Friday, July 10, 2020

ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಎನ್ ಕೌಂಟರಿನಲ್ಲಿ ಸಾವು

ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ ಕೌಂಟರಿನಲ್ಲಿ ಸಾವು

ಕಾನ್ಪುರ: ವಾರದ ಹಿಂದೆ ಎಂಟು ಮಂದಿ ಪೊಲೀಸರನ್ನು ಕೊಂದು ಇತರ ಹಲವರನ್ನು ಗಾಯಗೊಳಿಸಿ ಪರಾರಿಯಾಗಿದ್ದ ಕ್ರಿಮಿನಲ್ ಅಪರಾಧಿ ವಿಕಾಸ್ ದುಬೆ 2020 ಜುಲೈ 10ರ ಶುಕ್ರವಾರ ಬೆಳಗ್ಗೆ ಪೊಲೀಸರ ಜೊತೆಗಿನ ಎನ್ ಕೌಂಟರಿನಲ್ಲಿ ಹತನಾದ.

ಗುರುವಾರ ಬಂಧಿಸಲ್ಪಟ್ಟಿದ್ದ ವಿಕಾಸ್ ದುಬೆ, ಉಜ್ಜೈನಿಯಿಂದ ಕಾನ್ಪುರಕ್ಕೆ ತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರ ಜೊತೆ ಘರ್ಷಣೆ ಸಂಭವಿಸಿತು ಎಂದು ಪೊಲೀಸ್ ಮೂಲಗಳು ಹೇಳಿದವು.

ಉಜ್ಜೈನಿಯಿಂದ ಕಾನ್ಪುರಕ್ಕೆ ದುಬೆಯನ್ನು ಕರೆತರುತ್ತಿದ್ದಾಗ ಭಾರೀ ಮಳೆಯ ಮಧ್ಯೆ ಭವುಟಿ ಎಂಬ ಪ್ರದೇಶದಲ್ಲಿ ಆತನಿದ್ದ ಕಾರು ಅಪಘಾತಕ್ಕೆ ಈಡಾಯಿತು. ಸಂದರ್ಭವನ್ನು ಬಳಸಿ ದುಬೆ ಪರಾರಿಯಾಗಲು ಯತ್ನಿಸಿದ ಎಂದು ಪೊಲೀಸರು ತಿಳಿಸಿದರು.

ಅಪಘಾತದಲ್ಲಿ ನವಾಬ್ಗಂಜ್ನಲ್ಲಿ ನಿಯೋಜಿತರಾಗಿದ್ದ ಒಬ್ಬ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಕಾನ್ಪುರ ವಲಯದ ಇನ್ಸ್ಪೆಕ್ಟರ್ ಜನರಲ್ ಮೋಹಿತ್ ಅಗರವಾಲ್ ಹೇಳಿದರು.

ಬೆಳಗ್ಗೆ ಭಾರೀ ಮಳೆಯಿಂದಾಗಿ ಕಾನ್ಪುರದ ಸಮೀಪ ಪೊಲೀಸ್ ವಾಹನ ಪಲ್ಟಿ ಹೊಡೆದ್ದರಿಂದ ಅಪಘಾತ ಸಂಭವಿಸಿತು ಎಂದು ಹಿರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಕಾನ್ಪುರ) ದಿನೇಶ ಕುಮಾರ್ ಪಿ ಹೇಳಿದರು.

ಅಪಘಾತದ ಸಂದರ್ಭವನ್ನು ಬಳಸಿಕೊಂಡು ಇನ್ಸ್ಪೆಕ್ಟರ್ ಅವರ ಪಿಸ್ತೂಲ್ ಕಿತ್ತುಕೊಂಡು ಪರಾರಿಯಾಗಲು ದುಬೆ ಯತ್ನಿಸಿದ. ಆದರೆ ಪೊಲೀಸ್ ತಂಡ ಆತನನ್ನು ಸುತ್ತುವರೆಯಿತು. ಗುಂಡಿನ ವಿನಿಮಯದಲ್ಲಿ ಆತ ಗಾಯಗೊಂಡ ಎಂದು ಅಗರವಾಲ್ ವಿವರಿಸಿದರು.

ಗಾಯಗೊಂಡಿದ್ದ ದುಬೆಯನ್ನು ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಆತ ಮೃತನಾಗಿರುವುದಾಗಿ ಘೋಷಿಸಲಾಯಿತು.

ದುಬೆ ಘರ್ಷಣೆಯಲ್ಲಿ ಗಾಯಗೊಂಡಿದ್ದ ಮತ್ತು ಆಸ್ಪತ್ರೆಯಲ್ಲಿ ಆತ ಸತ್ತಿರುವುದಾಗಿ ಘೋಷಿಸಲಾಯಿತು ಎಂದು ಕಾನ್ಪುರ ವಲಯದ ಎಡಿಜೆ ಜೆಎನ್ ಸಿಂಗ್ ಹೇಳಿದರು.

ದುಬೆಗೆ ಗಾಯಗಳಾಗಿದ್ದವು ಎಂಬುದಾಗಿ ಅಧಿಕಾರಿ ದೃಢಪಡಿಸಿದರು. ಆದರೆ ಗಾಯದ ಪ್ರಮಾಣ ಎಷ್ಟು ಎಂಬುದಾಗಿ ಅವರು ತಿಳಿಸಲಿಲ್ಲ. ಅದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಗೊತ್ತಾಗಲಿದೆ ಎಂದು ಸಿಂಗ್ ನುಡಿದರು.

ಜುಲೈ ೩ರ ಮಧ್ಯರಾತ್ರಿ ವಿಕಾಸ್ ದುಬೆಯನ್ನು ಬಂಧಿಸಲು ಹೋಗಿದ್ದ ಡಿಎಸ್ಪಿ ದೇವೇಂದ್ರ ಮಿಶ್ರ ಸೇರಿದಂತೆ ಎಂಟು ಮಂದಿ ಪೊಲೀಸgನ್ನು ಕಾನ್ಪುರದ ಚೌಬೆಪುರ ಪ್ರದೇಶದ ಬಿಕ್ರು ಗ್ರಾಮದಲ್ಲಿ ದುಬೆ ತಂಡ ಹತ್ಯೆಗೈದಿತ್ತು.

ಇದಕ್ಕೆ ಮುನ್ನ ದುಬೆ ತಂಡದ ಐದು ಸದಸ್ಯರನ್ನು ಪೊಲೀಸರು ಪ್ರತ್ಯೇಕ ಎನ್ ಕೌಂಟರುಗಳಲ್ಲಿ ಕೊಂದು ಹಾಕಿದ್ದರು.

ಜುಲೈ ೩ರಂದು ದುಬೆಯ ಸಹಚರರಾದ ಪ್ರೇಮ್ ಪ್ರಕಾಶ್ ಪಾಂಡೆ ಮತ್ತು ಅತುಲ್ ದುಬೆಯನ್ನು ಪೊಲೀಸರು ಕಾನ್ಪುರದಲ್ಲಿ ನಡೆದ ಎನ್ ಕೌಂಟರಿನಲ್ಲಿ ಕೊಂದಿದ್ದರು.  ಆತನ ಇನ್ನೊಬ್ಬ ಸಹಚರ ಅಮರ್ ದುಬೆಯನ್ನು ಪೊಲೀಸರು ಜುಲೈ ೮ರಂದು ಕೊಂದಿದ್ದರು. ಅಮರ್ ದುಬೆಯ ತಲೆಗೆ ಹಮೀರಪುರ ಜಿಲ್ಲೆಯ ಮೌದಾಹ ಗ್ರಾಮವು ೫೦,೦೦೦ ರೂಪಾಯಿಗಳ ಬಹುಮಾನ ಘೋಷಿಸಿತ್ತು.

ಜುಲೈ ೯ರಂದು ವಿಕಾಸ ದುಬೆ ತಂಡದ ಇನ್ನಿಬ್ಬರು ಸದಸ್ಯರನ್ನು ಕಾನ್ಪುರ ಮತ್ತು ಎಟಾವಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘರ್ಷಣೆಗಳಲ್ಲಿ ಕೊಲ್ಲಲಾಗಿತ್ತು.

ಕಾರ್ತಿಕೇಯ ಯಾನೆ ಪ್ರಭಾತ್ ಪೊಲೀಸ್ ಬಂಧನದಿಂದ ತಪ್ಪಸಿಕೊಳ್ಳಲು ಯತ್ನಿಸಿ ಪರಾರಿಯಾಗುತ್ತಿದ್ದಾಗ ಕಾನ್ಪುರದಲ್ಲಿ ಹತನಾದರೆ,  ವಿಕಾಸ ದುಬೆಯ ಇನ್ನೊಬ್ಬ ನಿಕಟವರ್ತಿ ಪ್ರವೀಣ್ ಯಾನೆ ಬವುವಾ ದುಬೆ ಎಟಾವಾದಲ್ಲಿ ಸಂಭವಿಸಿದ ಎನ್ ಕೌಂಟರಿನಲ್ಲಿ ಗುಂಡೇಟಿಗೆ ಬಲಿಯಾಗಿದ್ದ.

ಬುಧವಾರ ಫರೀದಾಬಾದಿನಲ್ಲಿ ಬಂಧಿತನಾಗಿದ್ದ ಕಾರ್ತಿಕೇಯನನ್ನು ಕಾನ್ಪುರಕ್ಕೆ ಟ್ರಾನ್ಸಿಟ್ ರಿಮಾಂಡ್ನಲ್ಲಿ ಕರೆತರಲಾಗುತ್ತಿತ್ತು. ಆಗ ಆತ ಪೊಲೀಸ್ ಸಿಬ್ಬಂದಿಯೊಬ್ಬರ ಪಿಸ್ತೂಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ.

ವಿಕಾಸ ದುಬೆಯ ಬಂಧನಕ್ಕೆ ಅನುಕೂಲಕರವಾದ ಮಾಹಿತಿ ನೀಡಿದವರಿಗೆ ಲಕ್ಷ ರೂಪಾಯಿಯ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಿಸಿತ್ತು. ಗುರುವಾರ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಆತನನ್ನು ಬಂಧಿಸಲಾಗಿತ್ತು.

ಜುಲೈ ೩ರಂದು ಬಿಕ್ರು ಗ್ರಾಮದಲ್ಲಿ ತನ್ನನ್ನು ಬಂಧಿಸಲು ಬಂದಿದ್ದ ಎಂಟು ಮಂದಿ ಪೊಲೀಸರನ್ನು ಕೊಂದ ಬಳಿಕ ಸಹಚರರೊಂದಿಗೆ ದುಬೆ ಪರಾರಿಯಾಗಿದ್ದ.

No comments:

Advertisement