My Blog List

Thursday, July 16, 2020

ಸಧ್ಯಕ್ಕೆ ಭಾರತದಿಂದ ಅಂತಾರಾಷ್ಟ್ರೀಯ ವಿಮಾನ ಇಲ್ಲ: ಸಚಿವ ಪುರಿ

ಸಧ್ಯಕ್ಕೆ ಭಾರತದಿಂದ ಅಂತಾರಾಷ್ಟ್ರೀಯ ವಿಮಾನ ಇಲ್ಲ

ನವದೆಹಲಿ: ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನವು ಕೋವಿಡ್ ಪೂರ್ವ ಸ್ಥಿತಿಗೆ ಮರಳುವವರೆಗೆ ಮತ್ತು ಜಾಗತಿಕ ವಿಮಾನಯಾನ ಉದ್ಯಮ ಸಾಮಾನ್ಯವಾಗುವವರೆಗೆ ಭಾರತದಿಂದ ಯಾವುದೇ ಅಂತರಾಷ್ಟ್ರೀಯ ವಿಮಾನಯಾನ ಇರುವುದಿಲ್ಲ ಎಂದು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಅವರು 2020 ಜುಲೈ 16ರ ಗುರುವಾರ ಇಲ್ಲಿ ಹೇಳಿದರು.

ಅಲ್ಲಿಯವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸಾಗಿಸಲು ಭಾರತವು ದ್ವಿಪಕ್ಷೀಯ ಗುಂಪು ಬಾಂಧವ್ಯಗಳನ್ನು  ಅವಲಂಬಿಸಿರುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ನುಡಿದರು.

ಭಾರತ ಸೇರಿದಂತೆ ಎಲ್ಲ ದೇಶಗಳು ವಿಮಾನ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸುತ್ತಿರುವುದರಿಂದ ದ್ವಿಪಕ್ಷೀಯ  ಬಾಂಧವ್ಯ ಆಧರಿಸಿ ಸಾಧ್ಯವಿರುವಷ್ಟು ಪ್ರಯಾಣಿಕರನ್ನು ಸಾಗಿಸಲಾಗುವುದು ಎಂದು ಅವರು ಹೇಳಿದರು.

ಸರ್ಕಾರವು ಪ್ರಸ್ತುತ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಾಪಸಾತಿ ವಿಮಾನಗಳನ್ನು ನಿರ್ವಹಿಸುತ್ತಿದೆ, ಅದು ಈಗ ನಾಲ್ಕನೇ ಹಂತದಲ್ಲಿದೆ. ಹಿಂದಿನ ವಿಬಿಎಂ ವಿಮಾನಗಳನ್ನು ಏರ್ ಇಂಡಿಯಾ ಮಾತ್ರ ಕೈಗೆತ್ತಿಕೊಂಡಿದ್ದರೆ, ಈಗ ಸರ್ಕಾರವು ಸ್ಪೈಸ್ ಜೆಟ್, ಇಂಡಿಗೊ ಮತ್ತು ಗೋಏರ್ ವಿಮಾನಗಳನ್ನು ಕೂಡಾ ಅಂತಾರಾಷ್ಟ್ರೀಯ ವಾಪಸಾತಿಗಾಗಿ ಬಳಸುತ್ತಿದೆ. ವಿಮಾನಗಳು ಮುಖ್ಯವಾಗಿ ಕೊಲ್ಲಿ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿವೆ.

ಕೋವಿಡ್ -೧೯ ಸೋಂಕನ್ನು ನಿಯಂತ್ರಣದಲ್ಲಿ ಇಡುವ ಸಲುವಾರಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್‌ಡೌನ್) ಘೋಷಿಸಿದ ಕಾರಣ ಮಾರ್ಚ್ ೨೩ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಹಂತಹಂತವಾಗಿ ದೇಶೀಯ ವಿಮಾನಗಳು ಮೇ ೨೫ ರಿಂದ ಪುನರಾರಂಭಗೊಳ್ಳುವುದಾಗಿ ಘೋಷಿಸಲಾಗಿತ್ತು.

ಪ್ರಸ್ತುತ ಭಾರತ ಸರ್ಕಾರ ಅಮೆರಿಕ, ಕೆನಡಾ,  ಐರೋಪ್ಯ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ ಮತ್ತು ಕೊಲ್ಲಿ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ದೇಶಗಳ ನಡುವೆ ಪ್ರಯಾಣಿಸಲು ದ್ವಿಪಕ್ಷೀಯ ಗುಂಪುಗಳನ್ನು ಪ್ರಾರಂಭಿಸಲಾಗುತ್ತದೆ.

ದೇಶಗಳೊಂದಿಗಿನ ಪಾಲುದಾರಿಕೆಯ ಕುರಿತು ಮಾತನಾಡಿದ ಅವರು, ವಾಯುಗುಂಪುಗಳಿಗಾಗಿ ಕನಿಷ್ಠ ದೇಶಗಳಾದ ಫ್ರಾನ್ಸ್, ಅಮೆರಿಕದ ಮತ್ತು ಮತ್ತು ಜರ್ಮನಿಯೊಂದಿಗೆ ನಾಗರಿಕ ವಿಮಾನಯಾನ ಸಚಿವಾಲಯವು ಮಾತುಕತೆ ನಡೆಸುತ್ತಿದೆ. ಜುಲೈ ೧೮ ರಿಂದ ಆಗಸ್ಟ್ ರವರೆಗೆ ಏರ್ ಫ್ರಾನ್ಸ್ ದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ಪ್ಯಾರಿಸ್ಸಿಗೆ ೨೮ ವಿಮಾನಗಳನ್ನು ನಿರ್ವಹಿಸಲಿದೆ.

ಅಮೆರಿಕ ಮತ್ತು ಭಾರತದ ಮಧ್ಯೆ ಜುಲೈ ೧೭ರಿಂದ ೩೧ರ ನಡುವಣ ಅವಧಿಯಲ್ಲಿ ೧೮ ವಿಮಾನಗಳನ್ನು ಹಾರಿಸಲು ನಾವು ಯುನೈಟೆಡ್ ಏರ್ ಲೈನ್ಸ್ ಜೊತೆಗೆ ಒಪ್ಪಂದ ಹೊಂದಿದ್ದೇವೆ. ಆದರೆ ಇದು ಮಧ್ಯಂತರ ವ್ಯವಸ್ಥೆ. ಜರ್ಮನಿಯಿಂದಲೂ ನಮಗೆ ಮನವಿ ಬಂದಿದೆ. ಲುಫ್ತಾನ್ಸಾ ಜೊತೆಗೆ ಬಹುತೇಕ ಒಪ್ಪಂದ ಅಂತಿಮಗೊಳಿಸಲಾಗಿದೆ ಎಂದು ಸಚಿವರು ನುಡಿದರು.

No comments:

Advertisement