My Blog List

Tuesday, July 21, 2020

ರಾಜಸ್ಥಾನ ಬಂಡಾಯ: ಜುಲೈ ೨೪ರಂದು ಹೈಕೋರ್ಟ್ ತೀರ್ಪು

ರಾಜಸ್ಥಾನ ಬಂಡಾಯ: ಜುಲೈ ೨೪ರಂದು ಹೈಕೋರ್ಟ್ ತೀರ್ಪು

ದೆಹಲಿ: ರಾಜ್ಯ ವಿಧಾನಸಭಾ ಅಧ್ಯಕ್ಷರು ನೀಡಿರುವ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಇತರ ೧೮ ಭಿನ್ನಮತೀಯ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ರಿಟ್ ಅರ್ಜಿಯ ಕುರಿತು ತೀರ್ಪು ಪ್ರಕಟಿಸುವುದಾಗಿ ರಾಜಸ್ಥಾನ ಹೈಕೋರ್ಟ್ 2020 ಜುಲೈ 21ರ ಮಂಗಳವಾರ ಪ್ರಕಟಿಸಿತು. ಅಲ್ಲಿಯವರೆಗೆ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ವಿಧಾನಸಭಾ ಅಧ್ಯಕ್ಷರಿಗೆ ನ್ಯಾಯಾಲಯ ಆಜ್ಞಾಪಿಸಿತು.

ಕಾಂಗ್ರೆಸ್ ಪಕ್ಷವು ವಿಧಾನಸಭಾ ಅಧ್ಯಕ್ಷ ಸಿಪಿ ಜೋಶಿ ಅವರಿಗೆ ಸದರಿ ಶಾಸಕರು ಕಳೆದ ಸೋಮವಾರ ಮತ್ತು ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಎರಡು ಸಭೆಗಳಿಗೆ ಹಾಜರಾಗುವಂತೆ ನೀಡಿದ್ದ ಸಚೇತಕಾಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂಬುದಾಗಿ ದೂರು ನೀಡಿದ ಬಳಿಕ ಬಂಡಾಯ ಶಾಸಕರಿಗೆ ವಿಧಾನಸಭಾಧ್ಯಕ್ಷರು ಅನರ್ಹತೆ ನೋಟಿಸ್ ಜಾರಿ ಮಾಡಿದ್ದರು.

ಪೈಲಟ್ ಮತ್ತು ಅವರನ್ನು ಬೆಂಬಲಿಸುತ್ತಿರುವ ಶಾಸಕರ ವಿರುದ್ಧ ಸಂವಿಧಾನದ ೧೦ನೇ ಶೆಡ್ಯೂಲಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭಾ ಅಧ್ಯಕ್ಷರಿಗೆ ನೀಡಿದ್ದ ದೂರಿನಲ್ಲಿ ಕಾಂಗ್ರೆಸ್ ಕೋರಿತ್ತು. ಏನಿದ್ದರೂ, ಪೈಲಟ್ ಬಣವು ಪಕ್ಷದ ಸಚೇತಕಾಜ್ಞೆ ಅನ್ವಯವಾಗುವುದು ವಿಧಾನಮಂಡಲ ಅಧಿವೇಶನವನ್ನು ನಡೆಸುವ ಹೊತ್ತಿನಲ್ಲಿ ಮಾತ್ರ ಎಂದು ಪ್ರತಿಪಾದಿಸಿದೆ.

ತಾವು ಬಿಜೆಪಿ ಸೇರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿರುವ ಸಚಿನ್ ಪೈಲಟ್ ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನ ಮತ್ತು ರಾಜಸ್ಥಾನ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದ ಕಳೆದ ತಿಂಗಳು ವಜಾಗೊಳಿಸಲಾಗಿತ್ತು. ಗೋವಿಂದ ಸಿಂಗ್ ದೊಟಸ್ರಾ ಅವರನ್ನು ಪಕ್ಷದ ನೂತನ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

ರಾಜಸ್ಥಾನ ಹೈಕೋರ್ಟ್ ಮಂಗಳವಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾಗಲೂ ಕಾಂಗ್ರೆಸ್ ಪಕ್ಷವು  ಬಿಕ್ಕಟ್ಟು ಆರಂಭವಾದಂದಿನಿಂದ ತನ್ನ ಶಾಸಕರನ್ನು ಇರಿಸಲಾಗಿರುವ ಐಷಾರಾಮೀ ರೆಸಾರ್ಟಿನಲ್ಲಿ ಶಾಸಕಾಂಗ ಪಕ್ಷದ ಇನ್ನೊಂದು ಸಭೆಯನ್ನು ನಡೆಸಿತು.ಮತ್ತೊಮ್ಮೆ ಪೈಲಟ್ ಮತ್ತು ತಂಡ ಸಭೆಗೆ ಗೈರುಹಾಜರಾಯಿತು.

ಇಂತಹ ಸಭೆ ನಡೆಸುವ ಮೂಲಕ ಹೈಕೋರ್ಟಿನ ಅಧಿಕಾರವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಸಚಿನ್ ಪೈಲಟ್ ಶಾಸಕಾಂಗ ಸಭೆಗೆ ಪ್ರತಿಕ್ರಿಯಿಸಿದರು.

ಶಾಸಕಾಂಗ ಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರುಕಾಂಗ್ರೆಸ್ ಇಲ್ಲವೇ ಬಿಜೆಪಿ ವಿಧಾನಸಭೆಯನ್ನು ವಿಸರ್ಜಿಸಬೇಕು ಮತ್ತು ಚುನಾವಣೆ ನಡೆಯಬೇಕು ಎಂದು ಬಯಸುತ್ತಿಲ್ಲ.. ಇಡೀ ರಾಷ್ಟ್ರವೇ ನೀವು ಯಾವ ರೀತಿ ಜಗಳಾಡುತ್ತಿದ್ದೀರಿ ಎಂದು ವೀಕ್ಷಿಸುತ್ತಿದೆ. ನಿಮ್ಮ ಗೌರವ ಹಲವಾರು ಪಟ್ಟು ಹೆಚ್ಚಿದೆ. ಇದೇನೂ ಸಾಮಾನ್ಯವಲ್ಲ. ನಿಮ್ಮೆಲ್ಲದ ಬಳಿ ಫೋನುಗಳಿವೆ, ನಿಮ್ಮ ಮೇಲೆ ಯಾವ ಒತ್ತಡವೂ ಇಲ್ಲಎಂದು ಹೇಳಿದರು.

ಟಿ ವಿ ಸಂದರ್ಶನ ಒಂದರಲ್ಲಿ ಕಳೆದ ೧೮ ತಿಂಗಳುಗಳಿಂದ ಸರ್ಕಾರದಲ್ಲಿ ೨ನೇ ಸ್ಥಾನದಲ್ಲಿ ಇದ್ದ ಸಚಿನ್ ಪೈಲಟ್ ತಮ್ಮ ಜೊತೆಗೆ ಮಾತನಾಡುತ್ತಿರಲಿಲ್ಲ ಎಂದು ಹೇಳುವ ಮೂಲಕ ಅಶೋಕ ಗೆಹ್ಲೋಟ್ ಅವರು ಸಚಿನ್ ಪೈಲಟ್ ಅವರನ್ನು ಉಗ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಸೋಮವಾರ ಕೂಡಾ ಮುಖ್ಯಮಂತ್ರಿಯವರು ಸಚಿನ್ ಪೈಲಟ್ ಅವರನ್ನುನಿಕಮ್ಮಾ (ಬೆಲೆಇಲ್ಲದ) ಮತ್ತುನಕಾರ (ಏನಕ್ಕೂ ಉಪಯೋಗ ಇಲ್ಲದ) ವ್ಯಕ್ತಿ ಎಂದು ಜರೆದಿದ್ದರು. ತಮ್ಮ ಹಿಂದಿನ ಆರೋಪವನ್ನು ಪುನರುಚ್ಚರಿಸಿದ ಗೆಹ್ಲೋಟ್, ’ಪೈಲಟ್ ನನ್ನ ಸರ್ಕಾರವನ್ನು ಪದಚ್ಯುತಿಗೊಳಿಸಲು ಯತ್ನಿಸುತ್ತಿದ್ದಾರೆಎಂದು ಹೇಳಿದರು.

ಪೈಲಟ್ ಬಣದ ಕೆಲವು ಶಾಸಕರ ಫೋನುಗಳನ್ನು ಕಿತ್ತುಕೊಳ್ಳಲಾಗಿದ್ದು, ಅವರನ್ನು ದಿಗ್ಬಂಧನದಲ್ಲಿ ಇರಿಸಲಾಗಿದೆ ಎಂದು ಗೆಹ್ಲೋಟ್ ಪ್ರತಿಪಾದಿಸಿದರು. ಭಿನ್ನಮತೀಯ ಶಾಸಕರು ನಮಗೆಕರೆ ಮಾಡುತ್ತಿದ್ದಾರೆ ಮತ್ತು ತಮ್ಮ ದುರವಸ್ಥೆಯನ್ನು ಫೋನಿನ ಮೂಲಕ ಅಲವತ್ತುಕೊಳ್ಳುತ್ತಿದ್ದಾರೆಎಂದೂ ಮುಖ್ಯಮಂತ್ರಿ ಪ್ರತಿಪಾದಿಸಿದರು.

ರಾಜಕೀಯ ಪ್ರಹಸನ ಆರಂಭವಾದಾಗ ಸಚಿನ್ ಪೈಲಟ್ ಅವರು ತಮಗೆ ೩೦ ಶಾಸಕರ ಬೆಂಬಲ ಇರುವುದಾಗಿ ಪ್ರತಿಪಾದಿಸಿದ್ದರು. ಆದಾಗ್ಯೂ ಸಂಖ್ಯೆ ಕುಗ್ಗಿದ್ದು ಈಗ ಅವರ ಜೊತೆಗೆ ೧೮ ಮಂದಿ ಇದ್ದಾರೆ. ಇನ್ನೊಂದೆಡೆಯಲ್ಲಿ ತಮಗೆ ೧೦೦ಕ್ಕೂ ಹೆಚ್ಚು ಶಾಸಕರ ಬೆಂಬಲ ಇರುವುದಾಗಿ ಗೆಹ್ಲೋಟ್ ಪ್ರತಿಪಾದಿಸುತ್ತಿದ್ದಾರೆ.

೨೦೦ ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಪಡೆಯಲು ೧೦೧ ಸದಸ್ಯರ ಬೆಂಬಲ ಬೇಕು. ೭೨ ಶಾಸಕರನ್ನು ಹೊಂದಿರುವ ಬಿಜೆಪಿಯು ಬದಿಯಲ್ಲಿ ನಿಂತುಕೊಂಡು ಆಡಳಿತಾರೂಢ ಪಕ್ಷ ಬೆಳವಣಿಗೆಗಳನ್ನು ಗಮನಿಸುತ್ತಿದೆ.

No comments:

Advertisement