Saturday, May 23, 2020

ಆರೋಗ್ಯ ಸೇತು ಇದ್ದರೆ ವಿಮಾನಯಾನಿಗಳಿಗೆ ಕ್ವಾರಂಟೈನ್ ಇಲ್ಲ

ಆರೋಗ್ಯ ಸೇತು ಇದ್ದರೆ ವಿಮಾನಯಾನಿಗಳಿಗೆ ಕ್ವಾರಂಟೈನ್ ಇಲ್ಲ
ನವದೆಹಲಿ: ಕೋರೋನಾವೈರಸ್ ಸೋಂಕಿನ (ಕೋವಿಡ್-೧೯) ಲಕ್ಷಣಗಳು ಇಲ್ಲದ ಮತ್ತು ಆರೋಗ್ಯ ಸೇತು ಆಪ್‌ನಲ್ಲಿಹಸಿರು ಸ್ಟಾಟಸ್ ಇರುವ ದೇಶೀ ವಿಮಾನ ಪ್ರಯಾಣಿಕರು ತಮ್ಮ ಗಮ್ಯ ತಾಣ ತಲುಪಿದ ಬಳಿಕ ಕ್ವಾರಂಟೈನ್‌ಗೆ ಒಳಗಾಗುವ ಅಗತ್ಯ ಇಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ 2020 ಮೇ 23ರ ಶನಿವಾರ ಇಲ್ಲಿ ಹೇಳಿದರು.

ಯಾರೇ ಪ್ರಯಾಣಿಕರು ಆರೋಗ್ಯ ಸೇತು ಆಪ್ ಅಳವಡಿಸಿಕೊಂಡಿದ್ದಲ್ಲಿ, ಅದು ಪಾಸ್ ಪೋರ್ಟ್ ಇದ್ದಂತೆ ಎಂಬುದಾಗಿ ನಾವು ಸ್ಪಷ್ಟ ಪಡಿಸಿದ್ದೇವೆ.  ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಯಾರಾದರೂ ಏಕೆ ಬಯಸುತ್ತಾರೆ?’ ಎಂದು ಹರದೀಪ್ ಸಿಂಗ್ ಪುರಿ ನುಡಿದರು.

ಫೇಸ್ ಬುಕ್ ನೇರ ಸಮಾವೇಶದಲ್ಲಿ ಪ್ರಶ್ನೆಯೊಂದಕ್ಕೆ ವಿಮಾನಯಾನ ಸಚಿವರು ಉತ್ತರಿಸುತ್ತಿದ್ದರು.

ವಿಮಾನಯಾನ ಸಚಿವಾಲಯವು ಬಿಡುಗಡೆ ಮಾಡಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‍ಸ್ (ಎಸ್ ಒಪಿ) ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ನೀಡಿದೆ ಎಂದು ಪುರಿ ಹೇಳಿದರು.

ನಾನು ಕ್ವಾರಂಟೈನ್ ಬಗ್ಗೆ ಮಾತನಾಡುವಾಗ, ನಾನು ದೇಶೀ ಪ್ರಯಾಣಿಕರ ಬಗ್ಗೆ ಮಾತನಾಡುತ್ತಿದ್ದೇನೆ, ಅಂತಾರಾಷ್ಟ್ರೀಯ ಪ್ರಯಾಣಿಕರು ೧೪ ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಈಗಾಗಲೇ ನಿರ್ದಿಷ್ಟ ಪಡಿಸಲಾಗಿದೆ ಎಂದು ಸಚಿವರು ನುಡಿದರು.

ದೇಶೀ ವಿಮಾನಯಾನಗಳು ಮೇ ೨೫ರಿಂದ ಹಂತ ಹಂತವಾಗಿ ಪುನಾರಂಭಗೊಳ್ಳಲಿವೆ ಎಂದು ಪುರಿ ಅವರು ಬುಧವಾರ ಪ್ರಕಟಿಸಿದ್ದರು. ದೇಶೀ ವಿಮಾನಯಾನದ ಬಗ್ಗೆ ಸಚಿವಾಲಯವು ಹೊಸದಾಗಿ ಮಾರ್ಗಸೂಚಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರವು ದೇಶೀ ವಿಮಾನಯಾನಕ್ಕೆ ಆರೋಗ್ಯ ಸೇತು ಆಪ್ ಕಡ್ಡಾಯ ಎಂಬುದಾಗಿ ತಿಳಿಸಿತ್ತು. ೧೪ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಇದರಿಂದ ವಿನಾಯ್ತಿ ನೀಡಲಾಗಿತ್ತು.

ಆರೋಗ್ಯ ಸೇತು ಆಪ್ ಇಲ್ಲದೇ ಇದ್ದಲ್ಲಿ, ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಒದಗಿಸಲಾಗಿರುವ ಕೌಂಟರಿಗೆ ತೆರಳಿ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅದು ಹೇಳಿತ್ತು.

ಏನಾದರೂ ಕಾರಣಕ್ಕಾಗಿ ಪ್ರಯಾಣಿಕನು ತನ್ನ ದೂರವಾಣಿಯಲ್ಲಿ ಆರೋಗ್ಯ ಸೇತು ಆಪ್ ಹೊಂದಿರದೇ ಇದ್ದಲ್ಲಿ ಅಂತಹವರು ಸ್ವಯಂ ಘೋಷಣಾ ಫಾರಂ ನೀಡಬಹುದು ಮತ್ತು ಅಂತಹ ಪ್ರಯಾಣಕರನ್ನು ವಿಮಾನ ಏರದಂತೆ ತಡೆಯುವಂತಿಲ್ಲ ಎಂದು ಸಚಿವಾಲಯ ತಿಳಿಸಿತ್ತು.

ಶನಿವಾರ ರಾಷ್ಟ್ರವ್ಯಾಪಿ ದಿಗ್ಬಂಧನದ ೬೦ನೇ ದಿನವಾಗಿದ್ದು, ಮೇ ೩೧ರಂದು ಅದು ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಮಾರ್ಚ್ ೨೪ರಂದು ಕೊರೋನಾವೈರಸ್ ಪ್ರಸರಣವನ್ನು ತಡೆಯುವ ಸಲುವಾಗಿ ರಾಷ್ಟವ್ಯಾಪಿ ದಿಗ್ಬಂಧನವನ್ನು ಘೋಷಿಸಲಾಗಿತ್ತು.

No comments:

Advertisement