Thursday, May 21, 2020

ಅಂಫಾನ್ ರುದ್ರ ನರ್ತನ: ಪಶ್ಚಿಮ ಬಂಗಾಳದಲ್ಲಿ ೭೨ ಸಾವು

ಅಂಫಾನ್ ರುದ್ರ ನರ್ತನ:  ಪಶ್ಚಿಮ ಬಂಗಾಳದಲ್ಲಿ  ೭೨ ಸಾವು
ನವದೆಹಲಿ/ ಕೋಲ್ಕತ/ ಭುವನೇಶ್ವರ: ಭಾರತದಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಹಾಗೂ ನೆರೆಯ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಅಂಫಾನ್ ಚಂಡ ಮಾರುತವು ಪಶ್ಚಿಮ ಬಂಗಾಳದಲ್ಲಿ ತನ್ನ ರುದ್ರ ನರ್ತನವನ್ನು ತೋರಿಸಿ, ೭೨ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಮರಗಳು, ವಿದ್ಯುತ್, ಟೆಲಿಫೋನ್ ಕಂಬಗಳು ಉರುಳಿದ್ದು, ಹಲವಾರು ಮನೆಗಳು ಕುಸಿದಿವೆ, ಬೆಳೆದು ನಿಂತ ಫಸಲು ಕೂಡಾ ನಷ್ಟವಾಗಿದೆ.

ಚಂಡಮಾರುತಕ್ಕೆ ಬಲಿಯಾಗಿರುವ ೭೨ ಮಂದಿಯ ಪೈಕಿ ಬಹುತೇಕರು ವಿದ್ಯುತ್ ತಾಗಿ, ಮರಗಳ ಅಡಿಗೆ ಸಿಲುಕಿ ಇಲ್ಲವೇ ಮನೆಗಳು ಕುಸಿದ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ ಎಂದು  2020 ಮೇ 21ರ ಗುರುವಾರ ಹೇಳಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೃತ ಕುಟುಂಬಗಳಿಗೆ ತಲಾ . ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.

ಮಧ್ಯೆ ಚಂಡಮಾರುತದಿಂದ ತೊಂದರೆಗೆ ಒಳಗಾದ ರಾಜ್ಯಗಳಿಗೆ ಸರ್ವ ನೆರವು ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ.
ಚಂಡಮಾರುತದಿಂದ
ಆಗಿರುವ ಹಾನಿಯ ಅಂದಾಜು ಮಾಡುವ ಸಲುವಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಕಳುಹಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ವಿಶೇಷ ತಂಡಗಳನ್ನು ರಚಿಸುತ್ತಿದೆ.

ಪ್ರತ್ಯೇಕ ವಿಶೇಷ ತಂಡಗಳು ಉಪಕಾರ್ಯದರ್ಶಿ ಅಥವಾ ಅವರಿಗಿಂತ  ಉನ್ನತ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ರಚನೆಯಾಗುತ್ತಿದ್ದು ವಿವಿಧ ಸಚಿವಾಲಯಗಳ ಡಜನ್ ಅಧಿಕಾರಿಗಳನ್ನು ಹೊಂದಿರುತ್ತದೆ. ತಂಡಗಳು ಗುರುವಾರ ಸಂಜೆ ಅಥವಾ ಶುಕ್ರವಾರದ ವೇಳೆಗೆ ಸಂತ್ರಸ್ಥ ರಾಜ್ಯಗಳಿಗೆ ತಲುಪಲಿವೆ ಎಂದು  ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ವಿಪತ್ತು ನಿರ್ವಹಣೆ, ಹಣಕಾಸು, ಜಲಶಕ್ತಿ ಸಚಿವಾಲಯ, ಭಾರತೀಯ ಹವಾಮಾನ ಇಲಾಖೆ (ಐಎಂಡಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್ ಎಫ್) ಸೇರಿದಂತೆ ವಿವಿಧ ಸಚಿವಾಲಯಗಳ ಅಧಿಕಾರಿಗಳು ತಂಡಗಳಲ್ಲಿ ಇದ್ದು ತಂಡಗಳು ಆದಷ್ಟೂ ಶೀಘ್ರ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ವರದಿ ಸಲ್ಲಿಸಲಿವೆ.

೧೦೦ ಕಿಲೋ ಮೀಟರಿಗೂ ಹೆಚ್ಚು ವೇಗದೊಂದಿಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದ ಚಂಡಮಾರುತದ ಈಗ ಗಂಟೆಗೆ ೭೦ ಕಿಮೀ ವೇಗದೊಂದಿಗೆ ಬಾಂಗ್ಲಾದೇಶಕ್ಕೆ ಅಪ್ಪಳಿಸಿದೆ ಎಂದು ವರದಿಗಳು ಹೇಳಿವೆ.

ಪಶ್ಚಿಮ ಬಂಗಾಳದ ಉತ್ತರ ೨೪ ಪರಗಣಗಳ ಹಸ್ನಾಬಾದ್ - ಹಿಂಗಲ್ ಗುಂಜ್ ಪ್ರದೇಶದ ಅತ್ಯಂತ ಭೀಕರವಾಗಿ ತೊಂದರೆಗೆ ಒಳಗಾಗಿದೆ. ಇಚ್ಛಾಮತಿ ನದಿಯ ಒಡ್ಡುಗಳು ಹಲವಡೆಗಳಲ್ಲಿ ಕೊಚ್ಚಿಹೋಗಿದ್ದು ಪ್ರದೇಶದ ೫೦-೬೦ ಗ್ರಾಮಗಳು ನೀರಿನಿಂದ ಆವೃತವಾಗಿವೆ. ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದು, ರಸ್ತೆಗಳ ಮೇಲೆ ನೀರು ನಿಂತಿರುವುದರಿಂದ ತಾತ್ಕಾಲಿಕ ಆಶ್ರಯ ಶಿಬಿರಗಳಿಗೂ ಹೋಗಲಾಗದೆ ಪರದಾಡುತ್ತಿದ್ದಾರೆ.

ಚಂಡಮಾರುತದಿಂದಾಗಿ ಭಾರೀ ಪ್ರಮಾಣದಲ್ಲಿ ಮರಗಳು ನಾಶವಾಗಿವೆ. ಅರಣ್ಯ ಇಲಾಖೆ ಬೆಳೆಸಿದ್ದ ಕಾಡು ನಷ್ಟವಾಗಿದೆ. ಸುಂದರಬನ ಮ್ಯಾನ್ ಗ್ರೋವ್ ರಕ್ಷಣಾ ಆವರಣ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಹೊಸದಾಗಿಯೇ ಮ್ಯಾನ್ ಗ್ರೋವ್ ಪೊದೆಗಳನ್ನು ಬೆಳೆಸಬೇಕಾಗಿ ಬಂದಿದೆ ಎಂದು ಮಮತಾ ಬ್ಯಾನರ್ಜಿ ನುಡಿದರು.

ಇಡೀ ಪ್ರದೇಶ ಇದೀಗ ಜಿಲ್ಲೆಯ ಇತರ ಭಾಗದಿಂದ ಸಂಪೂರ್ಣ ಸಂಪರ್ಕ ಕಡಿದುಕೊಂಡಿದೆ. ಹಸ್ನಾಬಾದ್-ಹಿಂಗಲಗಂಜ್ ರಸ್ತೆಯಲ್ಲಿ ಸಹಸ್ರಾರು ಮರಗಳು ಬುಡಮೇಲಾಗಿ ಬಿದ್ದಿವೆ. ಉತ್ತರ ಮತ್ತು ದಕ್ಷಿಣ ೨೪ ಪರಗಣ ಜಿಲ್ಲೆಗಳು ಚಂಡಮಾರುತದಿಂದಾಗಿ ಸಂಪೂರ್ಣ ಹಾನಿಗೊಂಡಿವೆ. ಪೂರ್ವ ಮಿಡ್ನಾಪುರದಲ್ಲಿ ಕೂಡಾ ಭಾರೀ ಹಾನಿಯಾಗಿದೆ. ಹಲವು ಲಕ್ಷ ಮಂದಿಯನ್ನು ರಕ್ಷಿಸಲಾಗಿದ್ದರೂ, ಬಹಳಷ್ಟು ಮಂದಿ ತೊಂದರೆಗೀಡಾಗಿದ್ದಾರೆ ಎಂದು ಬ್ಯಾನರ್ಜಿ ಹೇಳಿದರು.

ಮೊಬೈಲ್ ಸಂಪರ್ಕ ಮತ್ತು ಇಂಟರ್‌ನೆಟ್ ಸೇವೆಗಳ ಪುನಸ್ಥಾಪನೆ ಸಲುವಾಗಿ ತಾವು ಸೇವಾದಾರರ ಜೊತೆಗೆ ಸಂಪರ್ಕದಲ್ಲಿ ಇರುವುದಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್‌ಕರ್ ನುಡಿದರು. ಹಾನಿ ಬಗ್ಗೆ ವರದಿ ನೀಡುವಂತೆ ತಾವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋರಿರುವುದಾಗಿ ರಾಜ್ಯಪಾಲರು ನುಡಿದರು.

ಕೋಲ್ಕತದಲ್ಲಿ ಹಲವು ಭಾಗಗಳು ತೀವ್ರವಾಗಿ ಹಾನಿಗೊಂಡಿವೆ. ನಗರದಲ್ಲಿ ೧೨ ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ಎಂಟು ಹೆಚ್ಚಿನ ಸಾವು ಸಂಭವಿಸಿದೆ ಎಂದು ದೃಢಪಡದ ವರದಿಗಳು ಹೇಳಿವೆ. ಕೋಲ್ಕತ್ತ ಮತ್ತು ಇತರ ಪ್ರದೇಶಗಳ ಬಹುತೇಕ ಭಾಗ ವಿದ್ಯುತ್ ಕಂಬಗಳು ಉರುಳಿ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿದುಕೊಂಡಿದ್ದು, ಮೊಬೈಲ್ ಇಂಟರ್ ನೆಟ್ ಸಂಪರ್ಕಗಳೂ ಅಸ್ತವ್ಯಸ್ತಗೊಂಡಿವೆ.

ಚಂಡಮಾರುತದ ಪರಿಣಾಮವಾಗಿ ಸಿಕ್ಕಿಂ, ಅಸ್ಸಾಂ, ಬಂಗಾಳ ಮತು ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುವಾಹತಿಯ ತಗ್ಗು ಪ್ರದೇಶಗಳ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ಮಧ್ಯೆ ಹಠಾತ್ ಪ್ರವಾಹ ಮತ್ತು ಭಾರೀ ಮಳೆಯ ಕಾರಣ ಬಾಂಗ್ಲಾದೇಶ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಕನಿಷ್ಠ ೧೯೦ ಲಕ್ಷ (೧೯ ಮಿಲಿಯನ್) ಮಕ್ಕಳು ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೆ ಎಮದು ವಿಶ್ವಸಂಸ್ಥೆ ಮಕ್ಕಳ ವಿಭಾಗವು ತಿಳಿಸಿದೆ.

ಗರಿಷ್ಠ ಹಾನಿ ಚಂಡಮಾರುತ ನೆಲಕ್ಕೆ ಅಪ್ಪಳಿಸಿದ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ. ಒಡಿಶಾದಲ್ಲಿ ಹಾನಿಯ ಪ್ರಮಾಣ ಕಡಿಮೆ. ನಾವು ಇನ್ನೂ ಸಂತ್ರಸ್ಥ ಪ್ರದೇಶಗಳ ಸಮೀಕ್ಷೆ ನಡೆಸುತ್ತಿದ್ದೇವೆ ಎಂದು ಅವರು ನುಡಿದರು.

ಪಶ್ಚಿಮ ಬಂಗಾಳ ಸರ್ಕಾರವು ಕೇಂದ್ರದ ಹಣಕಾಸು ನೆರವನ್ನು ಎದುರು ನೋಡುತ್ತಿದೆ. ರಾಜ್ಯ ಸರ್ಕಾರವು ಈಗಾಗಲೇ ಕೊರೋನಾ ಸಾಂಕ್ರಾಮಿಕದ ಪರಿಣಾಮವಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಈಗ ಅಂಫಾನ್ ಚಂಡಮಾರುತ ಇನ್ನೊಂದು ಹೊಡೆತ ಕೊಟ್ಟಿದೆ. ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ದಿನಗಳ ಒಳಗಾಗಿ ಹಾನಿಯ ಪ್ರಮಾಣ ಮತ್ತು ವಿಪತ್ತಿನ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ವಿವರ ಸಹಿತವಾಗಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮಮತಾ ಹೇಳಿದರು.

ಉತ್ತರ ಮತ್ತು ದಕ್ಷಿಣ ೨೪ ಪರಗಣ ಜಿಲ್ಲೆಗಳು ಕುಡಿಯುವ ನೀರಿನ ಸಂಕಷ್ಟದಲ್ಲಿ ಸಿಲುಕಿವೆ. ಹೊಂಡಗಳು ಮತ್ತು ಕೆರೆ ಬಾವಿಗಳು ನೀರು ತುಂಬುವುದರ ಜೊತೆಗೆ ಮಲಿನಗೊಂಡಿವೆ. ಕ್ಷಿಪ್ರವಾಗಿ ಕುಡಿಯುವ ನೀರು ಒದಗಿಸುವ ಬಗ್ಗೆ ಮತ್ತು ವಿದ್ಯುತ್ ಪುನಃಸ್ಥಾಪನೆ ಮಾಡುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ನುಡಿದರು.

ವಲಸಿಗರ ಸಂಕಷ್ಟ: ಕೊರೋನಾ ದಿಗ್ಬಂಧನ ಪರಿಣಾಮವಾಗಿ ಕೆಲಸ ಕಳೆದುಕೊಂಡು ವಿವಿಧೆಡೆ ಸಿಕ್ಕಿಹಾಕಿಕೊಂಡಿದ್ದ ಹಲವಾರು ವಲಸೆ ಕಾರ್ಮಿಕರು ಹುಟ್ಟೂರಿಗೆ ತಲುಪಿದ ಖುಷಿಯಲ್ಲಿದ್ದರೂ ಅವರ ಖುಷಿ ಅಲ್ಪಾಯುವಾಗಿತ್ತು. ಬೆಂಗಳೂರಿನಿಂದ ಹಿಂದಿರುಗಿದ ಜಮಾಲ್ ಮೊಂಡಲ್ (೪೫) ಸೇರಿದಂತೆ ಹಲವರು ತಮ್ಮ ಕುಟುಂಬದ ಜೊತೆ ಪುನಃ ಸೇರಿದರೂ ಚಂಡಮಾರುತದ ಹೊಡೆತಕ್ಕೆ ಸಿಲುಕಿದರು.

ದಕ್ಷಿಣ ೨೪ ಪರಗಣ ಜಿಲೆಯ ಗೊಸಾಬ ಗ್ರಾಮದ ತನ್ನ ಹುಟ್ಟೂರಿಗೆ ಸೋಮವಾರ ತಲುಪಿದ್ದ ಜಮಾಲ್ ಮೊಂಡಲ್ ಮನೆ ಹಾಗೂ ಸಾಕುತ್ತಿದ್ದ ಕುರಿಗಳು ಪ್ರವಾಹದ ಪಾಲಾದ ಪರಿಣಾಮವಾಗಿ ಪತ್ನಿ ಮತ್ತು ನಾಲ್ವರು ಪುತ್ರಿಯರ ಜೊತೆಗೆ ಪರಿಹಾರ ಶಿಬಿರದ ಹೊರಗೆ ಎರಡು ತುಂಡು ಬ್ರೆಡ್ಡಿಗಾಗಿ ಆಂಡಲೆಯುವಂತಾಗಿದೆ. ಅಂಫಾನ್ ಚಂಡಮಾರುತವು ಆತನ ಒಂದಂತಸ್ತಿನ ಮಣ್ಣಿನ ಮನೆಯನ್ನು ಕೊಚ್ಚಿಕೊಂಡು ಹೋಗಿದೆ. ನೂರಾರು ಮಂದಿ ವಲಸೆ ಕಾರ್ಮಿಕರೂ ಇದೇ ಪಾಡು ಅನುಭವಿಸುತ್ತಿದ್ದಾರೆ.

ಕೋಲ್ಕತ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಒಂದು ಹಾನಿಗೊಂಡಿದ್ದರೆ, ಎರಡು ವಿಮಾನಗಳು ಸುರಕ್ಷಿತವಾಗಿ ಉಳಿದಿವೆ. ಹೌರಾ ಜಿಲ್ಲೆ ಸಂಪೂರ್ಣ ಜಲಾವೃತಗೊಂಡಿದೆ.
ಒಡಿಶಾದಲ್ಲಿ ಮುಂದಿನ ೪೮ ಗಂಟೆಗಳಲ್ಲಿ ಪರಿಸ್ಥಿತಿ ಮಾಮೂಲಿಗೆ ಹಿಂದಿರುಗಲಿದೆ ಎಂದು ಎನ್ ಡಿಆರ್ ಎಫ್ ಮುಖ್ಯಸ್ಥ ಎಸ್.ಎನ್ ಪ್ರಧಾನ್ ಹೇಳಿದರು.

ಪ್ರಧಾನಿ ಅಭಯ: ಚಂಡಮಾರುತಕ್ಕೆ ಒಳಗಾದ ಪ್ರದೇಶಗಳಲ್ಲಿ ಎನ್ ಡಿಆರ್ ಎಫ್ ತಂಡಗಳು ಪರಿಹಾರ ಕಾರ್‍ಯಾಚರಣೆ ನಡೆಸುತ್ತಿದ್ದು, ಉನ್ನತ ಅಧಿಕಾರಿಗಳು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರದ ಜೊತೆ ಸಮನ್ವಯದೊಂದಿಗೆ ಪರಿಹಾರ, ರಕ್ಷಣಾ ಕಾರ್‍ಯಗಳನ್ನು ನಡೆಸಲಾಗುತ್ತಿದ್ದು ಸರ್ವ ನೆರವನ್ನೂ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಅಭಯ ನೀಡಿದರು.

ಬಾಂಗ್ಲಾದೇಶದಲ್ಲಿ ೧೦ ಸಾವು
ಬಾಂಗ್ಲಾದೇಶದಲ್ಲಿಅಂಪಾನ್ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ೧೦ಕ್ಕೆ ಏರಿದೆ. ಎರಡು ದಶಕಗಳ ಹಿಂದೆ, ೨೦೦೭ರಲ್ಲಿ ಅಪ್ಪಳಿಸಿದ್ದ ಸಿದ್ರ್ ಚಂಡಮಾರುತವು ಸುಮಾರು ,೫೦೦ ಮಂದಿಯನ್ನು ಬಲಿ ಪಡೆದಿತ್ತು  ಎಂದು ಬಾಂಗ್ಲಾದೇಶದ ಆರೋಗ್ಯ ಸಚಿವಾಲಯದ ವಕ್ತಾರೆ ಆಯೇಶಾ ಅಖ್ತರ್ ಹೇಳಿದರು.

ಚಂಡಮಾರುತದಿಂದ ಬಾಂಗ್ಲಾದೇಶಕ್ಕೆ ಭಾರೀ ಹಾನಿ ಉಂಟಾಗದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

No comments:

Advertisement