ಗ್ರಾಹಕರ ಸುಖ-ದುಃಖ

My Blog List

Saturday, May 30, 2020

ಪೈಲಟ್ ಗೆ ಕೊರೋನಾ: ಮಾಸ್ಕೋಗೆ ಹೊರಟಿದ್ದ ವಿಮಾನ ವಾಪಸ್

ಪೈಲಟ್ ಗೆ ಕೊರೋನಾ: ಮಾಸ್ಕೋಗೆ ಹೊರಟಿದ್ದ ವಿಮಾನ ವಾಪಸ್

ನವದೆಹಲಿ: ಮಾಸ್ಕೋಗೆ ಹೊರಟಿದ್ದ ವಿಮಾನದ ಪೈಲಟ್ಗೆ ಕೊರೋನಾವೈರಸ್ ಸೋಂಕು ತಲುಪಿದ್ದು ಗೊತ್ತಾದ ಪರಿಣಾಮವಾಗಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ರಶ್ಯಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಕರೆತರಲು ಹೊರಟಿದ್ದ ದೆಹಲಿ-ಮಾಸ್ಕೋ ಏರ್ ಬಸ್ -೩೨೦ ನಿಯೋ (ವಿಟಿ-ಇಎಕ್ಸ್ಆರ್) ವಿಮಾನವು ಪಯಣವನ್ನು ಸ್ಥಗಿತಗೊಳಿಸಿ ಮಾರ್ಗ ಮಧ್ಯದಿಂದಲೇ ವಾಪಸಾದ ಘಟನೆ 2020 ಮೇ 30ರ ಶನಿವಾರ ಘಟಿಸಿತು.

ಪೈಲಟ್ಗೆ ಕೊರೋನಾವೈರಸ್ ಸೋಂಕು ತಲುಪಿದ್ದು ಗೊತ್ತಾಗಿದ್ದು, ತತ್ ಕ್ಷಣವೇ ವಿಮಾನವನ್ನು ಹಿಂದಕ್ಕೆ ಕರೆಸಿ ಕೆಳಕ್ಕೆ ಇಳಿಸಲಾಯಿತು ಎಂದು ವರದಿಗಳು ತಿಳಿಸಿವೆ. ಏರ್ ಇಂಡಿಯಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ನೂರಾರು ಪ್ರಯಾಣಿಕರು ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ.

ಹಾರಾಟ ಪೂರ್ವ ಪರೀಕ್ಷಾ ವರದಿಯಲ್ಲಿ ದೋಷವಿತ್ತು. ವರದಿಯನ್ನು ಆರಂಭದಲ್ಲಿ ನೆಗೆಟಿವ್ ಎಂಬುದಾಗಿ ಓದಿಕೊಳ್ಳಲಾಗಿತ್ತು. ಹಾರಾಟದ ಸಮಯದಲ್ಲಿ ಪೈಲಟ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ತತ್ಕ್ಷಣವೇ  ಅವರನ್ನು ವಾಪಸ್ ಕರೆಸಲಾಯಿತು ಎಂದು ಅಧಿಕಾರಿಗಳು ಹೇಳಿದರು.

"ರಶ್ಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರಲು ಮಾಸ್ಕೋಗೆ ಹೊರಟಿದ್ದ ಪ್ರಯಾಣಿಕರ ರಹಿತ ೩೨೦ ವಿಮಾನವು ಉಜ್ಬೇಕಿಸ್ತಾನ್ ವಾಯುಪ್ರದೇಶವನ್ನು ತಲುಪಿದಾಗ, ಪೈಲಟ್ಗಳಲ್ಲಿ ಒಬ್ಬರಿಗೆ  ಕೋವಿಡ್ -೧೯ ಸೋಂಕು ತಗುಲಿದೆ ಎಂಬುದು ನಮ್ಮ ತಂಡದ ಅರಿವಿಗೆ ಬಂತು ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.

ತತ್ ಕ್ಷಣ ಹಿಂದಿರುಗುವಂತೆ ವಿಮಾನ ಸಿಬ್ಬಂದಿಗೆ ಸೂಚಿಸಲಾಯಿತು. ಶನಿವಾರ ಮಧ್ಯಾಹ್ನ ೧೨.೩೦ ಸುಮಾರಿಗೆ ವಿಮಾನವು ದೆಹಲಿಗೆ ಮರಳಿತು ಎಂದು ಅಧಿಕಾರಿ ಹೇಳಿದರು.

ವಿಮಾನದ ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ರಶ್ಯಾದಲ್ಲಿ ಸಿಕ್ಕಿಹಾಕಿಕೊಂಡಿರುವ  ಭಾರತೀಯರನ್ನು ಮರಳಿ ಕರೆತರಲು ಬೇರೆ ವಿಮಾನವನ್ನು ಮಾಸ್ಕೋಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ವಿಟಿ-ಇಎಕ್ಸ್ಆರ್ ಏರ್ ಇಂಡಿಯಾ ವಿಮಾನವು ವಂದೇ ಭಾರತ್ ಮಿಷನ್ನಡಿಯಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ರಶ್ಯಾದಿಂದ ಮರಳಿ ಕರೆತರಲು ಹೊರಟಿತ್ತು.

ಇದು ಪ್ರಯಾಣಿಕರನ್ನು ಕರೆತರಲು ಹೊರಟಿದ್ದ ಖಾಲಿ ವಿಮಾನವಾಗಿತ್ತು. ಆರು ಮಂದಿ ಸಿಬ್ಬಂದಿ ಮಾತ್ರ ವಿಮಾನದಲ್ಲಿದ್ದರು,

"ಇದು ಮಾನವ ಕಣ್ತಪ್ಪು ಎಂದು ನಂಬಲಾಗಿದೆ ಮತ್ತು ಅದು ಅರಿವಾದ ತತ್ ಕ್ಷಣ ಅದನ್ನು ಸರಿಪಡಿಸಲಾಯಿತು" ಎಂದು ಏರ್ ಇಂಡಿಯಾ ಮೂಲ ತಿಳಿಸಿತು.

ವಿಮಾನವು ಮಧ್ಯಾಹ್ನ ೧೨: ೪೫ ಸುಮಾರಿಗೆ ದೆಹಲಿಗೆ ಬಂದಿಳಿಯಿತು ಮತ್ತು ಕೋವಿಡ್-೧೯ ಶಿಷ್ಟಾಚಾರಕ್ಕೆ ಅನುಗುಣವಾಗಿ ವಿಮಾನವನ್ನು ಸ್ವಚ್ಛಗೊಳಿಸಲಾಯಿತು. ಸೋಂಕಿತ ಪೈಲಟ್ ಮತ್ತು ಉಳಿದ ಸಿಬ್ಬಂದಿಯನ್ನು ಪ್ರತ್ಯೇಕಿಸಿ ಕ್ವಾರಂಟೈನಿಗೆ ಒಳಪಡಿಸಲಾಯಿತು.

ಪ್ರತಿ ಹಾರಾಟದ ಮೊದಲು, ಕಾರ್ಯಾಚರಣಾ ಸಿಬ್ಬಂದಿಯ ಕೋವಿಡ್ -೧೯ ಪರೀಕ್ಷೆಯನ್ನು ನಡೆಸುವುದು ಮಾರ್ಗಸೂಚಿ ಪ್ರಕಾಋ ಕಡ್ಡಾಯವಾಗಿದೆ. ಪರೀಕ್ಷೆಗಳು ನಕಾರಾತ್ಮಕವಾಗಿದ್ದಾಗ ಮಾತ್ರ, ವಿಮಾನ ಹತ್ತಲು ಅವರಿಗೆ ಅನುಮತಿ ನೀಡಲಾಗುತ್ತದೆ. ಹಂತದಲ್ಲಿಯೇ ತಪ್ಪು ಮಾಡಲಾಗಿದೆ ಮತ್ತು ಪೈಲಟ್ ವರದಿಯನ್ನು ತಪ್ಪಾಗಿ ಓದಲಾಗಿದೆ ಎಂದು ಮೂಲ ಹೇಳಿತು.

ಕಳೆದ ವಾರ ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ, ವಾಯುಯಾನ ಸಚಿವ ಹರದೀಪ್ ಸಿಂಗ್ ಪುರಿ ಅವರು ಆಗಸ್ಟ್ ತಿಂಗಳಿಗಿಂತ ಮುನ್ನ ಅಂತಾರಾಷ್ಟ್ರೀಯ ವಿಮಾನಯಾನ ಪ್ರಾರಂಭಿಸಲು ಯತ್ನಿಸಲಾಗುವುದು ಎಂದು ಹೇಳಿದ್ದರು.

ಮೇ ೨೫ ರಿಂದ ದೇಶೀಯ ವಿಮಾನಗಳ ಪುನಾರಂಭವನ್ನು ಪ್ರಕಟಿಸುವಾಗ, ಸಚಿವ ಪುರಿ ಅವರು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ  ಎಂದು ಹೇಳಿದ್ದರು.

ಆದಾಗ್ಯೂ, ವಂದೇ ಭಾರತ್ ವಾಪಸಾತಿ ವಿಮಾನಗಳು ಮುಂದುವರಿಯಲಿವೆ, ಅದರೆ ಸಚಿವಾಲಯವು ಪ್ರಸ್ತುತ ದೇಶೀಯ ವಿಮಾನ ಹಾರಾಟದತ್ತ ಗಮನ ಹರಿಸುತ್ತಿದೆ. ವಂದೇ ಭಾರತ್ ಮಿಷನ್ ಮೊದಲ ೨೫ ದಿನಗಳಲ್ಲಿ ವಿಶೇಷ ವಿಮಾನಗಳ ಮೂಲಕ ಸುಮಾರು ೫೦,೦೦೦ ನಾಗರಿಕರನ್ನು ಮರಳಿ ಕರೆತರಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಪ್ರಸ್ತುತ, ದೇಶೀಯ ವಿಮಾನಯಾನದ ಬಗ್ಗೆ ಗಮನಿಸಲಾಗುವುದು ಮತ್ತು ವಿಮಾನ ಹಾರಾಟದ ಅನುಭವದಿಂದ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ನುಡಿದರು.

No comments:

Advertisement