ಬಗೆ ಹರಿಯದ ವಲಸೆ ಕಾರ್ಮಿಕರ ಕಷ್ಟ: ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ನೋಟಿಸ್
ನವದೆಹಲಿ: ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಮಾಧ್ಯಮ, ಪತ್ರಿಕೆಗಳಲ್ಲಿ ಪ್ರಕಟವಾದ ಹಲವಾರು ವರದಿಗಳನ್ನು ಗಣನೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ 2020 ಮೇ 26ರ ಮಂಗಳವಾರ ಈ ಬಗ್ಗೆ ಗಮನ ಹರಿಸಲು ತೀರ್ಮಾನಿಸಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತು.
ಕೊರೋನಾವೈರಸ್ ದಿಗ್ಬಂಧನದ ಬಳಿಕ ದೇಶದ ವಿವಿಧ ಕಡೆಗಳಲ್ಲಿ ರಸ್ತೆಗಳು, ಬಸ್ಸು ನಿಲ್ದಾಣಗಳು ಇಲ್ಲವೇ ರೈಲು ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡು ಸಂಕಷ್ಟಕ್ಕೆ ಈಡಾಗಿರುವ ವಲಸೆ ಕಾರ್ಮಿಕರ ಪರಿಸ್ಥಿತಿ ಸುಧಾರಣೆಗೆ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಒಪ್ಪಿತು.
ಪರಿಸ್ಥಿತಿ ಸುಧಾರಣೆಗೆ ಪರಿಣಾಮಕಾರಿಯಾದ, ಸಂಘಟಿತವಾದ ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂಬುದು ನಮ್ಮ ಅಭಿಪ್ರಾಯ ಎಂದು ಸ್ವಯಂ ಇಚ್ಛೆಯ ಪ್ರಕರಣ ದಾಖಲಿಸಿದ ನ್ಯಾಯಮೂರ್ತಿ ಅಶೋಕ ಭೂಷಣ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕೆ ಕೌಲ್ ಹಾಗೂ ಎಂಆರ್ ಶಾ ಅವನ್ನು ಒಳಗೊಂಡ ಪೀಠ ಹೇಳಿತು.
ತನಗೆ ನೆರವಾಗುವಂತೆ ಕಾನೂನು ಅಧಿಕಾರಿಗೆ ಸೂಚಿಸಿದ ಪೀಠವು ಭಾರತ ಸರ್ಕಾರವು ಈ ವಿಷಯಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಎಲ್ಲ ಕ್ರಮಗಳನ್ನು ತನ್ನ ಗಮನಕ್ಕೆ ತರುವಂತೆ ಹೇಳಿತು. ಕೇಂದ್ರ ಸರ್ಕಾರ, ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದ ಪೀಠ, ಆದಷ್ಟೂ ಶೀಘ್ರ ಉತ್ತರ ನೀಡುವಂತೆ ನಿರ್ದೇಶನ ನೀಡಿತು.
ವೃತ್ತ ಪತ್ರಿಕಾ ವರದಿಗಳು ಮತ್ತು ಮಾಧ್ಯಮ ವರದಿಗಳನ್ನು ತನ್ನ ಆದೇಶದಲ್ಲಿ ಉಲ್ಲೇಖಿಸಿದ ಪೀಠ, ಈ ವರದಿಗಳು ವಲಸೆ ಕಾರ್ಮಿಕರು ಸುದೀರ್ಘ ದೂರವನ್ನು ಕಾಲ್ನಡಿಗೆ, ಸೈಕಲ್ ಮೂಲಕ ಕ್ರಮಿಸಿರುವುದನ್ನು ಹಾಗೂ ಅವರ ನಿರಂತರವಾದ ದುರದೃಷ್ಟಕರ ಮತ್ತು ಶೋಚನೀಯ ಸಂಕಷ್ಟಗಳನ್ನು ಬೆಳಕಿಗೆ ತಂದಿವೆ ಎಂದು ಹೇಳಿತು.
No comments:
Post a Comment