My Blog List

Tuesday, May 12, 2020

ಮೇ ೧೬ ರಿಂದ ವಂದೇ ಭಾರತ್ ಮಿಷನ್ ೨.೦ ಆರಂಭ

ಮೇ ೧೬ ರಿಂದ ವಂದೇ ಭಾರತ್ ಮಿಷನ್ ೨.೦ ಆರಂಭ
ನವದೆಹಲಿ: ದಿಗ್ಬಂಧನ (ಲಾಕ್ ಡೌನ್) ಮತ್ತು ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಬರುವ ವಂದೇ ಭಾರತ್ ಮಿಷನ್ನಿನ  ಎರಡನೇ ಹಂತ ಮೇ ೧೬ ರಿಂದ ಆರಂಭವಾಗಲಿದ್ದು, ಮೇ ೨೨ರವರೆಗೂ ಭಾರತೀಯರ ವಾಪಸಾತಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸುದ್ದಿ ಮೂಲಗಳು 2020 ಮೇ 12ರ ಮಂಗಳವಾರ ತಿಳಿಸಿದವು.

ಎರಡನೇ ಹಂತದ ವಂದೇ ಭಾರತ್ ಮಿಷನ್ನಿನಲ್ಲಿ ಒಟ್ಟು ೩೧ ದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ೧೪೯ ವಿಮಾನಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಇದರ ಜೊತೆ ಫೀಡರ್ ವಿಮಾನಗಳನ್ನು ಕೂಡ ನಿಗದಿಪಡಿಸಲಾಗಿದೆ ಎಂದು ಮೂಲಗಳು ಹೇಳಿದವು.

ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕೆನಡಾ, ಸೌದಿ ಅರೇಬಿಯಾ, ಇಂಗ್ಲೆಂಡ್, ಮಲೇಷಿಯಾ, ಓಮನ್, ಕಜಕಸ್ಥಾನ್, ಆಸ್ಟ್ರೇಲಿಯಾ, ಉಕ್ರೇನ್, ಕತಾರ್, ಇಂಡೋನೆಷಿಯಾ, ರಷ್ಯಾ, ಫಿಲಿಫೈನ್ಸ್, ಫ್ರಾನ್ಸ್, ಸಿಂಗಪೂರ್, ಐರ್ಲೆಂಡ್, ಕಿರ್ಗಿಸ್ತಾನ್, ಕುವೈತ್, ಜಪಾನ್, ಜೊರ್ಜಿಯೋ, ಜರ್ಮನಿ, ತಜಕಿಸ್ತಾನ್, ಬಹ್ರೇನ್, ಆರ್ಮೇನಿಯಾ, ಥೈಲ್ಯಾಂಡ್, ಇಟಲಿ, ನೇಪಾಳ, ಬೆಲಾರಸ್, ನೈಜೀರಿಯಾ ಹಾಗೂ ಬಾಂಗ್ಲಾದೇಶದಲ್ಲಿನ ಭಾರತೀಯರನ್ನು ಎರಡನೇ ಹಂತದಲ್ಲಿ ಕರೆದುಕೊಂಡು ಬರಲಾಗುತ್ತದೆ.

ಈಗಾಗಲೇ ಮೊದಲ ಹಂತದ ವಂದೇ ಭಾರತ್ ಮಿಷನ್ನಿನಲ್ಲಿ ೧೮ ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎನ್ನಲಾಗಿದೆ. ೧೨ ದೇಶಗಳಿಂದ ೬೪ ವಿಮಾನ, ೧೧ ಹಡಗುಗಳ ಮೂಲಕ ಅನಿವಾಸಿ ಭಾರತೀಯರನ್ನು ಕರೆತರುವ ಕೆಲಸ ನಡೆಯುತ್ತಿದೆ. ಮಾಲ್ಡೀವ್ಸ್ ನಲ್ಲಿ ಇರುವ ಭಾರತೀಯರನ್ನು ಸಮುದ್ರ ಸೇತು ಮೂಲಕ ಐಎನ್‌ಎಸ್ ಜಲಾಶ್ವ ಹಡಗಿನ ಮೂಲಕ ಕರೆತರಲಾಗುತ್ತಿದೆ.

ದುಬೈ ಸಿಂಗಾಪುರ , ಅಬುಧಾಬಿ ಮುಂತಾದ ದೇಶಗಳಿಂದ ಭಾರತೀಯರನ್ನು ಕರೆತರಲಾಗಿದೆ. ಮೇ ೧೪ರವರೆಗೂ ವಂದೇ ಭಾರತ್ ಮಿಷನ್ನಿನ ಮೊದಲ ಹಂತದ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ. ಇದರ ಮುಂದುವರಿದ ಭಾಗವಾಗಿ ಮೇ ೧೬ ರಿಂದ ಎರಡನೆ ಹಂತದ ವಂದೇ ಭಾರತ್ ಮಿಷನ್ ಪ್ರಾರಂಭವಾಗಲಿದೆ.

ಇನ್ನು, ಎರಡನೇ ಹಂತದ ಮಿಷನ್ನಿನಲ್ಲಿ ಕರ್ನಾಟಕಕ್ಕೆ ೧೭ ವಿಮಾನಗಳನ್ನು ಬಿಡಲಾಗಿದೆ. ಅಮೆರಿಕ (೩), ಕೆನಡಾ (೨), ಮಲೇಷಿಯಾ, ಫಿಲಿಫೈನ್ಸ್, ಸೌದಿ ಅರೇಬಿಯಾ, ಫ್ರಾನ್ಸ್, ಓಮನ್, ಜರ್ಮನಿ, ಕತಾರ್, ಇಂಡೊನೇಷಿಯಾ, ಯುಎಇ, ಐರ್ಲೆಂಡ್, ಆಸ್ಟ್ರೇಲಿಯಾ ಹಾಗೂ ಜಪಾನ್ನಿಂದ ಕರ್ನಾಟಕಕ್ಕೆ ತಲಾ ಒಂದು ವಿಮಾನವನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

No comments:

Advertisement