ಮೋದಿ ಹೇಳಿಕೆ ಬಗ್ಗೆ ಕಾಂಗ್ರೆಸ್ ಟೀಕೆ: ಪಿಎಂಒ ಗರಂ
ನವದೆಹಲಿ: ಯಾರೊಬ್ಬರೂ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿಲ್ಲ ಅಥವಾ ಪ್ರಸ್ತುತ ಭಾರತೀಯ ಪ್ರದೇಶದಲ್ಲಿ ಯಾರೂ ಇಲ್ಲ ಮತ್ತು ಭಾರತದ ಯಾವುದೇ ಠಾಣೆಯನ್ನೂ (ಪೋಸ್ಟ್) ಯಾರೂ ವಶಪಡಿಸಿಕೊಂಡಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸರ್ವ ಪಕ್ಷ ಸಭೆಯಲ್ಲಿ ನೀಡಿದ ಹೇಳಿಕೆ ಬಗ್ಗೆ ಕಟಕಿಯಾಡಿದ ಕಾಂಗ್ರೆಸ್ ಟೀಕೆಗಳನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯವು 2020 ಜೂನ್ 20ರ ಶನಿವಾರ ತರಾಟೆಗೆ ತೆಗೆದುಕೊಂಡಿತು.
ಪ್ರಧಾನಿಯವರ ಹೇಳಿಕೆ ಹೊರಬಂದ ಕ್ಷಣದಿಂದ ಕಾಂಗ್ರೆಸ್ ನಾಯಕರು ಪ್ರಧಾನಿಯವರನ್ನು ಪ್ರಶ್ನಿಸಿ ಸರಣಿ ಟ್ವೀಟ್ಗಳನ್ನು ಮಾಡುತ್ತಿದ್ದಾರೆ. ಹಿಂಸಾತ್ಮಕ ಘರ್ಷಣೆ ಸಂಭವಿಸಿದ ಗಲ್ವಾನ್ ಪ್ರದೇಶ ಭಾರತೀಯ ಪ್ರದೇಶವಾಗಿರಲಿಲ್ಲವೇ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ.
ಪ್ರಧಾನಿಯವರ ಹೇಳಿಕೆಯನ್ನು ಮೊತ್ತ ಮೊದಲನೆಯವರಾಗಿ ಪ್ರಶ್ನಿಸಿದ ಕಾಂಗ್ರೆಸ್ಸಿನ ಹಿರಿಯ ನಾಯಕ ರಾಹುಲ್ ಗಾಂಧಿ, ’ಪ್ರಧಾನಿಯವರು ಭಾರತೀಯ ಪ್ರದೇಶವನ್ನು ಚೀನೀ ದಾಳಿಗೆ ಒಪ್ಪಿಸಿದ್ದಾರೆ. ಭೂಮಿಯು ಚೀನೀಯರದ್ದಾಗಿದ್ದರೆ ನಮ್ಮ ಸೈನಿಕರು ಏಕೆ ಹತರಾದರು? ಅವರನ್ನು ಎಲ್ಲಿ ಕೊಲ್ಲಲಾಯಿತು?’ ಎಂದು ಟ್ವೀಟ್ ಮಾಡಿದರು.
ಈ ಟೀಕೆಯನ್ನು ’ಪ್ರಧಾನಿ ಮೋದಿ ಅವರ ಹೇಳಿಕೆಗಳಿಗೆ ತಪ್ಪು ಅರ್ಥ ನೀಡಲು ನಡೆಸಲಾಗಿರುವ ಕುಚೇಷ್ಟೆಯ ಯತ್ನ’ ಎಂದು ಸರ್ಕಾರದ ಹೇಳಿಕೆ ಬಣ್ಣಿಸಿದೆ.
ಮೋದಿಯವರ ಹೇಳಿಕೆಯು ೨೦ ಮಂದಿ ಭಾರತೀಯ ಸೈನಿಕರನ್ನು ಹುತಾತ್ಮರನ್ನಾಗಿಸಿರುವ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ಗಲ್ವಾನಿನಲ್ಲಿ ನಡೆದ ಮುಖಾಮುಖಿ ಬಗ್ಗೆ ಬೆಳಕು ಚೆಲ್ಲಿತ್ತು ಎಂದು ಪ್ರಧಾನ ಮಂತ್ರಿಗಳ ಕಚೇರಿ ಹೇಳಿದೆ.
‘ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ನಮ್ಮ ಕಡೆಯಲ್ಲಿ ಯಾರೊಬ್ಬ ಚೀನೀಯನೂ ಇಲ್ಲ ಎಂಬ ಪ್ರಧಾನ ಮಂತ್ರಿಯವರ ವಿಶ್ಲೇಷಣೆಯು ನಮ್ಮ ಸಶಸ್ತ್ರ ಪಡೆಗಳ ಶೌರ್ಯದ ಪರಿಣಾಮವಾಗಿ ಉಂಟಾಗಿರುವ ಪರಿಸ್ಥಿತಿಗೆ ಸಂಬಂಧಿಸಿದ್ದಾಗಿದೆ’ ಎಂದು ಹೇಳಿಕೆ ತಿಳಿಸಿದೆ.
‘ನಮ್ಮ ೧೬ ಬಿಹಾರ ರೆಜಿಮೆಂಟಿನ ಸೈನಿಕರ ಬಲಿದಾನವು ಕಟ್ಟಡ ನಿರ್ಮಾಣದ ಚೀನೀ ಯತ್ನಗಳನ್ನು ವಿಫಲಗೊಳಿಸಿದೆ ಮತ್ತು ಎಲ್ಎಸಿಯ ಈ ಸ್ಥಳದಲ್ಲಿ ಅತಿಕ್ರಮಣ ನಡೆಸುವ ಆ ದಿನದ ಯತ್ನವನ್ನು ವಿಫಲಗೊಳಿಸಿದೆ’ ಎಂದು ಪಿಎಂಒ ಹೇಳಿದೆ.
‘ಈ ಹೊತ್ತಿನಲ್ಲಿ ಚೀನೀ ಪಡೆಗಳು ಹೆಚ್ಚಿನ ಬಲದೊಂದಿಗೆ ಎಲ್ಎಸಿಗೆ ಬಂದಿದ್ದವು, ಭಾರತದ ಪ್ರತಿಕ್ರಿಯೆಯು ಅದಕ್ಕೆ ತಕ್ಕದ್ದಾಗಿತ್ತು ಎಂಬುದಾಗಿ ಸರ್ಕಾರವು ಸರ್ವಪಕ್ಷ ಸಭೆಗೆ ತಿಳಿಸಿತು’ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೇಳಿದೆ.
’ಎಲ್ಎಸಿಯಲ್ಲಿನ ಅತಿಕ್ರಮಣಕ್ಕೆ ಸಂಬಂಧಿಸಿದಂತೆ, ಎಲ್ಎಸಿಯಲ್ಲಿ ಕಟ್ಟಡಗಳನ್ನು ನಿರ್ಮಿಸಲು ಬಯಸಿ ಚೀನೀ ಸೇನೆ ಮುಂದುವರೆದ ಪರಿಣಾಮವಾಗಿ ಮತ್ತು ಇಂತಹ ಕೃತ್ಯಗಳನ್ನು ಮಾಡದಂತೆ ಸೂಚಿಸಿದರೂ ನಿರಾಕರಿಸಿದ ಪರಿಣಾಮವಾಗಿ ಜೂನ್ ೧೫ರಂದು ಗಲ್ವಾನ್ನಲ್ಲಿ ಹಿಂಸಾಚಾರ ಸಂಭವಿಸಿತು’ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ತಿಳಿಸಿತು.
No comments:
Post a Comment