೇಳಿಕೆ ಮೂಲಕ ಸ್ಪಷ್ಟ ಪಡಿಸಿತ್ತು.

No comments:

Advertisement