My Blog List

Saturday, May 9, 2020

ಎಲೆಲೆ ಹಕ್ಕಿ … ಎಲೆ ಹಕ್ಕಿ…!

ಎಲೆಲೆ  ಹಕ್ಕಿ …  ಎಲೆ ಹಕ್ಕಿ…!
(ಸುವರ್ಣ ನೋಟ)
ಮುಂಗಾರುಪೂರ್ವ ಮಳೆ ಅಲ್ಲಲ್ಲಿ ಸುರಿಯಲು ಆರಂಭವಾಗಿದೆ. ಬಿಸಿಲ ಬೇಗೆಗೆ ಬಸವಳಿದ ಜನರಿಗೆ ಈ ಮಳೆಯ ಹನಿಗಳು ಹೇಗೆ ತಂಪರೆಯುತ್ತಿವೆಯೋ ಹಾಗೆಯೇ ಮಳೆ  ಪಕ್ಷಿ, ಪ್ರಾಣಿಗಳಿಗೂ ತಂಪಿನ ಸಂಭ್ರಮದ  ಧಾರೆಯೆರೆದಿದೆ.

ಇಲ್ಲಿ ನೋಡಿ ಈ ಪುಟ್ಟ ಹಕ್ಕಿ ನೀರಿನಲ್ಲಿ ಹೇಗೆ ಚಿನ್ನಾಟವಾಡುತ್ತಿದೆ? ಹಾಂ. ಇದು ಎಲೆ ಹಕ್ಕಿ ಇಂಗ್ಲಿಷಿನಲ್ಲಿ ಇದನ್ನು ಗೋಲ್ಡ್ ಫ್ರಂಟೆಡ್ ಲೀಫ್ ಬರ್ಡ್ (Gold fronted Leafbird)  ಎಂದು ಕರೆಯುತ್ತಾರೆ.  ಇದು ಭಾರತ, ಶ್ರೀಲಂಕಾ ಹಾಗೂ ದಕ್ಷಿಣ ಏಷಿಯಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪಕ್ಷಿ.ಗೊರವಂಕಕ್ಕಿಂತ ಚಿಕ್ಕದಾದ ಗಿಳಿ ಹಸಿರು ಬಣ್ಣ, ಹಣೆ ಕೇಸರಿ ಮಿಶ್ರಿತ ಹಳದಿ, ಕೊಕ್ಕಿನ ಸುತ್ತ ನೇರಳೆ ಮಿಶ್ರಿತ ಕಪ್ಪು ಹಾಗೂ ಕಪ್ಪು ಚಿಕ್ಕ ಕೊಕ್ಕು ಇದರ ಅಂದವನ್ನು ಹೆಚ್ಚಿಸುತ್ತವೆ.

 
ಇವುಗಳನ್ನು ಹಿಂದೆ ಐರಿನಾಡೆ ಕುಟುಂಬದಲ್ಲಿ ಐಯೋರಗಳು ಮತ್ತು ಕಣ್ಣುಕುಕ್ಕುವ ನೀಲಿ-ಬಣ್ಣದ ಹಕ್ಕಿಗಳೊಂದಿಗೆ ವಿಂಗಡಿಸಲಾಗಿತ್ತು. ಪ್ರಸ್ತುತ  ಎಲೆ ಹಕ್ಕಿ ಕುಟುಂಬವನ್ನು  ಕ್ಲೋರೋಪ್ಸಿಸ್ ಜಾತಿಯ ಹಕ್ಕಿಗಳೊಂದಿಗೆ ಏಕವರ್ಣವಾಗಿ ವಿಂಗಡಿಸಲಾಗಿದೆ.

ಕ್ಲೋರೋಪ್ಸಿಸ್ ಅರಿಫ್ರಾನ್ಸ್ ಎಂಬುದು ಎಲೆ ಹಕ್ಕಿಯ  ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಪಕ್ಷಗುಪ್ತ, ಪತ್ರಗುಪ್ತ, ಎಂದೂ ಹಸಿರು ಪಿಕಳಾರ ಎಂದು ಸ್ಥಳೀಯವಾಗಿ ಇದನ್ನು ಕರೆಯುತ್ತಾರೆ.

ಸುಮಾರು ೧೪ ರಿಂದ ೨೧ ಸೆಂ.ಮೀ.  (.-.  ಅಂಗುಲ)  ಮತ್ತು  ೧೫ ರಿಂದ ೪೮ ಗ್ರಾಂ (.೫೩ - .೬೯ ಔನ್ಸ್ತೂಕ ಹೊಂದಿರುವ ಎಲೆಹಕ್ಕಿಗಳು ಬುಲ್ಬುಲ್ ಪಕ್ಷಿಗಳನ್ನು ಹೋಲುತ್ತವೆಯಾದರೂ, ಇವು  ಗಾಢಬಣ್ಣವನ್ನು ಹೊಂದಿರುತ್ತವೆ.  ಹೆಸರೇ ಸೂಚಿಸುವಂತೆ ಇದರ ಮೈ ಹಸಿರು ಬಣ್ಣದಿಂದ ಕೂಡಿರುತ್ತದೆ. ಕುಟುಂಬದ ಪಕ್ಷಿಗಳ ಗಾಢಬಣ್ಣದಿಂದ ಅವುಗಳ ಲಿಂಗಭೇದ ಪ್ರಕಟವಾಗುತ್ತದೆ. ಲಿಂಗ ಭೇದವು ಎಲೆಹಕ್ಕಿಯ ವಿವಿಧ ಉಪಜಾತಿಗಳ ನಡುವೆ ಭಿನ್ನವಾಗಿರುತ್ತದೆ. ಉದಾಹರಣೆಗೆ ಒಂದೆಡೆ ಕಿತ್ತಳೆ ಹೊಟ್ಟೆಯ ಎಲೆ ಹಕ್ಕಿ( ಆರೆಂಜ್ ಬೆಲ್ಲೀಡ್ ಲೀಫ್ ಬರ್ಡ್ ಗಳ) ಲಿಂಗಭೇದ ಸುಲಭವಾಗಿ ಕಾಣಬಹುದು.  ಆದರೆ ಪಿಲಿಫಿನ್ಸ್ ಎಲೆ ಹಕ್ಕಿ ಯಾವುದೇ ಲಿಂಗಬೇದವನ್ನು (ಡೈಮಾರ್ಫಿಸಂ) ಪ್ರದರ್ಶಿಸುವುದಿಲ್ಲ.

ಭಾರತದ
ಎಲೆಹಕ್ಕಿಗಳಲ್ಲಿ ಲಿಂಗ ಭೇದವನ್ನು ಗುರುತಿಸುವುದು ಅದರ ಬಣ್ಣದಿಂದಲೇ. ಹಾಗೆಯೇ ಪ್ರತ್ಯೇಕವಾಗಿ ಗಂಡು ಪಕ್ಷಿಗಳಿಗೆ ತಲೆಯು ನೀಲಿ ಬಣ್ಣದಿಂದ ಕೂಡಿದ್ದು, ಮುಖದ ಮೇಲಿನ ಕಪ್ಪು ಬಣ್ಣ ಮುಖವಾಡದಂತೆ ಕಾಣುತ್ತದೆ. ಆದರೆ ಹೆಣ್ಣು ಪಕ್ಷಿಯು ಕಡಿಮೆ ಬಣ್ಣದಿಂದ ಕೂಡಿರುತ್ತದೆ ಹಾಗೂ ಮುಖದ ಮೇಲಿನ ಕಪ್ಪು ಬಣ್ಣದ ಮುಖವಾಡ ಹೊಂದಿರುವುದಿಲ್ಲ.

ಪರ್ಣಪಾತಿ
ಕಾಡು, ನಿತ್ಯ ಹರಿದ್ವರ್ಣದ ಕಾಡು ಹಾಗೂ  ಕುರುಚಲು ಕಾಡುಗಳಲ್ಲಿ ಮರ ಮತ್ತು ಪೊದೆಗಳಲ್ಲಿ ಈ ಹಕ್ಕಿಗಳೂ ವಾಸ ಮಾಡುತ್ತವೆ. ಹಸಿರು ಮೈ ಬಣ್ಣ ಎಲೆಗಳ ಎಡೆಯಲ್ಲಿ ಇರುವಾಗ ಇವುಗಳನ್ನು ಮರೆ ಮಾಡುತ್ತದೆ

ಎಲೆ ಹಕ್ಕಿಗಳು ಆಕರ್ಷಕವಷ್ಟೇ ಅಲ್ಲ ಮಧುರವಾಗಿ ಕೂಗುತ್ತವೆ. ಧ್ವನಿಗಳನ್ನು ಅನುಕರಿಸುವ ಸಾಮರ್ಥ್ಯವನ್ನು ಕೂಡಾ ಇವು ಹೊಂದಿವೆ. ಆದ್ದರಿಂದ ಇವು ಅತ್ಯಂತ ಜನಪ್ರಿಯ ಪಂಜರದ ಪಕ್ಷಿಗಳಾಗಿ ಬಿಟ್ಟಿವೆ. ವ್ಯಾಪಾರಕ್ಕಾಗಿ ಬಹುತೇಕ ಪಕ್ಷಿಗಳನ್ನು ಜನರು ವಶಪಡಿಸಿಕೊಳ್ಳುತ್ತಿರುವುದರಿಂದ ಸ್ಥಳೀಯವಾಗಿ ಅವುಗಳ ಸಂತತಿ ಕ್ಷೀಣಿಸುತ್ತಿವೆ.

ಅರಣ್ಯ ನಾಶ ಕೂಡಾ ಈ ಹಕ್ಕಿಗಳಿಗೆ ಕುಠಾರಪ್ರಾಯವಾಗಿದೆ. ಒಂದು ಜಾತಿಯ ಫಿಲಿಫೈನ್ ಎಲೆ ಹಕ್ಕಿ ಮತ್ತು  ನೀಲಿ ಮುಖವಾಡದ ಎಲೆ ಹಕ್ಕಿ ವಿರಳವಾಗಿದ್ದು, ಅವುಗಳ ಸಂತತಿ  ಇನ್ನೂ ಕ್ಷೀಣಿಸುತ್ತಿರುವುದರಿಂದ ಅವುಗಳನ್ನೂ ಕೂಡ ಅಳಿವಿನ ಅಂಚಿನಲ್ಲಿರುವ ಪಕ್ಷಿ ಗಳ ಪಟ್ಟಿಗೆ ಸೇರಿವೆ.

ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ  ಅವರು ಮಳೆ ಬಳಿಕ ಸುತ್ತಾಡಿದಾಗ  ಎಲೆ ಹಕ್ಕಿಗಳ ಸೊಬಗು ಕ್ಯಾಮರಾದಲ್ಲಿ ಸೆರೆಯಾದದ್ದು ಹೀಗೆ.

ಸಮೀಪ ದೃಶ್ಯದ ಅನುಭವಕ್ಕೆ ಫೊಟೋ ಗಳನ್ನು ಕ್ಲಿಕ್ಕಿಸಿ.

No comments:

Advertisement