ಮೋದಿ ಸ್ಪಂದಿಸಿದರು ದೀದಿ ಮೊರೆಗೆ, 5 ಕಾಲಂ ಸೇನೆ ರವಾನೆ
ನವದೆಹಲಿ: ಅಂಫಾನ್ ಚಂಡಮಾರುತದಿಂದ ಕುಸಿದು ಬಿದ್ದಿರುವ ರಾಜ್ಯದ ಅಗತ್ಯ ಮೂಲಸವಲತ್ತು ಮತ್ತು ಅಗತ್ಯ ಸೇವೆಗಳನ್ನು ಪುನಃಸ್ಥಾಪನೆ ಮಾಡುವ ಮಹಾ ಪ್ರಯತ್ನದಲ್ಲಿ ಸಹಕರಿಸಲು ಸೇನೆಯನ್ನು ನಿಯೋಜಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವು 2020 ಮೇ 23ರ ಶನಿವಾರ ಮಾಡಿದ ಮನವಿಗೆ ಕೇಂದ್ರ ಸರ್ಕಾರವು ಸ್ಪಂದಿಸಿದ್ದು, ಭಾರತೀಯ ಸೇನೆಯ ೫ ಕಾಲಂಗಳನ್ನು ಕಳುಹಿಸಲು ನಿರ್ಧರಿಸಿತು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮನವಿ ಮೇರೆಗೆ ರಾಜಧಾನಿ ಕೋಲ್ಕತ ನಗರದ ಅಗತ್ಯ ಸೇವೆ ಮತ್ತು ಮೂಲಸವಲತ್ತು ಮರುಸ್ಥಾಪನೆಗಾಗಿ ಈ ಸೇನಾ ತುಕಡಿಯನ್ನು ಕಳುಹಿಸಲು ಕೇಂದ್ರ ತೀರ್ಮಾನಿಸಿತು.
ಸರಣಿ ಟ್ವೀಟ್‌ಗಳನ್ನು ಮಾಡಿದ ಪಶ್ಚಿಮ ಬಂಗಾಳದ ಗೃಹ ಇಲಾಖೆಯು ಅಗತ್ಯ ಸೇವೆ, ಮೂಲಸವಲತ್ತುಗಳ ಪುನಃಸ್ಥಾಪನೆಗಾಗಿ ರಾಜ್ಯವು ಪ್ರತಿಯೊಬ್ಬರನ್ನೂ ಬಳಸಿಕೊಳ್ಳುತ್ತಿದೆ. ಆದರೆ ಇನ್ನಷ್ಟು ನೆರವಿನ ಅಗತ್ಯವಿದೆ ಎಂದು ಹೇಳಿ, ನೆರವಿಗಾಗಿ ಸೇನೆಯನ್ನು ನಿಯೋಜಿಸುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು.
ಚಂಡಮಾರುತೋತ್ತರ ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು ಸೇನೆಯನ್ನು ನಿಯೋಜಿಸುವಂತೆ ಪಶ್ಚಿಮ ಬಂಗಾಳ ಗೃಹ ಇಲಾಖೆ ಮಾಡಿರುವ ಮನವಿಗೆ ಕೇಂದ್ರ ರಾತ್ರಿಯವೇಳೆಗೆ ಸ್ಪಂದಿಸಿತು. ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್) ಇನ್ನೂ ೧೦ ಹೆಚ್ಚಿನ ತಂಡಗಳನ್ನು ಜೊತೆಗೂಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದೆ. ಎನ್ ಡಿಆರ್‌ಎಫ್ ಈಗಾಗಲೇ ಚಂಡಮಾರುತ ಪೀಡಿತ ಬಂಗಾಳದಲ್ಲಿ ತನ್ನ ೨೬ ತಂಡಗಳನ್ನು ಕಾರ್‍ಯಾಚರಣೆಗೆ ಇಳಿಸಿದೆ.
ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ನೂರಕ್ಕೂ ಹೆಚ್ಚು ತಂಡಗಳು ಉರುಳಿದ ಮರ ಕಡಿಯುವ ಕೆಲಸದಲ್ಲಿ ನಿರತವಾಗಿವೆ. ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪನೆಗೆ ಉರುಳಿದ ಮರಗಳನ್ನು ತೆರವುಗೊಳಿಸುವುದು ತುರ್ತಾಗಿ ಆಗಬೇಕಾಗಿರುವ ಕೆಲಸವಾಗಿದೆ ಎಂದು ಗೃಹ ಇಲಾಖೆ ಟ್ವೀಟ್ ಮಾಡಿದೆ.
ಬಂಗಾಳ ಸರ್ಕಾರವು ರೈಲ್ವೇ, ಬಂದರು ಅಧಿಕಾರಿಗಳು ಮತ್ತು ಖಾಸಗಿ ರಂಗವನ್ನೂ ಸಂಪರ್ಕಿಸಿ ಈ ಬೃಹತ್ ಕಾರ್‍ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದೆ ಎಂದೂ ಟ್ವೀಟ್ ಹೇಳಿದೆ.
೧೯೯೯ರ ಬಳಿಕ ಬಂಗಾಳ ಕೊಲ್ಲಿಯಲ್ಲಿ ಅತ್ಯಂತ ಬೃಹತ್ ಸ್ವರೂಪದಲ್ಲಿ ’ಸೂಪರ್ ಸೈಕ್ಲೋನ್’ ಆಗಿ ಪರಿವರ್ತನೆಗೊಂಡು ಬುಧವಾರ ಮಧ್ಯಾಹ್ನ ಸುಂದರಬನಗಳಲ್ಲಿನ ಸಾಗರ ದ್ವೀಪದಿಂದ ೨೦ ಕಿಮೀ ದೂರದಲ್ಲಿ ನೆಲಕ್ಕೆ ಅಪ್ಪಳಿಸಿದ ’ಅಂಫಾನ್’ ಚಂಡ ಮಾರುತವು ರಾಜ್ಯದಲ್ಲಿ ಸುಮಾರು ೮೫ ಮಂದಿಯನ್ನು ಬಲಿತೆಗೆದುಕೊಂಡು ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ರಸ್ತೆ ಸಂಪರ್ಕಗಳು, ದೂರ ಸಂಪರ್ಕ, ವಿದ್ಯುತ್ ಸಂಪರ್ಕ ಕಡಿದುಹೋಗಿದೆ. ಸಾವನ್ನಪ್ಪಿದ ೮೫ ಮಂದಿಯ ಪೈಕಿ ೧೫ ಮಂದಿ ರಾಜಧಾನಿ ಕೋಲ್ಕತದಲ್ಲೇ ಅಸು ನೀಗಿದ್ದಾರೆ.
ಚಂಡಮಾರುತ ಬೀಸಿದ ಬಳಿಕ ಪಶ್ಚಿಮ ಬಂಗಾಳಕ್ಕೆ ಆಗಮಿಸಿ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಂಡಮಾರುvದಿಂದ ಅಂದಾಜು ೧ ಲಕ್ಷ ಕೋಟಿ ರೂಪಾಯಿಗಳ ಹಾನಿ ಆಗಿದೆ ಎಂಬುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಕೊರೋನಾವೈರಸ್ ಸಾಂಕ್ರಾಮಿಕದ ಜೊತೆಗೆ ಚಂಡಮಾರುತ ಹಾನಿಯೂ ಸೇರಿ ಅವಳಿ ಸಂಕಷ್ಟಗಳನ್ನು ನಿಭಾಯಿಸುತ್ತಿರುವ ಪರಿಗಾಗಿ ಮಮತಾ ಬ್ಯಾನರ್ಜಿ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ ೧೦೦೦ ಕೋಟಿ ರೂಪಾಯಿಗಳ ಮಧ್ಯಂತರ ಪರಿಹಾರ ನೆರವನ್ನು ತತ್‌ಕ್ಷಣವೇ ಘೋಷಿಸಿದ್ದರು.
ಇದಕ್ಕೆ ಮುನ್ನ ಬಂಗಾಳ ಸರ್ಕಾರವು ರೈಲ್ವೇ ಸಚಿವಾಲಯಕ್ಕೆ ಶ್ರಮಿಕ ವಿಶೇಷ ರೈಲುಗಳನ್ನು ಮೇ ೨೬ರವರೆಗೆ ರಾಜ್ಯ ತಲುಪದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿತ್ತು. ಜಿಲ್ಲಾ ಆಡಳಿತಗಳು ಈಗಾಗಲೇ ಚಂಡಮಾರುತ ಪರಿಹಾರ ಕಾರ್‍ಯಗಳಲ್ಲಿ ಮಗ್ನವಾಗಿವೆ. ಆದ್ದರಿಂದ ವಲಸೆ ಕಾರ್ಮಿಕರನ್ನೂ ನಿಭಾಯಿಸುವುದು ಕಷ್ಟ ಎಂದು ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿ ರಾಜೀವ ಸಿನ್ಹ ಅವರು ರೈಲ್ವೇ ಮಂಡಳಿಗೆ ಪತ್ರ ಮೂಲಕ ತಿಳಿಸಿದ್ದರು.
No comments:
Post a Comment