My Blog List

Tuesday, July 7, 2020

ಜಿವಿಕೆ ಸಮೂಹ ಮತ್ತು ಮಿಯಾಲ್ ವಿರುದ್ಧ ಹಣ ವರ್ಗಾವಣೆ ಪ್ರಕರಣ

ಜಿವಿಕೆ ಸಮೂಹ ಮತ್ತು ಮಿಯಾಲ್ 
  
ವಿರುದ್ಧ ಹಣ ವರ್ಗಾವಣೆ ಪ್ರಕರಣ

ನವದೆಹಲಿ: ಮುಂಬೈ ವಿಮಾನ ನಿಲ್ದಾಣವನ್ನು ನಡೆಸುತ್ತಿರುವ ಜಿವಿಕೆ ಸಮೂಹ ಮತ್ತು ಅದರ ಅಧ್ಯಕ್ಷ ಡಾ.ವಿ.ವಿ.ಕೆ.ರೆಡ್ಡಿ, ಅವರ ಪುತ್ರ ಜಿ.ವಿ. ಸಂಜಯ್ ರೆಡ್ಡಿ ವಿರುದ್ಧ ಮುಂಬೈ ವಿಮಾನ ನಿಲ್ದಾಣದ ಅಭಿವೃದ್ಧಿಯಲ್ಲಿ ೮೦೦ ಕೋಟಿ ರೂ.ಗಳ ಅಕ್ರಮ ಎಸಗಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) 2020 ಜುಲೈ 07ರ ಮಂಗಳವಾರ ಹಣ ವರ್ಗಾವಣೆ ಪ್ರಕರಣ ದಾಖಲಿಸಿತು.

ಜೂನ್ ೨೭ರಂದು ಸಿಬಿಐ ನೋಂದಾಯಿಸಿದ ಎಫ್ ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್) ಅಡಿಯಲ್ಲಿ ತನಿಖೆ ಆರಂಭಿಸಿದೆ. ಇದರಲ್ಲಿ ಡಾ. ವಿ.ವಿ.ಕೆ ರೆಡ್ಡಿ ಮತ್ತು ಅವರ ಪುತ್ರ ಸಂಜಯ್ ರೆಡ್ಡಿ ಅವರು ಮಿಯಾಲ್ (ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್) ಮತ್ತು ಇತರ ಹಲವಾರು ಕಂಪನಿಗಳು ಸೇರಿದಂತೆ ೧೩ ಜನರನ್ನು ಹೆಸರಿಸಲಾಗಿದೆ. ಸಿಬಿಐ ಕಳೆದ ವಾರ ಮುಂಬೈ ಮತ್ತು ಹೈದರಾಬಾದ್ ಜಿವಿಕೆ ಆವರಣದಲ್ಲಿ ಶೋಧ ನಡೆಸಿತ್ತು.

ಹಣ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು, ಹಣ ವರ್ಗಾವಣೆ ನಿಗ್ರಹ ಸಂಸೆಯ್ಥು ಶೀಘ್ರದಲ್ಲೇ ಕಂಪನಿಗಳ ಖಾತೆಗಳನ್ನು ಪರೀಕ್ಷಿಸಲು ಪ್ರಾರಂಭಿಸಲಿದೆ. ತನಿಖಾ ವೇಳೆಯಲ್ಲಿ ಕಂಪೆನಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸಂಸ್ಥೆಗೆ ಇದೆ.

ಕಳೆದವಾರ ಬಿಡುಗಡೆ ಮಾಡಲಾಗಿದ್ದ ಹೇಳಿಕೆಯಲ್ಲಿ ಮಿಯಾಲ್ ವಕ್ತಾರರು ಮಿಯಾಲ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದು ಕಂಡು ಮಿಯಾಲ್ ಅಚ್ಚರಿಗೊಂಡಿತ್ತು. ಪ್ರಾಥಮಿಕ ತನಿಖೆ ಆರಂಭಿಸಿದ್ದರೆ, ಮಿಯಾಲ್ ಸ್ವತಃ ತನಿಖಾ ಸಂಸ್ಥೆ ಕೇಳಿದ ಎಲ್ಲ ದಾಖಲೆ ಹಾಗೂ ತನಿಖೆಗೆ ನೆರವು ನೀಡಲು ಸಿದ್ಧವಿತ್ತು ಎಂದು ಹೇಳಿದರು.

ಮಿಯಾಲ್ ಎಲ್ಲ ವ್ಯವಹಾರ ಪಾರದರ್ಶಕವಾಗಿದ್ದು, ಜವಾಬ್ದಾರಿಯುತ ಸಂಸ್ಥೆಯಾಗಿದೆ. ಸತ್ಯದ ಪತ್ತೆಗಾಗಿ ಸಂಸ್ಥೆ ಜೊತೆ ಸಹಕರಿಸಲು ಮಿಯಾಲ್ ಬದ್ಧವಾಗಿದೆ ಎಂದು ಅವರು ನುಡಿದರು.

ನಮಗೆ ಜಾರಿ ನಿರ್ದೇಶನಾಲಯದಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದೂ ಜಿವಿಕೆ ವಕ್ತಾರರು ಮಂಗಳವಾರ ಹೇಳಿದರು.

ಮಿಯಾಲ್ ಒಂದು ಪಿಪಿಪಿ (ಸಾರ್ವಜನಿಕ ಖಾಸಗಿ ಪಾಲುದಾರಿಕೆ) ಸಂಸ್ಥೆಯಾಗಿದ್ದು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾg (ಎಎಐ) ಜೊತೆಗೆ ಸಹಭಾಗಿತ್ವ ಹೊಂದಿದೆ. ಮಿಯಾಲ್ ಹೆಸರಿನಲ್ಲಿ ವಿದೇಶೀ ಸಂಸ್ಥೆಗಳಿಂದ ಜಿವಿಕೆಯು ಶೇಕಡಾ ೫೦.೫ರಷ್ಟು ಪಾಲುದಾರಿಕೆ ಹೊಂದಿದ್ದರೆ, ಎಐಐಯಿಂದ ಶೇಕಡಾ ೨೬ ಪಾಲುದಾರಿಕೆ ಹೊಂದಿದೆ. ಉಳಿದ ಪಾಲುಗಳು ವಿದೇಶೀ ಕಂಪೆನಿಗಳಿಂದ ಬಂದಿವೆ.

ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ೨೦೦೬ರ ಏಪ್ರಿಲ್ನಲ್ಲಿ ಮುಂಬೈ ವಿಮಾನ ನಿಲ್ದಾಣದ ಆಧುನೀಕರಣ, ಮೇಲ್ದರ್ಜೆಗೆ ಏರಿಸುವಿಕೆ, ಕಾರ್ಯಾಚರಣೆ ಮತ್ತು ನಿರ್ವಹಣೆ ಸಲುವಾಗಿ ಮಿಯಾಲ್ ಹೆಸರಿನ ಜಂಟಿ ಸಾಹಸ ಒಪ್ಪಂದಕ್ಕೆ (ಒಎಂಡಿಎ-ಆಪರೇಷನ್, ಮ್ಯಾನೇಜ್ ಮೆಂಟ್ ಅಂಡ್ ಡೆವಲಪ್ ಮೆಂಟ್ ಅಗ್ರಿಮೆಂಟ್) ಸಹಿ ಹಾಕಿತ್ತು. ಮಿಯಾಲ್ ಶೇಕಡಾ ೩೮.೭ರಷ್ಟು ಆದಾಯವನ್ನು ಎಎಐಗೆ ವಾರ್ಷಿಕ ಶುಲ್ಕವಾಗಿ ನೀಡಬೇಕು ಮತ್ತು ಸರ್ಕಾರಿ ಪ್ರಾಧಿಕಾರವು ಆದಾಯದಲ್ಲಿ ಮೊದಲ ಹಕ್ಕು ಹೊಂದಿರಬೇಕು ಎಂದು ನಿರ್ಧರಿಸಲಾಗಿತ್ತು. ವಿಶ್ವ ದರ್ಜೆಯ ಸವಲತ್ತು ನಿರ್ಮಿಸುವುದು ಮತ್ತು ಇದೇ ವೇಳೆಯಲ್ಲಿ ಭಾರತ ಸರ್ಕಾರ, ಪ್ರವರ್ತಕರು ಮತ್ತು ಪ್ರಯಾಣಿಕರ ಹಿತಾಸಕ್ತಿಗಳ ರಕ್ಷಣೆಯಾಗಬೇಕು ಎಂಬುದು ಒಪ್ಪಂದದ ಸಾರವಾಗಿತ್ತು ಎಂದು ಸಿಬಿಐ ಜೂನ್ ೨೭ರಂದು ಸಲ್ಲಿಸಿದ ಎಫ್ಐಆರ್ ಹೇಳಿದೆ.

ಒಪ್ಪಂದದಲ್ಲಿ ಸ್ಪಷ್ಟವಾದ ತಿಳುವಳಿಕೆ ಇದ್ದರೂ, ಮಿಯಾಲ್ ಪ್ರವರ್ತಕರಾದ ಜಿವಿಕೆ ಸಮೂಹವು ತನ್ನ ಕಾರ್ ನಿರ್ವಾಹಕರು ಮತ್ತು ಎಎಐಯ ಅಪರಿಚಿತ ಅಧಿಕಾರಿಗಳ ಜೊತೆ ಶಾಮೀಲಾಗಿ ವಂಚನೆಯ ಮೂಲಕ ಹಣ ಲಪಟಾಯಿಸಿತು ಎಂದು ಸಿಬಿಐ ಹೇಳಿತ್ತು.

೨೦೧೭-೧೮ರಲ್ಲಿ ಮಿಯಾಲ್ ಕನಿಷ್ಠ ಕಂಪೆನಿಗಳ ಜೊತೆಗೆ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಹೆಸರಿನಲ್ಲಿ ನಕಲಿ ಕಾಮಗಾರಿ ಗುತ್ತಿಗೆಗಳನ್ನು ದಾಖಲಿಸಿತು ಎಂದು ಆಪಾದಿಸಲಾಗಿದೆ. ಮಿಯಾಲ್ ಹಣವನ್ನು ಅವರಿಗೆ ವರ್ಗಾಯಿಸಿತು. ಆದರೆ ಯೋಜನೆಗಳು ಎಂದೂ ಕಾರ್ಯಗತಗೊಳ್ಳಲಿಲ್ಲ. ಚಟುವಿಟಕೆಗಳು ಕೇವಲ ಕಾಗದ ಪತ್ರಗಳಲ್ಲಿ ಮಾತ್ರ ದಾಖಲಾಗಿದ್ದವು. ಇದೇ ಮಾದರಿಯ ಕಾರ್ಯವಿಧಾನದ ಮೂಲಕ ೩೧೦ ಕೋಟಿ ರೂಪಾಯಿಗಳನ್ನು ವಂಚನೆಯ ಮೂಲಕ ನುಂಗಿ ಹಾಕಿ ಎಎಐಗೆ ನಷ್ಟವಾಗುವಂತೆ ಮಾಡಲಾಯಿತು ಎಂದು ಸಿಬಿಐ ಆಪಾದಿಸಿತ್ತು.

ಇದೇ ರೀತಿ ೨೦೧೨ರ ಬಳಿಕ ಜಿವಿಕೆ ತಮ್ಮ ಇತರ ಗುಂಪಿನ ಕಂಪೆನಿಗಳಿಗೆ ವರ್ಗಾಯಿಸಲು ಮಿಯಾಲ್ ಸುಮಾರು ೩೯೫ ಕೋಟಿ ರೂಪಾಯಿಗಳಷ್ಟು ಮೊತ್ತದ ಹೆಚ್ಚುವರಿ ಹಣವನ್ನು ಬಳಕೆ ಮಾಡಿಕೊಂಡಿತ್ತು.

ಮಿಯಾಲ್ ವೆಚ್ಚವನ್ನು ಅಗಾಧ ಪ್ರಮಾಣಕ್ಕೆ ಏರಿದಂತೆ ತೋರಿಸುವ ಮೂಲಕ ಕೂಡಾ ಜಿವಿಕೆ ಪ್ರವರ್ತಕರು ಹಣ ಗುಳುಂಕರಿಸಿದ್ದಾರೆ ಎಂದು ಸಿಬಿಐ ಆಪಾದಿಸಿದೆ.

ಇದಲ್ಲದೆ ಜಿವಿಕೆ ಸಮೂಹವು ತಮ್ಮ ಕುಟುಂಬ ಸದಸ್ಯರು, ಬಂಧುಗಳು ಮತ್ತು ನೌಕರರ ಜೊತೆ ಶಾಮೀಲಾಗಿ ಮುಂಬೈ ವಿಮಾನ ನಿಲ್ದಾಣದ ಪ್ರೀಮಿಯಮ್ ರಿಟೈಲ್ ಪ್ರದೇಶಗಳನ್ನು ತಮ್ಮ ಕುಟುಂಬ ಸದಸ್ಯರಿಗೆ ಅತ್ಯಂತ ಕಡಿಮೆ ದರಗಳಲ್ಲಿ ಒದಗಿಸುವ ಮೂಲಕ ಬಾಡಿಗೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಮಿಯಾಲ್ ಆದಾಯವನ್ನು ಗಣನೀಯವಾಗಿ ಕುಗ್ಗಿಸಿತು ಎಂದೂ ಸಿಬಿಐ ಆಪಾದಿಸಿದೆ.

No comments:

Advertisement