Tuesday, July 7, 2020

ಪ್ರಮೀಳಾ ಸೇನೆ: ತೀರ್ಪು ಜಾರಿಗೆ ಸುಪ್ರೀಂ ಗಡುವು

ಪ್ರಮೀಳಾ ಸೇನೆ: ತೀರ್ಪು ಜಾರಿಗೆ ಸುಪ್ರೀಂ ಗಡುವು

ನವದೆಹಲಿ: ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವೆಯ ಅವಕಾಶ (ಪರ್ಮನೆಂಟ್ ಕಮಿಷನ್) ನೀಡುವಂತೆ ಹಿಂದೆ ನೀಡಿದ್ದ ತೀರ್ಪನ್ನು ಜಾರಿಗೊಳಿಸಲು ಸರ್ಕಾರಕ್ಕೆ ಸುಪ್ರಿಂ ಕೋರ್ಟ್ 2020 ಜುಲೈ 07ರ ಮಂಗಳವಾರ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಿತು.

ಕೊರೋನಾ ಸಂಕಷ್ಟ ಎದುರಾಗಿರುವುದರಿಂದ, ತೀರ್ಪನ್ನು ಜಾರಿಗೊಳಿಸಲು ಆರು ತಿಂಗಳ ಕಾಲಾವಕಾಶ ಕೊಡುವಂತೆ ಕೇಂದ್ರ ಸರ್ಕಾರವು ಮಾಡಿದ ಮನವಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ಕೇವಲ ಒಂದು ತಿಂಗಳ ಕಾಲಾವಕಾಶವನ್ನು ನೀಡಿತು.

ತೀರ್ಪಿನಲ್ಲಿ ನೀಡಲಾಗಿರುವ ಎಲ್ಲ ನಿರ್ದೇಶನಗಳನ್ನು ಪಾಲಿಸಬೇಕು ಎಂದೂ ಪೀಠ ನಿರ್ದೇಶಿಸಿತು.

ಸೇನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಸೇವೆಯ ಅವಕಾಶ ನೀಡಬೇಕು, ಕಮಾಂಡ್ ಹುದ್ದೆಯನ್ನೂ ನೀಡಬೇಕು ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಫೆಬ್ರುವರಿ ೧೭ರಂದು ನೀಡಿತ್ತು.

ಜೊತೆಗೆ, ಮಹಿಳೆಯರಿಗೆ ದೈಹಿಕವಾಗಿ ಮಿತಿಗಳಿರುತ್ತವೆ ಎಂಬ ಕೆಂದ್ರ ಸರ್ಕಾರದ ವಾದವನ್ನು ತಳ್ಳಿಹಾಕಿ, ಅದು ಮಹಿಳೆಯರ ವಿರುದ್ಧದ ಲೈಂಗಿಕ ತಾರತಮ್ಯ ಮನಸ್ಥಿತಿಯ ಚಿಂತನೆ ಎಂದು ಹೇಳಿತ್ತು.

೧೪ ವರ್ಷ ಅಥವಾ ೨೦ ವರ್ಷ ಸೇವೆ ಮುಗಿಸಿದ್ದಾರೆ ಎಂಬ ಯಾವ ಮಾನದಂಡವನ್ನೂ ಲೆಕ್ಕಿಸದೆ, ಅಲ್ಪಾವಧಿ ಸೇವೆಯಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಕಾಯಂ ಸೇವೆಗೆ ಪರಿಗಣಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಕೋರ್ಟ್ ಹಿಂದೆ ಸೂಚಿಸಿತ್ತು.

ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಪುರುಷರಂತೆಯೇ ಸ್ಥಾನಮಾನ ನೀಡಬೇಕು ಜೊತೆಗೆ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವೆಯ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಯೋಗವನ್ನು ಸ್ಥಾಪಿಸಬೇಕು ಎಂದೂ ಪೀಠವು ಆದೇಶಿಸಿತು.

ಕಳೆದ ಫೆಬ್ರವರಿ ೧೭ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಯಥಾವತ್ತಾಗಿ ಜಾರಿ ತನ್ನಿ ಎಂದು ಪೀಠವು ಮಂಗಳವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.


No comments:

Advertisement