Saturday, May 9, 2020

ರೈಲು ದುರಂತ: ಮಹಾರಾಷ್ಟ್ರ ಸರ್ಕಾರಕ್ಕೆ ಎನ್ ಎಚ್ ಆರ್ ಸಿ ನೋಟಿಸ್

ರೈಲು ದುರಂತ: ಮಹಾರಾಷ್ಟ್ರ ಸರ್ಕಾರಕ್ಕೆಎನ್ ಎಚ್ ಆರ್ ಸಿ ನೋಟಿಸ್
ಮುಂಬೈ: ಔರಂಗಾಬಾದಿನಲ್ಲಿ ಮೇ ೮ರಂದು ೧೬ ಮಂದಿಯ ಸಾವಿಗೆ ಕಾರಣವಾದ ಖಾಲಿ ಗೂಡ್ಸ್ ರೈಲುಗಾಡಿ ದುರಂತದ ಹಿನ್ನೆಲೆಯಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) 2020 ಮೇ 09ರ ಶನಿವಾರ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಮಾಧ್ಯಮ ವರದಿಗಳನ್ನು ಆಧರಿಸಿ ಸ್ವಯಂ ಇಚ್ಛೆಯ ಪ್ರಕರಣ ದಾಖಲಿಸಿದ ಆಯೋಗ, ನಾಲ್ಕು ವಾರಗಳ ಒಳಗಾಗಿ ದುರ್ಘಟನೆ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಔರಂಗಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನಿರ್ದೇಶನ ನೀಡಿತು.

ನಾಂದೇಡ್ ವಿಭಾಗದ ಬದ್ನಾಪುರ ಮತ್ತು ಕರ್ಮಡ್ ನಿಲ್ದಾಣಗಳ ಮಧ್ಯೆ ದುರಂತ ಸಂಭವಿಸಿತ್ತು.

ಘಟನೆ ಬಗ್ಗೆ ನಾಲ್ಕು ವಾರಗಳ ಒಳಗೆ ವಿವರವಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ವರದಿಯು ಬಡ ವ್ಯಕ್ತಿಗಳು, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಆಹಾರ,ಆಶ್ರಯ ಮತ್ತು ಇತರ ಅಗತ್ಯ ಸವಲತ್ತುಗಳನ್ನು ಒದಗಿಸಲಾಗಿವುದಕ್ಕೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿರಬೇಕು ಎಂದು ಸೂಚಿಸಲಾಗಿದೆ. ಎಲ್ಲ ಆಯಾಮಗಳಿಂದಲೂ ಘಟನೆಯನ್ನು ಪರಿಶೀಲಿಸಿ ವಲಸೆ ಕಾರ್ಮಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿತು.

ಸಂತ್ರಸ್ಥ ಕಾರ್ಮಿಕರು ಮತ್ತು ಅವರನ್ನು ಅವಲಂಬಿಸಿದವರಿಗೆ ಕಲ್ಪಿಸಲಾಗಿರುವ ಪರಿಹಾರ ಮತ್ತು ಪುನರ್ ವಸತಿ ವ್ಯವಸ್ಥೆಯ ವಿವರಗಳು, ಗಾಯಾಳುಗಳಿಗೆ ಒದಗಿಸಲಾದ ವೈದ್ಯಕೀಯ ಚಿಕಿತ್ಸೆಯ ವಿವgಗಳನ್ನು ಕೂಡಾ ವರದಿ ಒದಗಿಸಬೇಕು ಎಂದು ಆಯೋಗ ಸೂಚಿಸಿತು.
ಜನರು ರೈಲುಹಳಿಗಳ ಮೇಲೆ ನಿದ್ರಿಸಬಾರದು ಎಂಬ ನಿರೀಕ್ಷೆ ಇರುವುದರಿಂದ ಮೇಲ್ನೋಟಕ್ಕೆ ಘಟನೆಯನ್ನು ದುರಂತ ಎಂಬುದಾಗಿ ಬಣ್ಣಿಸಬಹುದು ಎಂದು ಆಯೋಗ ಹೇಳಿತು. ಆದಾಗ್ಯೂ, ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಹಿನ್ನೆಲೆಯಲ್ಲಿ ಈಗಾಗಲೇ ಸಂಕಷ್ಟಗಳಿಗೆ ಗುರಿಯಾಗಿರುವ ಕಾರ್ಮಿಕರು ಯಾವುದೇ ಸಂಚಾರ ವ್ಯವಸ್ಥೆ ಲಭಿಸದ ಕಾರಣ ದೀರ್ಘ ದೂರದವರೆಗೆ ಕಾಲ್ನಡಿಗೆ ಮಾಡುವಂತಾಗಿತ್ತು ಎಂಬುದು ಪ್ರಕರಣದಲ್ಲಿ ನಿರ್ಣಾಯಕ ಅಂಶವಾಗಿದೆ. ಜಿಲ್ಲಾ ಆಡಳಿತದ ಅಸಡ್ಡೆಯ ಕಾರಣದಿಂದಾಗಿ ಅವರು ಪ್ರಾಣಗಳನ್ನು ಕಳೆದುಕೊಳ್ಳುವಂತಾಗಿದೆ ಎಂದು ಆಯೋಗ ಹೇಳಿತು.

ಜಲ್ನಾ ಮತ್ತು ಔರಂಗಾಬಾದ್ ನಡುವೆ ಸಂಭವಿಸಿದ ಸರಕು ಸಾಗಣೆ ರೈಲುಗಾಡಿ ಹರಿದ ಪರಿಣಾಮವಾಗಿ ೧೬ ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿ, ಇತರ ಐವರು ಗಾಯಗೊಂಡಿದ್ದರು.

ದಕ್ಷಿಣ ಮಧ್ಯ ರೈಲ್ವೇಯ (ಎಸ್ ಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯ ಪ್ರಕಾರ ಗಾಯಾಳುಗಳಿಗೆ ಔರಂಗಾಬಾದ್ ಸಿವಿಲ್ ಆಸ್ಪತ್ರೆಯಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಕ್ಷಿಣ ಮಧ್ಯ ರೈಲ್ವೇಯ ನಾಂದೇಡ್ ವಿಭಾಗದಲ್ಲಿ ಔರಂಗಾಬಾದ್ ಜಿಲ್ಲೆಯ ಕರ್ಮಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ದಾರುಣ ಘಟನೆ ಘಟಿಸಿತ್ತು.

No comments:

Advertisement