ರಾಜಭವನದಲ್ಲಿ ಗೆಹ್ಲೋಟ್, ಬೆಂಬಲಿಗ ಶಾಸಕರ ಧರಣಿ
ಜೈಪುರ: ೨೦೦ ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ೧೦೯ ಶಾಸಕರ ಬೆಂಬಲ ಹೊಂದಿರುವುದಾಗಿ ಪ್ರತಿಪಾದಿಸಿರುವ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಬಹುಮತ ಸಾಬೀತು ಪಡಿಸಲು ಅನುವು ಮಾಡಿಕೊಡಲು ಸೋಮವಾರ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿ ತಮ್ಮ ಬೆಂಬಲಿಗ ಶಾಸಕರೊಂದಿಗೆ 2020 ಜುಲೈ 24ರ ಶುಕ್ರವಾರ ರಾಜ್ಯಭವನದ ಮುಂದೆ ಧರಣಿ ನಡೆಸುವುದುರೊಂದಿಗೆ ರೋಚಕ ತಿರುವು ಪಡೆದುಕೊಂಡಿತು.
ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಪಟ್ಟು ಬಿಗಿಗೊಳಿಸಿರುವ ಗೆಹ್ಲೋಟ್ ತಂಡವು ’ಹೌಸ್ ಬುಲಾವೋ(ಅಧಿವೇಶನ ಕರೆಯಿರಿ)’ ಎಂದು ರಾಜ್ಯಪಾಲರನ್ನು ಉದ್ದೇಶಿಸಿ ಘೋಷಣೆ ಕೂಗುತ್ತಾ ಧರಣಿ ನಡೆಸಿದರು.
ಕೇಂದ್ರದ ಒತ್ತಡದಿಂದಾಗಿ ರಾಜ್ಯಪಾಲರು ವಿಶೇಷ ಅಧಿವೇಶನ ಕರೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗೆಹ್ಲೋಟ್ ಗಂಭೀರ ಆರೋಪ ಮಾಡಿದರು.
ಪ್ರತಿಭಟನೆ ನಿರತ ಗೆಹ್ಲೋಟ್ ಬಣಕ್ಕೆ ರಾಜ್ಯಪಾಲರಿಂದ ಯಾವುದೇ ಆಶ್ವಾಸನೆ ಬರದೇ ಇರುವುದರಿಂದ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿತು.
ಸಚಿನ್ ಪೈಲಟ್ ಅನರ್ಹತೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೇ, ಗೆಹ್ಲೋಟ್ ಬಣ ಹೋಟೆಲಿನಿಂದ ನೇರವಾಗಿ ಬಸ್ಸಿನ ಮೂಲಕ ರಾಜಭವನಕ್ಕೆ ಆಗಮಿಸಿ ವಿಶೇಷ ವಿಧಾನಸಭೆ ಕರೆಯುವಂತೆ ಒತ್ತಾಯಿಸತೊಡಗಿತು.
‘ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳಿಗೆ ಬಹುಮತ ಇದೆ. ಅಷ್ಟೇ ಅಲ್ಲ, ಪಕ್ಷದ ವಿರುದ್ಧ ಬಂಡಾಯವೆದ್ದು ಹೋಗಿರುವ ಶಾಸಕರಲ್ಲಿ ಕೆಲವರು ಪುನಃ ಪಕ್ಷಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಆದರೆ ಅವರನ್ನು ಹರಿಯಾಣದಲ್ಲಿ ಬಂಧಿಸಿ ಇಡಲಾಗಿದೆ’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು.
‘ಕಾನೂನು ಹಾಗೂ ಸಂವಿಧಾನಬದ್ಧವಾದ ಎಲ್ಲ್ಲ ಆಯ್ಕೆಗಳೂ ರಾಜ್ಯ ಸರ್ಕಾರದ ಮುಂದಿವೆ. ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುವುದು’ ಎಂದು ಅವರು ಸುದ್ದಿ ಸಂಸ್ಥೆಯ ಜತೆ ಮಾತನಾಡುತ್ತಾ ಹೇಳಿದರು.
ವಿಧಾನಸಭೆಯ ಅಧಿವೇಶನವನ್ನು ಯಾವಾಗ ನಡೆಸುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ‘ನಮಗೆ ಬಹುಮತ ಇದೆ. ನಮ್ಮ ವಿರೋಧಿಗಳಿಗೂ ಇದು ಗೊತ್ತಿದೆ. ಈ ವಿಚಾರದಲ್ಲಿ ಕಾನೂನು ಮತ್ತು ಸಂವಿಧಾನದ ಮಾರ್ಗದಿಂದ ಹಿಂದೆ ಸರಿಯುವುದಿಲ್ಲ’ ಎಂದು ಉತ್ತರ ನೀಡಿದರು.
ಶಾಸಕರ ಸಣ್ಣ ಗುಂಪೊಂದನ್ನು ಹೊರರಾಜ್ಯದ ಹೋಟೆಲ್ ಒಂದರಲ್ಲಿ ಬಂಧಿಸಿ ಇಡಲಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ರಾಜ್ಯದ ಪೊಲೀಸರು ಅವರನ್ನು ಕಾಯುತ್ತಿದ್ದಾರೆ. ಈ ಶಾಸಕರು ಬಂಧನದಿಂದ ಹೊರಬಂದು ಮತ್ತೆ ಪಕ್ಷವನ್ನು ಸೇರಲು ಇಚ್ಛಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ವಲ್ಪ ಸಮಯದಲ್ಲೇ ಇದೆಲ್ಲ ಸ್ಪಷ್ಟವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಅವರು ನುಡಿದರು.
ಸಚಿನ್ ಪೈಲಟ್ ಪಕ್ಷಕ್ಕೆ ಮರಳಿದರೆ ಅವರ ಸ್ಥಾನಮಾನ ಏನಾಗಿರುತ್ತದೆ ಎಂಬ ಪ್ರಶ್ನೆಗೆ ‘ಈ ಬಗ್ಗೆ ಪಕ್ಷದ ಹೈಕಮಾಂಡ್ ಮಾತ್ರ ಉತ್ತರ ನೀಡಬಲ್ಲದು. ಸಚಿನ್ ಕುರಿತಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದು ಹೈಕಮಾಂಡಿಗೆ ಬಿಟ್ಟ ವಿಚಾರ’ ಎಂದು ಗೆಹ್ಲೋಟ್ ಹೇಳಿದರು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ಮಧ್ಯಾಹ್ನ ಕಾಂಗ್ರೆಸ್ ಶಾಸಕರೊಂದಿಗೆ ರಾಜಭವನಕ್ಕೆ ಬಸ್ಸೇರಿದರು. ರಾಜ್ಯಪಾಲ ಕಲರಾಜ್ ಮಿಶ್ರಾ ಅರನ್ನು ಸೋಮವಾರ ರಾಜಸ್ಥಾನ ವಿಧಾನಸಭಾ ಅಧಿವೇಶನ ಕರೆಯುವಂತೆ ಮನವೊಲಿಸಲು ಯತ್ನಿಸಿದ ಅವರು ’ವಿಧಾನಸಭಾ ಅಧಿವೇಶನ ಕರೆಯುವ ಆದೇಶವನ್ನು ರಾಜಭವನ ತಡೆ ಹಿಡಿದಿದೆ, ರಾಜ್ಯಪಾಲರು ಮೇಲಿನಿಂದ (ಕೇಂದ್ರದ ಬಿಜೆಪಿ ಸರ್ಕಾರ) ಒತ್ತಡಕ್ಕೆ ಒಳಗಾಗಿದ್ದಾರೆ’ ಎಂದು ಆಪಾದಿಸಿದರು.
ಸೋಮವಾರ ಅಧಿವೇಶನ ಕರೆಯುವಂತೆ ತಾವು ರಾಜ್ಯಪಾಲ ಕಲರಾಜ್ ಮಿಶ್ರ ಅವರಿಗೆ ಗುರುವಾರ ಮನವಿ ಮಾಡಿದ್ದು ದೂರವಾಣಿ ಮೂಲಕ ೨೦ ನಿಮಿಷಗಳ ಕಾಲ ಮಾತುಕತೆ ನಡೆಸಿರುವುದಾಗಿ ಗೆಹ್ಲೋಟ್ ರಾಜಭವನಕ್ಕೆ ಹೊರಡುವ ಮುನ್ನ ಪತ್ರಕರ್ತರಿಗೆ ತಿಳಿಸಿದರು.
ಗೆಹ್ಲೋಟ್ ಅವರು ಆ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಯವರು ಇದ್ದ ಬಸ್ಸು ಸೇರಿದಂತೆ ನಾಲ್ಕು ಬಸ್ಸುಗಳು ಹೊಟೇಲಿನಿಂದ ರಾಜಭವನದತ್ತ ತೆರಳುತ್ತಿದ್ದಂತೆಯೇ, ಸಾರಿಗೆ ಸಚಿವ ಪ್ರತಾಪ್ ಸಿಂಗ್ ’ನಮಗೆ ಬಹುಮತವಿದೆ ... ಸರ್ಕಾರಕ್ಕೆ ೧೦೯ ಶಾಸಕರ ಬೆಂಬಲವಿದೆ ಎಂಬುದಾಗಿ ಗೆಹ್ಲೋಟ್ ಅವರು ರಾಜ್ಯಪಾಲರಿಗೆ ತಿಳಿಸುವರು’ ಎಂದು ಸುದ್ದಿಗಾರರಿಗೆ ಹೇಳಿದರು.
ಅಶೋಕ ಗೆಹ್ಲೋಟ್ ಅವರ ತಂಡವು ಬೆಂಬಲಿಗ ಶಾಸಕರ ಸಂಖ್ಯೆ ಪ್ರಕಟಿಸಿದ್ದು ಇದೇ ಮೊದಲು.
೨೪ ಗಂಟೆಗಳ ಅವಧಿಯಲ್ಲಿ ರಾಜ್ಯಪಾಲರ ಜೊತೆ ಎರಡನೇ ಬಾರಿಗೆ ಮಾತುಕತೆ ನಡೆಸಿದ ಬಳಿಕ, ರಾಜಭವನದ ಹುಲ್ಲು ಹಾಸಿನಲ್ಲಿ ಧರಣಿ ಕುಳಿತ ಬೆಂಬಲಿಗ ಶಾಸಕರು ಘೋಷಣೆಗಳನ್ನು ಕೂಗಿ, ನ್ಯಾಯಕ್ಕಾಗಿ ಹೋರಾಡುವ ಪ್ರತಿಜ್ಞೆ ಮಾಡಿದರು.
೧೦೯ ಶಾಸಕರ ಕಾಂಗ್ರೆಸ್ ಎಣಿಕೆಯಲ್ಲಿ ಗುರುಗಾಮ ಹೋಟೆಲ್‌ಗಳಲ್ಲಿ ಇರುವ ಪೈಲಟ್‌ನ ಶಿಬಿರದ ೧೮ ಶಾಸಕರಲ್ಲಿ ಕೆಲವರು ಸೇರಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
೨೦೦ ಸದಸ್ಯಬಲದ ರಾಜಸ್ಥಾನ ವಿಧಾನಸಭೆಯಲ್ಲಿ, ಗೆಹ್ಲೋಟ್ ಕಡೆ ೧೦೧ ಶಾಸಕರು ೨೨ ಕಾಂಗ್ರೆಸ್ ಬಂಡುಕೋರರು ಮತ್ತು ಮೂವರು ಸ್ವತಂತ್ರರು ಸೇರಿದ್ದಾರೆ.
ಪ್ರತಿಪಕ್ಷದಲ್ಲಿ ೭೫ ಜನ ಶಾಸಕರು ಇದ್ದಾರೆ, ಇದರಲ್ಲಿ ೭೨ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮತ್ತು ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷದ ಮೂವರು ಸೇರಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅಶೋಕ್ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ಅಸಮಾಧಾನ ಸ್ಫೋಟಗೊಳ್ಳುವ ಮೊದಲು, ಕಾಂಗ್ರೆಸ್ ಸರ್ಕಾರವು ವಿಧಾನಸಭೆಯಲ್ಲಿ ೧೨೫ ಶಾಸಕರ ಬೆಂಬಲವನ್ನು ಹೊಂದಿತ್ತು. ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಬಗ್ಗೆ ತಮ್ಮ ಹೇಳಿಕೆಯನ್ನು ನೀಡುವಂತೆ ಆಗಿನ ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಅವರನ್ನು ಪೊಲೀಸರು ಕೇಳಿದ್ದೇ ಈ ಬಂಡಾಯಕ್ಕೆ ತತ್ ಕ್ಷಣದ ಪ್ರಚೋದನೆಯಾಗಿದೆ.
No comments:
Post a Comment