My Blog List

Tuesday, May 12, 2020

ಸ್ವಾವಲಂಬಿ ಭಾರತದ ಸಂಕಲ್ಪ: ೨೦ ಲಕ್ಷ ಕೋಟಿ ರೂ ವಿಶೇಷ ಕೊಡುಗೆ ಘೋಷಿಸಿದ ಪ್ರಧಾನಿ

ಸ್ವಾವಲಂಬಿ ಭಾರತದ ಸಂಕಲ್ಪ: ೨೦ ಲಕ್ಷ ಕೋಟಿ ರೂ ವಿಶೇಷ ಕೊಡುಗೆ ಘೋಷಿಸಿದ ಪ್ರಧಾನಿ
ನವದೆಹಲಿ: ಇಡೀ ಜಗತ್ತಿನ ೪೨ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕಾಡುತ್ತಿರುವ ಕೊರೋನಾವೈರಸ್ ವಿರುದ್ಧ ಹೋರಾಟಕ್ಕಾಗಿ ’ಆತ್ಮ ನಿರ್ಭರ ಭಾರತz’ (ಸ್ವಾವಲಂಬಿ ಭಾರತ)ದ ಸಂಕಲ್ಪದೊಂದಿಗೆ ದೇಶದ ಅಭಿವೃದ್ಧಿ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2020 ಮೇ 12ರ ಮಂಗಳವಾರ ೨೦ ಲಕ್ಷ ಕೋಟಿ ರೂಪಾಯಿಗಳ ವಿಶೇಷ ಕೊಡುಗೆಯನ್ನು ಘೋಷಿಸಿದರು.

ರಾಷ್ಟ್ರವನ್ನು ಉದ್ದೇಶಿಸಿ ತಮ್ಮ ೫ನೇ ಭಾಷಣವನ್ನು ಮಾಡಿದ ಪ್ರಧಾನಿ ಭೂಮಿಗೆ, ಹಣದ ಹರಿವಿಗೆ, ಹಗಲಿರುಳು ದುಡಿಯುವವರಿಗೆ ಈ ಆರ್ಥಿಕ ಕೊಡುಗೆಯಿಂದ ಅನುಕೂಲವಾಗಲಿದೆ. ಈ ವಿಶೇಷ ಕೊಡುಗೆ  ಬಗ್ಗೆ ಬುಧವಾರ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ಮೋದಿ ಪ್ರಕಟಿಸಿದರು.

ಭಾರತವು ಈದಿನ ಘೋಷಿಸುತ್ತಿರುವ ೨೦ ಲಕ್ಷ ಕೋಟಿ ರೂಪಾಯಿಗಳ ವಿಶೇಷ ಕೊಡುಗೆಯು ಭಾರತದ ಜಿಡಿಪಿಯ ಶೇಕಡಾ ೧೦ರಷ್ಟು ಆಗುತ್ತದೆ. ಇದು ರೈತರು, ಶ್ರಮಿಕರು, ಕಾರ್ಮಿಕರು, ಎಂಎಸ್‌ಎಂಇ ಸಹಿತ ಎಲ್ಲ ಉದ್ಯಮಿಗಳು ಸೇರಿದಂತೆ ಸಂಕಷ್ಟದಲ್ಲಿ ಇರುವ ಎಲ್ಲ ವರ್ಗಗಳ ನೆರವಿಗೆ ಬರಲಿದೆ ಎಂದು ಪ್ರಧಾನಿ ನುಡಿದರು.

ಪ್ರಾಮಾಣಿಕವಾಗಿ ತೆರಿಗೆ ಸಲ್ಲಿಸುತ್ತಿರುವ ಎಲ್ಲರಿಗೂ ಈ ನೆರವು ನಾಳೆಯಿಂದ ಆರಂಭವಾಗಲಿದೆ. ’ಆತ್ಮ ನಿರ್ಭರ ಭಾರತ ಅಭಿಯಾನದ ಕಡೆಗೆ ದೇಶವನ್ನು ಮುನ್ನಡೆಸುವ ಈ  ಕೊಡುಗೆ ವಿವರಗಳನ್ನು ಬುಧವಾರ ವಿತ್ತ ಸಚಿವೆ ನೀಡಲಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರದ ಈ ವಿಶೇಷ ಕೊಡುಗೆಯು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಭಾರತಕ್ಕೆ ಬಲ ತುಂಬಲಿದೆ. ಭಾರತವು ವಿಶ್ವದ ಸರಬರಾಜು ಸರಪಣಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಮೋದಿ ಹೇಳಿದರು.

ಕಲ್ಪಿಸಿಕೊಳ್ಳಲಾಗದಂತಹ ಬಿಕ್ಕಟ್ಟು ಈಗಿನದು. ಇಂತಹ ಸಂದರ್ಭದಲ್ಲಿ ಸ್ವಾವಲಂಬನೆಯೊಂದೇ ಮುಂದುವರೆಯಲು ನಮಗೆ ಇರುವ ಮಾರ್ಗ. ನಾವು ಬಲಾಡ್ಯರಾಗಬೇಕು ಇದೇ ವೇಳೆಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.

೨೧ನೇ ಶತಮಾನವು ಭಾರತದ್ದು ಎಂಬ ಮಾತನ್ನು ನಾವು  ಕೇಳುತ್ತಿದ್ದೇವೆ. ಆದರೆ ಇದು ಕೇವಲ ಕನಸಲ್ಲ, ಇದು ನಮ್ಮ ಜವಾಬ್ದಾರಿ ಕೂಡಾ. ಆದರೆ ನಾವು ಇದನ್ನು ಸಾಧಿಸುವುದು ಹೇಗೆ? ವಿಶ್ವದ ಈಗಿನ ಪರಿಸ್ಥಿತಿಯು ಒಂದೇ ಒಂದು ದಾರಿಯನ್ನು ತೋರಿಸುತ್ತಿದೆ. ಅದೇ ಸ್ವಾವಲಂಬಿ ಭಾರತ ಎಂದು ಮೋದಿ ನುಡಿದರು.

ಸಾವು ಮತ್ತು ಬದುಕಿನ ಹೋರಾಟ ನಡೆಸುತ್ತಿರುವ ಜಗತ್ತಿನಲ್ಲಿ ಭಾರತದ ಔಷಧಗಳು ಹೊಸ ಭರವಸೆ ಮೂಡಿಸಿವೆ. ಈ ಕ್ರಮಗಳಿಗಾಗಿ ಭಾರತವನ್ನು ವಿಶ್ವದ ಎಲ್ಲೆಡೆ ಹೊಗಳಲಾಗುತ್ತಿದೆ. ಭಾರತೀಯರು ಕೂಡಾ ಹೆಮ್ಮೆ ಪಡುವಂತಾಗಿದೆ ಎಂದು ಪ್ರಧಾನಿ ನುಡಿದರು.

ಭಾರತವು ತನ್ನ ನೀತಿಗಳ ಮೂಲಕ ವಿಶ್ವವನ್ನೇ ಬದಲಿಸಿದೆ. ಯೋಗವು ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಕೊರೋನಾವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನಗಳು ಇಡೀ ವಿಶ್ವದ ಶ್ಲಾಘನೆಗೆ ಪಾತ್ರವಾಗಿವೆ. ಇವು ಭಾರತದ ಸಾಮರ್ಥ್ಯದ ಬಗ್ಗೆ ವಿಶ್ವಾದ್ಯಂತ ನಂಬಿಕೆ ಮೂಡಿಸಿದೆ ಎಂದು ಪ್ರಧಾನಿ ಹೇಳಿದರು.

೨೧ನೇ ಶತಮಾನ ಭಾರತದ್ದು. ನಮ್ಮ ಸಂಕಲ್ಪ ಬಿಕ್ಕಟ್ಟಿಗಿಂತ ದೊಡ್ಡದು. ನಾವು ಹೋರಾಟವನ್ನು ಮುಂದುವರೆಸುತ್ತೇವೆ. ಆದರೆ ಎಂದಿಗೂ ಅದನ್ನು ಬಿಟ್ಟು ಕೊಡುವುದಿಲ್ಲ ಮತ್ತು ಪರಾಭವವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಮೋದಿ ಹೇಳಿದರು.

ಬಿಕ್ಕಟ್ಟು ಭಾರತಕ್ಕೆ  ಅತ್ಯಂತ ಪ್ರಮುಖ ಅವಕಾಶವನ್ನು ಒದಗಿಸಿದೆ. ನಾವು ಈಗ ಈ ಹೋರಾಟದ ನಿರ್ಣಾಯಕ ಹಂತದಲ್ಲಿದ್ದೇವೆ. ಕೋವಿಡ್ ನಂತರದ ಜಗತ್ತಿನ ವ್ಯವಸ್ಥೆಯಲ್ಲಿ ಭಾರತವನ್ನು ಅಪ್ರತಿಮ ರಾಷ್ಟ್ರವನ್ನಾಗಿ ನಾವು ರೂಪಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ಕೊರೋನಾವೈರಸ್ ಹಾವಳಿಯಿಂದಾಗಿ ಇಡೀ ವಿಶ್ವವೇ ಸಂಕಷ್ಟದಲ್ಲಿದೆ. ನಾವೆಲ್ಲರೂ ಜನರ ಜೀವವನ್ನು ಉಳಿಸಿ, ಮುನ್ನಡೆಯಬೇಕಾಗಿದೆ. ಒಂದೇ ಒಂದು ವೈರಸ್ ಇಡೀ ಜಗತ್ತನ್ನೇ ನಲುಗುವಂತೆ ಮಾಡಿದೆ. ಇಡೀ ಪ್ರಪಂಚ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಇಂತಹ ಪರಿಸ್ಥಿತಿಯನ್ನು ನಾವು ಇದುವರೆಗೂ ಕೇಳಿಲ್ಲ, ನೋಡಿಲ್ಲ, ಇದೊಂದು ಅಭೂತಪೂರ್ವ ಸ್ಥಿತಿ ಎಂದು ಮೋದಿ ಹೇಳಿದರು.

ವಸುದೈವ ಕುಟುಂಬಕಂ (ವಿಶ್ವವೇ ಕುಟುಂಬ) ಎಂಬುದಾಗಿ ಹೇಳಿದ ಸಂಸ್ಕೃತಿ ನಮ್ಮದು. ಇಂದು ಕೊರೋನಾ ನಿಯಂತ್ರಿಸಲು ಭಾರತದ ಔಷಧಗಳು ವಿಶ್ವದಲ್ಲಿ ಭಾರತದ ಬಗ್ಗೆ ವಿಶ್ವಾಸ ಹೆಚ್ಚುವಂತೆ ಮಾಡುತ್ತಿವೆ. ಸ್ವಾವಲಂಬನೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಭಾರತಕ್ಕೆ ಭೂಮಿಯೇ ತಾಯಿ. ೨೧ನೇ ಶತಮಾನ ಭಾರತದ್ದು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ಮುನ್ನುಗ್ಗಬೇಕಿದೆ ಎಂದು ಪ್ರಧಾನಿ ನುಡಿದರು.

ಭಾರತದಲ್ಲಿ ಇರುವಷ್ಟು ಪ್ರತಿಭಾವಂತರು ಬೇರೆಲ್ಲೂ ಇಲ್ಲ. ಭಾರತ ಎಂತಹ ಸಮಸ್ಯೆ, ಸವಾಲುಗಳನ್ನು ಬೇಕಾದರೂ ಎದುರಿಸಬಲ್ಲದು. ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಇನ್ನಷ್ಟು ಪ್ರಬಲವಾಗಿ ಬೆಳೆಯಬೇಕಾಗಿದೆ. ವಿಶ್ವವೇ ಒಂದು ಪರಿವಾರ. ಭಾರತ ಗುಲಾಮಿ ಮನಸ್ಥಿತಿಯಿಂದ ಹೊರಬಂದಿದೆ ಎಂದು ಮೋದಿ ಹೇಳಿದರು.

ದೇಶಾದ್ಯಂತ ೩ನೇ ಹಂತದ ಲಾಕ್‌ಡೌನ್  ಮುಗಿಯಲು ೪ ದಿನಗಳು ಬಾಕಿ ಉಳಿದಿವೆ. ಭಾರತದಲ್ಲಿ ಇನ್ನೂ ಕೊರೋನಾ ಸೊಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ೪ನೇ ಲಾಕ್ ಡೌನ್ ಕಡೆಗೆ ನಾವು ಸಾಗುತ್ತಿದ್ದೇವೆ. ಕೊರೋನಾವೈರಸ್ ವಿರುದ್ಧದ ಈ ಹೋರಾಟ ಸುದೀರ್ಘವಾದದ್ದು. ಆದರೆ ಧೃತಿಗೆಡದೆ, ಎಲ್ಲ ನಿಯಮಗಳ ಪಾಲನೆಯೊಂದಿಗೆ ಜೀವ ಉಳಿಸಿಕೊಳ್ಳುತ್ತಾ ಅಭಿವೃದ್ಧಿಯ ಕಡೆಗೆ ನಾವು ಸಾಗಬೇಕು ಎಂದು ಪ್ರಧಾನಿ ಹೇಳಿದರು.

ಆರ್ಥಿಕತೆ, ಮೂಲ ಸವಲತ್ತು, ತಾಂತ್ರಿಕತೆ ಆಧಾರಿತ ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆ ಪೂರೈಸುವ ಶಕ್ತಿ ಇವು ಐದು ಭಾರತದ ಸ್ವಾವಲಂಬನೆಯ  ಪಂಚ ಸ್ತಂಭಗಳು ಎಂದು ಪ್ರಧಾನಿ ನುಡಿದರು.

No comments:

Advertisement