Saturday, June 20, 2020

ಪ್ರಧಾನಿ ಮೋದಿ ಭಾಷಣಕ್ಕೆ ಚೀನೀ ಮಾಧ್ಯಮ ಕತ್ತರಿ

ಪ್ರಧಾನಿ ಮೋದಿ ಭಾಷಣಕ್ಕೆ ಚೀನೀ  ಮಾಧ್ಯಮ ಕತ್ತರಿ

ನವದೆಹಲಿ: ಚೀನಾದ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ವಿಚಾಟ್, ಪ್ರಸ್ತುತ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತೀಯ ರಾಯಭಾರ ಕಚೇರಿಯ (ಇಒಐ) ನವೀಕೃತ ಮಾಹಿತಿಗಳನ್ನು 2020 ಜೂನ್ 20ರ ಶನಿವಾರ ಕಿತ್ತು ಹಾಕಿದೆ. ಇದರಲ್ಲಿ ೨೦ ಭಾರತೀಯ ಸೇನಾ ಸೈನಿಕರು ಸಾವನ್ನಪ್ಪಿದ ಘರ್ಷಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ನೀಡಿದ ಹೇಳಿಕೆ ಕೂಡಾ ಸೇರಿದೆ.

ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ತೆಗೆದುಹಾಕಲು ನೀಡಲಾದ ಕಾರಣಗಳಲ್ಲಿ ರಾಜ್ಯ ರಹಸ್ಯಗ ಬಹಿರಂಗ ಪಡಿಸಿದ್ದು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟು ಮಾಡುವಂತಹುದು ಎಂಬ ಕಾರಣಗಳು ಬಹುಮುಖ್ಯ ಕಾರಣಗಳಾಗಿವೆ.

ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ವಿಚಾಟ್ನಲ್ಲಿ ಪ್ರಕಟವಾದ ನವೀಕೃತ ಮಾಹಿತಿಗಳಲ್ಲಿ ಭಾರತ-ಚೀನಾ ಗಡಿ ಪರಿಸ್ಥಿತಿ ಕುರಿತು ಮೋದಿಯವರ ಹೇಳಿಕೆ, ಟೀಕೆಗಳು, ಗುರುವಾರ ನಡೆದ ಭಾರತೀಯ ಮತ್ತು ಚೀನಾದ ವಿದೇಶಾಂಗ ಸಚಿವರ ನಡುವಣ ದೂರವಾಣಿ ಕರೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರರ ಹೇಳಿಕೆ ಸೇರಿದ್ದವು.

ಒಂದು ದಿನ ಮುಂಚಿತವಾಗಿ, ಎಂಇಎ ವಕ್ತಾರರ ಅದೇ ಹೇಳಿಕೆಯನ್ನು ಅಳಿಸಿದ ನಂತರ ಇಒಐ ತನ್ನ ಚೀನೀ ಟ್ವಿಟರ್ ತರಹದ ವೀಬೊ ಖಾತೆಯಲ್ಲಿ ಸ್ಪಷ್ಟೀಕರಣವನ್ನು ನೀಡಬೇಕಾಗಿ ಬಂದಿತ್ತು.

ರಾಯಭಾರ ಕಚೇರಿಯ ಅಧಿಕಾರಿಗಳು ಅದರ ಓದುಗರಿಗೆ ಪೋಸ್ಟ್ನ್ನು ತೆಗೆದುಹಾಕಿಲ್ಲ ಎಂದು ಸ್ಪಷ್ಟಪಡಿಸಿಚೀನೀ ಭಾಷೆಯಲ್ಲಿ ಹೇಳಿಕೆಯ ಸ್ಕ್ರೀನ್ ಶಾಟ್ ಅನ್ನು ಮರು ಪ್ರಕಟಿಸಿದ್ದರು.

ವಿಚಾಟ್ನಲ್ಲಿ ಹೇಳಿಕೆಗಳು ಇಂಗ್ಲಿಷ್ನಲ್ಲಿದ್ದರೆ, ವೀಬೋ ಖಾತೆಯು ಪೂರ್ವ ಲಡಾಕ್ ಗಡಿಯಲ್ಲಿ ನಡೆದ ಘಟನೆಗಳ ಭಾರತೀಯ ಸಚಿವಾಲಯದ ಆವೃತ್ತಿಯ ಕೆಳಗೆ ಚೀನೀ ಭಾಷಾಂತರವನ್ನು ಪ್ರಕಟಿಸಿತ್ತು.

ವಾರದ ಆರಂಭದಲ್ಲಿ ಪೂರ್ವ ಲಡಾಕ್ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಚೀನಾದ ಸಾಮಾಜಿಕ ಮಾಧ್ಯಮದಲ್ಲಿನ ಭಾರತೀಯ ಖಾತೆಯ ಅಧಿಕೃತ ಖಾತೆಗಳಿಂದ ಪೋಸ್ಟ್ಗಳನ್ನು ದಿಢೀರನೆ ತೆಗೆದುಹಾಕಲಾಗಿದೆ.

ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ೨೦ ಭಾರತೀಯ ಸೇನಾ ಸೈನಿಕರು ಸಾವನ್ನಪ್ಪಿದ್ದರೆ, ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಅನುಭವಿಸಿದ ಸಾವುನೋವುಗಳನ್ನು ಚೀನಾ ಸರ್ಕಾರ ಇದುವರೆಗೂ ಬಹಿರಂಗಪಡಿಸಿಲ್ಲ, ಆದರೆ ಚೀನಾದ ಅಧಿಕೃತ ಮಾಧ್ಯಮಗಳು ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿವೆ ಎಂದು ಒಪ್ಪಿಕೊಂಡಿದ್ದವು.

ಇಒಐಯ ಅಧಿಕೃತ ಖಾತೆಯಾದ ವಿಚಾಟ್ ಫಾಲೋಯರ್ಸ್ (ಅನುಯಾಯಿಗಳು) ಶನಿವಾರ ಬೆಳಗ್ಗೆ ವ್ಯತ್ಯಾಸವನ್ನು ಗಮನಿಸಿದರು.

ವಿಚಾಟ್ನಲ್ಲಿನ ಎರಡು ಹೇಳಿಕೆಗಳನ್ನು ಕ್ಲಿಕ್ ಮಾಡಿದಾಗ, ಪಾಪ್ಸ್ -ಅಪ್ ಸಂದೇಶವು ಪೋಸ್ಟ್ಗಳನ್ನು ಲೇಖಕರು ಅಳಿಸಿದ್ದಾರೆ ಎಂದು ಹೇಳಿತು. ಭಾರತದ ರಾಯಭಾರ ಕಚೇರಿಯು (ಇಒಐ) ಯಾವುದೇ ಪೋಸ್ಟ್ನ್ನು ಕೂಡಾ ಅಳಿಸಿಲ್ಲ ಎಂದು ತಿಳಿದು ಬಂದಿದೆ.

ವಿಚಾಟ್ ಮೂರನೇ ಪೋಸ್ಟ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರ ಹೇಳಿಕೆಯಾಗಿದ್ದು, ಅದನ್ನು ಕ್ಲಿಕ್ ಮಾಡಿದಾಗಇದು ನಿಯಮಾವಳಿಗಳನ್ನು ಉಲ್ಲಂಘಿಸುವ ಕಾರಣ ಇದರಲ್ಲಿನ ಮಾಹಿತಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂಬ ಸಂದೇಶ ಬರುತ್ತದೆ.

ಹೇಳಿಕೆಯು ನಿಯಮಾವಳಿಗಳನ್ನು ಉಲ್ಲಂಘಿಸಿ ರಾಷ್ಟ್ರೀಯ ಭದ್ರತೆಗೆ ಅಪಾಯವುಂಟು ಮಾಡುವ ಕಾರಣ ಇದು ಗಂಭೀರ ವಿಚಾರವಾಗುತ್ತದೆ. ಇದರಲ್ಲಿನ ವಿಷಯವು ಸಂಬಂಧಪಟ್ಟ ಕಾನೂನುಗಳು, ನಿಯಮಗಳು ಮತ್ತು ನೀತಿಗಳನ್ನು ಉಲ್ಲಂಘಿಸುತ್ತದೆ ಎಂಬುದು ದೃಢಪಟ್ಟಿದೆ ಎಂದೂ ಸಂದೇಶ ಹೇಳುತ್ತದೆ.

ದೇಶದ ಕಾನೂನು ಮತ್ತು ನಿಯಮಗಳನ್ನು ನಿಷೇಧಿಸಿದ ಅಂಶಗಳನ್ನು ಒಳಗೊಂಡಿರುವುದರಂದ ವಕ್ತಾರರ ಹೇಳಿಕೆಯನ್ನು ಕಿತ್ತು ಹಾಕಲಾಗಿದೆ ಎಂದು ವಿಚಾಟ್ ವಕ್ತಾರರು ಬಳಿಕ ತಿಳಿಸಿದರು.

ರಾಷ್ಟ್ರೀಯ ಸುರಕ್ಷತೆಗೆ ಅಪಾಯ ಉಂಟು ಮಾಡುವುದು, ದೇಶದ ರಹಸ್ಯಗಳನ್ನು ಬಹಿರಂಗಪಡಿಸುವುದು, ದೇಶದ ಅಧಿಕಾರಗಳನ್ನು ಬುಡಮೇಲು ಮಾಡುವುದು ಅಥವಾ ರಾಷ್ಟ್ರದ ಏಕತೆಯನ್ನು ಕುಗ್ಗಿಸುವುದು, ದ್ವೇಷಕ್ಕೆ ಪ್ರಚೋದನೆ, ತಪ್ಪು ಮಾಹಿತಿ ಪ್ರಚಾರ, ಅಕ್ರಮ ಕೂಟಕ್ಕೆ ಪ್ರಚೋದನೆ ನೀಡುವುದು, ಸಾರ್ವಜನಿಕ ವ್ಯವಸ್ಥೆಯನ್ನು ಹಾಳುಗೆಡವಲು ಪ್ರದರ್ಶನ ನಡೆಸುವುದು ಅಥವಾ ಜನರನ್ನು ಒಟ್ಟುಗೂಡಿಸುವುದು ಇತ್ಯಾದಿ ನಿಯಮಾವಳಿಗಳ ಸುದೀರ್ಘ ಪಟ್ಟಿಯಲ್ಲಿ ಸೇರಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ವೀಬೋ ಖಾತೆಯನ್ನು ಕೂಡಾ ಹೊಂದಿದ್ದು, ೨೦೧೫ರ ಮೇ ತಿಂಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ್ದಾಗ ಖಾತೆಯನ್ನು ತೆರೆಯಲಾಗಿತ್ತು.

ವಿಚಾಟ್ ಚೀನಾದ ಸಾಮಾಜಿಕ ಆಪ್ಗಳ ಪೈಕಿ ಅತ್ಯಂತ ಹೆಚ್ಚು ಜನಪ್ರಿಯ ಅಪ್ಲಿಕೇಶನ್ ಆಗಿದ್ದು ೧೦೦ ಕೋಟಿಗೂ ( ಬಿಲಿಯನ್) ಹೆಚ್ಚು ಬಳಕೆದಾರರನ್ನು ಹೊಂದಿದೆ

No comments:

Advertisement