Saturday, May 30, 2020

ಚೀನಾ ಜೊತೆ ಮಾತುಕತೆಗೆ ಚಾಲನೆ: ರಾಜನಾಥ್ ಸಿಂಗ್

ಚೀನಾ ಜೊತೆ ಮಾತುಕತೆಗೆ ಚಾಲನೆ: ರಾಜನಾಥ್ ಸಿಂಗ್

ನವದೆಹಲಿ: ಲಡಾಖ್ ಬಿಕ್ಕಟ್ಟು ಇತ್ಯರ್ಥದ ಸಲುವಾಗಿ ಭಾರತ ಮತ್ತು ಚೀನಾ ಸೇನೆ ಹಾಗೂ ರಾಜತಾಂತಿಕ ಮಟ್ಟಗಳಲ್ಲಿ ಮಾತುಕತೆ ನಡೆಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2020 ಮೇ 30ರ ಶನಿವಾರ ಇಲ್ಲಿ ಹೇಳಿದರು.

ನೈಜ ನಿಯಂತ್ರಣ ರೇಖೆಯಲ್ಲಿ ಕಡೆಗಳಲ್ಲಿ ಚೀನಾದ ಜೊತೆಗೆ ನಡೆಯುತ್ತಿರುವ ಘರ್ಷಣೆಗೆ ಸಂಬಂಧಿಸಿದಂತೆ ಹಿರಿಯ ಕೇಂದ್ರ ಸಚಿವರೊಬ್ಬರಿಂದ ಬಂದಿರುವ ಮೊತ್ತ ಮೊದಲ ಹೇಳಿಕೆ ಇದಾಗಿದೆ.

ಸುದ್ದಿ ಮಾದ್ಯಮ ಒಂದರ ಜೊತೆ ಮಾತನಾಡಿದ ರಾಜನಾಥ್ ಸಿಂಗ್ ಅವರು ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಬಯಸುವುದಾಗಿ ಉಭಯ ರಾಷ್ಟ್ರಗಳೂ ಸ್ಪಷ್ಟ ಪಡಿಸಿವೆ ಎಂದು ಹೇಳಿದರು. ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳಲು ಉಭಯ ರಾಷ್ಟ್ರಗಳು ಈಗಾಗಲೇ ಮಾತುಕತೆಗೆ ಚಾಲನೆ ನೀಡಿರುವ ಕಾರಣ ಅಮೆರಿಕದ ಮಧ್ಯಪ್ರವೇಶದ ಅಗತ್ಯ ಇಲ್ಲ ಎಂದು ಅವರು ನುಡಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ ಸುದ್ದಿಗಾರರ ಜೊತೆ ಮಾತನಾಡುತ್ತಾ, ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ಮತ್ತು ಪ್ರಕ್ಷುಬ್ಧತೆ ಕೊನೆಗೊಳಿಸುವ ಸಲುವಾಗಿ ಮಧ್ಯಸ್ಥಿಕೆ ವಹಿಸಲು ನಾನು ಸಿದ್ಧನಿದ್ದೇನೆ ಮತ್ತು  ಅದಕ್ಕೆ ಸಮರ್ಥನಿದ್ದೇನೆ ಎಂದು ಹೇಳಿದ್ದರು.

ಡೊನಾಲ್ಡ್ ಟ್ರಂಪ್ ಮುಂದಿಟ್ಟ ಕೊಡುಗೆಯನ್ನು ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯಗಳು ಈಗಾಗಲೇ ತಿರಸ್ಕರಿಸಿವೆ.

ಅಮೆರಿಕ ಅಧ್ಯಕ್ಷರ ಕೊಡುಗೆ ಬಗ್ಗೆ ರಾಜನಾಥ್ ಸಿಂಗ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ಎಸ್ಪೆರ್ ನಡುವಣ ಶುಕ್ರವಾರ ಸಂಜೆಯ ಮಾತುಕತೆಯಲ್ಲೂ ಪ್ರಸ್ತಾಪಕ್ಕೆ ಬಂದಿತ್ತು.

ಭಾರತ ಮತ್ತು ಚೀನಾ ಈಗಾಗಲೇ ಮಾತುಕತೆ ನಡೆಸುತ್ತಿವೆ. ಉಭಯ ರಾಷ್ಟ್ರಗಳ ಮಧ್ಯೆ ಏನಾದರೂ ಸಮಸ್ಯೆ ಇದ್ದಲ್ಲಿ ಸೇನೆ ಮತ್ತು ರಾಜತಾಂತ್ರಿಕ ಮಾತುಕತೆಗಳ ಮೂಲಕ ಇತ್ಯರ್ಥ ಪಡಿಸಲಾಗುವುದು ಎಂದು ನಾನು ಅವರಿಗೆ ಹೇಳಿದ್ದೇನೆ ಎಂದು ರಾಜನಾಥ್ ಸಿಂಗ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. ಬೀಜಿಂಗ್ ನಿಂದ ಕೂಡಾ ಇದೇ ಮಾದರಿಯ ಹೇಳಿಕೆಗಳು ಬಂದಿರುವತ್ತ ಅವರು ಬೊಟ್ಟು ಮಾಡಿದರು.

ಭಾರತದ ನೀತಿ ಅತ್ಯಂತ ಸ್ಪಷ್ಟವಾಗಿದೆ. ನಾವು ಎಲ್ಲ ನೆರೆ ಹೊರೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಇದು ಅತ್ಯಂತ ದೀರ್ಘ ಕಾಲದ ಪ್ರಯತ್ನ. ಆದರೆ, ಕೆಲವೊಮ್ಮೆ ಚೀನಾದ ಜೊತೆಗೆ ಇಂತಹ  ಸಂದರ್ಭಗಳು ಬರುತ್ತವೆ. ಇಂತಹ ಘಟನೆಗಳು ಹಿಂದೆಯೂ ಸಂಭವಿಸಿವೆ.. ವಿಷಯ ಇತ್ಯರ್ಥಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಚೀನಾವು ಇದಕ್ಕೆ ಮುನ್ನ ತಿಂಗಳಲ್ಲಿ ಲಡಾಖ್ ವಿಭಾಗದ ಗಾಲ್ವನ್ ಕಣಿವೆ ಮತ್ತು ಪ್ಯಾಂಗೊಂಗ್ ತ್ಸೊ ಪ್ರದೇಶಕ್ಕೆ ತನ್ನ ಹೆಚ್ಚುವರಿ ಸೇನಾ ತುಕಡಿಗಳನ್ನು ಕಳುಹಿಸಿತ್ತು. ದೌಲತ್ ಬೇಗ್ ಓಲ್ಡೀಯ ಸಮೀಪ ನಿರ್ಮಿಸಲಾಗುತ್ತಿರುವ ೬೦ ಮೀಟರ್ ಕಾಂಕ್ರೀಟ್ ಸೇತುವೆ ಸೇರಿದಂತೆ, ಭಾರತವು ನೈಜನಿಯಂತ್ರಣ ರೇಖೆಯ ತನ್ನ ಭಾಗದಲ್ಲಿ ನಡೆಸುತ್ತಿರುವ ನಿರ್ಮಾಣ ಯೋಜನಾ ಕಾಮಗಾರಿಗಳಿಗೆ ತಡೆ ಹಾಕುವ ಉದ್ದೇಶ ಇದರ ಹಿಂದಿತ್ತು. ದೌಲತ್ ಬೇಗ್ ಓಲ್ಡೀಯು ಕಾರಾಕೋರಂ ಕಣಿವೆ ಮಾರ್ಗದ ದಕ್ಷಿಣಕ್ಕಿರುವ ಭಾರತದ ಕೊನೆಯ ಸೇನಾ ಠಾಣೆಯಾಗಿದೆ.

ಚೀನಾದ ಸೇನಾ ಚಲನವಲನಕ್ಕೆ ಉತ್ತರವಾಗಿ, ಭಾರತದ ಸೇನೆ ಕೂಡಾ ಚೀನೀ ಸೇನಾಬಲಕ್ಕೆ ಸರಿಹೊಂದುವಂತೆ ತನ್ನ ಹೆಚ್ಚುವರಿ ತುಕಡಿಗಳನ್ನು ಪ್ರದೇಶಕ್ಕೆ ರವಾನಿಸಿತ್ತು. ಮತ್ತು ನೈಜ ನಿಯಂತ್ರಣ ರೇಖೆಯ ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಏಕಪಕ್ಷೀಯ ಪ್ರಯತ್ನಕ್ಕೆ ನವದೆಹಲಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿತ್ತು.

ಯಾವುದೇ ಸಂದರ್ಭದಲ್ಲಿ ಭಾರತದ ಘನತೆಗೆ ಧಕ್ಕೆ ಉಂಟಾUಲು ನಾವು ಬಿಡುವುದಿಲ್ಲ ಎಂಬ ಭರವಸೆಯನ್ನು ರಾಷ್ಟ್ರಕ್ಕೆ ನೀಡುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಭಾರತದ ಕೈ ತಿರುಚುವ ಚೀನೀ ಸಾಮರ್ಥ್ಯ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಹೀಗಾಗುವ ಪ್ರಶ್ನೆಯೇ ಇಲ್ಲ. ಏಕೆಂದರೆ ದೇಶವು ಪ್ರಬಲ ನಾಯಕತ್ವನ್ನು ಹೊಂದಿದೆ ಮತ್ತು ಜನರಿಗೆ ಇದು ಗೊತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದರು.

No comments:

Advertisement