My Blog List

Tuesday, July 14, 2020

ಛಬಹಾರ್ ರೈಲ್ವೇ ಯೋಜನೆಯಿಂದ ಭಾರತ ಹೊರಕ್ಕೆ, ಇರಾನಿಗೆ ಆಪ್ತವಾದ ಚೀನಾ

ಛಬಹಾರ್ ರೈಲ್ವೇ ಯೋಜನೆಯಿಂದ ಭಾರತ ಹೊರಕ್ಕೆ,
ಇರಾನಿಗೆ ಆಪ್ತವಾದ ಚೀನಾ

ಟೆಹರಾನ್/ ನವದೆಹಲಿ: ಛಬಹಾರ್ ಬಂದರಿನಿಂದ ಅಫ್ಘಾನಿಸ್ಥಾನದ ಗಡಿಯಲ್ಲಿನ ಜಹೇದಾನ್‌ಗೆ ರೈಲುಮಾರ್ಗ ನಿರ್ಮಿಸುವ ಯೋಜನೆಯನ್ನು ಭಾರತದ ನೆರವನ್ನು ಕೈಬಿಟ್ಟು ಸ್ವತಃ ಮುಂದುವರೆಸಲು ಇರಾನ್ ಮುಂದಾಗಿದೆ.

ಯೋಜನೆಗೆ ನೆರವು ಪಡೆಯುವುದಕ್ಕೆ ಸಂಬಂಧಿಸಿದಂತೆ ಭಾರತದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದ ಇರಾನ್ ನಾಲ್ಕು ವರ್ಷಗಳ ಬಳಿಕ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ ಎಂಬ ನೆಪ ಒಡ್ಡಿ, ಭಾರತವನ್ನು ಕೈಬಿಟ್ಟು ೨೦೨೨ರ ವೇಳೆಗೆ ಯೋಜನೆಯನ್ನು ಸ್ವತಃ ಪೂರ್ಣಗೊಳಿಸಲು ಹೊರಟಿದೆ.

ಮಾರ್ಚ್ ೨೦೨೨ ವೇಳೆಗೆ ಸಂಪೂರ್ಣ ಯೋಜನೆ ಪೂರ್ಣಗೊಳ್ಳಲಿದೆ, ಮತ್ತು ಇರಾನಿನ ರೈಲ್ವೆ ಭಾರತದ ಸಹಾಯವಿಲ್ಲದೆ ಮುಂದುವರಿಯುತ್ತದೆ ಮತ್ತು ಇರಾನಿನ ರಾಷ್ಟ್ರೀಯ ಅಭಿವೃದ್ಧಿ ನಿಧಿಯಿಂದ ಸುಮಾರು ೪೦೦ ಮಿಲಿಯನ್ (೪೦ ಕೋಟಿ) ಡಾಲರ್ ಹಣವನ್ನು ಬಳಸಿಕೊಳ್ಳಲಿದೆ ಎಂದು ಪತ್ರಿಕಾ ವರದಿಯೊಂದು 2020 ಜುಲೈ 14ರ ಮಂಗಳವಾರ ತಿಳಿಸಿದೆ.

ಚೀನಾದ ಜೊತೆಗೆ ೪೦ ಕೋಟಿ (೪೦೦ ಬಿಲಿಯನ್) ಡಾಲರ್ ಮೌಲ್ಯದ ೨೫ ವರ್ಷಗಳ ಆರ್ಥಿಕ ಮತ್ತು ಭದ್ರತಾ ಸಹಭಾಗಿತ್ವವನ್ನು ಅಂತಿಮಗೊಳಿಸಿದ ಹಿನ್ನೆಲೆಯಲ್ಲಿ ಭಾರತದ ಜೊತೆಗಿನ ಪಾಲುದಾರಿಕೆಯನ್ನು ಕೈಬಿಡುವ ಕ್ರಮವನ್ನು ಇರಾನ್ ಕೈಗೊಂಡಿದೆ. ಚೀನಾ ಜೊತೆಗಿನ ಸಹಭಾಗಿತ್ವವು ಬ್ಯಾಂಕಿಂಗ್, ದೂರಸಂಪರ್ಕ, ಬಂದರುಗಳು, ರೈಲ್ವೆ ಮತ್ತು ಇತರ ಡಜನ್ ಗಟ್ಟಲೆ ಯೋಜನೆಗಳಲ್ಲಿ ಚೀನಾದ ಉಪಸ್ಥಿತಿಯನ್ನು ವಿಸ್ತರಿಸುತ್ತದೆ.

ಇದಕ್ಕೆ ಪ್ರತಿಯಾಗಿ, ಮುಂದಿನ ೨೫ ವರ್ಷಗಳಲ್ಲಿ ಚೀನಾವು ನಿಯಮಿತವಾಗಿ, ತೈಲ ಖರೀದಿಯಲ್ಲಿ ಅಪಾರವಾದ ರಿಯಾಯ್ತಿಯನ್ನು ಇರಾನಿನಿಂದ ಪಡೆಯಲಿದೆ ಎಂದು ಇರಾನಿನ ಅಧಿಕಾರಿ ಮತ್ತು ತೈಲ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತಾವಿತ ಒಪ್ಪಂದವನ್ನು ವಿವರಿಸುವ ೧೮ ಪುಟಗಳ ದಾಖಲೆಯು ಮಿಲಿಟರಿ ಸಹಕಾರವನ್ನು ವಿಸ್ತರಿಸುವ ಸೂಚನೆಯನ್ನೂ  ನೀಡಿದ್ದು, ಚೀನಾಕ್ಕೆ ಪ್ರದೇಶದಲ್ಲಿ ಭದ್ರ ನೆಲೆಯನ್ನು ಒದಗಿಸಲಿದೆ ಎಂದು ವರದಿ ಹೇಳಿದೆ.

ಒಪ್ಪಂದವು ಪ್ರದೇಶದಲ್ಲಿ ಭಾರತದ ಭವಿಷ್ಯಕ್ಕೆ ಘಾಸಿ ಉಂಟು ಮಾಡುವ ಸಾಧ್ಯತೆ ಇದೆ. ಇರಾನಿನ ಅಧ್ಯಕ್ಷ ರೂಹಾನಿ ಮತ್ತು ಅಫ್ಘಾನಿಸ್ತಾನ ಅಧ್ಯಕ್ಷ ಘನಿ ಅವರೊಂದಿಗೆ ಛಬಹಾರ್ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಟೆಹ್ರಾನ್ ಭೇಟಿಯ ಸಂದರ್ಭದಲ್ಲಿ ಸಹಿ ಹಾಕುವ ಮೂಲಕ ರೈಲ್ವೆ ಮಾರ್ಗ ಯೋಜನೆಯನ್ನು ೨೦೧೬ರ ಮೇ ತಿಂಗಳಲ್ಲಿ ಅಂತಿಮಗೊಳಿಸಲಾಗಿತ್ತು.

ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಪರ್ಯಾಯ ವ್ಯಾಪಾರ ಮಾರ್ಗವನ್ನು ನಿರ್ಮಿಸಲು ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನ ನಡುವಿನ ತ್ರಿಪಕ್ಷೀಯ ಒಪ್ಪಂದಕ್ಕೆ ಭಾರತದ ಬದ್ಧತೆಯ ಭಾಗವಾಗಿ ಒಪ್ಪಂದವನ್ನು ರೂಪಿಸಲಾಗಿತ್ತು. ಸರ್ಕಾರಿ ಸ್ವಾಮ್ಯದ ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಲಿಮಿಟೆಡ್ (ಐಆರ್ ಸಿಒನ್) ಯೋಜನೆಗೆ ಎಲ್ಲಾ ಸೇವೆಗಳು, ಸೂಪರ್‌ಸ್ಟ್ರಕ್ಚರ್ ಕೆಲಸ ಮತ್ತು ಸುಮಾರು ೬೧.೬೦ ಕೋಟಿ (೬೧. ಬಿಲಿಯನ್) ಡಾಲರ್ ಮೊತ್ತದ ಹಣಕಾಸು ಒದಗಿಸುವುದಾಗಿ ಭರವಸೆ ನೀಡಿತ್ತು.

ಆದರೆ, ಅಮೆರಿಕವು ಇರಾನ್ ವಿರುದ್ಧ ನಿರ್ಬಂಧಗಳನ್ನು ಹೇರುತ್ತಿರುವುದರಿಂದ, ಐಆರ್‌ಸಿಒನ್ ಎಂಜಿನಿಯರುಗಳು ಹಲವಾರು ತಾಣಗಳಿಗೆ ಭೇಟಿ ನೀಡಿದ್ದರ ಹೊರತಾಗಿಯೂ ಭಾರತವು ರೈಲ್ವೆ ಮಾರ್ಗ ನಿರ್ಮಾಣದ ಕೆಲಸವನ್ನು ಪ್ರಾರಂಭಿಸಿರಲಿಲ್ಲ.

ಛಬಹಾರ್ ಬಂದರು ಮತ್ತು ರೈಲು ಮಾರ್ಗಕ್ಕೆ ಅಮೆರಿಕವು ನಿರ್ಬಂಧಗಳಿಂದ ಮನ್ನಾ ನೀಡಿದ್ದರೂ, ಅಮೆರಿಕದಿಂದ ದಂಡಕ್ಕೆ ಗುರಿಯಾಗಬಹುದೆಂಬ ಆತಂತಕ್ಕೆ ಗುರಿಯಾಗಿ ಸಲಕರಣೆಗಳ ಪೂರೈಕೆದಾರರು ಹಿಂದೆ ಸರಿದದ್ದರಿಂದ ಬದಲಿ ಸಲಕರಣೆ ಪೂರೈಕೆದಾರರನ್ನು ಕಂಡು ಹಿಡಿಯುವುದು ಭಾರತಕ್ಕೆ ಕಷ್ಟಕರವಾಯಿತು ವರದಿ ಹೇಳಿದೆ. ಭಾರತದ ವಿದೇಶಾಂಗ ಸಚಿವಾಲಯ ಮತ್ತು ಐಆರ್‌ಕಾನ್ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿವೆ.

No comments:

Advertisement